ಕುಂಬಳೆ: ಮಣ್ಣಿನ ಸಂಸ್ಕøತಿ ಪುನಶ್ಚೇತನದ ದೃಷ್ಟಿಯಲ್ಲಿ ಜಾನಪದ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವ ಅಗತ್ಯ ಇದೆ. ಗಡಿನಾಡು ಕಾಸರಗೋಡು ಜಗತ್ತಿನ ಇತರೆಡೆ ಇಲ್ಲದೇ ಇರುವಷ್ಟು ಬಹುಭಾಷಾ ಸಂಗಮ ಭೂಮಿಯಾಗಿ ಪ್ರಸಿದ್ದಿಪಡೆದಿದ್ದು, ಭಾಷೆ ಸತ್ತರೆ ಸಂಸ್ಕøತಿಯ ನಾಶ ನಿಶ್ಚಿತ ಎಂದು ಹಿರಿಯ ಸಾಹಿತಿ, ಶಿಕ್ಷಣ ತಜ್ಞ, ನಿವೃತ್ತ ಶಿಕ್ಷಕ ವಿ.ಬಿ.ಕುಳಮರ್ವ ತಿಳಿಸಿದರು.
ಶ್ರೀ ಮುಜುಂಗಾವು ಪಾರ್ಥಸಾರಥಿ ದೇವಾಲಯದ ವಾರ್ಷಿಕ ಜಾತ್ರೆಯ ಹಿನ್ನೆಲೆಯಲ್ಲಿ ನಾಯ್ಕಾಪಿನ ಸಾಮಾಜಿಕ=ಸಾಂಸ್ಕøತಿಕ ಸಂಘಟನೆಯಾದ "ಸತ್ಯ ಸನ್ಮಾರ್ಗ ಶ್ರೇಯಸ್ಸು"(ಎಸ್ ಎಸ್ ಎಸ್) ಶನಿವಾರ ರಾತ್ರಿ ಶ್ರೀಕ್ಷೇತ್ರ ಪರಿಸರದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕøತಿಕ ಸಂಜೆ= ನೆರವು ಹಸ್ತಾಂತರ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ನವ ಸಮಾಜ ಸೃಷ್ಟಿಕರ್ತರಾದ ಯುವ ಪೀಳಿಗೆ ಅವಕಾಶಗಳನ್ನು ಸದ್ವಿನಿಯೋಗ ಪಡಿಸುವ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕು. ಬೆಳೆಯುತ್ತಿರುವ ಯುಗ ಧರ್ಮಕ್ಕನುಸರಿಸಿ ಇಂದು ಅವಕಾಶಗಳ ರಹದಾರಿ ಎಲ್ಲೆಡೆ ತೆರೆದುಕೊಂಡಿದ್ದು, ನಾವದನ್ನು ದಾಟುವ ಕ್ರಿಯಾಶೀಲತೆಯನ್ನು ಮೈಗೂಡಿಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದು ಅವರು ಈ ಸಂದರ್ಭ ಕಿವಿಮಾತು ಹೇಳಿದರು.
ಸಂಘಟನೆಯ ಅಧ್ಯಕ್ಷ ಎಚ್.ಗೋಪಾಲಕೃಷ್ಣ ಭಟ್ ಮಜಲು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ಆಡಳಿತಾಧಿಕಾರಿ ಶಾಮ ಭಟ್ ದರ್ಬೆಮಾರ್ಗ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಸಾಮಾಜಿಕ, ಸಾಂಸ್ಕøತಿಕ ಸೇವೆಯು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಬೇಕಾದ ಪ್ರಧಾನ ಕರ್ತವ್ಯವಾಗಿದೆ. ಸವಾಲುಗಳ ಮಧ್ಯೆ ವಿವಿಧ ಚಟುವಟಿಕೆಗಳಲ್ಲಿ ಮುಂಚೂಣಿಯ ನಾಯಕರಾಗಿ ಸೇವೆ ಸಲ್ಲಿಸುವುದು ಬದುಕಿನ ವಿಸ್ತಾರತೆಯನ್ನು ಬೆಳೆಸುವ ಮೂಲಕ ಜೀವನಕ್ಕೆ ಹೊಸ ವ್ಯಾಖ್ಯೆಯನ್ನು ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಎಸ್ ಎಸ್ ಎಸ್ ಸಂಘಟನೆಯ ಮಾನವೀಯ ಕೈಂಕರ್ಯ ಶ್ಲಾಘನೀಯ ಎಂದು ತಿಳಿಸಿದರು.
ವೈದ್ಯ ಡಾ.ಶ್ರೀರಾಮ ಭಟ್, ಜಿಲ್ಲೆಯ ಖ್ಯಾತ ಮನೋತಜ್ಞೆ ಡಾ.ವಾರಿನೀ ಶ್ರೀರಾಮ್ ಹಾಗೂ ಮಂಗಳೂರಿನ ಹಿರಿಯ ಕಸ್ಟಮ್ಸ್ ಅಧಿಕಾರಿ ಎಸ್.ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದು ಶುಭಹಾರೈಸಿದರು.
ಸಮಾರಂಭದಲ್ಲಿ ವೃತ್ತಿ ಕ್ಷೇತ್ರದಲ್ಲಿ ಕರ್ತವ್ಯ ನಿರತರಾಗಿ ಬಳಿಕ ಅನಾರೋಗ್ಯಕ್ಕೊಳಗಾಗಿ ಕುಟುಂಬ ನಿರ್ವಹಣೆಯಲ್ಲಿ ಬವಣೆಗೊಳಗಾಗಿರುವ ಯೋಗೀಶ್ ನಾಯ್ಕಾಪು ದಂಪತಿಗಳಿಗೆ ಸಂಘಟನೆಯ ವತಿಯಿಂದ ನಗದು ನೆರವು ಹಸ್ತಾಂತರಿಸಲಾಯಿತು. ವಿಜಯಲಕ್ಷ್ಮೀ ಜಿ.ಕೆ.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶ್ರೀನಿಧಿ ಮೇಣ ವಂದಿಸಿದರು. ಕೃಷ್ಣಪ್ಪ ಬೆಳಿಂಜ ಕರ್ಯಕ್ರಮ ನಿರೂಪಿಸಿದರು. ಪುಟಾಣಿ ಗಾಯತ್ರೀ ಪ್ರಾರ್ಥನಾ ಗೀತೆ ಹಾಡಿದಳು. ಬಳಿಕ ಸ್ಥಳೀಯ ಮಕ್ಕಳಿಂದ ನೃತ್ಯ, ಸಂಘಟನೆಯ ಸದಸ್ಯರಿಂದ ಸುಗಮ ಸಂಗೀತ, ಭಕ್ತಿ ಸಂಗೀತ ಸಹಿತ ಗಾಯನ ವೈವಿಧ್ಯ ನಡೆಯಿತು.

