ಅಂತಿಮ ಹಂತದ ಮತದಾನ ಮುಕ್ತಾಯದ ಬಳಿಕವೇ ಎಕ್ಸಿಟ್ ಪೋಲ್ ಪ್ರಸಾರ: ಚುನಾವಣಾ ಆಯೋಗ
0
ಮಾರ್ಚ್ 25, 2019
ನವದೆಹಲಿ: ಅಂತಿಮ ಹಂತದ ಮತದಾನ ಮುಕ್ತಾಯದ ಬಳಿಕವೇ ಚುನಾವಣೋತ್ತರ ಸಮೀಕ್ಷೆಯ ವರದಿಗಳನ್ನು ಪ್ರಸಾರ ಮಾಡಬಹುದು ಎಂದು ಚುನಾವಣಾ ಆಯೋಗ ಮಾಧ್ಯಮಗಳಿಗೆ ಸೂಚನೆ ನೀಡಿದೆ.
ಮೇ 19ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, ಅಂದು ಸಂಜೆ ಮತದಾನ ಮುಕ್ತಾಯದ ಬಳಿಕವಷ್ಟೇ ಚುನಾವಣೋತ್ತರ ಸಮೀಕ್ಷೆಯ ವರದಿಗಳನ್ನು ಪ್ರಸಾರ ಮಾಡಬಹುದು ಎಂದು ಆಯೋಗ ಹೇಳಿದೆ. ಒಂದು ವೇಳೆ ಆಯೋಗದ ನಿರ್ದೇಶನದ ಹೊರತಾಗಿಯೂ ಪ್ರಸಾರ ಮಾಡಿದ್ದೇ ಆದರೆ, ಆರ್ ಪಿ ಆಕ್ಟ್ 1951ರ ಸೆಕ್ಷನ್ 126ಎ ಅಡಿಯಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದೆ.
ಜೊತೆಗೆ ಆಯೋಗ ಕೆಲ ಮಾರ್ಗದರ್ಶಕ ಸೂತ್ರಗಳನ್ನು ಬಿಡುಗಡೆ ಮಾಡಿದ್ದು, ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮ, ಅಂತರ್ಜಾಲ, ರೇಡಿಯೋ, ವೆಬ್ ಸೈಟ್ ಗಳು ಸೇರಿದಂತೆ ಎಲ್ಲಿಯೂ ಕೂಡ ಅಂತಿಮ ಹಂತದ ಮತದಾನ ಮುಕ್ತಾಯಗೊಳ್ಳುವವರೆಗೂ ಚುನಾವಣೋತ್ತರ ಸಮೀಕ್ಷೆಗಳ ವರದಿಯನ್ನು ಪ್ರಸಾರ ಅಥವಾ ಪ್ರಕಟಿಸಬಾರದು ಎಂದು ಹೇಳಿದೆ.
ಸಾಮಾಜಿಕ ಜಾಲತಾಣಗಳಲ್ಲಿನ ಸುದ್ದಿಗಳು, ಬರಹಗಳು ಅಭಿಪ್ರಾಯಗಳನ್ನು, ಅಜೆಂಡಾಗಳನ್ನು ಬಿಂಬಿಸಬಾರದು. ಯಾವುದೇ ವ್ಯಕ್ತಿ, ಪಕ್ಷ ಅಥವಾ ಸಂಘಟನೆಯ ಪರ-ವಿರೋಧ ಅಭಿಪ್ರಾಯಗಳನ್ನು ಬರಹಗಳನ್ನು ಪ್ರಸಾರ ಮಾಡಬಾರದು ಎಂದು ಆಯೋಗ ಹೇಳಿದೆ. ಚುನಾವಣಾ ಆಯೋಗ ವೀಕ್ಷಣಾ ತಂಡವನ್ನು ನೇಮಕ ಮಾಡಿದ್ದು, ಅಧಿಕಾರಿಗಳು ವಾಹಿನಿಗಳು, ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿದ್ದಾರೆ. ಈ ಪೈಕಿ ಯಾವುದೇ ರೀತಿಯ ನಿಯಮ ಉಲ್ಲಂಘನೆ ಕಂಡು ಬಂದರೆ ಅಂತಹ ವಾಹಿನಿ, ಪತ್ರಿಕೆ, ವೆಬ್ ಸೈಟ್ ಸಾಮಾಜಿಕ ಜಾಲತಾಣಗಳ ವಿರುದ್ಧ ಎನ್ ಬಿಎಸ್ ಎ ದೂರು ನೀಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.
ಇದೇ ಏಪ್ರಿಲ್ 11 ರಿಂದ ಮೇ 19ರವರೆಗೂ ಒಟ್ಟು 7 ಹಂತಗಳಲ್ಲಿ ಲೋಕಸಭಾ ಚುನಾವಣೆಯ ಮತದಾನ ನಡೆಯಲಿದೆ. ಮೇ 23ರಂದು ಮತಎಣಿಕೆ ನಡೆಯಲಿದೆ.

