ಸಿಪಿಎಂ-ಕಾಂಗ್ರೆಸ್ ಸಂಘರ್ಷ: ಇಬ್ಬರ ಕೊಲೆ-ನಾಳೆ ಹರತಾಳ
0
ಫೆಬ್ರವರಿ 17, 2019
ಕಾಸರಗೋಡು: ಪೆರಿಯಾ ಕಲ್ಲಾಟ್ ನಲ್ಲಿ ಕಾಂಗ್ರೆಸ್- ಸಿಪಿಎಂ ಕಾರ್ಯಕರ್ತರ ಮಧ್ಯೆ ಭಾನುವಾರ ರಾತ್ರಿ 9.30ರ ವೇಳೆಗೆ ಉಂಟಾದ ಘರ್ಷಣೆಯಲ್ಲಿ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು ಕೊಲೆಗೀಡಾದ ದಾರುಣ ಘಟನೆ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ.
ಕೃಪೇಶ್ (24) ಹಾಗೂ ಶರತ್ (21) ಸಾವನ್ನಪ್ಪಿದ ಯುವಕರಾಗಿದ್ದಾರೆ. ಬೇಕಲ ಪೊಲೀಸರು ಸ್ಥಳದಲ್ಲಿ ಠಿಕಾಣಿ ಹೂಡಿದ್ದಾರೆ.
ಕೊಲೆಯನ್ನು ಖಂಡಿಸಿ ಕಾಂಗ್ರೆಸ್ ಇಂದು(ಸೋಮವಾರ) ಕಾಸರಗೋಡು ಜಿಲ್ಲೆಯಲ್ಲಿ ಹರತಾಳಕ್ಕೆ ಆಹ್ವಾನ ನೀಡಿದೆ. ಬೆಳಿಗ್ಗೆ 6ರಿಂದ ಸಂಜೆ 6 ರ ತನಕ ಹರತಾಳ ನಡೆಯಲಿದೆ.
ಸ್ಥಳೀಯ ದೇವಾಲಯವೊಂದರ ಉತ್ಸವದ ವೇಳೆ ಸಿಪಿಎಂ ಕಾರ್ಯಕರ್ತರು ಕಾಂಗ್ರೆಸ್ಸ್ ಕಾರ್ಯಕರ್ತರಿಬ್ಬರ ಮೇಲೆ ಹಲ್ಲೆ ನಡೆಸಿ, ಬಳಿಕ ಮಾರಕಾಯುಧಗಳಿಂದ ಕೊಲೆಗೈದರೆಂದು ತಿಳಿದುಬಂದಿದೆ. ಕೃಪೇಶ್ ಸ್ಥಳದಲ್ಲೇ ಮೃತನಾದರೆ, ಗಂಭೀರ ಗಾಯಗೊಂಡಿದ್ದಶರತ್ ಆಸ್ಪತ್ರೆಗೆ ಕರೆದೊಯ್ಯುವ ಮಧ್ಯೆ ಮೃತಪಟ್ಟನು. ಕೊಲೆಗೆ ಸ್ಪಷ್ಟ ಕಾರಣಗಳು ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿಗೆ ಪೋಲೀಸರ ತಂಡ ವ್ಯಾಪಕ ಕಾರ್ಯಾಚರಣೆಯಲ್ಲಿ ತೊಡಗಿದ್ದು, ವೈಷಮ್ಯ ಮತ್ತಷ್ಟು ವ್ಯಾಪಿಸದಂತೆ ಭದ್ರತಾ ಕ್ರಮಗಳಿಗೆ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠ ಡಾ.ಎ.ಶ್ರೀನಿವಾಸ್ ತಿಳಿಸಿದ್ದಾರೆ.

