ಹುತಾತ್ಮರಾದ ವೀರ ಯೋಧರಿಗೆ *ಗೌರವ ನಮನ*-ಕವನ
0
ಫೆಬ್ರವರಿ 16, 2019
ಗುರುವಾರ ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದವೀರ ಯೋಧರನ್ನು ನೆನೆದು ಶಿಕ್ಷಣ ತಜ್ಞ, ಕವಿ, ಗಮಕಿ ವಿ.ಬಿ.ಕುಳಮರ್ವ ಅವರು ರಚಿಸಿದ ಗೌರವ ನಮನದ ಕವನ ಓದುಗರಿಗೆ-ದೇಶ ಪ್ರಜ್ಞೆಯ ಜಾಗೃತಿಗೆ
*~~~~~~~~~~~~~~~*
ಭಾರತ ದೇಶದ ಪ್ರಜೆಗಳೆ ಕೇಳಿರಿ
ಉಗ್ರರ ಧಾಳಿಯ ಖಂಡಿಸಿರಿ ||
( ಪಲ್ಲವಿ)
ಸಂತಸದಿಂದಲಿ ರಜೆಯನು ಕಳೆಯುತ
ಮುಂದಿನ ಕಾರ್ಯಕೆ ಅಡಿಯಿಡಲು |
ಊರನು ತೊರೆಯುತ ಕ್ಷೇತ್ರಕೆ ಸಾಗಲು
ಎರಗಿದ ಉಗ್ರರು ರಕ್ಕಸರು ||
|| 1 ||
ದಹಿಸಿತು ಅಗ್ನಿಯು ದೇಹವ ಬಿಡದೆ
ಹೊಸಕಿತು ವೀರರ ಪ್ರಾಣವನು|
ಹಗಲಿರುಳೆನ್ನದೆ ಮಳೆಚಳಿಯೆನ್ನದೆ
ದೇಶವ ಕಾಯುವ ಯೋಧರನು||
|| 2 ||
ಎದುರಿಗೆ ನಿಲ್ಲಲು ಧೈರ್ಯವು ಸಾಲದೆ
ಮೋಸದಿ ಯೋಧರ ಸುಟ್ಟವರ|
ಪಾತಕಿಯುಗ್ರರ ದಮನಕೆ ಪಣವನು
ಇಂದೇ ಗೈಯ್ಯುವ ನಾವೆಲ್ಲ ||
|| 3 ||
ಉಗ್ರರ ಧಾಳಿಯ ಖಂಡಿಸ ಬೇಕು
ರಕ್ಕಸ ನರರನು ಶಿಕ್ಷಿಸ ಬೇಕು |
ಭಾರತ ಯೋಧರ ಅಮೂಲ್ಯ ಜೀವಕೆ
ತಲೆಯನು ಬಾಗುತ ನಮಿಸಲು ಬೇಕು ||
|| 4 ||
ಕಟ್ಟಲು ಬೇಕು ಸದೃಢ ರಾಷ್ಟ್ರವ
ಮೆಟ್ಟುತ ಧೈರ್ಯದಿ ಉಗ್ರರನು|
ದ್ರೋಹವನೆಸಗುವ ದುಷ್ಟರ ದನುಜರ
ಬದುಕಲು ಬಿಡದೆ ಹೊಸಕುವುದು ||
|| 5 ||
ಭಾರತ ಮಾತೆಯ ವೀರ ಕುಮಾರರ
ಚೇತನಕಾರತಿ ಬೆಳಗುವೆವು |
ಮರುಗದೆ ಮುಂದಿನ ಕಾರ್ಯವನೆಸಗಲು
ಗೌರವ ನಮನವ ಸಲಿಸುವೆವು||
|| 6 ||
(ತಾ - 14- 2 - 2019 ರಂದು ಉಗ್ರರ ವಿಕೃತ ಅಟ್ಟಹಾಸಕ್ಕೆ ಬಲಿಯಾದ ಮುಗ್ಧ ಯೋಧರ ದಿವ್ಯಾತ್ಮಗಳಿಗೆ ಚಿರಶಾಂತಿಯನ್ನು ಕೋರುತ್ತಾ ಈ ಗೌರವ ನುಡಿ ನಮನವನ್ನು ಸಲ್ಲಿಸುತ್ತೇನೆ)
*ರಚನೆ* *ವಿ.ಬಿ.ಕುಳಮರ್ವ, ಕುಂಬ್ಳೆ*

