ಪೆರ್ಣೆ ಮುಚ್ಚಿಲೋಟ್ ಕಾವ್ ನಲ್ಲಿ ಸಾಮೂಹಿಕ ವಿವಾಹ
0
ಮಾರ್ಚ್ 21, 2019
ಕುಂಬಳೆ: ವಾಣಿಯ ಅಥವಾ ಗಾಣಿಗ ಸಮುದಾಯದ ಮೂಲ ಕ್ಷೇತ್ರವಾದ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಗುರುವಾರ ಸಮುದಾಯದ ಪೂರಂ ಉತ್ಸವದ ಸಾಮೂಹಿಕ ವಿವಾಹ ನಡೆಯಿತು. ಸಾಮೂಹಿಕ ವಿವಾಹದಲ್ಲಿ ಒಂಭತ್ತು ಜೋಡಿಗಳು ಸತಿಪತಿಗಳಾದರು. ಕೇತ್ರದ ಅಚ್ಚಮ್ಮಾರರು ಹಾಗು ನೆರೆದ ಸಮಾಜ ಬಾಂಧವರು ವಧುವರರನ್ನು ಆಶೀರ್ವದಿಸಿದರು.
ಮುಚ್ಚಿಲೋಟ್ ಶ್ರೀಭಗವತೀ ಕ್ಷೇತ್ರದಲ್ಲಿ ವಾರ್ಷಿಕವಾಗಿ ಎರಡು ಬಾರಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಸಮುದಾಯ ಬಾಂಧವರಿಗಾಗಿ ಏರ್ಪಡಿಸಲಾಗುತ್ತದೆ. ಅತ್ಯಂತ ಸರಳವಾಗಿ ನೆರವೇರಿಸಲ್ಪಡುವ ಇಲ್ಲಿಯ ಸಾಮೂಹಿಕ ವಿವಾಹವು ರಾಷ್ಟ್ರಮಟ್ಟದಲ್ಲೇ ಜನಜನಿತವಾಗಿದೆ.ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಸಾವಿರಾರು ಕುಟುಂಬಗಳು ಈ ಕ್ಷೇತ್ರದ ಶ್ರೀಭಗವತಿ ಅಥವಾ ಶ್ರೀದುರ್ಗಾಪರಮೇಶ್ವರಿಯ ಅನುಗ್ರಹಕ್ಕೆ ಪ್ರಾರ್ಥಿಸಿ ಭೇಟಿ ನೀಡುತ್ತಾರೆ.
ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ಪೂರಂ ಉತ್ಸವ ಹಾಗೂ ನವಂಬರ್ ಮಾಸದಲ್ಲಿ ಉದಯಾಸ್ತಮಾನ ಉತ್ಸವಗಳು ನಡೆದು ಬರುತ್ತಿದ್ದು, ಎರಡೂ ಸಂದರ್ಭದಲ್ಲೂ ಸಾಮೂಹಿಕ ವಿವಾಹ ಮತ್ತು ಚಪ್ಪರ ಮದುವೆ ವ್ಯವಸ್ಥೆಗೊಳಿಸಲಾಗುತ್ತಿರುವುದು ಇಲ್ಲಿಯ ವಿಶೇಷತೆಯಾಗಿದೆ.

