ಮಂಜೇಶ್ವರ: ಸಿಪಿಎಂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಶನಿವಾರ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡುವಿಗೆ ಭೇಟಿ ನೀಡಿ ಕೆಲ ಸಮಯ ಕಳೆದರು.
ನೂತನವಾಗಿ ನಿರ್ಮಾಣಗೊಂಡಿರುವ ಭವನಿಕಾ ರಂಗ ಮಂದಿರ ಸೇರಿದಂತೆ ಪಾರ್ತಿಸುಬ್ಬ ಯಕ್ಷಗಾನ ವೇದಿಕೆ, ಗ್ರಂಥಾಲಯ ಮತ್ತು ಯಕ್ಷ ಕಲಾ ಮಂದಿರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲ ಕಾಲ ಸ್ಥಳೀಯ ಮಕ್ಕಳೊಂದಿಗೆ ಕಳೆದ ಸೀತಾರಾಂ ಯೆಚೂರಿ ವಿದ್ಯಾರ್ಥಿಗಳು ಓದಿನ ಕಡೆ ಗಮನವನ್ನು ಕೊಡಬೇಕು ಮಾತ್ರವಲ್ಲದೆ ಇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು ಎಂಬ ಕಿವಿ ಮಾತು ಹೇಳಿದರು. ಮಂಜೇಶ್ವರದಂತಹ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದ ಗೋವಿಂದ ಪೈ ಬಹುಭಾಷಾ ಪಂಡಿತರಾಗಿ, ಸಂಶೋಧಕರಾಗಿ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ವೈಶಾಖಿ, ಗೋಲ್ಗಥಾ, ದೆಹಲಿ ಕಂಡ ಕಾವ್ಯಗಳು ಸಹಿತ ಇಂಡಿಯಾನಾ ಕೃತಿಯು ಅವರ ಭಾಷಾ ಪ್ರಭುತ್ವ ಸಹಿತ ಸಂಶೋಧನಾತ್ಮಕತೆಗೆ ಸಾಕ್ಷಿಯಾಗಿದೆ ಎಂದರು.

ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಸದಸ್ಯ ಕೆ.ಆರ್ ಜಯಾನಂದ, ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ.ವಿ ಬಾಲಕೃಷ್ಣನ್ ಮಾಸ್ತರ್, ರಾಜ್ಯ ಸಮಿತಿ ಸದಸ್ಯ ಕೆ.ಪಿ ಸತೀಶ್ಚಂದ್ರನ್, ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು, ಪ್ರಶಾಂತ್ ಕನಿಲ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.