ಧರ್ಮಸ್ಥಳ: ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಬಾಹುಬಲಿಯ ಮಹಾಮಸ್ತಕಾಭಿಷೇಕ ಸಂಭ್ರಮ ಪ್ರಖ್ಯಾತ ಧಾರ್ಮಿಕ ತಾಣ ಧರ್ಮಸ್ಥಳದಲ್ಲಿ ಮನೆಮ್ಮಾಡಿದ್ದು ದೇಶಾದ್ಯಂತದ ಸಾವಿರಾರು ಭಕ್ತರು ಶನಿವಾರ ಇಲ್ಲಿ ರತ್ನಗಿರಿ ಬೆಟ್ಟದ ಮೇಲಿನ ಬಾಹುಬಲಿಯ ಮಹಾಮಜ್ಜನಕ್ಕೆ ಸಾಕ್ಷಿಯಾಗಿದ್ದರು.

ಏಳು ದಿನಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಗಳ ನಂತರ ಶನಿವಾರದಿಂದ ಮಹಾಮಜ್ಜನ ಕಾರ್ಯಕ್ರ್ಮ ಪ್ರಾರಂಭಗೊಂಡಿದ್ದು ನಾಳೆಯೂ ಮುಂದುವರಿಯಲಿದೆ.
ಬಾಹುಬಲಿ ಪ್ರತಿಷ್ಠಾಪಕರಾದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹಾಗೂ ಕುಟುಂಬ ವತಿಯಿಂದ ಮೊದಲ ದಿನದ ಅಭಿಷೇಕ ನೆರವೇರಿತು.ಒಂಬತ್ತು ದ್ರವ್ಯಗಳನ್ನು ಬಳಸಿ ಮಹಾಮಸ್ತಕಾಭಿಷೇಕ ಮಾಡಲಾಗಿದ್ದು ಬಾಹುಬಲಿ ಹಲವು ರಂಗುಗಳಿಂದ ಕಂಗೊಳಿಸಿದನು.

ಜೈನ ಮುನಿಗಳು ಮತ್ತು ಮಾತಾಜಿಗಳು ಹೊರತಾಗಿ ಸುಮಾರು 100 ಸಂತರು 1,008 ಕಲಾಶಗಳಿಂದ ಬಾಹುಬಲಿ ಜಲಾಭಿಷೇಕದಲ್ಲಿ ಭಾಗವಹಿಸಿದ್ದರು.ಬೆಳಗ್ಗೆ 8.45ಕ್ಕೆ ಪರಿಶುದ್ಧ ಜಲಾಭಿಷೇಕದೊಡನೆ ಮಹಾಮಜ್ಜನ ಪ್ರಾರಂಭವಾಗಿತ್ತು. ಆ ನಂತರ ಎಳನೀರು, ಇಕ್ಷ ರಸ, ಕ್ಷೀರ, ಕಲ್ಕಚೂರ್ಣ, ಅರಿಶಿಣ ,ಕಷಾಯ , ಚತುಷ್ಕೊನ , ಕಾಶ್ಮಿರ ಕೇಸರಿ, ಶ್ರಿಗಂಧ, ಚಂದನ, ಅಷ್ಟಗಂಧ, ಕನಕಾಭಿಷೇಕಗಳು ನಡೆದು ಬೃಹತ್ ಹಾರವನ್ನು ಬಾಹುಬಲಿಗೆ ಹಾಕಲಾಗಿತ್ತು.

ರತ್ನಗಿರಿ ಬೆಟ್ಟದಲ್ಲಿ ಸಾವಿರಾರು ಭಕ್ತ ಜನರು ನೆರೆದಿದ್ದರೂ ಎಲ್ಲಿಯೂ ಗೊಂದಲ, ಗದ್ದಲಗಳಿಲ್ಲದೆ ಶಾಂತಿಯುತವಾಗಿ ಮೊದಲ ದಿನದ ಮಸ್ತಕಾಭಿಷೇಕ ಸಂಪನ್ನವಾಗಿತ್ತು.