ಭದ್ರತಾ ಪಡೆಗಳು ಸಂಚರಿಸುವ ವೇಳೆ ಸಾರ್ವಜನಿಕ ಸಂಚಾರಕ್ಕೆ ನಿಬರ್ಂಧ: ರಾಜನಾಥ್ ಸಿಂಗ್
0
ಫೆಬ್ರವರಿ 15, 2019
ಶ್ರೀನಗರ: ಭದ್ರತಾ ಪಡೆಗಳು ಸಂಚರಿಸುವ ವೇಳೆ ಸಾರ್ವಜನಿಕ ಸಂಚಾರಕ್ಕೆ ನಿಬರ್ಂಧ ವಿಧಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ.
ಪುಲ್ವಾಮ ಉಗ್ರ ದಾಳಿಯ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಅವರು ಇಂದು ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಭೆಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್ ಅವರು, ಹುತಾತ್ಮ ಯೋಧರ ಕುಟುಂಬದೊಂದಿಗೆ ನಾವು ಇದ್ದೇವೆ. ಅವರ ಕುಟುಂಬಕ್ಕೆ ಎಲ್ಲಾ ರೀತಿಯ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದೇನೆ ಎಂದರು.
ಒಂದು ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಭದ್ರತಾ ಪಡೆಗಳು ಸಂಚರಿಸುತ್ತಿದ್ದರೆ, ಮುನ್ನಚ್ಚೆರಿಕೆ ಕ್ರಮವಾಗಿ ಸಾರ್ವಜನಿಕ ಸಂಚಾರಕ್ಕೆ ಕೆಲ ಸಮಯ ನಿಬರ್ಂಧ ವಿಧಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಪುಲ್ವಾಮ ಉಗ್ರರ ದಾಳಿಗೆ ಸರ್ಕಾರ ಪ್ರತೀಕಾರ ತೆಗೆದುಕೊಳ್ಳದೆ ಇರುವುದಿಲ್ಲ. ಸಿಆರ್?ಪಿಎಫ್? ಯೋಧರ ತ್ಯಾಗವನ್ನು ಈ ದೇಶ ಮರೆಯುವುದಿಲ್ಲ. ಹುತಾತ್ಮರಾದ ಯೋಧರಿಗೆ ನಾನು ನನ್ನ ಅಂತಿಮ ನಮನ ಸಲ್ಲಿಸುತ್ತೇನೆ. ಈ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ದೇಶದ ಜನತೆಗೆ ರಾಜನಾಥ್ ಸಿಂಗ್ ಭರವಸೆ ನೀಡಿದರು.
ಇದಕ್ಕೂ ಮೊದಲು ರಾಜನಾಥ್ ಸಿಂಗ್ ಅವರು ಸಿಆರ್ ಪಿಎಫ್ ಯೋಧರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟರು. ಅವರಿಗೆ ಕಾಶ್ಮೀರ ಡಿಜಿಪಿ ಮತ್ತು ಇತರೆ ಅಧಿಕಾರಿಗಳು ಸಾಥ್ ನೀಡಿದರು.

