ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಐತಿಹಾಸಿಕ ಅತಿರಾತ್ರ ಸೋಮಯಾಗ ಸೋಮವಾರ ವಿದ್ಯುಕ್ತವಾಗಿ ಚಾಲನೆಗೊಂಡಿತು. ಸೋಮವಾರ ಬೆಳಿಗ್ಗೆ 7.30ಕ್ಕೆ ಋತ್ವಿಜರ ಆಗಮನ-ಪೂರ್ಣಕುಂಭಸ್ವಾಗತ, ಶ್ರೀ ಗಾಯತ್ರೀ ದೇವಿಯ ಸನ್ನಿಧಾನದಲ್ಲಿ ಬೆಳಿಗ್ಗೆ 8.ರಿಂದ ಗಣಯಾಗ, ಪುಣ್ಯಾಹ, ನಾಂದೀ ಸಮಾರಾಧನೆ, óಋತ್ವಿಗ್ವರಣ, ಸಪ್ತ ಶುದ್ಧಿ. ಮಧ್ಯಾಹ್ನ 12.30ಕ್ಕೆ ಪ್ರಸನ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು. ಅಪರಾಹ್ನ 3.30ಕ್ಕೆ “ಸ್ವಕುಲಧರ್ಮಾರಾದನೆ” -ವಿವಿಧ ಸಮುದಾಯಗಳವರ ಕುಲಕಸುಬಿನ ಉತ್ಪನ್ನಗಳ ಮೆರವಣಿಗೆ ಉಪ್ಪಳ ಪೇಟೆಯಿಂದ ಶ್ರಿ ಕ್ಷೇತ್ರಕ್ಕೆ ವಿವಿಧ ವಾದ್ಯಘೋಷಗಳೊಂದಿಗೆ ಕೊಂಡೆವೂರು ಶ್ರೀಕ್ಷೇತ್ರಕ್ಕೆ ಆಗಮಿಸಿತು. ಸಭಾ ಕಾರ್ಯಕ್ರಮದ ಬಳಿಕ ವಾಸ್ತು ಪೂಜೆ, ವಾಸ್ತು ಹೋಮ, ಯಾಗ ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ಪ್ರಾಕಾರ ಬಲಿ.ಶ್ರೀ ಗಾಯತ್ರೀ ಸಭಾ ಮಂಟಪದಲ್ಲಿ ಸಾಯಂಕಾಲ 4.00 ಕ್ಕೆ ಎಲ್ಲಾ ಸಮುದಾಯಗಳ ಪ್ರಮುಖರಿಗೆ ಗೌರವಾರ್ಪಣೆ ನಡೆಯಿತು.
ಸ್ವಕುಲ ಧರ್ಮಾರಾಧನೆಯ ಮೆರವಣಿಗೆ:
ಉಪ್ಪಳದಿಂದ ಶ್ರೀಕೊಂಡೆವೂರು ಸನ್ನಿಧಾನಕ್ಕೆ ಆಗಮಿಸಿದ ಮೆರವಣಿಗೆಯಲ್ಲಿ ಮೊದಲಿಗೆ ಸೋಮಲತೆಯನ್ನು ಅಲಂಕೃತ ಪಾಲಕಿಯಲ್ಲಿ ದೀವಟಿಗೆ, ಕೊಂಬು ವಾದ್ಯ ಸಹಿತ ರಾಜ ಮರ್ಯಾದೆಗಳೊಂದಿಗೆ ತರಲಾಯಿತು. ಜೊತೆಗೆ ಕೊರಗ ಸಮಾಜದವರಿಂದ ಕುಕ್ಕೆ, ಬುಟ್ಟಿ, ಹಣೆಯಲು ಬೇಕಾದ ಬೆತ್ತ ಮೊದಲಾದವುಗಳನ್ನು ಪುಳ್ಕೂರಿನ ಕಾಲನಿಯವರು, ಮಧೂರು ಸಮೀಪದ ಚೇನಕ್ಕೋಡಿನ ಮೊಗೇರ ಸಮಾಜದವರು ತಯಾರಿಸಿದ ಚಾಪೆ ಇತ್ಯಾದಿ ಪರಿಕರಗಳು, ಬಂಢಾರಿ ಸಮಾಜದವರು ಶ್ವೇತಛತ್ರ ಸೇವೆ, ಯಾಗ ಸಂದರ್ಭದ ಕ್ಷೌರ ಸೇವೆ, ತೀಯಾ ಸಮಾಜದವರು ಸೀಯಾಳ, ಬಾಕುಡ ಸಮಾಜದವರು ವಿವಿಧ ಧಾನ್ಯಗಳು, ಕುಲಾಲ ಬಾಂಧವರು ಅರುಣಕೇತಕ ಚಯನದೊಂದಿಗೆ ನಡೆಯಲಿರುವ ಯಾಗಕ್ಕೆ ಅಗತ್ಯವಿರುವ ಕುಡಿಕೆ ಸಹಿತ ವಿವಿಧ ಮಣ್ಣಿನ ಪಾತ್ರೆಗಳು, ಜೋಗಿ ಸಮಾಜದವರು ಯಾಗದ ಬಳಕೆಗಿರುವ ಸಿಕ್ಕ ಸಹಿತ ವಿವಿಧ ಬಳ್ಳಿ ಪರಿಕರಗಳನ್ನು, ವಿಶ್ವಕರ್ಮ ಸಮಾಜದವರು ನಾಲ್ಕು ವೇದ ಪುರುಷರ ಮೂರ್ತಿಧಗಳು, ಯಾಗಕ್ಕೆ ಅಗತ್ಯವಿರುವ ಮರ ಹಾಗೂ ಕಬ್ಬಿಣದ ಪರಿಕರಗಳು, ನೇಕಾರ ಸಮಾಜ ಬಾಂಧವರು ಬಟ್ಟೆಗಳನ್ನು, ಗಾಣಿಗ ಸಮಾಜದವರು ತೈಲ, ಮಡಿವಾಳ ಸಮಾಜದವರು ದೀವಟಿಗೆ, ದೇವಾಡಿಗ ಸಮಾಜದವರು ವಾದ್ಯಸೇವೆ, ಯಾದವ ಸಮಾಜದವರು ಯಾಗ ಬಳಿಕೆಯ ತುಪ್ಪವನ್ನು ಮೆರವಣಿಗೆಯಲ್ಲಿ ಆಗಮಿಸಿ ಸಮರ್ಪಿಸಿದರು.
ಈ ಸಂದರ್ಭ ಮಾಣಿಲ ಶ್ರೀಗಳು, ಕೊಂಡೆವೂರು ಶ್ರೀಗಳು, ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಮೊಕ್ತೇಸರರಾದ ಕಮಲಾದೇವೀ ಪ್ರಸಾದ ಆಸ್ರಣ್ಣ ಹಾಗೂ ಹರಿನಾರಾಯಣದಾಸ ಆಸ್ರಣ್ಣ, ಉಳಿಯತ್ತಾಯ ವಿಷ್ಣು ಆಸ್ರ, ವಿದ್ವಾನ್.ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿಗಳು, ಕೇಂದ್ರ ಆಯುಷ್ ಖಾತೆ ಸಚಿವ ಶ್ರೀಪಾದ ಎಸ್ಸೋ ನಾಯಕ್, ಯಾಗದ ಕಾರ್ಯಾಧ್ಯಕ್ಷರುಗಳಾದ ಮೋನಪ್ಪ ಭಂಡಾರಿ, ಡಾ.ನಾರಾಯಣ್, ಡಾ.ಶ್ರೀಧರ ಭಟ್, ಪ್ರ.ಕಾರ್ಯದರ್ಶಿಗಳಾದ ಸದಾನಂದ ನಾವರ, ರಾಮಚಂದ್ರ ಚೆರುಗೋಳಿ, ಕೋಶಾಧಿಕಾರಿ ಶಶಿಧರ ಶೆಟ್ಟಿ ಗ್ರಾಮಚಾವಡಿ, ಸದಾಶಿವ ಭಟ್ ಮೋಂತಿಮಾರ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಇಂದಿನ ಕಾರ್ಯಕ್ರಮ:
ಫೆ. 19 ರಂದು ಮಂಗಳವಾರ ಶ್ರೀ ಗಾಯತ್ರೀ ದೇವಿಯ ಸನ್ನಿಧಾನದಲ್ಲಿ ಬೆಳಿಗ್ಗೆ 5.ರಿಂದ ಬಿಂಬಶುದ್ಧಿ, ಶಾಂತಿಹೋಮ, ಪ್ರಾಯಶ್ಚಿತ್ತ ಹೋಮ, ಗಣಯಾಗ, ದಕ್ಷಿಣಾಮೂರ್ತಿ ಯಾಗ ಬೆಳಿಗ್ಗೆ 10.ಕ್ಕೆ ಯತಿವರ್ಯರಿಗೆ-ಪೂರ್ಣಕುಂಭಸ್ವಾಗತ, 10.30ಕ್ಕೆ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳಿಂದ ಅನುಗ್ರಹ ಸಂದೇಶ, ಮಧ್ಯಾಹ್ನ 12.30ಕ್ಕೆ ಪ್ರಸನ್ನ ಮಹಾಪೂಜೆ, ಅನ್ನ ಸಂತರ್ಪಣೆ. ಸಾಯಂಕಾಲ 5. ರಿಂದ ದುರ್ಗಾನಮಸ್ಕಾರ ಪೂಜೆ ನಡೆಯಲಿದೆ.
ಯಾಗಶಾಲೆಯಲ್ಲಿ ಬೆಳಿಗ್ಗೆ 7.30 ಕ್ಕೆ ಗಣಪತಿ ಪೂಜೆ, ಸ್ವಸ್ತಿವಾಚನ, ಮಹಾಸಂಕಲ್ಪ, ಋತ್ವಿಗ್ವರಣ, ಮಧುಪರ್ಕ ಪೂಜೆ, ದೇವನಾಂದಿ, ಯಾಗಶಾಲಾ ಪ್ರವೇಶ, ಕೂಷ್ಮಾಂಡ ಸಾವಿತಾದಿ ಹೋಮ, ಸೋಮ ಪೂಜೆ, ಪ್ರವಗ್ರ್ಯ ಸಂಭರಣ, ದೀಕ್ಷಣಿಯಾ ಇಷ್ಟಿ ಅಪರಾಹ್ಣ ದೀಕ್ಷಾಭೋಜನ, ನವನೀತದೀಕ್ಷಾ, ಅಪ್ಸುದೀಕ್ಷಾ, ದಂಡದೀಕ್ಷಾ, ಮಂತ್ರದೀಕ್ಷಾ, ಪಯೋವ್ರತ, ಸನೀಹಾರ ಪ್ರೇóಷಣ ಸೇವೆಗಳು ನಡೆಯಲಿವೆ.
ಶ್ರೀ ಗಾಯತ್ರೀ ಸಭಾ ಮಂಟಪದಲ್ಲಿ ರಾತ್ರಿ 7.30ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಹಾಗೂ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಬ್ರಹ್ಮಶ್ರೀ ಕಮಲಾದೇವೀ ಪ್ರಸಾದ ಆಸ್ರಣ್ಣ ಉಪಸ್ಥಿತರಿರುವರು. ಡಾ. ವಿನಯ್ ಹೆಗ್ಡೆ ಉದ್ಘಾಟಿಸುವರು. ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಸಾದ್ವಿ ನಿರಂಜನ್ ಜ್ಯೋತಿ, ಶ್ರೀ ರಾಘವೇಂದ್ರ ಶಾಸ್ತ್ರಿ-ಶಿಲೆ, ಶಿಲೆ ಆಡಳಿತ ಮೊಕ್ತೇಸರರು ಶ್ರೀ ಶರವು ಮಹಾಗಣಪತಿ ದೇವಸ್ಥಾನ. ಸುನಿಲ್ ಕುಮಾರ್, ಮುಖ್ಯ ಸಚೇತಕರು, ಕರ್ನಾಟಕ ಸರಕಾರ. ರಘುಪತಿ ಭಟ್, ಶಾಸಕರು, ಡಾ. ವೈ. ಭರತ್ ಶೆಟ್ಟಿ, ಶಾಸಕರು, ಮಂಗಳೂರು ಉತ್ತರ. ಡಾ. ಎಂ.ಎನ್. ರಾಜೇಂದ್ರ ಕುಮಾರ್, ಡಾ. ಮೋಹನ್ ಆಳ್ವ, ಅಧ್ಯಕ್ಷರು ಆಳ್ವಾಸ್ ಸಮೂಹ ಸಂಸ್ಥೆಗಳು., ಸೌಂದರ್ಯ ರಮೇಶ್, ಉದ್ಯಮಿ, ಶಕುಂತಳಾ ಶೆಟ್ಟಿ, ಮಾಜಿ ಶಾಸಕಿ, ನಾರಾಯಣ ಹೆಗ್ಡೆ ಕೋಡಿಬೈಲು, ಆಡಳಿತ ಮೊಕ್ತೇಸರರು,ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ., ಕೆ. ಎನ್. ಕೃಷ್ಣ ಭಟ್, ಅಧ್ಯಕ್ಷರು, ಬದಿಯಡ್ಕ ಗ್ರಾಮ ಪಂಚಾಯತು., ಜಿತೇಂದ್ರ ಕೊಟ್ಟಾರಿ, ಉದ್ಯಮಿ, ರಾಜಶೇಖರ ಚೌಟ ದೇವಸ್ಯ, ಉದ್ಯಮಿ, ಕಿರಣ್ ಜೋಗಿ-ಅಧ್ಯಕ್ಷರು, ಜೋಗಿ ಸಮಾಜ ಮಂಗಳೂರು., ಮಂಜುನಾಥ್ ರೇವಣ್‍ಕರ್, ಅಧ್ಯಕ್ಷರು, ಸೂರಜ್ ಇಂಟರ್‍ನೇಶನಲ್ ವಿದ್ಯಾಸಂಸ್ಥೆ. ಸಂಜೀವ ಭಂಡಾರಿ ಮುಳಿಂಜಗುತ್ತು ಮೊದಲಾದವರು ಉಪಸ್ಥಿತರಿರುವರು. ಈ ಸಂದರ್ಭ ದೀನಬಂಧು ಕಿಳಿಂಗಾರು ಗೋಪಾಲಕೃಷ್ಣ ಭಟ್(ಸಾಯಿರಾಂ ಭಟ್) ಅವರನ್ನು ಸನ್ಮಾನಿಸಲಾಗುವುದು.
