ಪೆರ್ಲ: ಸನಾತನ ಭಾರತೀಯ ಧರ್ಮ ಸಂಸ್ಕೃತಿ, ಧರ್ಮ ಸಂದೇಶದಲ್ಲಿ ಅಹಿಂಸಾವಾದಕ್ಕೆ ಒತ್ತು ನೀಡಿದೆ.ಕಳೆದ ದಿನದಲ್ಲಿ ಕಾಶ್ಮೀರದಲ್ಲಿ ನಡೆದ ಭಯತ್ಪಾದಕ ದಾಳಿಯಿಂದ ಭಾರತವೂ ಸೇರಿದಂತೆ ಸಮಸ್ತ ವಿಶ್ವವೇ ನಲುಗಿದೆ. ಆತಂಕವಾದಿಗಳ ಉಗ್ರ ಅಟ್ಟಹಾಸದಿಂದ ಮಾನವೀಯ ಮೌಲ್ಯಗಳ ಸದ್ಗುಣ ಶೀಲತೆ ಕುಸಿಯದಂತೆ ಜಾಗೃತೆ ವಹಿಸಿ ಸಂಸ್ಕೃತಿ ಉಳಿಸಿ ಬೆಳೆಸುವುದರ ಜತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ ಎಂದು ಮಾಣಿಲ ಶ್ರೀಧಾಮದ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಪೆರ್ಲ ಬಜಕೂಡ್ಲು ಮಿನಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಶ್ರೀ ಮಹಾಲಿಂಗೇಶ್ವರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ಬಿನ 'ತ್ರಿಂಶತಿ ಸಂಭ್ರಮ' ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ವಿಶ್ವ ಶಾಂತಿ, ಸುಭಿಕ್ಷೆ ನೆಲೆ ನಿಲ್ಲಲು ಹೃದಯ ಶ್ರೀಮಂತಿಕೆಯೊಂದಿಗೆ ಪರಿವರ್ತನೆ, ಹಾಗೂ ಪರಿಮಾರ್ಜನೆ ಹೊಂದಿ
ಸಮಾಜದ ಪುನರುದ್ಧಾರ, ಬಾಹ್ಯ ಪ್ರಪಂಚದ ಸೇವೆಯಲ್ಲಿ ತೊಡಗಿ ಸಾಧನೆಯ ಉತ್ತುಂಗಕ್ಕೇರಿ ನಿರಂತರ ಪ್ರಯತ್ನದೊಂದಿಗೆ ದೇಶ ಹಿತ, ಸಮಾಜ ಹಿತ ಕಾಪಾಡುವ ಸಂಸ್ಕಾರ ಮನೋಭಾವವುಳ್ಳ ಚಾರಿತ್ರ್ಯವಂತರಾಗಿ ಬಾಳಲು ಪ್ರತಿಯೊಬ್ಬನೂ ಶ್ರಮಿಸ ಬೇಕು ಎಂದರು.
ಪೆರ್ಲ ಶ್ರೀ ಸತ್ಯನಾರಾಯನ ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಜೇಂದ್ರ ಬಿ.ಅಧ್ಯಕ್ಷತೆ ವಹಿಸಿದರು. ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳೀನ್ ಕುಮಾರ್ ಕಟೀಲ್ ಮಾತನಾಡಿ ಸಂಸ್ಥೆಯೊಂದರ ಹುಟ್ಟು ಸುಲಭ ಕಾರ್ಯ.ಆದರೆ ಸುದೀರ್ಘ ಅವಧಿಗೆ ಬೆಳೆಸುವುದು ಕಠಿಣ.ಕಳೆದ ಮೂವತ್ತು ವರ್ಷಗಳಿಂದ ಕ್ರೀಡೆ, ಸಂಸ್ಕೃತಿಕ, ಧಾರ್ಮಿಕ ಕ್ಷೇತ್ರದಲ್ಲಿ ಮಾದರಿಯಾಗಿ ಕಾರ್ಯ ನಿರ್ವಹಿಸಿ ಮೂವತ್ತು ವರ್ಷಗಳನ್ನು ಪೂರೈಸಿದ ಬಜಕೂಡ್ಲು ಸಂಘಟನೆ ಹಳ್ಳಿ ಪ್ರದೇಶದ ಹಲವಾರು ಪ್ರತಿಭೆಗಳನ್ನು ವೇದಿಕೆ ಒದಗಿಸುವ ಮೂಲಕ ಅನಾವರಣ ಗೊಳಿಸಿರುವುದು ಶ್ರೇಷ್ಟ ಕಾರ್ಯ.ಜಗದ್ಗುರು ಭಾರತಾಂಬೆಯ ಶ್ರೇಷ್ಠ ಪುತ್ರರು ದುಷ್ಟ ಕೂಟಗಳ ದಾಳಿಗೆ ಸಿಲುಕಿ ಪ್ರಾಣಾರ್ಪಣೆ ಮಾಡುವಂತಾದುದು ದುರದೃಷ್ಟಕರ ಎಂದ ಅವರು ವೀರ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಕೇಂದ್ರ ಸರಕಾರದ ಕರ್ನಾಟಕ ಬೆಂಗಳೂರು ಉಚ್ಛ ನ್ಯಾಯಾಲಯದ ಹಿರಿಯ ವಕೀಲ ವಿನೋದ್ ಕುಮಾರ್ ಉಪಸ್ಥಿತರಿದ್ದು ಮಾತನಾಡಿದರು.
ಕ್ಲಬ್ ಸ್ಥಾಪಕ ಕಾರ್ಯದರ್ಶಿ, ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ, ಕ್ಲಬ್‍ಗೆ ಸ್ಥಳದಾನ ಮಾಡಿದ ಕೃಷ್ಣ ಬಾಳಿಗ ಪೆರ್ಲ, ಹಿರಿಯ ಸಾಮಾಜಿಕ, ಧಾರ್ಮಿಕ ಮುಖಂಡ ಟಿ.ಆರ್.ಕೆ ಭಟ್, ನಿವೃತ್ತ ಮುಖ್ಯ ಶಿಕ್ಷಕ ರಾಮಣ್ಣ ಪೂಜಾರಿ, ಹಿರಿಯ ದೈವ ನರ್ತಕ ಕಲಾವಿದ ಕುಟ್ಟಿ ಬಜಕೂಡ್ಲು, ಗುರುಸ್ವಾಮಿ ಶ್ರೀಧರ ಬಜಕೂಡ್ಲು, ಹಿರಿಯ ವ್ಯಾಪಾರಿ ವಿಶ್ವನಾಥ ರೈ ಬಜಕೂಡ್ಲು, ಸೋಮವಾರಪೇಟೆ ಪೊಲೀಸ್ ಠಾಣೆ ಎ.ಎಸ್.ಐ ಸುಂದರ ಸುವರ್ಣ, ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣು ನಾಯ್ಕ್ ಅಮೆಕ್ಕಳ, ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ನಿವೃತ್ತ ಉದ್ಯೋಗಿ ಗೋಪಾಲ ಪಾಟಾಳಿ ಸೂರ್ಡೇಲು, ಪ್ರಗತಿಪರ ಕೃಷಿಕ ಬಾಲಕೃಷ್ಣ ಕುಲಾಲ್, ಹಿರಿಯ ಕಬಡ್ಡಿ ಆಟಗಾರ ಬಾಲಕೃಷ್ಣ ಪೂಜಾರಿ, ಸುಂದರ ನಾಯ್ಕ ಬಜಕೂಡ್ಲು ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಉಮೇಶ್ ಕೆ. ಅಭಿನಂದನಾ ಭಾಷಣ ಮಾಡಿದರು.
ಸನ್ಮಾನ ಸ್ವೀಕರಿಸಿ ಡಾ. ಸದಾನಂದ ಪೆರ್ಲ ಮಾತನಾಡಿ ಭಾರತೀಯರು ಒಂದೇ ತಾಯಿಯ ಮಕ್ಕಳು.ದೇವರನ್ನು ಪ್ರಾರ್ಥಿಸುವ ವೇಳೆ ನಮ್ಮ ದೇಶದ ಗಡಿ ಕಾಯುವ ಸೈನಿಕರಿಗೂ ಪ್ರಾರ್ಥನೆ ಸಲ್ಲಿಸಬೇಕು ಎಂದರು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ. ಶುಭ ಹಾರೈಸಿದರು.ತ್ರಿಂಶತಿ ಸವಿ ನೆನಪಿನ ಸ್ಮರಣ ಸಂಚಿಕೆ 'ತ್ರಿನೇತ್ರ' ಬಿಡುಗಡೆ ಗೊಳಿಸಲಾಯಿತು.ಜಿ.ಪಂ.ಸದಸ್ಯೆ ಪುಷ್ಪಾ ಅಮೆಕ್ಕಳ, ಉದ್ಯಮಿ ಮನೋಜ್ ಕುಮಾರ್ ಸರಿಪಳ್ಳ, ಮಂಗಳೂರು, ಎಣ್ಮಕಜೆ ಗ್ರಾ. ಪಂ. ಸದಸ್ಯ ಉದಯ ಚೆಟ್ಟಿಯಾರ್ ಬಜಕೂಡ್ಲು, ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಶಿಭೂಷಣ ಶಾಸ್ತ್ರಿ, ದೇವಳದ ಆಡಳಿತ ಮೊಕ್ತೇಸರ ಕೃಷ್ಣ ಶ್ಯಾನುಭೋಗ್, ಸಂಘದ ಅಧ್ಯಕ್ಷ ರಾಜೇಶ್ ಬಜಕೂಡ್ಲು ಉಪಸ್ಥಿತರಿದ್ದರು.
ಸಿಬಿಐ ಚೆನ್ನೈ ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಾನಂದ ಪೆರ್ಲ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಪತ್ರಕರ್ತ ಪುರುಷೋತ್ತಮ ಪೆರ್ಲ ವಂದಿಸಿದರು.ಉದಯ ಕುಮಾರ್ ಸ್ವರ್ಗ ನಿರೂಪಿಸಿದರು.

ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ವಿಷ್ಣು ನಾವಡ ಸಾಂಸ್ಕೃತಿಕ ಕಾರ್ಯಕ್ರಮ, ಹಾಗೂ ಕಬ್ಬಡ್ಡಿ ಪಂದ್ಯಾಟ ಉದ್ಘಾಟಿಸಿದರು.
ಸಂಜೆ ಶ್ರೀ ಗಜಾನನ ನಾಟ್ಯಾಂಜಲಿ ಸುಜಾತ ಕಲಾಕ್ಷೇತ್ರ ಮತ್ತು ತನುಜ ಕಿಶನ್ ಮುಳ್ಳೇರಿಯ ಶಿಷ್ಯ ವೃಂದದ ನೃತ್ಯ ಸಂಭ್ರಮ ಕಾರ್ಯಕ್ರಮ, ಹಾಗೂ ಸಭಾ ಕಾರ್ಯಕ್ರಮದ ಬಳಿಕ 65 ಕಿ.ಗ್ರಾಂ. ವಿಭಾಗದ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟ ಆರಂಭವಾಯಿತು. ದೀಕ್ಷಿತ್ ಬಜಕೂಡ್ಲು, ಜಯನ್ ಕಾಟುಕೊಚ್ಚಿ, ನೆಲ್ಲಿಕಟ್ಟ ಕನ್ನಡ ಹಾಗೂ ಮಲಯಳಾಂ ಭಾಷೆಯಲ್ಲಿ ಪಂದ್ಯಾಟದ ವೀಕ್ಷಕ ವಿವರಣೆ ನೀಡಿದರು.
