ಉಗ್ರರ ಹುಟ್ಟಡಗಿಸಬೇಕು : ಜಯಪ್ರಕಾಶ ಪಜಿಲ
ಬದಿಯಡ್ಕ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ಮಾತನಾಡಿ, ಗಡಿಯಲ್ಲಿ ದೇಶವನ್ನು ಕಾಯುವ ಯೋಧರಿಂದ ನಾವು ಸುರಕ್ಷಿತರಾಗಿದ್ದೇವೆ. ಚಳಿ, ಬಿಸಿಲು, ಗಾಳಿ, ಮಳೆಯನ್ನು ಲೆಕ್ಕಿಸದೆ ನಿದ್ದೆಯಿಲ್ಲದೆ ನಿಷ್ಠೆಯಿಂದ ಸೈನಿಕರು ಕರ್ತವ್ಯವನ್ನು ನಿಭಾಯಿಸುತ್ತಿರುವ ಕಾರಣ ನಾವು ಸುಖವಾಗಿ ನಿದ್ರಿಸುತ್ತೇವೆ. ಓರ್ವ ಸೈನಿಕನೂ ನಮ್ಮ ದೇಶದ ಆಧಾರ ಸ್ಥಂಭವಾಗಿದ್ದಾರೆ. ಅಂತಹ ಸೈನಿಕರ ಮೇಲಿನ ಅಕ್ರಮಣಕ್ಕೆ ತಕ್ಕ ಪ್ರತೀಕಾರವನ್ನು ನೀಡಿ ಉಗ್ರರ ಹುಟ್ಟಡಗಿಸಬೇಕು ಎಂದರು.
ಅಧ್ಯಾಪಿಕೆಯರಾದ ರಶ್ಮಿ ಪೆರ್ಮುಖ ಹಾಗೂ ಸರೋಜ ಕಾನತ್ತಿಲ ಕಾರ್ಯಕ್ರಮ ಸಂಯೋಜಿಸಿದ್ದರು. ಭಾರತ್ ಮಾತಾ ಕೀ ಜೈ ಘೋಷಣೆಯೊಂದಿಗೆ ಎಲ್ಲಾ ವಿದ್ಯಾರ್ಥಿಗಳು ದೀಪವನ್ನುರಿಸುವುದರ ಮೂಲಕ ಹುತಾತ್ಮರಾದ ವೀರಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ದೇಶದ ಪ್ರತಿಯೋರ್ವ ಪ್ರಜೆಯೂ ವೀರಯೋಧರಾಗಬೇಕು ಮೊದಲಾದ ಸೂರ್ತಿಯುತ ಮಾತುಗಳೊಂದಿಗೆ ವಿದ್ಯಾರ್ಥಿಗಳು ತಮ್ಮ ದೇಶಪ್ರೇಮದ ಮಾತುಗಳನ್ನಾಡುವ ಮೂಲಕ ನುಡಿನಮನ ಸಲ್ಲಿಸಿದರು.
