HEALTH TIPS

ಶತಶತಮಾನದ ಪರಂಪರೆಯ ನೆನಸುವಿಕೆಯೊಂದಿಗೆ ಅತಿರಾತ್ರ ಸೋಮಯಾನಕ್ಕೆ ಸಿದ್ದಗೊಂಡಿದೆ ಪುಣ್ಯ ಯಾಗ ಭೂಮಿ ಕೊಂಡೆವೂರು

ಭಾರತೀಯ ಸಂಸ್ಕøತಿ ಪರಂಪರೆ ಪಕೃತಿಯೊಂದಿಗೆ ಮಿಳಿತವಾಗಿ ಬೆಳೆದುಬಂದಿರುವಂತದ್ದು. ಇಲ್ಲಿಯ ಆರಾಧನೆ, ನಂಬಿಕೆ, ಜೀವನಕ್ರಮಗಳೇ ಮೊದಲಾದವುಗಳ ಅಂತರಾತ್ಮ ಅಚೇತನ ಕೃತಿಗಳಿಂದ ನಿರ್ವಚಿಸಲ್ಪಟ್ಟು ಜೀವ ಜಗತ್ತಿಗೆ ತೆರೆದುಕೊಂಡಿರುವುದು ಕಂಡುಬರುತ್ತದೆ. ಭೂಮಿಯ ಉಗಮದ ಜೊತೆಗೆ ಸಾಗಿಬಂದ ನಿಧಾನ ಗತಿಯ ಜೀವ-ಸಸ್ಯ ರಾಶಿಗಳು ಚೋದಿಗದಿಂದ ಸುತ್ತಲಿನ ವಿದ್ಯಮಾನಗಳನ್ನು ಗುರುತಿಸಿತು. ಬೀಜದ ಚಿಗುರೊಡೆಯುವಿಕೆ, ತತ್ತಿಯಿಂದ ಜೀವದ ಕೊಸರುವಿಕೆ, ಅಗ್ನಿ, ಜಲ, ವಾಯುವಿನ ನಿರಾಡಂಬರತೆ ಮೊದಲಾದವುಗಳು ವಿಶಿಷ್ಟ ರೂಪಗಳಾಗಿ ಜೀವಜಗತ್ತಿಗೆ ಎಂದಿಗೂ ಕುತೂಹಲವೆ. ಈ ಹಿನ್ನೆಲೆಯಲ್ಲಿ ಅತಿ ಪ್ರಾಚೀನ ಭಾರತೀಯ ಆರ್ಷ ಪರಂಪರೆ ಪ್ರಕೃತಿಯೊಂದಿಗೇ ಸಮ್ಮಿಳಿತಗೊಂಡು ಅದಕ್ಕೊಂದು ಆರಾಧನೆಯ ರೂಪಕದೊಂದಿಗೆ ಸಮೀಕರಿಸಲ್ಪಟ್ಟಿತು. ಈ ಹಿನ್ನೆಲೆಯಲ್ಲಿ ಯಾಗ, ಹೋಮ-ಹವನ, ಪೂಜೆ, ಸಂಕೀರ್ತನೆ, ಕೋಲ-ಆಯನಗಳು ಆಯಾ ಕಾಲದಲ್ಲಿ ಪ್ರಾದೇಶಿಕವಾಗಿ ವಿಭಿನ್ನವಾಗಿ ಈ ಮಣ್ಣಿನಲ್ಲಿ ಹುಟ್ಟುಪಡೆದುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಕರಾವಳಿಯ ಪವಿತ್ರ ಯಾಗಭೂಮಿಯೆಂದೇ ಈಗಾಗಲೇ ಗುರುತಿಸಿಕೊಂಡಿರುವ ಕೊಂಡೆವೂರಿನ ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಫೆಬ್ರವರಿ 18 ರಿಂದ 24ರ ವರೆಗೆ ನಡೆಯಲಿರುವ ಅತಿ ವಿಶಿಷ್ಟ ಅತಿರಾತ್ರ ಸೋಮಯಾಗದ ತಯಾರಿಯಲ್ಲಿ ಆಶ್ರಮ ಸಿದ್ದಗೊಳ್ಳುತ್ತಿದೆ. ಯಜ್ಞವು ವೈದಿಕ ಧರ್ಮದ ಸಾರ ಸರ್ವಸ್ವ .ಅಗ್ನಿಯಲ್ಲಿ ಮಂತ್ರಪೂರ್ವಕವಾಗಿ ಹವಿಸ್ಸನ್ನು ಅರ್ಪಿಸುವ ಕ್ರಿಯೆಯೇ ಯಜ್ಞವಾಗಿದೆ. ಇದರ ಸಾಮಾಜಿಕ ಮತ್ತು ಆಧ್ಯಾತ್ಮಿಕ ರೂಪಗಳಾಗಿ ಯಾಗ,ಯಜ್ಞ, ಹವನ, ಹೋಮ, ಸತ್ರ, ಕ್ರತು, ಇಷ್ಟಿ ಮುಂತಾದ ವೈದಿಕ ಕ್ರಿಯೆಗಳು ರೂಪುಗೊಂಡಿವೆ. ದೇವತೆಗಳು ಯಜ್ಞ ಮಾಡಿ ತಾವು ಲೋಕದ ಧಾರಣೆ ಮಾಡುವ ಅಧಿಕಾರವನ್ನು ಗಳಿಸಿ ಪೂಜ್ಯರಾದರು. ಯಜ್ಞದಿಂದ ಶತ್ರುಗಳೂ ಮಿತ್ರರಾಗುವರು. ಯಜ್ಞದಲ್ಲಿ ಎಲ್ಲವೂ ನೆಲೆಗೊಂಡಿದೆ. ಆದ್ದರಿಂದ ತಿಳಿದವರು ಯಜ್ಞವನ್ನು ಸರ್ವಶ್ರೇಷ್ಠವೆಂದು ಹೇಳುವರು ಎಂದು ಯಜುರ್ವೇದವು ಹೇಳುತ್ತದೆ. "ವೇದೋಖಿಲೋ ಧರ್ಮ ಮೂಲಮ್" ಎಂದು ಶಾಸ್ತ್ರಕಾರರು ಎಲ್ಲ ಧರ್ಮದ ಮೂಲವನ್ನಾಗಿ ವೇದವನ್ನು ನಿರ್ದೇಶಿಸಿದ್ದಾರೆ. ವೇದದಿಂದ ಹೇಳಲ್ಪಟ್ಟ ವಿಧಿ ನಿಷೇಧಗಳನ್ನು ಧರ್ಮ ಶಬ್ದದಿಂದ ವ್ಯವಹರಿಸಲಾಗುತ್ತಿದೆ. ಇದು ತುಂಬಾ ವಿಸ್ತಾರವಾದ ಅರ್ಥವ್ಯಾಪ್ತಿಯುಳ್ಳ ಶಬ್ದ. ಆದುದರಿಂದಲೇ ಯಾವುದರ ಆಚರಣೆಯಿಂದ ಮಾನವನ ಐಹಿಕ-ಪಾರಮಾರ್ಥಿಕ ಅಭ್ಯುದಯಗಳು ಉಂಟಾಗುವುವೋ ಅದನ್ನು 'ಧರ್ಮ' ಎಂಬ ಶಬ್ದದಿಂದ ಹೇಳಿದ್ದಾರೆ. ಮನುಷ್ಯಧರ್ಮ, ರಾಜಧರ್ಮ, ಇತ್ಯಾದಿಯಾಗಿ ಹೇಳಿರುವಂತೆಯೇ ವರ್ಣಧರ್ಮ, ಆಶ್ರಮಧರ್ಮ, ವರ್ಣಾಶ್ರಮಧರ್ಮವೆಂದು ಧರ್ಮವನ್ನು ಅನೇಕ ವಿಭಾಗಗಳನ್ನಾಗಿ ಮಾಡಲಾಗಿದೆ. ಈ ಎಲ್ಲ ಧರ್ಮಗಳ ಆಚರಣೆ-ಅನುಸರಣೆಗಳ ಫಲ 'ಲೋಕಹಿತ'ವೇ ಆಗಿದೆ. ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬನೂ ತನ್ನ ಕರ್ತವ್ಯ-ಕರ್ಮಗಳಿಂದ ಲೋಕಕ್ಕೆ ಒಳಿತನ್ನು ಬಯಸಬೇಕೆಂಬುದೇ ಧರ್ಮಾಚರಣೆಯ ಹಿಂದಿನ ಸಂದೇಶ. ಇದು ವೇದೋಕ್ತವಾದ ಯಜ್ಞಗಳ ಆಚರಣೆಯಿಂದ ಸಾಧ್ಯವಾಗಿದೆ. ಭಗವಂತ ಮನುಷ್ಯರನ್ನೂ, ಯಜ್ಞವನ್ನೂ ಒಟ್ಟಿಗೆ ಸೃಷ್ಟಿಸಿ ಯಜ್ಞದ ಆಚರಣೆಯಿಂದ ನಿಮಗೆ ಬೇಕಾದುದನ್ನು ಸಾಧಿಸಿಕೊಳ್ಳಿ ಎಂದು ಮಾನವರಿಗೆ ಉಪದೇಶಿಸಿರುವನೆಂದು ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ಯಜ್ಞದಿಂದ ಮಳೆ ಬಂದು, ಬೆಳೆ ಬೆಳೆದು, ಸಮೃದ್ಧಿ ಉಂಟಾಗುತ್ತದೆಂದು ಎಲ್ಲರ ಅನುಭವವಾಗಿದೆ. ಇಂತಹ ಯಜ್ಞಗಳಲ್ಲಿ 'ಶ್ರೌತಯಜ್ಞ'ಗಳು ಬಹುಮುಖ್ಯವಾದವುಗಳಾಗಿದ್ದು, ಇವುಗಳನ್ನು ಹದಿನಾಲ್ಕಾಗಿ ವಿಭಾಗಿಸಿದ್ದಾರೆ. ಅವುಗಳಲ್ಲಿ ಮೊದಲ ಏಳು ಯಜ್ಞಗಳನ್ನು 'ಹವಿರ್ಯಜ್ಞ'ಗಳೆಂದೂ ಅನಂತರದ ಏಳು ಯಜ್ಞಗಳನ್ನು 'ಸೋಮಯಜ್ಞ'ಗಳೆಂದೂ ಕರೆದಿದ್ದಾರೆ. 1.ಅಗ್ನ್ಯಾದಾನ 2. ಅಗ್ನಿಹೋತ್ರ 3. ದರ್ಶಪೂರ್ಣಮಾಸ 4. ಪಿಂಡಪಿತೃಯಜ್ಞ 5. ಚಾತುರ್ಮಾಸ 6. ನಿರೂಢ ಪಶುಬಂಧ 7. ಸೌತ್ರಾಮಣಿ ಎಂಬ ಏಳು ಯಜ್ಞಗಳು ಹವಿರ್ಯಜ್ಞಗಳು. 1. ಅಗ್ನಿಷ್ಟೋಮ 2. ಅತ್ಯಗ್ನಿಷ್ಟೋಮ 3. ಉಕ್ಥ್ಯ 4. ಷೋಡಕಿ 5. ವಾಜಪೇಯ 6. ಅತಿರಾತ್ರ 7. ಆಪ್ತೋರ್ಯಾಮ ಎಂಬ ಏಳು ಯಜ್ಞಗಳು ಸೋಮಯಜ್ಞಗಳಾಗಿವೆ. ಸೋಮಯಜ್ಞಗಳಲ್ಲಿ ಸೋಮಲತೆಯನ್ನು ಹಿಂಡಿ ತಯಾರಿಸುವ 'ಸೋಮರಸ'ವೇ ಪ್ರಧಾನ ದ್ರವ್ಯವೆನಿಸಿದೆ. ಇಂದ್ರನೇ ಈ ಯಜ್ಞಕ್ಕೆ ಪ್ರಧಾನದೇವತೆ. ಸೋಮನೆಂದರೆ ಚಂದ್ರ. ಚಂದ್ರನಿಗೆ ಶುಕ್ಲ-ಕೃಷ್ಣ ಪಕ್ಷಗಳಲ್ಲಿ ವೃದ್ಧಿ ಕ್ಷಯಗಳಿವೆ. ಅದೇ ಧರ್ಮ ಸೋಮಲತೆಯಲ್ಲಿ ಕಾಣಸಿಗುತ್ತದೆ. ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೆ ಒಂದೊಂದೇ ಎಲೆಗಳು ಮೂಡಿ ಹುಣ್ಣಿಮೆಯಂದು 15 ಎಲೆಗಳಾಗುತ್ತವೆ. ಮತ್ತೆ ಒಂದೊಂದು ಎಲೆಗಳು ಉದುರಿ ಬಿದ್ದು ಅಮಾವಾಸ್ಯೆ ದಿನ ಎಲ್ಲಾ ಎಲೆಗಳೂ ಉದುರಿಬೀಳುತ್ತವೆ. ಅಂದು ರಸಾಂಶವು ಪೂರ್ಣವಾಗಿ ಬಳ್ಳಿಯಲ್ಲಿ ಇರುತ್ತದೆ. ಇಂತಹ ಸೋಮಲತೆಯನ್ನು ಯಜ್ಞಕ್ಕಾಗಿ ಸಂಗ್ರಹಿಸಬೇಕು. ಸೋಮಯಾಗದಲ್ಲಿ 16 ಮಂದಿ ಋತ್ವಿಜರಿದ್ದು ಅವರನ್ನು ನಾಲ್ಕು ಗಣಗಳಾಗಿ ವಿಭಾಗಿಸಿದ್ದಾರೆ. 1)ಹೋತೃ ಗಣ 2) ಅಧ್ವರ್ಯುಗಣ 3) ಔದ್ಗಾತೃಗಣ 4) ಬ್ರಹ್ಮಗಣ ದೇವತೆಗಳ ಆಹ್ವಾನ ಹೋತೃವಿನ ಕೆಲಸವಾದರೆ ಯಜ್ಞ ಕಲಾಪಗಳ ನಿರ್ವಹಣೆ ಅಧ್ವರ್ಯುವಿನ ಕೆಲಸ. ಸಾಮಗಾನದಿಂದ ದೇವತೆಗಳನ್ನು ಸಂತೋಷಪಡಿಸುವುದು ಉದ್ಗಾತೃವಿನ ಕೆಲಸ. "ಬ್ರಹ್ಮ" ಯಜ್ಞದ ಪ್ರಧಾನ ವೀಕ್ಷಕನಾಗಿರುತ್ತಾನೆ. ಈ ನಾಲ್ಕು ಗಣದ ಋತ್ವಿಜರ ಪರಸ್ಪರ ಸಹಕಾರದಿಂದ ಯಜ್ಞವು ಸಂಪನ್ನವಾಗುತ್ತದೆ. ಅತಿರಾತ್ರವೆಂಬುದು ಸೋಮಸಂಸ್ಥೆಗಳಲ್ಲಿ 6ನೇಯ ಕ್ರತುವಾಗಿದೆ. ಈ ಯಜ್ಞದ ಕ್ರಿಯಾಕಲಾಪವು ಸೂರ್ಯೋದಯಕ್ಕೆ ಪ್ರಾರಂಭವಾಗಿ ಮರುದಿನ ಸೂರ್ಯೋದಯದ ನಂತರವೂ ಮುಂದುವರಿಯುವುದರಿಂದ ಅಂದರೆ ರಾತ್ರಿಯನ್ನೂ ಮೀರಿ ನಡೆಸುವುದರಿಂದ ಇದಕ್ಕೆ 'ಅತಿರಾತ್ರ'ವೆಂದು ಹೆಸರು. ಈ ಯಜ್ಞ ಪ್ರಕ್ರಿಯೆಯಲ್ಲಿ ಸಾಮಾನ್ಯ ಸೋಮಯಾಗದಂತೆಯೇ ಕ್ರಿಯೆಗಳು ನಡೆದು ರಾತ್ರಿ ಪರ್ಯಾಯಗಳೆಂಬ 12 ಸ್ತೋತ್ರಗಳೂ,2 ಶಸ್ತ್ರಗಳೂ ನಡೆಯುತ್ತವೆ. 1300 ಮಂತ್ರಗಳಿರುವ ಅಶ್ವಿನಿ ಸಹಸ್ರವೆಂಬ ಅತೀ ದೊಡ್ಡ ಶಸ್ತ್ರ (ದೇವತೆಗಳನ್ನು ಪ್ರಶಂಸಿಸುವ ಮಂತ್ರ ಸಮೂಹ) ಈ ಯಜ್ಞದಲ್ಲಿ ಬಳಕೆಯಾಗುತ್ತದೆ. ಎಲ್ಲಾ ವಸ್ತುಗಳ ಪ್ರಾಪ್ತಿ ಈ ಯಜ್ಞದಿಂದ ಉಂಟಾಗುತ್ತದೆ. ಸಸ್ಯಸಮೃದ್ಧಿ, ಜಲಸಮೃದ್ಧಿ, ಎಲ್ಲಾ ಕಡೆ ಶಾಂತಿ ಸೌಖ್ಯಗಳು ಈ ಯಜ್ಞಗಳಿಂದ ಉಂಟಾಗುತ್ತವೆ. 70 ಅಡಿ ಅಗಲ,100 ಅಡಿ ಉದ್ದ ಸುತ್ತಳತೆಯ ಅತೀ ವಿಶಿಷ್ಟವಾದ ಬೃಹತ್ ಯಜ್ಞಮಂಟಪದಲ್ಲಿ ನಡೆಯುವ ಈ ಯಾಗದ ಪೂರ್ಣಾಹುತಿ ಬಳಿಕ ಅವಭೃತ ಸ್ನಾನದೊಂದಿಗೆ ಯಜ್ಞ ಸಲಕರಣೆಗಳನ್ನು ಜಲದಲ್ಲಿ ವಿಸರ್ಜಿಸಿ, ಯಜ್ಞಮಂಟಪವನ್ನು ಪೂರ್ಣವಾಗಿ ಅಗ್ನಿದೇವನಿಗೆ ಸಮರ್ಪಿಸುವ ಭಕ್ತಿ ಸಾಂದ್ರತೆಯ ಪುಣ್ಯಸಂದರ್ಭದಲ್ಲೂ ತಾವೆಲ್ಲರೂ ಸಾಕ್ಷೀಭೂತರಾಗಿರಿ. ಶ್ರೌತಯಜ್ಞಗಳನ್ನು ಒಬ್ಬೊಬ್ಬರಿಂದ ಮಾಡಲು ಸಾಧ್ಯವಿಲ್ಲದ ಈ ಕಾಲಘಟ್ಟದಲ್ಲಿ ತಪೋಭೂಮಿಯೂ, ಯಾಗಭೂಮಿಯೂ ಆದ 'ಕೊಂಡೆವೂರಿ'ನಲ್ಲಿ "ವಿಶ್ವಜಿತ್ ಅತಿರಾತ್ರ ಸೋಮಯಾಗ"ವನ್ನು 'ಅರುಣ ಕೇತುಕ ಚಯನ'ದೊಂದಿಗೆ ನಡೆಸಲು ಉದ್ದೇಶಿಸಲಾಗಿದೆ. ಸಮಸ್ತ ಜೀವರಾಶಿಗಳಿಗೆ ಸನ್ಮಂಗಲವನ್ನುಂಟು ಮಾಡುವ ಈ ಯಜ್ಞದಲ್ಲಿ ಪ್ರತಿಯೊಬ್ಬ ಭಕ್ತನಿಗೂ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಯಜ್ಞವು ಬಹಳ ವಿಸ್ತøತವಾಗಿ ಅನೇಕ ದಿನಗಳು ನಡೆಯುವುದರಿಂದ ಎಲ್ಲ ಭಕ್ತರಿಗೆ ತಮ್ಮ ತಮ್ಮ ಶಕ್ತ್ಯಾನುಸಾರವಾಗಿ ಯಜ್ಞದಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ. ಲೋಕಕಲ್ಯಾಣಾರ್ಥವಾಗಿ ನಡೆಯಲಿರುವ ಈ ಯಜ್ಞದಿಂದ ಎಲ್ಲರಿಗೂ ಒಳಿತಾಗಲಿ, ದೇಶ ಸುಭಿಕ್ಷವಾಗಲಿ, ಭಯ ನಿವಾರಣೆಯಾಗಲಿ, ಶಾಂತಿ ನೆಲೆಯಾಗಲಿ ಎಂಬ ಸತ್ಸಂಕಲ್ಪದೊಂದಿಗೆ ನಾವೆಲ್ಲರೂ ಕೈಜೋಡಿಸೋಣ, ಯಜ್ಞದ ಫಲವನ್ನು ಪಡೆಯೋಣ, ಲೋಕಹಿತವನ್ನು ಬಯಸೋಣ. ಈ ಅತಿರಾತ್ರ ಸೋಮಯಾಗ ಸಮಸ್ತ ಜೀವಕೋಟಿಗಳ ಅಭ್ಯುದಯಕ್ಕೆ ಕಾರಣವಾಗಲಿ ಸನಾತನ ಹಿಂದು ಧರ್ಮದಲ್ಲಿ ಅಗ್ನಿಯೇ ಪರಮಾತ್ಮರೂಪನಾಗಿ ಸರ್ವತ್ರ ಜೊತೆ ಇದ್ದು ಆರಾಧಿಸಲ್ಪಡುತ್ತಾನೆ. ಆದ್ದರಿಂದ "ಅಗ್ನಿರಗ್ರೇ ಪ್ರಥಮೋ ದೇವತಾನಾಂ" ಎಂಬುದಾಗಿ ಬ್ರಾಹ್ಮಣಾದಿಗಳಲ್ಲಿ ಹೇಳಿದ್ದನ್ನು ಕಾಣಬಹುದು. ವೇದದ ವಿಭಾಗಗಳಲ್ಲಿ ಕರ್ಮಕಾಂಡ ಹಾಗೂ ಜ್ಞಾನಕಾಂಡವೆಂಬವುಗಳು ಮುಖ್ಯವಾದವುಗಳಾಗಿವೆ. ಕರ್ಮಾಚರಣೆಯಿಂದ ಚಿತ್ತ ಶುದ್ಧೀಕರಿಸಿದಾಗ ಜ್ಞಾನವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಕರ್ಮಗಳನ್ನು ಯಜ್ಞದ ಮೂಲಕವೇ ಆಚರಿಸಲು ಸಾಧ್ಯ. ಅಂತಹ ಕರ್ಮಗಳಲ್ಲಿ ಶ್ರೇಷ್ಠತಮವಾದುದು ಶ್ರೌತಕರ್ಮ. ಶ್ರೌತವೆಂದರೆ ಶ್ರುತಿಯುಕ್ತವಾದುದು ಎಂದರ್ಥ. ಶ್ರುತಿಗಳೆಂದರೆ ವೇದಗಳು. ಎಲ್ಲಾ ಜೀವಿಗಳ ಸೃಷ್ಟಿಯ ರಹಸ್ಯವನ್ನು ಋಗ್ವೇದದಿಂದಲೂ, ಸಂಸ್ಕಾರವನ್ನು ಯಜುರ್ವೇದದಿಂದಲೂ, ಪ್ರಕೃತಿಯನ್ನು ಪರಿಶುದ್ಧಗೊಳಿಸಿ ತನ್ಮೂಲಕ ಸಂತೋಷವಾಗಿರುವ ವಿಚಾರವನ್ನು ಸಾಮವೇದದಿಂದಲೂ, ಅಣುವಿನ ವಿಭಜನೆ ಹಾಗೂ ಸಂಯೋಜನೆ ಮತ್ತು ಜೀವರಹಸ್ಯದ ವಿಚಾರಗಳನ್ನು ಅಥರ್ವ ವೇದದಲ್ಲಿ ಉಲ್ಲೇಖಿಸಲಾಗಿದೆ. ಈ ನಾಲ್ಕು ವೇದಗಳನ್ನು ಸೇರಿಸಿಕೊಂಡು ಮಾಡುವ ಯಜ್ಞವೇ ಶ್ರೌತ ಯಜ್ಞ. ಈ ಶ್ರೌತ ಯಜ್ಞಗಳಿಗೆ ಕಿರೀಟಪ್ರಾಯವಾದುದು ಸೋಮಯಾಗ. ಸೋಮಲತೆಯಿಂದ ಪಡೆದ ಸೋಮರಸವನ್ನು ಭಗವಂತನಿಗೆ ಸಮರ್ಪಿಸುವ ಮೂಲಕ ಸೋಮರಸವೇ ಮುಖ್ಯದ್ರವ್ಯವಾದ್ದರಿಂದ ಇದನ್ನು ಸೋಮಯಾಗವೆಂದು ಕರೆಯುತ್ತಾರೆ. ಕಲಿಯುಗದಲ್ಲಿ ಮಾನವನು ನಡೆಸಬಹುದಾದ ಶ್ರೇಷ್ಠಯಾಗಗಳಲ್ಲಿ 7 ಸೋಮಯಾಗಗಳು ಪ್ರಮುಖವಾಗಿವೆ. ಅವುಗಳೆಂದರೆ: 1. ಅಗ್ನಿóóಷ್ಟೋಮ 2. ಅತ್ಯಗ್ನಿಷ್ಟೋಮ 3. ಉಕ್ತಂ 4. ಷೋಡಶೀ 5.ವಾಜಪೇಯ 6. ಅತಿರಾತ್ರ ಮತ್ತು 7. ಅಪ್ತೋರ್ಯಾಮ. ಈ ಸಪ್ತ ಸೋಮಯಾಗಗಳಲ್ಲಿ ಆರನೇಯ ಸೋಮಯಾಗವೇ ಅತಿರಾತ್ರ. ಸುಮಾರು 48 ವಿಧದ ಅತಿರಾತ್ರಗಳಲ್ಲಿ "ವಿಶ್ವಜಿತ್ ಅತಿರಾತ್ರ" ಒಂದು, ಮಾತ್ರವಲ್ಲದೆ ಅರುಣಕೇತುಕಚಯನಪೂರ್ವಕವಾಗಿ ಮಾಡಲ್ಪಡುವ ವಿಶ್ವಜಿತ್ ಅತಿರಾತ್ರ ಮಹಾಸೋಮಯಾಗವು ಇನ್ನೂ ವಿಶೇಷತೆಯಿಂದ ಕೂಡಿದೆ. 33 ಸ್ತುತಿ ಶಾಸ್ತ್ರ ಮಗಳಲ್ಲಿ ಉಲ್ಲೇಖಿಸಿರುವ ಮಂತ್ರಗಳನ್ನೇ ಸೋಮಯಾಗಗಳಲ್ಲಿ ಉಚ್ಚರಿಸಲಾಗುತ್ತದೆ. "ವೇದಾನಾಂ ಸಾಮ ವೇದೋಸ್ಮಿ" ಎಂಬುದಾಗಿ ಜಗನ್ನಿಯಾಮಕನಾದ ಶ್ರೀ ಕೃಷ್ಣ ಪರಮಾತ್ಮ ಉದ್ಘೋಷಿಸಿದ್ದಾನೆ. ಆದುದರಿಂದ ಸಾಮವೇದವು ಸೋಮಯಾಗದ ಕೇಂದ್ರವಾಗಿರುತ್ತದೆ. ಸೋಮಯಾಗದಲ್ಲಿ ಯಾಗ ಶಾಲೆಯನ್ನು ಯಾಗದ ಯಜಮಾನನ ದೇಹದ ಆಳತೆಗೆ ಅನುಗುಣವಾಗಿ ನಿರ್ಮಾಣ ಮಾಡಲಾಗುತ್ತದೆ. ದನದ ತುಪ್ಪ, ವಿವಿಧ ಸಸ್ಯಸಂಕುಲಗಳ ಸಮಿತ್ತುಗಳು, ಮಣ್ಣಿನಿಂದ ತಯಾರಿಸಿದ ವಿಶೇಷ ಯಜ್ಞಪಾತ್ರೆಗಳು ಹಾಗೆಯೇ ಔದುಂಬರ ವೃಕ್ಷದ ಯಜ್ಞಾಯುಧಗಳು, ದನದ ಹಾಲು, ಆಡಿನ ಹಾಲು, ಕೆಲವು ವಿಧದ ಮಣ್ಣುಗಳು, ತಾವರೆ ಹೂಗಳು, ವಿಶೇಷವಾಗಿ ತಯಾರಿಸಲ್ಪಟ್ಟ ಇಟ್ಟಿಗೆಗಳು ಮತ್ತು ಇನ್ನಿತರ ದ್ರವ್ಯಪದಾರ್ಥಗಳನ್ನು ಬಳಸಲಾಗುತ್ತದೆ. ಸೋಮಯಾಗದಲ್ಲಿ ಪೂಜಿಸಲ್ಪಡುವ ಪ್ರಧಾನ ದೇವತೆ ಇಂದ್ರ. ಅಲ್ಲದೆ ಪಂಚಭೂತಗಳು ಮತ್ತು ಅಷ್ಟ ದಿಕ್ಪಾಲಕರೂ ಪೂಜಿಸಲ್ಪಡುತ್ತಾರೆ. ಅಗ್ನಿ, ಚಂದ್ರ, ಸೂರ್ಯ, ಬೃಹಸ್ಪತಿ, ಮಿತ್ರದೇವತೆ, ವರುಣ, ತ್ವವಸ್ತ್ವ, ಧಾತಾ, ವಿಷ್ಣು, ಅಶ್ವಿನಿದೇವತೆಗಳು, ವಿಶ್ವದೇವತೆ, ಪೃಥ್ವಿ, ಅಂತರಿಕ್ಷ, ನಾಲ್ಕು ದಿಕ್ಕುಗಳು ಊಧ್ರ್ವಾದಿಶಾ, ಪ್ರಜಾಪತಿ, ಶಿವ ಮೊದಲಾದ ಎಲ್ಲಾ ಶಕ್ತಿಗಳನ್ನೂ ಆರಾಧಿಸಲಾಗುತ್ತದೆ. ಸೋಮಯಾಗಕ್ಕೆ ನಾಲ್ಕು ವೇದಗಳ ಋತ್ವಿಜರೂ ಅತ್ಯಗತ್ಯ. ಹೋತಾ-ಋಗ್ವೇದಿ, ಅಧ್ವರ್ಯು-ಯಜುರ್ವೇದಿ, ಉದ್ಘಾತಾ-ಸಾಮವೇದಿ ಮತ್ತು ಬ್ರಹ್ಮ-ಅಥರ್ವವೇದಿಗಳು ಪ್ರಧಾನ ಋತ್ವಿಜರಾಗಿರುತ್ತಾರೆ. ಮತ್ತು ಪ್ರತಿಯೊಬ್ಬರಿಗೂ ಮೂವರಂತೆ ಸಹಾಯಕರಿರುತ್ತಾರೆ. ಒಟ್ಟು 16 ಋತ್ವಿಜರು ಮತ್ತು ಒಬ್ಬರು ಸದಸ್ಯರು ಸೇರಿ 17 ಜನರು ಋತ್ವಿಜರ ಗಣದಲ್ಲಿರುತ್ತಾರೆ. ಯಾಗ ನಡೆಸುವ ಋತ್ವಿಜರಿಗೆ ವೇದಗಳಲ್ಲಿ ಹೇಳಲ್ಪಟ್ಟಿರುವ ಸಂಹಿತೆ, ಬ್ರಾಹ್ಮಣ, ಶ್ರೌತಸೂಕ್ತ ಮತ್ತು ಇವುಗಳನ್ನು ಪ್ರಯೋಗಿಸುವ ಧಾರಾಳ ಜ್ಞಾನದ ಅಗತ್ಯವಿರುತ್ತದೆ. ಪ್ರಮುಖ ಋತ್ವಿಜರ ಗುಣಗಳು ಹೋತೃಗಣ- ಹೋತಾ, ಮೈತ್ರಾವರುಣ, ಆಚ್ಚಂವಾಕ, ಗ್ರಾವಸ್ತ ಅಧ್ವರ್ಯುಗಣ- ಅಧ್ವರ್ಯು, ಪ್ರತಿಪ್ರಸ್ಥಾತ, ನೇಷ್ಟಾ, ಉನ್ನೇತಾ ಉದ್ಘಾತೃಗಣ- ಉದ್ಘಾತ, ಪ್ರಸ್ತೋತ, ಪ್ರತಿಹರ್ತಾ, ಸುಬ್ರಹ್ಮಣ್ಯ ಬ್ರಹ್ಮಗಣ- ಬ್ರಹ್ಮಾ, ಬ್ರಾಹ್ಮಣಾಚ್ಛರಿಸಿ, ಅಗ್ನಿಧ್ರ, ಪೋತಾ ಸದಸ್ಯ- ಉಪಾದೃಷ್ಠಾ ಯಾಗ-ತಪೋ ಭೂಮಿಯಾದ ಕೊಂಡೆವೂರು: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ ಅವಧೂತ ಶ್ರೀನಿತ್ಯಾನಂದ ಸ್ವಾಮಿಗಳ ಶಕ್ತಿ ಕೇಂದ್ರಿತವಾದ ಪಾವನ ಭೂಮಿ. ಪ್ರಸ್ತುತ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಇಲ್ಲಿ ಆಶ್ರಮವೊಂದನ್ನು ಕಟ್ಟಿಕೊಂಡು ಆಧ್ಯಾತ್ಮಿಕ, ವೈದಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ, ಸಾಮಾಜಿಕ ಚಟುವಟಿಕೆಗಳ ಮೂಲಕ ಗಮನ ಸೆಳೆದಿದ್ದಾರೆ. ಕೊಂಡೆವೂರಿನ ಶ್ರೀಶ್ರೀಗಳ ನೇತೃತ್ವದಲ್ಲಿ ಈಗಾಗಲೇ ಇಲ್ಲಿ 3 ಪ್ರಮುಖ ಯಾಗಗಳು ಸಂಪನ್ನಗೊಂಡಿದೆ. ಸಹಸ್ರ ಚಂಡಿಕಾ(2012),ಚತುರ್ವೇದ ಸಂಹಿತಾ ಯಾಗ ಮತ್ತು ಬೃಹತ್ ಗಾಯತ್ರೀ ಘೃತ ಸಂಪ್ರಾಪ್ತಿ ಯಾಗ(2015), ನಕ್ಷತ್ರೇಷ್ಠಿ ಯಾಗ(2018) ಗಗಳು ಭಕ್ತ ಜನರ ನೆರವಿನೊಂದಿಗೆ ವ್ಯವಸ್ಥಿತವಾಗಿ ಮುನ್ನಡೆದು ಶಾಂತಿ-ನೆಮ್ಮದಿಗೆ ಕಾರಣವಾಗಿದೆ ಸಾಗರವನ್ನೇ ಗೆದ್ದ ಸಾಕಾರತೆ: ಪ್ರಸ್ತುತ ನಡೆಯಲಿರುವ ಅತಿರಾತ್ರ ಸೋಮಯಾಗದ ಪೂರ್ವಭಾವಿಯಾಗಿ ಒಂದು ವರ್ಷಗಳ ಹಿಂದೆ ಆರಂಭಿಸಲಾದ ಶ್ರೀವಿಷ್ಣು ಸಹಸ್ರನಾಮ ಪರ್ಯಟನೆ ಹಲವಾರು ಅಂಶಗಳಿಂದ ಗಮನೀಯವಾಗಿದೆ. ಶ್ರೀವಿಷ್ಣು ಸಹಸ್ರನಾಮ ಪ್ರಚಾರಕ್ಕಾಗಿ ಕಾಸರಗೋಡು-ಕಣ್ಣೂರು, ದಕ್ಷಿಣ ಕನ್ನಡ, ಮುಂಬೈಗಳಲ್ಲಿ ರಥಯಾತ್ರೆ ಹಲವು ಪ್ರದೇಶಗಳನ್ನು ಕ್ರಮಿಸಿ ಆಧ್ಯಾತ್ಮಿಕ ಪರಿಜ್ಞಾನ ನಿರೂಪಣೆಯಲ್ಲಿ ಯಶಸ್ವಿಯಾಗಿದೆ. ಉಪ್ಪಳದ ಸಮುದ್ರ ಕಿನಾರೆ ಪರಿಸರದಿಂದ ಆರಂಭಗೊಂಡ ಈ ಅಭಿಯಾನ ಹೆಚ್ಚು ಮಹತ್ವವಾಗಿ, ಶ್ರೀವಿಷ್ಣು ಸಹಸ್ರ ನಾಮದ ವೈಜ್ಞಾನಿಕ ಶಕ್ತಿಗೆ ಪ್ರತಿರೂಪವಾಗಿ ನಮ್ಮಲ್ಲಿ ಪುಳಕವನ್ನುಂಟುಮಾಡಿದೆ. ಕಾರಣ ಸಮಸ್ರನಾಮ ಅಭಿಯಾನ ಆರಂಭಗೊಂಡ ಉಪ್ಪಳ ಕಡಲ ಕಿನಾರೆಯಲ್ಲಿ ಹಲವು ದಶಕಗಳಿಂದ ಜನರನ್ನು ಭೀತಿಗೊಳಿಸುತ್ತಿದ್ದ ಕಡಲ್ಕೊರೆತ ಈಬಾರಿ ಗಣನೀಯ ಪ್ರಮಾಣದಲ್ಲಿ ಕುಸಿದು ಮಂತ್ರ ಶಕ್ತಿಯ ಸಾಧಕತೆಯನ್ನು ನಮ್ಮಲ್ಲಿ ಉದ್ದೀಪಿಸಿದೆ. ಕುಲ ಕಸುಬಿನ ನೆನಪು ಸಾಕಾರ: ಸೋಮಯಾಗದ ಪೂರ್ವಭಾವಿಯಾಗಿ ಜಿಲ್ಲೆಯ ವಿವಿಧ ಜಾತಿ-ವಿಭಾಗಗಳ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಆಯಾ ಜಾತಿಗಳ ಕುಲ ಕಸುಬನ್ನು ಮತ್ತೆ ಸಾಕಾರತೆಯತ್ತ ಕೊಂಡೊಯ್ಯಲಾಗಿದೆ. ಯಾಗದಲ್ಲಿ ಬಳಸಬೇಕಾದ ಜೊತೆಗೆ ಯಾಗಭೂಮಿಗೂ ಅಗತ್ಯವಿರುವ ಚಪ್ಪರ, ಬಟ್ಟೆ, ಮಡಿಕೆಗಳು, ಯಾಗ ಪಾತ್ರೆಗಳು, ಹಸೆ, ಬುಟ್ಟಿ, ಪೊರಕೆ, ಸೌಟು ಸಹಿತ ವಿವಿಧ ವಸ್ತುಗಳನ್ನು ಜಿಲ್ಲೆಯ ವಿವಿಧೆಡೆಗಳ ವಿವಿಧ ಜಾತಿಯ ಬಾಂಧವರು ಈಗಾಗಲೇ ತಯಾರಿಸಿ ನೀಡುವವರಿದ್ದಾರೆ.ಈ ಮೂಲಕ ಸಮಗ್ರ ಹಿಂದೂ ಸಮಾಜ ತನ್ನ ಒಗ್ಗಟ್ಟನ್ನು ಪರಂಪರೆಯ ನೆನಪಿಸುವಿಕೆಯೊಂದಿಗೆ ಸಾಮರಸ್ಯಕ್ಕೆ ಹೊಸ ಭಾಷ್ಯ ಬರೆಯುವಲ್ಲಿ ಸಾಫಲ್ಯವಾಗಲಿದೆ. "ಅನಾಹೂತೋದ್ವರಂ ಗಚ್ಛೇತ್" ಎಂಬಂತೆ ಆಮಂತ್ರಣವಿಲ್ಲದಿದ್ದರೂ ಮಹಾಯಾಗಗಳಲ್ಲಿ ಪಾಲ್ಗೊಳ್ಳಬೇಕೆಂಬುದು ಆರ್ಷವಾಕ್ಯ. ಅತ್ಯಪೂರ್ವವೂ ಅತಿವಿಶಿಷ್ಟವೂ ಆದ "ವಿಶ್ವಜಿತ್ ಅತಿರಾತ್ರ ಮಹಾಸೋಮಯಾಗದಲ್ಲಿ" ಎಲ್ಲಾ ಧರ್ಮಾಭಿಮಾನಿಗಳು ಪಾಲ್ಗೊಂಡು ಮಾನವ ಜನ್ಮವನ್ನು ಸಾರ್ಥಕಪಡಿಸಿಕೊಳ್ಳದಿದ್ದರೆ ಜನ್ಮ ವ್ಯರ್ಥವೆನ್ನುವುದರಲ್ಲಿ ಸಂಶಯವಿಲ್ಲ! ನಮ್ಮ ಪರಂಪರೆ, ನಂಬಿಕೆ, ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಭಾರತೀಯ ಆಧ್ಯಾತ್ಮಿಕ ಸಂಪತ್ತನ್ನು ಮತ್ತೆ ಪಡೆಯಲೇ ಬೇಕಾದ ಅನಿವಾರ್ಯತೆ ಇಂದಿದೆ. ಆಧುನಿಕತೆಯ ವೇಗದಲ್ಲಿ ನಮ್ಮನ್ನು ನಾವು ಮರೆತು ಕ್ಷಣಿಕ ಸುಖದಲ್ಲಿ ಮೈಮರೆತ ಈ ಹೊತ್ತಲ್ಲಿ ನಮಗೊದಗುತ್ತಿರುವ ಸಂಕಷ್ಟ-ಸವಾಲುಗಳಿಗೆ ಖಚಿತ ಪರಿಹಾರ, ಲೋಕ ಕಲ್ಯಾಣಕ್ಕಾಗಿ ಅತಿರಾತ್ರ ಸೋಮಯಾಗ ಸಂಕಲ್ಪಿಸಲಾಗಿದೆ. ಈ ಮೂಲಕ ಸರ್ವರ ಒಳಿತಿಗೂ ಪ್ರಾರ್ಥಿಸಿ ಭಗವತ್ ಕೃಪೆಗೆ ಸಮರ್ಪಿಸಲಾಗುವುದು. ಶ್ರೀಯೋಗಾನಂದ ಸರಸ್ವತೀ ಶ್ರೀಗಳು. ಶ್ರೀನಿತ್ಯಾನಂದ ಯೋಗಾಶ್ರಮ ಕೊಂಡೆವೂರು. ಉಪ್ಪಳ. ದಾರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಕಾಸರಗೋಡು ಮಧ್ಯೆ ಉಪ್ಪಳದಿಂದ ಎಡಬದಿಗೆ 1 ಕಿಲೋಮೀಟರ್ ಮತ್ತು ಕಾಸರಗೋಡು ಭಾಗದಿಂದ ಉಪ್ಪಳದಲ್ಲಿ ಬಲ ಬದಿಗೆ ಒಂದು ಕಿಲೋಮೀಟತ್ ದೂರದಲ್ಲಿ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ ಸ್ಥಿತಿಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries