HEALTH TIPS

ದೇಶದ ಮೊದಲ ಮಹಿಳಾ ವೈಮಾನಿಕ ಇಂಜಿನಿಯರ್ ಹಿನಾ ಜೈಸ್ವಾಲ್, ಇತಿಹಾಸ ಸೃಷ್ಟಿ!

ಬೆಂಗಳೂರು: ದೇಶದ ಮೊದಲ ಮಹಿಳಾ ವೈಮಾನಿಕ ಇಂಜಿನಿಯರ್ ಆಗಿ ಚಂಡಿಗಡದ ಹಿನಾ ಜೈಸ್ವಾಲ್ ಆಯ್ಕೆಯಾಗಿದ್ದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಚಂಡಿಗಡದವರಾದ ಹಿನಾ ಜೈಸ್ವಾಲ್, ಇಂದು ಯಲಹಂಕ ಹೊರ ವಲಯದ ವಾಯುಪಡೆ ನಿಲ್ದಾಣದ 112ನೇ ಹೆಲಿಕಾಪ್ಟರ್ ಘಟಕದಲ್ಲಿ ತಮ್ಮ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ದೇಶದ ಪ್ರಥಮ ಮಹಿಳಾ ಇಂಜಿನಿಯರ್ ಆಗಿ ಆಯ್ಕೆಗೊಂಡರು. 2015ರ ಜನವರಿ 5ರಂದು ಭಾರತೀಯ ವಾಯುಪಡೆಯ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರತಿಷ್ಠಿತ ಫ್ಲೈಟ್ ಇಂಜಿನಿಯರ್ ತರಬೇತಿಗೆ ಆಯ್ಕೆಯಾಗಿದ್ದ ಹಿನಾ, ಇದಕ್ಕೂ ಮುನ್ನ ವಿಮಾನ ಕ್ಷಿಪಣಿ ಪಡೆಯ ಅಗ್ನಿಶಾಮಕ ದಳ ಮತ್ತು ಬ್ಯಾಟರಿಯ ಕಮಾಂಡರ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಆರು ತಿಂಗಳ ಕಠಿಣ ತರಬೇತಿ ಅವಧಿಯಲ್ಲಿ ಪುರುಷ ಅಭ್ಯರ್ಥಿಗಳೊಂದಿಗೆ ಸಮಬಲದ ತರಬೇತಿ ಪಡೆದ ಅವರು, ಹಿಂಜರಿಯದ ಬದ್ಧತೆ, ಸಮರ್ಪಣೆ ಹಾಗೂ ಪರಿಶ್ರಮದೊಂದಿಗೆ ತರಬೇತಿ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಚಂಡಿಗಡ ಡಿ.ಕೆ. ಜೈಸ್ವಾಲ್ ಹಾಗೂ ಅನಿತಾ ಜೈಸ್ವಾಲ್ ಅವರ ಮಗಳು ಹಿನಾ ಪಂಜಾಬ್ ವಿಶ್ವವಿದ್ಯಾಲಯದಿಂದ ಬಿ.ಇ ಪದವಿ ಪಡೆದಿದ್ದಾರೆ. ಸೈನಿಕರ ಸಮವಸ್ತ್ರ ಹಾಕಿಕೊಂಡು ಆಕಾಶಕ್ಕೆ ಹಾರಬೇಕೆನ್ನುವ ನನ್ನ ಬಾಲ್ಯದ ಕನಸು ಇದೀಗ ನನಸಾಗಿದೆ ಎಂದು ಹೇಳಿದ್ದಾರೆ. ವೈಮಾನಿಕ ಇಂಜಿಯರ್ ಆಗಿ ಆಯ್ಕೆಯಾಗಿದ್ದರಿಂದ ಅವರನ್ನು ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಕಾರ್ಯಾಚರಣೆ ಘಟಕಕ್ಕೆ ನಿಯೋಜಿಸಲಾಗುವುದು. ಈ ವೇಳೆ ಅತಿ ಎತ್ತರದ ಸಿಯಾಚಿನ್ ಗ್ಲೆಸಿಯರ್ ದಿಂದ ಅಂಡಮಾನ್ ನಿಕೋಬಾರದ ಸಮುದ್ರದಲ್ಲಿ ಒತ್ತಡದ ಸನ್ನಿವೇಶಗಳಲ್ಲಿ ಹಿನಾ ಕಾರ್ಯನಿರ್ವಹಿಸಲಿದ್ದಾರೆ.ವೈಮಾನಿಕ ಸಾಹಸ ಕುರಿತು ಹಿನಾ ಅತ್ಯುತ್ಸಾಹಿಯಾಗಿದ್ದು, ಮುಂಬರುವ ಸವಾಲುಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ. ಕಳೆದ ಹಲವು ದಶಕಗಳಿಂದ ಭಾರತೀಯ ರಕ್ಷಣಾ ಪಡೆಯು ಹೆಚ್ಚಿನ ಮಹಿಳೆಯರನ್ನು ಸೇವೆಗೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, 1993ರಲ್ಲಿ ಮಹಿಳೆಯರನ್ನು ಅಧಿಕಾರಿಗಳ ಪಡೆಗೆ ಯಶಸ್ವಿಯಾಗಿ ನಿಯೋಜಿಸಿತ್ತು. ಜತೆಗೆ, ಭಾರತೀಯ ವಾಯುಸೇನೆಯ ವಿವಿಧ ಭಾಗಗಳಲ್ಲಿ ಮಹಿಳಾ ಪೈಲಟ್ ಗಳನ್ನು ನೇಮಕ ಮಾಡಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries