ಪ್ರಾದೇಶಿಕ ಪ್ರಜ್ಞೆಯಿಂದಷ್ಟೆ ರಾಷ್ಟ್ರೀಯತೆಯನ್ನು ಅರ್ಥೈಸಲು ಸಾಧ್ಯ-ಡಾ.ಎ.ಎಂ.ಶ್ರೀಧರನ್ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅಭಿಮತ
0
ಮಾರ್ಚ್ 21, 2019
ಕಾಸರಗೋಡು: ಪ್ರಾದೇಶಿಕತೆಯ ಪ್ರಜ್ಞೆ ಇದ್ದರೆ ಮಾತ್ರ ರಾಷ್ಟ್ರೀಯತೆಯ ಪ್ರಜ್ಞೆಯನ್ನು ಅರ್ಥೈಸಲು ಸಾಧ್ಯ. ಕನ್ನಡ ಭಾಷೆ ಪ್ರಾದೇಶಿಕ ಭಾಷೆಯಾಗಿ ಉಳಿಯದೆ, ರಾಷ್ಟ್ರೀಯ ಮಟ್ಟದಲ್ಲಿ ನೋಡುವ ಸಾಧ್ಯತೆ ವಿಸ್ತರಿಸಬೇಕು ಎಂದು ಕಣ್ಣೂರು ವಿಶ್ವ ವಿದ್ಯಾನಿಲಯದ ಭಾಷಾ ವಿಭಾಗದ ಮುಖ್ಯಸ್ಥ ಡಾ.ಎ.ಎಂ.ಶ್ರೀಧರನ್ ಅವರು ತಿಳಿಸಿದರು.
ಕಣ್ಣೂರು ವಿಶ್ವ ವಿದ್ಯಾನಿಲಯದ ಕಾಸರಗೋಡು ಚಾಲದಲ್ಲಿರುವ ಕ್ಯಾಂಪಸ್ ನ ಭಾರತೀಯ ಭಾಷಾ ಅಧ್ಯನನಾಂಗದ ನೇತೃತ್ವದಲ್ಲಿ ಗುರುವಾರದಿಂದ ಆರಂಭಗೊಂಡ "ಸಮಕಾಲೀನ ಕನ್ನಡ ಸಾಹಿತ್ಯ" ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಸರಗೋಡಿಗೆ ಸಂಬಂಧಿಸಿದಂತೆ ಕನ್ನಡ ಮತ್ತು ಮಲೆಯಾಳ ಭಾಷೆಗಳಿಗೆ ತುಳು ಭಾಷೆ ಸೇತುವೆಯಾಗಿ ನಿಲ್ಲುತ್ತದೆ. ವಿಶ್ವ ವಿದ್ಯಾನಿಲಯಗಳು ಸಾಹಿತ್ಯ ಬೋಧನೆಯ ಜೊತೆಗೆ ಪ್ರಾದೇಶಿಕ ಸಾಂಸ್ಕøತಿಕತೆಯ ಮೂಲಕ ಭಾಷೆಯನ್ನು ಕಟ್ಟುವ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು. ಆಧುನಿಕ ತಂತ್ರಜ್ಞಾನಗಳ ಮೂಲಕ ಪ್ರಾದೇಶಿಕ ಪರಂಪರೆಯನ್ನು ದಾಖಲಿಸುವ, ಅಧ್ಯಯನಕ್ಕೆ ಪೂರಕವಾಗಿ ಕಡೆದು ನಿಲ್ಲಿಸುವ ಯತ್ನಗಳನ್ನು ಮಾಡುವ ಅಗತ್ಯ ಇದೆ ಎಂದು ಅವರು ಕರೆನೀಡಿದರು.
ನಿವೃತ್ತ ಪ್ರಾಧ್ಯಾಪಕ, ಶಿಕ್ಷಣ ತಜ್ಞ ಡಾ.ಪಿ.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಭಾಷಾ ಪ್ರೇಮಿಗಳು, ಅಧ್ಯಯನ ಆಸಕ್ತರು ಸಮಕಾಲೀನ ಚಿಂತನೆಗಳನ್ನು ಮೈಗೂಡಿಸುವಲ್ಲಿ ಆಯೋಜಿಸುವ ಇಂತಹ ವಿಚಾರ ಸಂಕಿರಣಗಳು ಭಾಷಾ ಬೆಳವಣಿಗೆಯ ದೃಷ್ಟಿಯಿಂದ ಮಹತ್ವಪೂರ್ಣವಾದುದಾಗಿದೆ ಎಂದು ತಿಳಿಸಿದರು.
ಕಣ್ಣೂರು ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ನಿವೃತ್ತ ಸಂಯೋಜಕಿ ಡಾ.ಯು.ಮಹೇಶ್ವರಿ ಉಪಸ್ಥಿತರಿದ್ದು ಮಾತನಾಡಿ, ವರ್ತಮಾನದ ಸಾಹಿತ್ಯ ಚಟುವಟಿಕೆಗಳನ್ನು ಗುರುತಿಸುವುದರ ಜೊತೆಗೆ ಸಾಹಿತ್ಯ ಪರಂಪರೆ ಸಾಗಿಬಂದ ಮಾರ್ಗಗಳನ್ನು ಅಧ್ಯಯನಕ್ಕ್ಕೊಡುವ ಅಗತ್ಯವಿದೆ ಎಂದು ತಿಳಿಸಿದರು. ಪರಂಪರೆಯ ಅರಿವಿಲ್ಲದೆ ವರ್ತಮಾನದಲ್ಲಿ ಇರಲು ಸಾಧ್ಯವಿಲ್ಲ ಎಂದ ಅವರು ಪ್ರತಿಯೊಂದು ಕಾಲಘಟ್ಟದ ಅರಿವು ಹೊಸತನದೊಂದಿಗೆ ನಮಗೆ ಅಥ್ರ್ಯಸಲು ಸಾಧ್ಯವಾದಾಗ ಇಂದಿನ ಮಹತ್ವದ ಬಗ್ಗೆ ಜಾಗೃತಿ ಮೂಡುತ್ತದೆ ಎಂದು ತಿಳಿಸಿದರು.
ಕಥೆಗಾರ, ವಿಮರ್ಶಕ ಡಾ. ಬಿ.ಜನಾರ್ಧನ ಭಟ್, ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಉಪಸ್ಥಿತರಿದ್ದು ಮಾತನಾಡಿದರು. ಚಾಲದ ವಿವಿ ಕ್ಯಾಂಪಸ್ ನ ಭಾರತೀಯ ಭಾಷಾ ಅಧ್ಯಯನಾಂಗದ ಕನ್ನಡ ವಿಭಾಗ ನಿರ್ದೇಶಕ ಡಾ.ರಾಜೇಶ್ ಬೆಜ್ಜಂಗಳ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಸಂಶೋಧನಾ ವಿದ್ಯಾರ್ಥಿ ಪ್ರದೀಪ್ ಕುಮಾರ್ ವಂದಿಸಿದರು. ಸಂಶೋಧನಾ ವಿದ್ಯಾರ್ಥಿ ಸೌಮ್ಯಾ ಕೆ.ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಡೆದ ವಿಚಾರ ಸಂಕಿರಣದಲ್ಲಿ ಕತೆಗಾರ, ವಿಮರ್ಶಕ ಡಾ. ಬಿ.ಜನಾರ್ಧನ ಭಟ್ ಅವರು ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆ, ಮಂಗಳೂರು ವಿಶ್ವ ವಿದಗಯಾನಿಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಅವರು ಆಧುನಿಕ ಕನ್ನಡ ಕಾವ್ಯಗಳ ಪ್ರಸ್ತುತ ಚಿಂತನೆಗಳು, ಹೈದ್ರಾಬಾದ್ ಒಸ್ಮಾನಿಯ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ.ಗೋನಾಳ್ ಲಿಂಗಪ್ಪ ಅವರು ಆಧುನಿಕ ವಿಮರ್ಶೆಯ ಪರಿಕಲ್ಪನೆ ವಿಷಯಗಳ ಬಗ್ಗೆ ಪ್ರಬಂಧ ಮಂಡಿಸಿದರು. ಬಳಿಕ ಸಂಶೋಧನಾ ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ ನಡೆಯಿತು.
ಇಂದು ಬೆಳಿಗ್ಗೆ 9.30ಕ್ಕೆ ನಡೆಯಲಿರುವ ಮೊದಲ ವಿಚಾರಗೋಷ್ಠಿಯಲ್ಲಿ ಡಾ.ರತ್ನಾಕರ ಮಲ್ಲಮೂಲೆ ಅವರು ಆಧುನಿಕ ಕನ್ನಡ ಸಾಹಿತ್ಯದ ಮನೋಭಾವ, ಬೆಂಗಳೂರು ವಿಜಯನಗರ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ರಘುನಂದನ್ ಬಿ.ಆರ್ ಅವರು ಆಧುನಿಕ ಕನ್ನಡ ನಾಟಕಗಳು, ಉಜಿರೆ ಎಸ್ ಡಿ ಎಂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರಾಜಶೇಖರ ಹಳೆಮನೆ ಅವರು ಆಧುನಿಕ ಕನ್ನಡದ ಸಣ್ಣಕತೆಗಳು ವಿಷಯಗಳ ಬಗ್ಗೆ ಮಾತನಾಡುವರು.

