HEALTH TIPS

ಸಮರಸ- ಈ ಹೊತ್ತಿಗೆ ಹೊಸ ಹೊತ್ತಗೆ-3-ಪೆರುವಿನ ಪವಿತ್ರ ಕಣಿವೆಯಲ್ಲಿ-ನೇಮಿಚಂದ್ರ

ಇಂದು ನೇಮಿಚಂದ್ರ ಅವರ ಪುಸ್ತಕ: ಪೆರುವಿನ ಪವಿತ್ರ ಕಣಿವೆಯಲ್ಲಿ ಲೇಖಕರು: ನೇಮಿಚಂದ್ರ ಬರಹ:ಚೇತನಾ ಕುಂಬಳೆ ಸುಮಾರು 7 ವರ್ಷಗಳ ಹಿಂದೆ ನೇಮಿಚಂದ್ರರ 'ಪೆರುವಿನ ಪವಿತ್ರ ಕಣಿವೆಯಲ್ಲಿ' ಕೃತಿಯನ್ನು ನಾನು ಓದಿದ್ದೆ. ಆ ಒಂದು ಪುಸ್ತಕ ಅದೆಷ್ಟು ಇಷ್ಟವಾಗಿತ್ತೆಂದರೆ ಅವರ ಹಲವು ಪುಸ್ತಕಗಳನ್ನು ಖರೀದಿಸಿ ಓದಲು ಕಾರಣವಾಯಿತು. ಅವರಿಗೊಮ್ಮೆ ಮೈಲ್ ಕೂಡ ಮಾಡಿದಾಗ ಅದಕ್ಕೆ ಪ್ರತಿಕ್ರಿಯೆಯನ್ನೂ ನೀಡಿದ್ದರು. ಅದನ್ನು ಕಂಡು ತುಂಬ ಖುಷಿ ಪಟ್ಟಿದ್ದೆ. ಅವರ ನೇರ ಮತ್ತು ಬರವಣಿಗೆಯ ಶೈಲಿ, ವಿಷಯ ವೈವಿಧ್ಯತೆ, ಹೊಸತನ, ವೈಶಿಷ್ಟ್ಯಪೂರ್ಣ ಬರಹಗಳೆಲ್ಲವೂ ನಂಗೆ ಇಷ್ಟವಾಗಿತ್ತು. ನನಗೂ ಅರಿವಿಲ್ಲದೆ ನನ್ನನ್ನು ಅವರ ಬರಹಗಳತ್ತ ಸೆಳೆಯುತ್ತಿತ್ತು ಅವರ ಎಲ್ಲ ಪುಸ್ತಕಗಳನ್ನೂ ಓದಬೇಕೆಂಬ ಕುತೂಹಲ ಮೂಡಿಸುತ್ತಿತ್ತು. ಮಂಗಳೂರಿಗಗ ಹೋದಾಗಲೆಲ್ಲ ಅವರ ಪುಸ್ತಕ ಖರೀದಿಸುತ್ತಿದ್ದೆ. ಕುತೂಹಲದಿಂದ ಓದುತ್ತಿದ್ದೆ.. ಈಗಲೂ ಅಷ್ಟೆ ಅವರ ಹೊಸ ಪುಸ್ತಕ ಯಾವಾಗ ಬರುತ್ತದೇಂತ ಕಾಯ್ತಾ ಇರ್ತೇನೆ. ಕೆಲಸದ ಒತ್ತಡದಲ್ಲೂ ತಮ್ಮ ಕನಸುಗಳಿಗೆ ರೆಕ್ಕೆ ಕಟ್ಟಿ ಮುಗಿಲೆತ್ತರಕ್ಕೆ ಹಾರಬಲ್ಲ, ಕನಸುಗಳನ್ನು ನನಸಾಗಿಸುವ ಲೇಖಕಿ ಇವರು. 'ಪೆರುವಿನ ಪವಿತ್ರ ಕಣಿವೆಯಲ್ಲಿ' ಎಂಬುದು ಇವರ ಎರಡನೇ ಪ್ರವಾಸ ಕಥನ. ಇದು ನಾನು ಎಂ.ಎ ಅಂತಿಮ ವರ್ಷದಲ್ಲಿ ಇರುವಾಗ ನಂಗೆ ಪಠ್ಯ ಪುಸ್ತಕವಾಗಿತ್ತು. ಆಗ ಇದನ್ನು ಪ್ರೊ. ಸೋಮಣ್ಣ ಹೊಂಗಳ್ಳಿಯವರು ಪಾಠ ಮಾಡಿದ್ದರು. ಅದಾಗಿ, ಕಳೆದ ವರ್ಷ ಡಿಗ್ರಿ ತರಗತಿಗೆ ಮತ್ತೆ ನಾನೇ ಈ ಪುಸ್ತಕ ಪಠ್ಯವಾಗಿದ್ದರಿಂದ ಪಾಠ ಮಾಡಬೇಕಾದ ಸಂದರ್ಭವೂ ಒದಗಿತು. ಚಿತ್ರದುರ್ಗದವರಾದ ನೇಮಿಚಂದ್ರರವರು ಬೆಂಗಳೂರಿನ ಎಚ್.ಎ.ಎಲ್ ಸಂಸ್ಥೆಯಲ್ಲಿ ಉನ್ನತ ತಂತ್ರ??? ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕತೆ, ಕಾದಂಬರಿ, ಜೀವನ ಚರಿತ್ರೆ, ಲೇಖನಗಳು ಹೀಗೆ ಹಲವು ಪ್ರಕಾರದಲ್ಲಿ ಕೃತಿ ರಚನೆ ಮಾಡಿದವರು. ಉದಯವಾಣಿ ಪತ್ರಿಕೆಯಲ್ಲಿ ಅಂಕಣಕಾರರಾಗಿ ಗುರುತಿಸಿಕೊಂಡವರು. ಇವರು ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಗಮನಾರ್ಹವಾದದ್ದು. ಇವರ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡಮಿಯ ಪುರಸ್ಕಾರ, ಅಕ್ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ವಿ????ನ ಸಾಹಿತ್ಯ ಮಹಿಳಾ ಅಧ್ಯಯನಕ್ಕಾಗಿ ಸಂದೇಶ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳೂ ದೊರೆತಿವೆ. ಯಾವುದೇ ಬರವಣಿಗೆಯನ್ನು ಆರಂಭಿಸುವ ಮೊದಲು, ಅವರು ನಡೆಸುವ ಅಧ್ಯಯನ, ತಿರುಗಾಟ, ಅಭಿವ್ಯಕ್ತಿಸುವ ರೀತಿ ನಿಜಕ್ಕೂ ಬೆರಗು ಮೂಡಿಸುತ್ತದೆ. ಲೇಖಕಿ ನೇಮಿಚಂದ್ರ ಅವರ ಎರಡನೇ ಪ್ರವಾಸ ಕಥನ 'ಪೆರುವಿನ ಪವಿತ್ರ ಕಣಿವೆಯಲ್ಲಿ'. ಅವರು ತಮ್ಮ ಹಲವು ವರ್ಷಗಳ ಸಂಪಾದನೆಯನ್ನು ಕೂಡಿಟ್ಟು ಪೆರುವಿನ ದೇಶಕ್ಕೆ ಹಾರಲು ಬಯಸುತ್ತಾರೆ. ಅದಕ್ಕೆ ಬಲವಾದ ಪ್ರೇರಣೆ ಅವರು ಓದಿದ ಪೆರುವನ್ನು ಪರಿಚಯಿಸುವ ಒಂದು ಪುಸ್ತಕ. ಹಾಗೆ ಲೇಖಕಿ ಒಂದು ಪುರಾತನ ಸಂಸ್ಕೃತಿಯ ಪವಿತ್ರ ನೆಲವನ್ನು ತಲುಪುತ್ತಾರೆ. ಇವರ ಪಯಣಕ್ಕೆ ಜೊತೆಯಾದವರು ಸಹದ್ಯೋಗಿ ಶ್ರೀಮತಿ ಕೆ.ಎನ್ ಮಾಲತಿ. ಅದೊಮ್ಮೆ ಆಫೀಸಿನಲ್ಲಿ, ಊಟ.ಮಾಡುತ್ತಿದ್ದಾಗ ನೇಮಿಚಂದ್ರರು ಮಾಲತಿಯವರೊಡನೆ ತನ್ನ ಪೆರುವಿನ ಪಯಣದ ಕನಸುಗಳನ್ನು ಹಂಚಿಕೊಳ್ಳುತ್ತಿರುವಾಗ "ನನಗೆ ಅಮೆಜಾನ್ ನದಿಯ ಅನಕೊಂಡಾ ಬೋವಾ ಕನ್ಸ್ಟಿಕ್ಟರ್ ತೋರಿಸಬೇಕು. ಅಮೆಜಾನ್ ನಲ್ಲಿ ಬೆಳೆವ ಮೀಟರ್ ಅಗಲದ ಎಲೆಯ ವಾಟರ್ ಲಿಲ್ಲಿಯನ್ನು ನೋಡಬೇಕು" ಎಂಬ ಮಾಲತಿಯ ಶರತ್ತಿನೊಂದಿಗೆ ಪೆರುವಿನತ್ತ ಇವರಿಬ್ಬರ ಪಯಣ ಆರಂಭವಾಗುತ್ತದೆ. ಈ ಪುಸ್ತಕದ ಮೊದಲ ಅದ್ಯಾಯದಲ್ಲಿ ಲೇಖಕಿ ತನ್ನ ಪಯಣದ ಪೂರ್ವ ಸಿದ್ಧತೆಗಳ ಬಗ್ಗೆ ವಿವರಿಸುತ್ತಾರೆ. ತಮ್ಮ ಮೊದಲ ಕನಸಿನ ಪಯಣದ ಒಂದಿಷ್ಟು ನೆನಪುಗಳೊಂದಿಗೆ ವಿಸಾಕ್ಕಾಗಿನ ಪರದಾಟ, ಇಲ್ಲಿವರೆಗೆ ಕಂಡರಿಯದ ಪೆರು ದೇಶಕ್ಕೆ ಹೋಗುವಾಗಿನ ಮನಸ್ಥಿತಿ, 'ಎಲೋ ಫಿವರ್ ಇಂಜಕ್ಷನ್'ನ ಕುರಿತ ಮಾಹಿತಿಗಳನ್ನು ನೀಡುತ್ತಾರೆ. "ಆಂಡಿಸ್ ಪರ್ವತಗಳಲ್ಲಿ ಅಲೆಯಬೇಕು, ಆಕರ್ಷಕವಾದ ಇನ್ಕಾ ನಾಗರಿಕತೆಯನ್ನು ನೋಡಬೇಕು, ಪೆರುವಿನ ಪವಿತ್ರ ಕಣಿವೆಯಲ್ಲಿ ಇಳಿಯಬೇಕು, ನಾಸ್ಕಾ ಗೆರೆಗಳ ಉಳಿವಿಗೆ ಕಾರಣಳಾದ ವಿ????ನಿ ಮರಿಯ ರೇಖಿಯನ್ನು ಭೇಟಿಯಾಗಬೇಕು, ಅಮೆಜಾನ್ ನದಿಯ ಮೇಲೆ ತೇಲಿ ಹೋಗಬೇಕು, ಅಮೆಜಾನ್ ಕಾಡುಗಳಲ್ಲಿ ಒಂದು ರಾತ್ರಿ ಕಳೆಯಬೇಕು" ಎಂದು ತಮ್ಮ ಪಯಣದ ಸ್ಪಷ್ಟ ಉದ್ದೇಶವನ್ನೂ ಹೇಳುತ್ತಾರೆ. ಇವರು ಮೊದಲು ಅಮೇರಿಕಾಕ್ಕೆ ಹೋಗಿ ಅಲ್ಲಿಂದ ಪೆರುವಿಗೆ ಹೋಗಲು ಬಯಸುತ್ತಾರೆ. ಇವರು ಆದಷ್ಟು ಕಡಿಮೆ ವೆಚ್ಚದಲ್ಲಿ ತಮಗೆ ನೋಡಬೇಕಾಗಿರುವ ಸ್ಥಳಗಳನ್ನು ನೋಡಿ ಬರಲು ಬಯಸುತ್ತಾರೆ. ಟೂರಿಸ್ಟ್ ಗೈಡ್ ಒಂದರಲ್ಲಿ "ಪೆರುವಿನಲ್ಲಿ ಗಡಿಯಾರವನ್ನು ಕಟ್ಟಬೇಡಿ, ಸಾರ್ವಜನಿಕ ಸ್ಥಳಗಳಲ್ಲಿ ಕ್ಯಾಮರವನ್ನು ಹೊರಗೆ ತೆಗೆಯಬೇಡಿ" ಎಂಬ ಸೂಚನೆಯನ್ನು ಕಂಡಾಗ ಒಂದಿಷ್ಟು ಆತಂಕಗೊಂಡರೂ ಧೈರ್ಯದಿಂದಲೇ ಪಯಣ ಮುಂದುವರಿಸುತ್ತಾರೆ. ಮಿಯಾಮಿನಿಂದ ಅವರು ಪೆರುವಿನ ರಾಜಧಾನಿ ಲೀಮಾಗೆ ಹೋಗುತ್ತಾರೆ. ವಿಮಾನ ನಿಲ್ದಾಣದಿಂದ ಹೊರಗೆ ಇಂಗ್ಲೀಷ್ ಭಾಷೆ ಬಳಕೆಯಿಲ್ಲದ ಕಾರಣ ತಮಗೆ ಬೇಕಾದ ಮಾಹಿತಿಗಳನ್ನೆಲ್ಲ ಅಲ್ಲಿಂದಲೇ ಕೇಳಿ ತಿಳಿದುಕೊಳ್ಳುತ್ತಾರೆ. "ನನಗೆ ಮೋಡದ ಮೇಲೆ ಹಾರಬೇಕಿರಲಿಲ್ಲ, ಈ ನೆಲದ ಅನುಭವ ಬೇಕಿತ್ತು, ಈ ನೆಲದ ಅಂಗುಲ ಅಂಗುಲವನ್ನು , ಈ ನೆಲದ ನೋವು ನಲಿವು, ಜನಮನ, ಪ್ರಕೃತಿ ಎಲ್ಲವನ್ನೂ ಹತ್ತಿರದಿಂದ ಕಾಣಬೇಕಿತ್ತು". ಎನ್ನುತ್ತಾ ಅಲ್ಲಿನ ಬಸ್, ರೈಲು, ದೋಣಿ, ಕಾರುಗಳಲ್ಲೇ ಓಡಾಡುತ್ತಾರೆ. ಅಲ್ಲಿನ ಜನ ಜೀವನವನ್ನು ಹತ್ತಿರದಿಂದ ಗಮನಿಸುತ್ತಾರೆ. ಲೀಮಾದಲ್ಲಿ ಉತ್ಕನನದ ಜಾಗ 'ಹೊಕಪೊಕ್ಲಾನ'ಕ್ಕೆ ಭೇಟಿ ನೀಡುತ್ತಾರೆ. ಪೆರುವಿನ ರಾಜಕೀಯ ಸ್ಥಿತಿಗತಿಗಳ ಬಗ್ಗೆ ವಿವರ ನೀಡುತ್ತಾರೆ. ಪ್ಯುಜಿಮೊರಿಯ ಸರ್ವಾಧಿಕಾರ ಮನೋಧರ್ಮ, ತೊಲೆದೊ ಲೋರ್ಡೆ ಫ್ಲಾರೆಸ್ ಮುಂತಾದ ರಾಜಕೀಯ ಮುಖಂಡರನ್ನು ಪರಿಚಯಿಸುತ್ತಾರೆ. ಪ್ಯುಜಿಮೊರಿಯ ವಿರುದ್ಧ ಆತನ ಪತ್ನಿ ಸುಸನ್ ಚುನಾವಣೆಗೆ ನಿಲ್ಲುವುದು, ಜನರ ಬೆಂಬಲವಿಲ್ಲದೆ ಸೋತಾಗ ಪುನಃ ಗಂಡನಾದ ಪ್ಯುಜಿಮೊರಿ ಅಧಿಕಾರಕ್ಕೆ ಬಂದಾಗ ಜನರನುಭವಿಸುವ ಕಷ್ಟಗಳ ಬಗ್ಗೆ ವಿವರಿಸುವರು. ಪೆರುವಿನ ನೆಲದ ಮಹಿಳೆಯರೂ ಜಗತ್ತಿನ ಇತರ ಣಹಿಳೆಯರಂತೆ ತಮ್ಮ ಹಕ್ಕುಗಳಿಗಾಗಿ ಚರಿತ್ರೆಯುದ್ದಕ್ಕೂ ಹೋರಾಡುತ್ತಾರೆ, ಅನೇಕರು ತಮ್ಮ ನಾಪತ್ತೆಯಾದ, ಕೊಲ್ಲಲ್ಪಟ್ಟ, ಹಿಂಸಿಸಲ್ಪಟ್ಟ ಸಂಬಂಧಿಕರ ಪರವಾಗಿ ಹೋರಾಡಿದರೆ, ಇತರರು ಸಮುದಾಯ ಚಳವಳಿಗಾರರಾಗಿ ಮೂಲಭೂತ ಹಕ್ಕುಗಳಿಗಾಗಿ, ಮಹಿಳೆಯರ ಹಕ್ಕುಗಳಿಗಾಗಿ, ಉದ್ಯೋಗದಲ್ಲಿ ಸಮಾನತೆಗಾಗಿ ಕೌಟುಂಬಿಕ ಹಿಂಸೆಯ ವಿರುದ್ಧ, ಹೋರಾಡುತ್ತಿದ್ದಾರೆ. ಜಗತ್ತಿನ ಯಾವುದೇ ಮೂಲೆಗೆ, ಯಾವುದೇ ಖಂಡಕ್ಕೆ ಹೋದರೂ ಮಹಿಳೆಯರ ಸಂಕಷ್ಟಗಳು ಸಮಾನ" ಎಂದು ಲೇಖಕಿ ಹೇಳುತ್ತಾರೆ. ಅಂಥ ದಿಟ್ಟ ಮಹಿಳಾ ಹೋರಾಟಗಾರರಾದ ಎಡಿತ್ ಲಾಗೊಸ್, ಮರಿಯ ಎಲೆನಾ, ಜೌನ ಲೊಮಾಜ, ಎಮ್ಮಾ ಹೊರಿ ರೊಸಾಡೊ ಎಂಬ ಮಹಿಳೆಯರನ್ನು ಪರಿಚಯಿಸುವುದರೊಡನೆ ಶೈನಿಂಗ್ ಪಾತ್ ಎಂಬ ಸಂಘಟನೆ ಹಿಂಸಾತ್ಮಕ ಕೃತ್ಯಗಳನ್ನೂ ವಿವರಿಸುವರು. ಪೆರುವಿನ ಜನರ ಬದುಕಿಗೆ ಇಣುಕಿ ನೋಡಿದ ಲೇಖಕಿ "ಅಮೆರಿಕ, ಅಕ್ಕಪಕ್ಕದ ಮನೆಯವರ ಮುಖ ಕಂಡದ್ದೂ ಅಪರೂಪ. ಮನುಷ್ಯ ಮನುಷ್ಯರ ನಡುವಿನ ಸಂಪರ್ಕ ಸಂಬಂಧಗಳು ಎಷ್ಟು ಕನಿಷ್ಟ ಇರಲು ಸಾಧ್ಯವೋ ಅಷ್ಟೂ ಕನಿಷ್ಟವಾಗಿವೆ. ಮನುಷ್ಯ ತನ್ನ ಸ್ವಂತ ಸುಖದ ಕೋಟೆಯಲ್ಲಿ ದ್ವೀಪವಾಗಿದ್ದಾನೆ" ಎಂದು ಅಭಿಪ್ರಾಯಪಡುತ್ತಾರೆ. ಪೆರುವಿನ ನೆಲದಲ್ಲಿ 40 ಹೆಚ್ಚು ವರ್ಷಗಳನ್ನು ಕಳೆದು ನಾಸ್ಕಾ ಗೆರಗಳ ಉಳಿವಿಗೆ ಕಾರಣಳಾದ ವಿ????ನಿ ಡಾ|| ಮರಿಯಾ ರೇಖಿಯನ್ನು ಕಾಣುವ ಹಂಬಲ ಲೇಖಕಿಗೆ ಇದ್ದರೂ ಅದಕ್ಕೆ ಸಾಧ್ಯವಾಗುವುದಿಲ್ಲ. ನಾಸ್ಕಾದ ಮರುಭೂಮಿ ಲೀಮಾದಿಂದ ಸುಮಾರು 250 ಮೈಲಿ ದಕ್ಷಿಣಕ್ಕಿದೆ. ಆಧುನಿಕ ಕಾಲದಲ್ಲಿ ಜನರು ಈ ರೇಖೆಗಳನ್ನು 'ಇನ್ಕಾ.ರಸ್ತೆ'ಗಳೆಂದು ಕರೆಯಲಾರಂಭಿಸಿದ್ಧರು. ನೆಲದ ಮೇಲೆ ಮೂಡಿದ ವಿಚಿತ್ರ ಗೆರೆಗಳು ಕಂಡರೂ ಅದು ಅರ್ಥವಾಗುತ್ತಿರಲಿಲ್ಲ. ಮರುಭೂಮಿಯ ಮೇಲೆ ವಿಮಾನಗಳು ಹಾರಲು ಆರಂಭಿಸಿದ ಮೇಲೆ ಪ್ರಯಾಣಿಕರಿಗೆ ಈ ನೆಲದಲ್ಲಿ ಬೃಹತ್ ಚಿತ್ರಗಳು ಗೋಚರಿಸಿದವು. ವಿಮಾನದಿಂದ ತೆಗೆದ ಛಾಯಾ ಚಿತ್ರಗಳು ಅದ್ಭುತ ರೇಖಾಚಿತ್ರಗಳನ್ನು ತೆರೆದಿಟ್ಟವು. ಆಗ ರೇಖೆಗಳ ಸುತ್ತ ಹಲವು ಸಂಶಯಾತ್ಮಕ ಪ್ರಶ್ನೆಗಳು ಉದ್ಭವಿಸುತ್ತವೆ. ಈ ನಾಸ್ಕಾ ಗೆರೆಗಳ ಕುರಿತು ಕಲವು ಲೇಖಕರು ತಮ್ಮದೇ ವ್ಯಾಖ್ಯಾನಗಳನ್ನು ನೀಡುವುದನ್ನು ಗಮನಿಸಬಹುದು. ಅಲ್ಲಿನ ಮರುಭೂಮಿಯ ದೈತ್ಯ ಚಿತ್ರಗಳೂ ಜನರಲ್ಲಿ ಬೆರಗು ಮೂಡಿಸುತ್ತವೆ. ಅಲ್ಲಿನ ಜನರು ತಮ್ಮ ಪೂರ್ವಿಕರು ಮಾಡುವ ರೀತಿಯಲ್ಲೇ ಕೆಲಸಗಳನ್ನು ಮಾಡುತ್ತಿದ್ದಾರೆ. ಆಧುನಿಕತೆ ಎಷ್ಟೆ ಬೆಳೆದಿದೆಯೆಂದರೂ ಇಲ್ಲಿನ ಜನರು ಇನ್ನೂ ಅದಕ್ಕೆ ತಮ್ಮನ್ನು ತೆರೆದುಕೊಂಡಿಲ್ಲ. ಈಗಲೂ ಸಂಪ್ರದಾಯ ಬದ್ಧವೋಗಿಯೇ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.ಅಲ್ಲಿಂದ ಇಬ್ಬರೂ ಅರಿಕೀಪಾಗೆ ಹೋಗುತ್ತಾರೆ. ಈ ನಗರ ದಕ್ಷಿಣ ಪೆರುವಿನಲ್ಲಿದೆ. 'ಅರಿ ಕೀಪಾ' ಎಂದರೆ, ಕೆಚುವಾ ಭಾಷೆಯಲ್ಲಿ 'ಬನ್ನಿ ಇರಿ' ಎಂದರ್ಥ. ಸಂವಹನಕ್ಕಾಗಿ ಅಲ್ಲಿನ ಭಾಷೆಯಲ್ಲಿ ಅಗತ್ಯದ ಒಂದೆರಡು ಪದಗಳನ್ನು ಕಲಿಯುವುದನ್ನು ಕಾಣಬಹುದು. ಈ ಪಯಣದಲ್ಲಿ ಭಾಷೆ ಸಮಸ್ಯೆ ಸ್ವಲ್ಪ ಕಾಡಿದರೂ ಅಂಗಿಕ ಭಾಷೆಗೆ ಹೆಚ್ಚು ಮೊರೆ ಹೋಗುವುದನ್ನು ಗಮನಿಸಬಹುದು. ಅಲ್ಲಿನ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲೊಂದಾದ 'ಸಂತ ಕಾರೊಲಿನಾ ಮೊನೆಸ್ಟರಿಯ'ವನ್ನು ಪರಿಚಯಿಸುತ್ತಾ ಅದರ ಚರಿತ್ರೆಯನ್ನು ನಮ್ಮ ಮುಂದೆ ಬಿಚ್ಚಿಡುತ್ತಾರೆ. ಪಯಣದ ಮಧ್ಯೆ ಅಲ್ಲಿನ ಚುನಾವಣೆ, ಮುಷ್ಕರಗಳ ಬಿಸಿ ಇವರಿಗೂ ಸ್ವಲ್ಪ ತಟ್ಟುತ್ತದೆ. ಆಂಡಿಸ್ ಪರ್ವತಗಳ ನಡುವಿನ ಅದ್ಭುತ ಪಯಣದ ಅನುಭವಗಳನ್ನು ಹಂಚಿಕೊಳ್ಳುವಾಗ ಮೈ.ಜುಂ ಎನ್ನುತ್ತದೆ. ಕುಸ್ಕೊ ನಗರದ ಇತಿಹಾಸ, ಅಲ್ಲಿನ ಚಿತ್ರಣಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ. ಪುರಾತನ ಮನೆಗಳು, ಕಲ್ಲು ಹಾಸಿನ ಬೀದಿಗಳು, ಸ್ಪಾನಿಷ್ ಶೈಲಿಯ ಬಂಗಲೆಗಳು, ಮಾರುಕಟ್ಟೆಗಳು, ಫುಟ್ಪಾತಿನ ಅಡುಗೆಗಳ ಬಗ್ಗೆ ಹೇಳುತ್ತಾರೆ. ಹಗ್ಗದಲ್ಲಿ ಗಂಟುಗಳನ್ನು ಹಾಕಿ ಲೆಕ್ಕ ಇಡುವ ಕೆಚುವಾಗಳ 'ಕ್ಹಿಪು' ವ್ಯವಸ್ಥೆಯನ್ನು ಪರಿಚಯಿಸುತ್ತಾರೆ. ದೊಡ್ಡ ನಗರಗಳಲ್ಲಿ ಸ್ಪಾನಿಷ್ ಭಾಷೆ ಮಾತಾಡುವುದಾದರೆ ಗ್ರಾಮಗಳಲ್ಲಿ ಕೇವಲ ಕೆಚುವಾ ಭಾಷೆಗಳನ್ನೇ ಮಾತಾಡುತ್ತಾರೆ. ಆದ್ದರಿಂದ ಲೇಖಕರು ಎರಡೂ ಭಾಷೆಗಳೂ ಗೊತ್ತಿಲ್ಲದ್ದರಿಂದ ಕನ್ನಡ ಭಾಷೆಯಲ್ಲೇ ವ್ಯವಹರಿಸುವುದನ್ನು ಕಾಣುವಾಗ ಕನ್ನಡ ಭಾಷೆಯ ಬಗ್ಗೆ ಅವರಿಗಿದ್ದ ಅಭಿಮಾನವನ್ನು ಕಾಣಬಹುದು. ಮಾಲತಿಯವರು ಆ ದೇಶದಲ್ಲೂ ಸೀರೆಯನ್ನು ಉಟ್ಟುಕೊಳ್ಳುತ್ತಿದ್ದರು. ಭಾರತದ ಉಡುಗೆಯನ್ನು, ಸಂಸ್ಕೃತಿಯನ್ನು ಅನ್ಯದೇಶಕ್ಕೆ ಹೋದರೂ ಬದಲಾಯಿಸದಿರುವುದು ಗಮನಾರ್ಹ. ಓಲಂತಾಯ್ ಬೋಂಬೋದ ಸೂರ್ಯ ದೇವಾಲಯವನ್ನು, ಅಲ್ಲಿನ ದೈವ ವೀರಕೋಚ, ಆತನ ಕುರಿತ ಪ್ರಾರ್ಥನೆ, ಕತೆಗಳು, 'ರೇಮಿ' ಎಂಬ ಹಬ್ಬದ ಮಾಹಿತಿಗಳನ್ನು ನೀಡುತ್ತಾರೆ. ಇನ್ಕಾ ನಗರಕ್ಕೆ ಲಗ್ಗೆ ಇಟ್ಟ ಯುರೋಪಿನ ಬಿಳಿಯರು ಈ ನೆಲದ ಧರ್ಮ ಸಂಸ್ಕೃತಿಯ ನಾಶಕ್ಕೆ ಕಾರಣವಾದ ಇತಿಹಾಸವನ್ನು ಹೇಳುವುದರೊಂದಿಗೆ ಈ ನೆಲದಲ್ಲಿ ಬರೆದ ರಕ್ತದ ಚರಿತ್ರೆಯನ್ನೂ ವಿವರಿಸುವರು. ಮಾಚುಪಿಚುವಿಗೆ ಹೋಗುವಾಗ ರೈಲಿನ ಅನುಭವಗಳನ್ನು ರಸವತ್ತಾಗಿ ಹಂಚಿಕೊಳ್ಳುವರು. ಕೊರಿಯ ಮಹಿಳೆಯಲ್ಲಿ ಭಾರತದ ಬಗೆಗಿನ ನಕಾರಾತ್ಮಕ ಚಿಂತನೆಗಳನ್ನು ದೂರ ಮಾಡಿ ಭಾರತೀಯ ಮಹಿಳೆಯರ ಬೆಳವಣಿಗೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇನ್ಕಾಗಳ ಕಳೆದುಹೋದ ಮಾಚುಪಿಚುವನ್ನು ಸ್ಥಳೀಯರಿಂದಾಗಿ ಹಿರಂ ಬಿಂಗಮ್ ಕಂಡುಹಿಡಿದ ವಿಷಯವನ್ನು ಪ್ರಸ್ತಾಪಿಸುವರು. ಅಮೆಜಾನ್ ನದಿಯು ಅಮೆಜಾನಿನ ಹರವನ್ನು, ಅದು ಹಾವಿನಂತೆ ಬಾಗಿ, ಹರಡಿ, ತಿರುಗುವ ಪರಿಯನ್ನು ಗಮನಿಸಿ ಅದನ್ನು 'ಅಮರು ಮಾಯಿ' ಅಂದರೆ 'ಮಹಾಸರ್ಪ ಮಾತೆ' ಎಂದು ಕರೆದಿರುವರು. ಕೈಯಲ್ಲಿ ಹುಟ್ಟು ಹಾಕುವ ಹಾಯಿದೋಣಿಯಲ್ಲಿ ಅವರು ಬ್ರಜಿಲಿಗೆ ಹೋಗುತ್ತಾರೆ. 19 ನೇ ಶತಮಾನದಲ್ಲಿ, ಅಮೆಜಾನಿನ ಸವಿಯನ್ನು ಸವಿಯಲು ಬಂದ ಫ್ರಾನ್ಸ್ ನ ಜೂಲ್ ಕ್ರೇವ್ ಎಂಬಾತ ತನ್ನ ಪ್ರವಾಸ ಗಾಥೆಯಲ್ಲಿ, "ಆತುರದ ಓಟದ ಪ್ರವಾಸ ಸುಮ್ಮನೆ ಕಾಲ ವ್ಯರ್ಥದ್ದು. ಏನನ್ನೂ ನೋಡಲಾರಿರಿ. ನಾನಿಲ್ಲಿ ಪ್ರಕೃತಿಯ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸಬೇಕು. ಕಾರಣ ನಾನು ಮತ್ತೆ ಈ ನೀರಿಗೆ ಬರುವುದಿಲ್ಲ. ಈ ನದಿಯ ಹರಿವಿನೊಡನೆ ಹರಿದು ಹೋಗುವಂತೆ ಮನಸ್ಸು ಹೇಳುತ್ತಿದೆ. ಕಾಣದ ನೆಲದಲ್ಲಿ ಆತುರದಿಂದ ಓಡಿ ಹೋಗುವುದರಲ್ಲಿ ಅರ್ಥವೇನಿಲ್ಲ." ದಾಖಲಿಸಿದ್ದ.ಎಂದು ಪ್ರವಾಸದ ಬಗೆಗಿನ ಯಾತ್ರಿಕನೊಬ್ಬನ ಮಾತನ್ನೂ ಉಲ್ಲೇಖಿಸುತ್ತಾರೆ. ಆ ದೋಣಿ ಆ ಜನರ ವ್ಯಾಪಾರ, ವಹಿವಾಟು, ಸ್ನೇಹ, ಸಂಬಂಧ, ಸಂಪರ್ಕ, ಬದುಕು, ಎಲ್ಲದಕ್ಕೂ ತೇಲು ಸೇತುವೆಯಾಗಿತ್ತೆಂದು ಲೇಖಕರು ಹೇಳುತ್ತಾರೆ. ಅದರಲ್ಲಿ ಎಲ್ಲರೊಡನೆ ಪ್ರೀತಿಯಿಂದ ಬೆರೆಯುವ, ಇದ್ಧದ್ದನ್ನು ಹಂಚಿ ತಿನ್ನುವುದನ್ನು ಕಾಣಬಹುದು. ಒಂದು ರಾತ್ರಿಯಿಡೀ ಅಮೆಜಾನ್ ಕಾಡುಗಳಲ್ಲಿ ಕಳೆದ ಅವಿಸ್ಮರಣೀಯ ಕ್ಷಣಗಳನ್ನು ಕಾಡಿನ ಮರ,ಗಿಡ, ಪ್ರಾಣಿ ಪಕ್ಷಿಗಳು, ಕೀಟಗಳು, ಅಲ್ಲಿನ 'ಶಾಮಾ'ನೆಂಬ ವೈದ್ಯರ ಬಗ್ಗೆ ಅಲ್ಲಿನ ಮುಗ್ಧ ಜನರೊಂದಿಗಿನ ಒಡನಾಟದ ಬಗ್ಗೆ , ಮಾಲತಿಯವರು ತಮ್ಮ ಕನಸು ಕಂಡಂತೆ ಅನಕೊಂಡವನ್ನು ಕೈಯಲ್ಲಿ ಹಿಡಿದು ರೋಮಾಂಚನಗೊಂಡದ್ದು, ವಾಟರ್ ಲಿಲ್ಲಿಯನ್ನು ಕಣ್ತುಂಬಿಕೊಂಡ ಹಲವು ವಿಷಯಗಳನ್ನು ಮನಮುಟ್ಟುವಂತೆ ವಿವರಿಸುತ್ತಾರೆ. ಹೀಗೆ ಅನ್ಯ ದೇಶದಲ್ಲಿ ಭಾಷೆ ತಿಳಿಯದೆ ಪರದಾಡಿದರೂ ಅಲ್ಲಿನ ಜನರೊಡನೆ ಆಂಗಿಕ ಭಾಷೆಯಲ್ಲಿ ಸಂವಹನ ನಡೆಸುತ್ತಾರೆ. ಪೆರುವಿನ ಜನರ ಮುಗ್ಧ ಮನಸ್ಸು , ಸಹಾಯ ಮಾಡುವ ಮನೋಧರ್ಮ, ಗಾಂಧಿಯ ನಾಡನವರೆಂದೊಡನೆ ತೋರುವ ಆದರ, ಗೌರವಗಳು, ಯಾವುದಕ್ಕೂ ಗಡಿಬಿಡಿ ಮಾಡದೆ ನಿಧಾನಗತಿಯಲ್ಲಿ ಸಾಗುವ ಜೀವನ, ಅವರ ಭಾಷೆ, ಆಚಾರ ವಿಚಾರ, ಉಡುಗೆ- ತೊಡುಗೆ, ಹಬ್ಬಗಳು, ಅವರ ಕೆಲಸಗಳು ಕೃಷಿಕಾರ್ಯಗಳು. ಧಾರ್ಮಿಕ ನಂಬಿಕೆಗಳು ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಗಳನ್ನು ವಿವರಿಸುವರು. ಹಲವು ವಿಷಯಗಳಲ್ಲಿ ಭಾರತಕ್ಕೂ ಪೆರುವಿಗೂ ಇರುವ ಸಾಮ್ಯತೆಗಳನ್ನುಶಗುರುತಾಸುತ್ತಾರೆ. ಯಾವುದೇ ಭಯಾತಂಕವಿಲ್ಲದೆ ಮಧ್ಯರಾತ್ರಿಯಲ್ಲೂ ಮಹಿಳೆಯರು ಒಂಟಿಯಾಗಿ ಸಂಚರಿಸ ಬಹುದಾದಷ್ಟು ಸ್ವಾತಂತ್ರ್ಯ ಅಲ್ಲಿದೆ. ಕೆಚುವಾ ಭಾಷೆಯ ಕೆಲವೊಂದು ಪದಗಳನ್ನು ಕಲಿಯುತ್ತಾರೆ. ವಿಸಾ ಇಲ್ಲದೆಯೇ ತಮಗರಿವಿಲ್ವದೆ ಬ್ರಜಿಲ್ ದಾಟಿ ಕೊಲಂಬಿಯ ತಲುಪಿದ ಘಟನೆ, ಅಲ್ಲಿ ಪರಿಚಿತಳಾದ ಸ್ಪಾನಿಷ್ ಮಹಿಳೆಯೊಂದಿಗಿನ ಸ್ನೇಹ ಸಂಬಂಧ ಆಕೆಯೊಂದಿಗಿನ ಭೋಜನ ಮಾಡಿದ ನೆನಪುಗಳನ್ನು ಹಂಚಿಕೊಳ್ಳುತ್ತಾರೆ. ಪೆರುವಿನಲ್ಲಿ ಹಣಕ್ಕೆ ಸೋಲೆ ಎಂದರೆ, ಬ್ರಜಿಲ್ ನಲ್ಲಿ 'ರಿಯಾಲ್',ಮತ್ತು 'ಸೆಂಟಿನೋಡ್ ಎಂದೂ ಕೊಲಂಬಿಯದಲ್ಲಿ 'ಪೀಸೋಸ್' ಎಂದೂ ಕರೆಯುವರು. ಅವರು ತಮ್ಮ ಪಯಣದ ಉದ್ವೇಗ ಸಂಭ್ರಮದಲ್ಲಿ ಆಯಾಸವನ್ನೇ ಮರೆಯುತ್ತಾರೆ. ರಾತ್ರಿ ಹೊತ್ತಲ್ಲಿ ಸರಿ ನಿದ್ರೆಯೂ ಮಾಡದೆ ಊರು ನೋಡಲು ಹೊರಡುತ್ತಾರೆ. ಏನಾದರೂ ಖರೀದಿಸುವಾಗಲೋ ಟಾಕ್ಸಿ ಬಾಡಿಗೆ ಕೊಡುವಾಗಲೋ ಆದಷ್ಟು ಚೌಕಾಸಿ ಮಾಡುವುದನ್ನೂ ನೋಡಬಹುದು. ಕೆಲವರಿಗೆ ಭಾರತದಿಂದ ಕೊಂಡೊಯ್ದ ವಸ್ತುಗಳನ್ನು ಉಡುಗೊರೆಯಾಗಿ ನೀಡಿ ಅವರನ್ನು ಖುಷಿಪಡಿಸುತ್ತಾರೆ. ಈ ಓದಿನ ಪಯಣ ಮುಗಿಯುವುದರೊಳಗೆ ಲೇಖಕಿಯೊಂದಿಗೆ ನಾವೂ ಪೆರುವಿಗೆ ಹೋಗಿ ಬಂದಷ್ಟೇ ಖುಷಿಪಡತ್ತೇವೆ. ಅವರೊಂದಿಗೆ ಈ ಪಯಣದಲ್ಲಿ ನಾವೂ ಜೊತೆಗಿದ್ದೇವೋ ಅನಿಸುವಷ್ಟು ಇಲ್ಲಿನ ಬರಹ ಆಪ್ತವಾಗಿ ಬಿಡಃತ್ತದೆ. ಇಲ್ಲಿನ ಪ್ರತಿ ವಿಷಯಗಳನ್ನು ಹೇಳುತ್ತಿದ್ದಂತೆ ಆ ಚಿತ್ರಣ ನಮ್ಮ ಕಣ್ಣ ಮುಂದೆ ಸುಖಾ ಸುಮ್ಮನೆ ಒಂದೊಂದಾಗಿ ತೇಲಿ ಹೋಗುತ್ತವೆ. ಚೇತನಾ ಕುಂಬ್ಳೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries