HEALTH TIPS

ಹೊಸ ದಿಗಂತದ ನಿರೀಕ್ಷೆಯೊಂದಿಗೆ ಗಡಿನಾಡಿಗೆ ಒಲಿದ ಭಾಗ್ಯ! ಕೇಂದ್ರೀಯ ವಿವಿ ಕನ್ನಡ ವಿಭಾಗದ ಹಿಂದಿನ ಶ್ರಮದ ಫಲ-ಅವಕಾಶದ ರಹದಾರಿಗಳು:

ಕಾಸರಗೋಡು: ಕಾಸರಗೋಡಿನ ಪೆರಿಯಾದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯ ದಲ್ಲಿ ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನ ವಿಭಾಗ ಮಂಜೂರಾಗಿದ್ದು, ಈ ಮೂಲಕ ಗಡಿನಾಡಿನ ಕನ್ನಡ ಭಾಷೆ, ಪರಂಪರೆಯ ಸಮಗ್ರ ಅಧ್ಯಯನ ಆಕಾಂಕ್ಷಿಗಳಿಗೆ ಬಾಗಿಲು ತೆರೆಯಲ್ಪಟ್ಟಿದೆ. ಈ ಮೂಲಕ ಹಲವರ ನೂರಾರು ಪ್ರಶ್ನೆಗಳು, ಹಲವರ ಹತ್ತಾರು ಜಿಜ್ಞಾಸೆಗಳು, ಕೆಲವರ ಹತಾಶೆಯ ಮೌನ, ಅಸಹನೆ, ತಳಮಳ, ಕೆಲವರ ಸಂತೋಷ, ಇನ್ನು ಕೆಲವರ ಅಗಣಿತ ಲೆಕ್ಕಾಚಾರ ಆರಂಭವಾಗಿರುವುದೂ ಚರ್ಚೆಗೆ ಕಾರಣವಾಗಿದೆ. ಕನ್ನಡದ ಹೋರಾಟವನ್ನು ಓರಾಟವೆಂದೂ ಇಲ್ಲಿ ಕನ್ನಡ ಉಳಿಯುವುದಿಲ್ಲ ನಮಗೆ ಕೆಲಸ ಸಿಕ್ಕಿದ್ದೆ ಭಾಗ್ಯ ನಮ್ಮ ಮಕ್ಕಳಿಗಂತೂ ಕನ್ನಡದ ಉಸಾಬರಿ ಬೇಡಪ್ಪ ಎಂದು ಕನ್ನಡವನ್ನು ಬೆಲೆವೆಣ್ಣು ಥರ ನೋಡುವವರಿಗೂ ಕನ್ನಡದ ಸಮಸ್ಯೆ ಕಂಡಾಗ ಸಿಡಿದೇಳುವುದು, ಮನವಿ ಸಲ್ಲಿಸುವುದು, ಅದರ ಬಗ್ಗೆ ಭಾಷಣ ಸಭೆ ಮಾಡುವುದು ನಮ್ಮ ಕೆಲಸವಲ್ಲ (ಅಕಾಡೆಮಿಕ್ ಸೆಮಿನಾರ್ ಆದರೆ ಓಕೆ. ನಾವಿದ್ದೇವೆ. ಅದೂ ಹೊರರಾಜ್ಯ ಹೊರದೇಶ ಆದರೆ ನಮಗೇ ಅವಕಾಶ ಕೊಡಿ) ಎಂದು ಮೂಗು ಮುರಿವವರೂ, ವಿವಿಗೆ ಕನ್ನಡ ವಿಭಾಗ ಮಂಜೂರಾಗುವಲ್ಲಿ ಅವಿರತ ಶ್ರಮಿಸಿದ ನಿವೃತ್ತ ಮುಖ್ಯೋಪಾಧ್ಯಾಯ, ಕನ್ನಡ ಹೋರಾಟಗಾರ ಪುರುಷೋತ್ತಮ ಮಾಸ್ತರ್ ಕಾಸರಗೋಡು ಇವರಿಗೆ ಬೇರೆ ಕೆಲಸ ಇಲ್ಲ; ಕೇಂದ್ರ ಸರಕಾರದೊಂದಿಗೆ ಕನ್ನಡ ಅಧ್ಯಯನ ವಿಭಾಗ ಆರಂಭಿಸುವ ನಿಟ್ಟಿನಲ್ಲಿ ಆಡಳಿತಾತ್ಮಕ ಶ್ರಮ ವಹಿಸಿದ ಜಿಲ್ಲಾ ಪಂಚಾಯತಿ ಸದಸ್ಯ ನ್ಯಾಯವಾದಿ. ಕೆ.ಶ್ರೀಕಾಂತರು ಯಾವುದೋ ರಾಜಕೀಯ ಲಾಭಕ್ಕೆ ಸಪೋರ್ಟು ಮಾಡುವುದು, ಹೀಗೆ ಮನವಿ ಕೊಟ್ರೆ ತಮ್ಮ ಹೆಸರು ಬರಬೇಕೆಂದು ಮನವಿಯ ವರದಿಯನ್ನು ಪೇಪರ್ ಗೆ ಕೊಟ್ರೆ ಸತ್ತು ಹೋಗುತ್ತಿರುವ ಕನ್ನಡವನ್ನು ಇಲ್ಲಿಗೆ ತರುವುದುಂಟಾ? ಅದೂ ಚಂದ್ರಗಿರಿ ಹೊಳೆಗಿಂತ ದಕ್ಷಿಣಭಾಗದಲ್ಲಿರುವ ಪೆರಿಯಾಕೆ? ಎಂಬ ಮಾತುಗಳು ಇದೀಗ ಕೇಳಿ ಬರುತ್ತಿವೆ. ಕಾಸರಗೋಡಿನ ಕನ್ನಡಿಗರಿಗೆ ಬಹಳಷ್ಟು ಸವಲತ್ತು ಮತ್ತು ಉದ್ಯೋಗವಕಾಶಗಳು ಬಂದುದು ಇಂತಹ ಬೆರಳೆಣಿಕೆಯ ಮಹಾತ್ಮರಿಂದ. ನಿಸ್ವಾರ್ಥ ದುಡಿಮೆಗಾರರಿಂದ. ಮನವಿಯಿಂದ, ಓಡಾಟಗಳಿಂದ, ರಾಜಕೀಯ ಇಚ್ಛಾಶಕ್ತಿಯಿಂದ ಇಲ್ಲಿ ಕನ್ನಡ ಉಳಿಸಲು ಬೆಳೆಸಲು ಸಾಧ್ಯ ಎಂಬುದಕ್ಕೊಂದು ಇದು ಉತ್ತಮ ನಿದರ್ಶನ. ಕನ್ನಡ ಅಧ್ಯಯನ ವಿಭಾಗದಿಂದ ಏನು ಲಾಭ?: ಕನ್ನಡ ಎಂಎ ಮಾಡುವವರಿಗೆ ಮಾತ್ರವಲ್ಲ ಎಂಫಿಲ್ ಮತ್ತು ಪಿಎಚ್.ಡಿ ಮಾಡುವವರಿಗೆ ಕೇಂದ್ರೀಯ ವಿವಿಯಲ್ಲಿ ವಿಪುಲ ಅವಕಾಶಗಳು ತೆರೆದುಕೊಳ್ಳುತ್ತವೆ. ಸುಮಾರು ಮೂವತ್ತಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ಕನ್ನಡ ಎಂ.ಎ ಮಾಡಲು ಅವಕಾಶ ದೊರಕುತ್ತವೆ. ಯುಜಿಸಿ ಮತ್ತು ಉನ್ನತ ಶಿಕ್ಷಣ ವಲಯದ ಹಲವು ಶೈಕ್ಷಣಿಕ ಸೌಲಭ್ಯಗಳು ಹಾಗೂ ವಿದ್ಯಾರ್ಥಿ ವೇತನಗಳು ಲಭಿಸುತ್ತವೆ. ಕಾಸರಗೋಡಿನ ಪ್ರಾದೇಶಿಕ ಸಾಹಿತ್ಯ, ಸಂಸ್ಕೃತಿ, ಕಲೆ, ಜನಪದ ಅಧ್ಯಯನಕ್ಕೆ ಮಹತ್ವದ ಬಾಗಿಲು ತೆರೆದುಕೊಳ್ಳುತ್ತದೆ. ಕರ್ನಾಟಕದ ಹಲವು ವಿಶ್ವವಿದ್ಯಾಲಯಗಳು ಹೊರದೇಶಗಳ ವಿವಿಗಳ ಸಂಪರ್ಕ ಕಾಸರಗೋಡಿಗೆ ಒದಗಿ ಬರುವ ಸಾಧ್ಯತೆ ಹೆಚ್ಚಾಗಲಿದ್ದು ಕಾಸರಗೋಡಿನಲ್ಲಿ ಕನ್ನಡ ಇದೆಯೇ? ಎಂಬ ಬೆರಗು ಪ್ರಶ್ನೆಗಳಿಗೆ ಕ್ರಮೇಣ ಕಡಿವಾಣ ಬೀಳಲಿದೆ. ತುಳು, ಕೊಂಕಣಿ, ಬ್ಯಾರಿ ಹಾಗೂ ಇನ್ನಿತ್ತರ ಭಾಷೆ ಸಾಹಿತ್ಯ ಸಂಸ್ಕೃತಿ ಗಳ ಅಧ್ಯಯನಗಳಿಗೆ ಮೈನರ್ ಮೇಜರ್ ಪ್ರಾಜೆಕ್ಟ್ ಗಳ ಮೂಲಕ ಕಾಸರಗೋಡಿನ ನಿಜವಾದ ಮಣ್ಣಿನ ಗುಣ ಅಕಾಡೆಮಿಕ್ ಆಗಿ ಬಲಪಡುವ ನಿರೀಕ್ಷೆಗಳು ಈ ವಿವಿಯ ಕನ್ನಡ ವಿಭಾಗದ ಮೂಲಕ ಸಾಕಾರಗೊಳ್ಳಬಹುದು. ಈ ಮಣ್ಣಿನ ಕಲೆ ಯಕ್ಷಗಾನ ದಂತಹ ಪ್ರಬಲ ಕಲೆಗಳ ಸ್ಥಾನಮಾನ ಉನ್ನತ ಮಟ್ಟದ ಅಧ್ಯಯನದ ಮೂಲಕ ಸಾರ್ವಕಾಲಿಕ ಮನ್ನಣೆಗೆ ಗುರಿಯಾಗಬಹುದು. ಹಲವು ಭಾಷೆ ಮತ್ತು ಸಂಸ್ಕೃತಿ ಗಳ ಅನನ್ಯ ಪ್ರದೇಶವಾದ ಕಾರಣ ಅನುವಾದಕ್ಷೇತ್ರಗಳಲ್ಲೂ ಸಾಕಷ್ಟು ಬಾಗಿಲುಗಳು ತೆರೆದುಕೊಳ್ಳಲು ಅವಕಾಶಗಳಿವೆ. ಒಂದು ಪ್ರಾಧ್ಯಾಪಕ, ಎರಡು ಸಹಪ್ರಾಧ್ಯಾಪಕ ಮತ್ತು ನಾಲ್ಕು ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಸೃಷ್ಟಿಯಾಗುತ್ತವೆ. ಕನ್ನಡ ಎಂಫಿಲ್ ಪಿಎಚ್ಡಿ ಹಾಗೂ ಇನ್ನಿತ್ತರ ಅರ್ಹತೆ ಪಡೆದ ದೇಶದ ಯಾವಮೂಲೆಯ ಅರ್ಹ ಪ್ರಜೆಯೂ ಇಲ್ಲಿಗೆ ಬರಬಹುದು. ಕೆಲವೊಮ್ಮೆ ಕಾಸರಗೋಡಿನ ನವರೂ ಇರಬಹುದು. ವಿನಾಃ ಭಯ! ಎಂ.ಎ ಕನ್ನಡ ಈಗಾಗಲೇ ಕಾಸರಗೋಡು ಸರಕಾರಿ ಕಾಲೇಜಿನಲ್ಲಿದೆ. ಸೆಂಟ್ರಲ್ ವಿವಿ ಯಲ್ಲಿ ಕನ್ನಡ ಅಧ್ಯಯನ ಕೇಂದ್ರ ಬಂದ ಕಾರಣ ಕಾಸರಗೋಡು ಮತ್ತು ಮಂಜೇಶ್ವರದಲ್ಲಿರುವ ಸರಕಾರಿ ಕಾಲೇಜಿನ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕರ ಸಹಿತ ಇತರರ ಹೊಣೆಗಾರಿಕೆ ಈಗ ಹೆಚ್ಚಿದೆ. ಇದು ತನಕ ಎಗ್ಗಿಲ್ಲದೆ ಕೇವಲ ಬೋಧನೆಗಷ್ಟೇ ಸಿಮಿತರಾಗಿದ್ದ ಹಲವರಿಗೆ ತರಗತಿಯಾಚೆಗೆ ಏನಿದೆ ಎಂದು ನೋಡಬೇಕಾದ ಅನಿವಾರ್ಯತೆ ಈ ಮೂಲಕ ಸೃಷ್ಟಿಆಗಿದೆ. ಜಿಲ್ಲೆಯ ಎರಡೂ ಸರಕಾರಿ ಕಾಲೇಜುಗಳ ಕನ್ನಡ ವಿಭಾಗವೂ ಹೊಸದಾಗಿ ಬಂದ ಕೇಂದ್ರ ವಿವಿಯ ಕನ್ನಡ ವಿಭಾಗವೂ ಆರೋಗ್ಯಪೂರ್ಣ ಪೈಪೋಟಿಗಿಳಿಯಬೇಕಾಗುತ್ತದೆ. ವಿದ್ಯಾರ್ಥಿಗಳ ಮತ್ತು ಸಮಾಜದ ಪಾಳಿಯಲ್ಲಿ ನಿಂತು ನೋಡಿದಾಗ ಇದೊಂದು ಒಳ್ಳೆಯ ಬೆಳವಣಿಗೆಯಾಗಿ ಕಾಣಬಹುದು. ಕೆಲಸ ಮಾಡುವವರಿಗೆ ಸಾಧಿಸಿ ತೋರಿಸಲು ಇದೊಂದು ಅವಕಾಶ. ತಳಮಟ್ಟಕ್ಕಿಳಿದು ದುಡಿಯಲು, ಕನ್ನಡದ ಕಾಳಜಿಯನ್ನರಿಯಲು, ಗಡಿನಾಡಿನ ಮಕ್ಕಳೂ ಕನ್ನಡ ಕಲಿಯಬೇಕಾದ ಅನಿವಾರ್ಯತೆಯನ್ನು ಅರ್ಥಮಾಡಲು ಇನ್ನು ಬರುವ ಸವಾಲುಗಳು ಕಲಿಸಬಹುದು. ಈ ಸವಾಲುಗಳು ಯುವವಿದ್ಯಾರ್ಥಿಗಳಿಗೆ ಮತ್ತು ಕಾಸರಗೋಡಿನ ಕನ್ನಡಕ್ಕೆ ವರದಾನವಾದೀತು. ಮರ್ಮಸ್ಥಾನಕ್ಕೆ ಬೆಂಕಿ ಬಿದ್ದಾಗ ಎಷ್ಟೇ ಭಾರ ಇದ್ದರೂ ರಾಕೇಟು ಕಕ್ಷೆಬಿಟ್ಟು ಸಾಗುವಂತೆ ಹಲವರ ಯೋಚನೆ ತರಗತಿಕೋಣೆಗಿಂತ ಹೊರಗೂ ವಿಸ್ತರಿಸಲೂಬಹುದು. ಜತೆಗೆ ಕನ್ನಡದ ಅಳಿವು ಉಳಿವು ಇತ್ಯಾದಿಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಬೇಜವಾಬ್ದಾರಿ ತೋರುವ , ಮಾತನಾಡಲೇಬೇಕಾದ್ದಲ್ಲಿ ಮೌನಮುನಿಯಾಗಿ ಹಲ್ಲುಕಿರಿಯುವ , ಪುಟ್ಟ ಸ್ಥಾನಮಾನಕ್ಕೂ ಬಣ್ಣದ ಹಿಂದೆ ಗಿರಕಿ ಸುತ್ತುವ, ದೂರು ಹೇಳಲೂ ಬಾವುಟ ಅರಸುತ್ತಾ ಕೆಳಗಿಳಿವ ಮನಸ್ಥಿತಿಗಳನ್ನು ಸವಾಲುಗಳು ಕೆಕ್ಕರಿಸಿಯಾವು. (ಈ ವರದಿಗೆ ಪೂರಕ ಮಾಹಿತಿ ಮತ್ತು ನೆರವು ಡಾ.ರತ್ನಾಕರ ಮಲ್ಲಮೂಲೆ. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರು.)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries