ಸಾಹಿತ್ಯವು ಮಾನವ ಬದುಕಿನ ಸಂವಿಧಾನ-ವಿರಾಜ ಅಡೂರು
0
ಫೆಬ್ರವರಿ 12, 2019
ಬದಿಯಡ್ಕ :ಸಾಹಿತ್ಯದ ಪರಿಣಾಮವು ಅವ್ಯಕ್ತವಾಗಿ ಪ್ರತಿಯೊಬ್ಬನನ್ನೂ ಆಕರ್ಷಿಸುತ್ತದೆ. ಸಾಹಿತ್ಯವು ವ್ಯಕ್ತಿಯಲ್ಲಿ ಶಿಸ್ತುಬದ್ಧ ಜೀವನ, ಸಮಯಪ್ರಜ್ಞೆ ಹಾಗೂ ದಾರ್ಶನಿಕರ ವಿಚಾರಧಾರೆಗಳನ್ನು ಅರ್ಥ ಮಾಡಿಕೊಳ್ಳಲು ಸಹಕರಿಸುತ್ತದೆ. ಸಾಹಿತ್ಯವು ಮಾನವ ಬದುಕಿಗೆ ಸಾಂವಿಧಾನಿಕವಾದ ಚೌಕಟ್ಟು ನೀಡುತ್ತದೆ. ವ್ಯಕ್ತಿಯ ಸಾತ್ವಿಕ ಮನಸ್ಸು ಅರಳುವುದಕ್ಕೆ ಸಾಹಿತ್ಯವು ಪ್ರೇರಕ ಎಂದು ಕಾಸರಗೋಡು ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿರಾಜ್ ಅಡೂರು ಹೇಳಿದರು.
ಅವರು ಬದಿಯಡ್ಕ ಸಮೀಪದ ಉದಯಗಿರಿ ಎಸ್ ಎಸ್ ಪಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಕಲಿಕೋತ್ಸವ -2019ರ ಅಂಗವಾಗಿ ನಡೆದ ವ್ಯಂಗ್ಯಚಿತ್ರ ರಚನಾ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಆಧುನಿಕ ತಂತ್ರಜ್ಞಾನ ಪ್ರೇರಿತವಾದ ಸೌಲಭ್ಯಗಳ ಬಳಕೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅನಿವಾರ್ಯ. ಈ ಸೌಲಭ್ಯಗಳನ್ನು ಸಕಾರಾತ್ಮಕವಾಗಿ ಬಳಸುವ ಮೂಲಕ ವಿದ್ಯಾರ್ಥಿಯ ಜ್ಞಾನ ವಿಕಸನವಾಗಬೇಕು. ಪೋಷಕರು ತಮ್ಮ ಮಕ್ಕಳ ಜ್ಞಾನವಿಕಸನಕ್ಕೆ ಪತ್ರಿಕೆಯನ್ನು ತರಿಸಿಕೊಳ್ಳಬೇಕು' ಎಂದು ಹೇಳಿದರು.
ಜಾನಪದ ಕಲಾವಿದ ರವಿಕಾಂತ ಕೇಸರಿ ಕಡಾರು ಮಾತನಾಡಿ,ಬಾಲ್ಯದಲ್ಲಿ ಮಕ್ಕಳು ಸಾಧ್ಯವಿದ್ದಷ್ಟು ವಿಚಾರಗಳನ್ನು ಕಲಿಯಬೇಕು. ಈ ವಯೋಮಾನ ಅವರ ಕಲಿಕೆಯ ಕಾಲ. ಕಲಿಯುವ ಮಕ್ಕಳಿಗೆ ಎಲ್ಲಾ ಕಲೆಗಳೂ ಕೂಡಾ ಸ್ವೀಕಾರಾರ್ಹವಾಗಿದೆ. ಆದ್ದರಿಂದ ಮಕ್ಕಳು ವಿಚಾರಗಳನ್ನು ಸ್ವೀಕರಿಸುವಂತೆ ಪೋಷಕರು ಬೆಂಬಲವಾಗಬೇಕು' ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಎನ್ ಕೃಷ್ಣ ಭಟ್, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂರ್ತಿ, ಶಾಲಾ ಮುಖ್ಯ ಶಿಕ್ಷಕಿ ಐ ಅಂಬಿಕಾ ಸರಸ್ವತಿ, ನಿವೃತ್ತ ಶಿಕ್ಷಕ ರಾಮ ಮಾಸ್ತರ್, ಶಾಲಾ ಶಿಕ್ಷಕ ರಾಜೇಶ್ ಎಸ್, ಶಾಲಾ ಪಿಟಿಎ ಅಧ್ಯಕ್ಷೆ ಕುಸುಮಾ, ಶಾಲಾ ಮಾತೃಸಂಘದ ಅಧ್ಯಕ್ಷೆ ಬೇಬಿ ಶ್ಯಾಲಿನಿ ಶಾಲೆಯ ಎಸ್‍ಎಸ್‍ಜಿ ಅಧ್ಯಕ್ಷ ಬಿ ಕೃಷ್ಣಪ್ರಸಾದ್ ಮೊದಲಾದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿರಾಜ್ ಅಡೂರು ಅವರನ್ನು ಶಾಲು ಹೊದೆಸಿ ಅಭಿನಂದಿಸಲಾಯಿತು. ಕಾರ್ಯಾಗಾರದಲ್ಲಿ ಸುಮಾರು 30ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

