ಅಂತರ್ಜಲ ಕುಸಿತ : ಕಾಸರಗೋಡಿನಲ್ಲಿ ಕೊಳವೆ ಬಾವಿ ನಿರ್ಮಾಣಕ್ಕೆ ತಡೆ
0
ಮಾರ್ಚ್ 25, 2019
ಕಾಸರಗೋಡು: ಅಂತರ್ಜಲ ಮಟ್ಟ ಭಾರೀ ಪ್ರಮಾಣದಲ್ಲಿ ಕುಸಿದಿರುವ ಕಾಸರಗೋಡು, ಪಾಲ್ಘಾಟ್, ಆಲಪ್ಪುಳ ಮತ್ತು ಕಲ್ಲಿಕೋಟೆ ಜಿಲ್ಲೆಗಳಲ್ಲಿ ಕೊಳವೆ ಬಾವಿಗಳ ನಿರ್ಮಾಣಕ್ಕೆ ನೀಡಲಾಗುವ ಲೈಸನ್ಸ್ ನಿಲುಗಡೆಗೊಳಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.
ಜಲಪ್ರಾಧಿಕಾರ, ಕಂದಾಯ, ಸ್ಥಳೀಯಾಡಳಿಡತ ಸಂಸ್ಥೆಗಳು ಮತ್ತು ನೀರಾವರಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಈ ಜಿಲ್ಲೆಗಳಲ್ಲಿ ವಿಶೇಷ ನಿಗಾ ಇರಿಸಲಾಗುವುದು. ತಿರುವನಂತಪುರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆ ವಹಿಸಿದ್ದ ಸಂಬಂಧಪಟ್ಟ ಇಲಾಖೆಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ನೀರಿನ ಕ್ಷಾಮಕ್ಕೆ ಪರಿಹಾರ ಕಂಡುಕೊಳ್ಳಲು ಅಗತ್ಯದ ತುರ್ತು ಕ್ರಮ ಕೈಗೊಳ್ಳುವಂತೆ ಸರಕಾರ ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನಿರ್ದೇಶ ನೀಡಿದೆ.
ನೀರಿನ ಕ್ಷಾಮ ಪರಿಹರಿಸಲು ಹೊಳೆಗಳಿಗೆ ತಾತ್ಕಾಲಿಕ ಕಿರು ಅಣೆಕಟ್ಟುಗಳನ್ನು ನಿರ್ಮಿಸಲಾಗುವುದು. ಬಾವಿ, ಕೆರೆ ಸಹಿತ ಜಲಸಂಪನ್ಮೂಲಗಳಿಗೆ ಪುನರ್ಜೀವನ ನೀಡಲಾಗುವುದು. ಜಲ ಸಮೃದ್ಧಿ ಪ್ರದೇಶಗಳಿಂದ ಕೊಳವೆ ಮೂಲಕ ನೀರಿನ ಕ್ಷಾಮ ಎದುರಿಸುವ ಪ್ರದೇಶಗಳಿಗೆ ನೀರು ಪೂರೈಸಲಾಗುವುದು. ಕುಡಿಯುವ ನೀರನ್ನು ದುರುಪಯೋಗ ಪಡಿಸುವಿಕೆ, ಕೆರೆ, ಬಾವಿ ಇತ್ಯಾದಿ ಜಲಸಂಪನ್ಮೂಲಗಳನ್ನು ಶುದ್ಧೀಕರಿಸಿ ಅವುಗಳ ನೀರನ್ನು ಬಳಸುವಿಕೆ ಇತ್ಯಾದಿ ಕೆಲಸಗಳನ್ನು ನಡೆಸಲಾಗುವುದು. ಟ್ಯಾಂಕರ್‍ನಲ್ಲಿ ನೀರು ಪೂರೈಸುವ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.

