ಬೆಜ್ಜ ನಾರಾಯಣ ಹೆಗ್ಡೆ ಸಂಸ್ಮರಣೆ
0
ಫೆಬ್ರವರಿ 18, 2019
ಮಂಜೇಶ್ವರ: ಹಿರಿಯ ಸಿ.ಪಿ.ಐ. ನೇತಾರರೂ, ಮಾಜಿ ಸೈನಿಕರೂ ಆಗಿದ್ದ ಬೆಜ್ಜ ದಿ.ನಾರಾಯಣ ಹೆಗ್ಡೆ ಅವರ 10 ನೇ ಸಂಸ್ಮರಣೆ ವಾರ್ಷಿಕದಂಗವಾಗಿ ಸಮ್ಮಾನ, ಟ್ರಸ್ಟ್ ರೂಪೀಕರಣ, `ಭೂಮಸೂದೆ - ಇಂದಿನ ಕೇರಳ' ಎಂಬ ವಿಷಯದ ಬಗ್ಗೆ ಸರ್ವ ಪಕ್ಷ ಸಂವಾದ ಕಾರ್ಯಕ್ರಮವು ಬೆಜ್ಜ ಧೂಮಾವತಿ ಬಂಟ ದೈವಸ್ಥಾನದ ಪರಿಸರದಲ್ಲಿ ಇತ್ತೀಚೆಗೆ ಜರಗಿತು.
ಬೆಳಿಗ್ಗೆ ಬೆಜ್ಜದ ಗುತ್ತು ಮಾಗಂದಡಿಯ ಹಿರಿಯರಾದ ವಿಠಲ ಶೆಟ್ಟಿ ಸಹಿತ ಹಲವು ಗಣ್ಯರು ದಿ.ನಾರಾಯಣ ಹೆಗ್ಡೆ ಅವರ ಬೆಜ್ಜ ನಿವಾಸದ ಬಳಿಯ ಅವರ ಸ್ಮೃತಿ ಮಂಟಪಕ್ಕೆ ಪುಷ್ಪಾಂಜಲಿ ಸಮರ್ಪಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು.
ಸಂಜೆ ಜರಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷರಾದ ಎಂ.ಗೋವಿಂದ ಹೆಗ್ಡೆ ವಹಿಸಿದ್ದು, ಸಿ.ಪಿ.ಐ. ಜಿಲ್ಲಾ ಕಾರ್ಯದರ್ಶಿ ನ್ಯಾಯವಾದಿ ಗೋವಿಂದನ್ ಪಳ್ಳಿಕಾಪಿಲ್ ಉದ್ಘಾಟಿಸಿ ವಿಚಾರ ಮಂಡಿಸಿದರು. ದಿ.ನಾರಾಯಣ ಹೆಗ್ಡೆಯವರು ಬೆಜ್ಜ ದೈವಸ್ಥಾನದ ಪುನರುಜ್ಜೀವನದ ಹರಿಕಾರ, ದುರ್ಗಿಪಳ್ಳ -ಮುನ್ನಿಪ್ಪಾಡಿ ರಸ್ತೆಯ ಚಾಲನೆಗಾರ, ಕಡಂಬಾರು ವಿಷ್ಣುಮೂರ್ತಿ ದೇವಸ್ಥಾನದ ರಸ್ತೆ ನಿರ್ಮಾಣದ ರುವಾರಿ, ಬಡ ರೈತರ ಪಾಲಿನ ಆಶ್ರಯದಾತ, ತತ್ವಾದರ್ಶಗಳನ್ನು ನಂಬಿ ಬಂದವರ ಕೈಬಿಡದೆ ಭೂಮಾಲಿಕರ ಕೋವಿಗೆ ಎದೆಗುಂದದೆ ರೈತರನ್ನು ರಕ್ಷಿಸುತ್ತಿದ್ದ ಶ್ರೇಷ್ಠ ಕಮ್ಯೂನಿಸ್ಟ್ ನಾಯಕ ಬೆಜ್ಜ ನಾರಾಯಣ ಹೆಗ್ಡೆ ಅವರನ್ನು ಸ್ಮರಿಸುತ್ತಾ 1970 ರಲ್ಲಿ ಕೇರಳದಲ್ಲಿ ಜಾರಿಗೆ ಬಂದ ಸಮಗ್ರ ಭೂಮಸೂದೆಯಿಂದಾಗಿ ಕೇರಳದ ಜನರ ಬದುಕು ಹಸನಾದ ಬಗ್ಗೆ, ಮನೆ ಸ್ವಂತ ಆದ ಬಗ್ಗೆ ಹೀಗೆ ಹಲವು ವಿಚಾರಗಳ ಬಗ್ಗೆ ಹೇಳಿದರು.
ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಜಿಲ್ಲಾ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್, ಕೃಷ್ಣ ಕೊಳಂಜ, ಶಂಕರ ರೈ ಮಾಸ್ತರ್, ಹಿರಿಯರಾದ ಎಂ.ಸಂಜೀವ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಪಳ್ಳತ್ತಡ್ಕ ಮೊದಲಾದವರು ಮಾತನಾಡಿದರು.
ಸಭೆಯಲ್ಲಿ ಅಂಗವಿಕಲ ಪ್ರಗತಿಪರ ಕೃಷಿಕರಾದ ಮೋನಪ್ಪ ಭಂಡಾರಿ ಅವರನ್ನು ಟ್ರಸ್ಟ್‍ನ ಸದಸ್ಯೆ ವಿದ್ಯಾ ಪಾದೆಮಾರ್ ಅವರು ಇತರ ಗಣ್ಯರ ಸಮಕ್ಷಮದಲ್ಲಿ ಸಮ್ಮಾನಿಸಿ ಗೌರವಿಸಿದರು. ಮೋಹನ ಹೆಗ್ಡೆ, ಆನಂದ ಶೆಟ್ಟಿ ಧರ್ಮೆಮಾರ್, ಜಯರಾಮ ಬಲ್ಲಂಗೂಡೆಲು, ಅಜಿತ್ ಎಂ.ಸಿ. ಉಪಸ್ಥಿತರಿದ್ದರು.
ಸಿಪಿಐ ಜಿಲ್ಲಾ ನಿರ್ವಾಹಕ ಸಮಿತಿ ಸದಸ್ಯರೂ, ಟ್ರಸ್ಟಿನ ಕಾರ್ಯದರ್ಶಿಯೂ ಆದ ಬಿ.ವಿ.ರಾಜನ್ ಸ್ವಾಗತಿಸಿ, ಕೇರಳ ತುಳು ಅಕಾಡೆಮಿ ನಿರ್ವಾಹಕ ಸಮಿತಿ ಸದಸ್ಯ ರಾಮಕೃಷ್ಣ ಕಡಂಬಾರ್ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್ ಸದಸ್ಯ ಸಂಕಬೈಲು ಸತೀಶ್ ಅಡಪ್ಪ ವಂದಿಸಿದರು.
ಸಭೆಯಲ್ಲಿ ಉಗ್ರರ ದಾಳಿಗೆ ತುತ್ತಾಗಿ ವೀರ ಮರಣ ಹೊಂದಿದ ಯೋಧರಿಗೆ ಮೌನ ಪ್ರಾರ್ಥನೆಯ ಮುಖಾಂತರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

