HEALTH TIPS

ಸಮರಸ -ಈ ಹೊತ್ತಿಗೆ-ಹೊಸ ಹೊತ್ತಗೆ-07 ನೇ ಕಂತು- ಪುಸ್ತಕ: ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ

 
     ಪುಸ್ತಕ: ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ
     ಲೇಖಕರು: ಶ್ರುತಿ.ಬಿ ಎಸ್.
      ಲೇಖನ:ಚೇತನಾ ಕುಂಬಳೆ
          ಶೃತಿ.ಬಿ.ಎಸ್. ಅವರ ಊರು ಹೊಸನಗರ ಎಂದು ತಿಳಿದಾಗ ಮನದಲ್ಲೇನೋ ಖುಷಿ. ಯಾಕೆಂದರೆ, ಅದು ನನ್ನ ಅತ್ತೆ ಊರು. ಆ ಊರು ನನಗೆ ಅದೆಷ್ಟೋ ಸುಂದರ ನೆನಪುಗಳನ್ನು  ನೀಡಿವೆ.  ವರ್ಷಕ್ಕೆ ಒಂದು ಸಲನಾದ್ರೂ ಅಲ್ಲಿಗೆ ಭೇಟಿ ನೀಡ್ತೇನೆ. ಮಂಗಳೂರಿಂದ ಹೊರಡುವ ಗಜಾನನ ಬಸ್, ಅಲ್ಲಿಯ ಶೋಭಾ ಗಾಡಿ,   ಕಾರ್ಕಡಿಯೆಂದೇ ಪ್ರಸಿದ್ಧವಾಗಿರುವ ಕಾರಣಗಿರಿ ಗಣಪತಿ ದೇವಸ್ಥಾನ, ಅಮ್ಮನಘಟ್ಟ, ಸಿಗಂದೂರು, ದೇವಸ್ಥಾನ.ಹಡಗು ಯಾತ್ರೆ, ರಾಮಚಂದ್ರಾಪುರ ಮಠ, ಕೊಲ್ಲೂರು, ಕುಪ್ಪಳ್ಳಿಯ ಕುವೆಂಪು ಅವರ ಮನೆ,  ಅದ್ಭುತವಾದ ಜೋಗ ಜಲಪಾತ, ಹೊಸನಗರದ ಬೀದಿಯ ಗೋಬಿ ಮಂಚೂರಿ, ಕೊಡೂರಿನ ಗೂಡಂಗಡಿಯ ಗೋಳಿಬಜೆ, ಹೀಗೆ ಹತ್ತು ಹಲವು ಸವಿನೆನಪುಗಳು ಒಂದೊಂದಾಗಿ ಮನದಲ್ಲಿ ತೇಲಿ ಬರುತ್ತವೆ.
    ಇಲ್ಲಿ ಲೇಖಕಿ ಎಲುಬಿನ ಕ್ಯಾನ್ಸರ್ ಗೆ ತುತ್ತಾದಾಗ ಅನುಭವಿಸಿದ ನೋವು ಯಾತನೆಗಳನ್ನು 'ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ' ಎಂಬ ತಮ್ಮ ಆತ್ಮಕಥೆಯಲ್ಲಿ ಒಂದೊಂದಾಗಿ ಬಿಚ್ಚಿಡುತ್ತಾರೆ. ಗಂಭೀರ ಬರವಣಿಗೆಗೆ ಒಂದಷ್ಪು ಹಾಸ್ಯವನ್ನೂ ಬೆರೆಸಿ ವಿಚಾರಗಳನ್ನು ನಿರೂಪಿಸುತ್ತಾ ಹೋಗುತ್ತಾರೆ. ಸರಳ ಮತ್ತು ನೇರವಾದ ಬರವಣಿಗೆಯ ಶೈಲಿ ನಿರಂತರವಾಗಿ ಓದಿಸಿಕೊಂಡು ಹೋಗುತ್ತದೆ. ಒಮ್ಮೆ ಕೈಗೆತ್ತಿಕೊಂಡ ಪುಸ್ತಕವನ್ನು ಮುಗಿಯುವ ಮುನ್ನ ಕೆಳಗಿಡಲು ಮನಸ್ಸೂ ಬರುವುದಿಲ್ಲ. ಓದಿ ಮುಗಿಯುವುದರೊಳಗೆ ನಮಗೂ ಒಂಚೂರು ನೋವು, ಸಂಕಟವಾಗುತ್ತವೆ. ಅವರ ಅವಸ್ಥೆಗೆ ಮನಸ್ಸು ಮಮ್ಮಲ ಮರುಗುತ್ತದೆ.. ಅವರ ನೋವಿನಲ್ಲಿ ನಗುವಿನಲ್ಲಿ ನಾವು ಭಾಗಿಯಾದ ಅನುಭವ.

   ಅವರದ್ದು ಅವಿಭಕ್ತ ಕುಟುಂಬ. ಅಪ್ಪ ಅಮ್ಮ, ಅಜ್ಜ, ಅಜ್ಜಿ, ಮಾವ ಅತ್ತೆ, ಚಿಕ್ಕಪ್ಪ ಚಿಕ್ಕಮ್ಮ ಹೀಗೆ ಎಲ್ಲರ ಪ್ರೀತಿ ವಾತ್ಸಲ್ಯದ ನಡುವೆ ಮುದ್ದಿನ ಕೂಸಾಗಿ ಬೆಳೆಯುತ್ತಾರೆ. ಅವರು ಪಿ.ಯು.ಸಿ ಮುಗಿಸಿ ಕಂಪ್ಯೂಟರ್ ಡಿಪ್ಲೊಮಕ್ಕೆ ಸೇರಿಕೊಂಡ ಸಮಯ. ಆಗ ಅವರಿಗೆ ಕೇವಲ 18ರ ವಯಸ್ಸು. ಮನಸ್ಸು ರೆಕ್ಕೆ ಬಿಚ್ಚಿ ಹಾರಾಡುವ  ಸಮಯ, ಹರೆಯಕ್ಕೆ ಕಾಲಿಟ್ಟ, ಬಣ್ಣದ ಕನಸುಗಳು ಚಿಗುರೊಡೆಯುವ ಸಮಯ, ಮುಖದಲ್ಲಿ ಮುಗ್ಧತೆ ಇನ್ನೂ ಮಾಸಿಲ್ಲ, ಜೀವನ ಏನೆಂಬುದನ್ನು ಇನ್ನೂ ತಿಳಿದಿಲ್ಲ. ಮನೆಯಿಂದ ದೂರಾಗಿ ಹೋಸ್ಟೆಲ್ ನಲ್ಲಿ ನಿಂತು ಕಾಲೇಜಿಗೆ ಹೋಗುತ್ತಿರುತ್ತಾರೆ.  ಆಗಲೇ ಅವರಿಗೆ ಕ್ಯಾನ್ಸರ್ ರೋಗ ಬರುತ್ತವೆ.  ಕಾಲಿನ ಮಂಡಿಯತ್ರ ಕಾಣಿಸಿಕೊಳ್ಳುವ ಒಂದು ಸಣ್ಣ ಗಂಟು ಅವರ ಇಡೀ ಬದುಕನ್ನೇ ಬದಲಾಯಿಸಿ ಬಿಡುತ್ತದೆ. ಮೊದಮೊದಲು ನಿರ್ಲಕ್ಷ್ಯ ವಹಿಸಿ, ಕೊನೆಗೆ ನೋವು ಶುರುವಾದಾಗ ಮನೆ ಮದ್ಧು ಮಾಡಿಯೂ ಕಡಿಮೆಯಾಗದಾಗ ವೈದ್ಯರಲ್ಲಿ ತೋರಿಸುತ್ತಾರೆ. ಅವರು ಚಿಕಿತ್ಸೆಗಾಗಿ ಹೊಸನಗರದಿಂದ ಮಣಿಪಾಲಕ್ಕೆ ಬರ್ತಾರೆ. ಅಲ್ಲಿ ಹಲವಾರು ಪರೀಕ್ಷೆಗಳ ನಂತರ ಆಸ್ಟಿಯೋ ಸರ್ಕೋಮಾ ಎಂಬ ಎಲುಬಿನ ಕ್ಯಾನ್ಸರ್ ಎಂದು ತಿಳಿದಾಗ ಎಲ್ಲರೂ ಒಮ್ಮೆ ದಿಗಿಲು ಬೀಳುತ್ತಾರೆ. ಇಲ್ಲಿ ಆರಂಭದಿಂದ ಕೊನೆವರೆಗೂ ಲೇಖಕಿ ತೋರುವ ಆತ್ಮವಿಶ್ವಾಸ, ಧೈರ್ಯ ಮೆಚ್ಚುವಂತದ್ದೇ. ತಾನು ಧೈರ್ಯವಾಗಿದ್ದು ತನ್ನೆಲ್ಲ ಸಂಬಂಧಿಕರಿಗೂ ಧೈರ್ಯ ನೀಡುವುದನ್ನು ಕಾಣಬಹುದು. ಹಲವು ಪರೀಕ್ಷೆಗಳು ಆಪರೇಶನ್ಗಳು, ಕೀಮೊತೆರಪಿ ಮೊದಲಾದ ಚಿಕಿತ್ಸಾ ವಿಧಾನಗಳ ಮಾಹಿತಿಗಳನ್ನು ನೀಡುತ್ತಾರೆ. ಅದರೊಡನೆ ಓಪರೇಶನ್ ತಿಯೇಟರ್ ಕಂಡಾಗ, ವೀಲ್ಚೇರಲ್ಲಿ ಕೂತಾಗ ಕ್ಲಚರ್ ಹಿಡಿದು ನಡೆವಾಗ, ತನಗಾದ ಮೊದಲ ಅನುಭವಗಳನ್ನು ಸ್ವಾರಸ್ಯಕರವಾಗಿ ಹಂಚಿಕೊಳ್ಳುತ್ತಾರೆ. ಕೂದಲೆಲ್ಲ ಉದುರಿದಾಗ ಬೇಸರವಾದರೂ, ತನ್ನ ಬಗ್ಗೆ ಊರವರು ಮಾತಾಡಿಕೊಂಡಾಗಲೂ ಒಮ್ಮೆ ಬೇಸರವಾದರೂ ಅದೆಲ್ಲವನ್ನೂ ಮರೆಯುತ್ತಾರೆ. ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳದೆ ಅಲ್ಲಲ್ಲಿಗೆ ಬಿಟ್ಟುಬಿಡುತ್ತಾರೆ.  ಕ್ಯಾನ್ಸರಿನ ನೈಸರ್ಗಿಕ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡುತ್ತಾರೆ.
       ಇದರ ನಡುವೆ ತಮ್ಮ ಹಾಸ್ಟೆಲ್, ಕಾಲೇಜು ಜೀವನದಲ್ಲಿ ಸಂಭ್ರಮಿಸಿದ ಕ್ಷಣಗಳನ್ನು ನೆನಪಿಸಿಕೊಳ್ಳತ್ತಾರೆ.
ಆಸ್ಪತ್ರೆಯಲ್ಲಿ ಸಮಯ ಕಳೆಯಲು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾರೆ, ದಿನ ಪತ್ರಿಕೆ, ವಾರ ಪತ್ರಿಕೆ, ಕಾದಂಬರಿಗಳು ಹೀಗೆ ಹಲವಾರು ಪುಸ್ತಕಗಳು ಅವರ ಸಂಗಾತಿಯಾಗುತ್ತವೆ. ಅವರ ಬೇಸರವನ್ನು ನೀಗಿಸುತ್ತವೆ. ಹತ್ತಿರದ ರೋಗಿಗಳಲ್ಲಿ ಅವರ ಸಂಬಂಧಿಕರಲ್ಲಿ ಮಾತಿಗಿಳಿಯುತ್ತಾರೆ, ಎಲ್ಲರೂ ಆಸ್ಪತ್ರೆಯೆಂಬುದನ್ನೆ ಮರೆತು ಲೋಕಾಭಿರಾಮವಾಗಿ ಹರಟುತ್ತಾರೆ. ಮಧ್ಯೆ ಮಧ್ಯೆ ಹಾಸ್ಯ ಪಟಾಕಿಗಳೂ ಸಿಡಿಯುವುದರಿಂದ ಗಾಂಭೀರ್ಯತೆ, ರೋಗದ ಚಿಂತೆಗಳು ಕ್ಷಣಹೊತ್ತಿಗೆ ದೂರವಾಗುತ್ತವೆ. ಎಲ್ಲರೂ ಎಲ್ಲರ ನೋವು. ನಲಿವಿನಲ್ಲಿ ಒಂದಾಗುತ್ತಾರೆ, ಲೇಖಕಿ ಅಲ್ಲಿಯ ವೈದ್ಯರೊಡನೆ, ರೋಗಿಗಳೋಡನೆ, ನರ್ಸ್ ಗಳೊಡನೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳುತ್ತಾರೆ, ಅವರು ಹೇಳಿದ ಸಲಹೆಗಳನ್ನೆಲ್ಲ ಕೇಳುತ್ತಾರೆ. ಅನುಸರಿಸುತ್ತಾರೆ. ಕೀಮೋ ತೆರಪಿ ಮಾಡಿಸುವಾಗ ಅವರು ಅನುಭವಿಸುವ ನೋವು ಸಂಕಟ ಯಾತನೆಗಳನ್ನು ಕಾಣುವಾಗ ಮನಸ್ಸು ಮಮ್ಮಲ ಮರುಗುತ್ತದೆ.
   ಗುಣಮುಖರಾದ ಮೇಲೆ ತನ್ನಂತೆ ಕ್ಯಾನ್ಸರಿನೊಂದಿಗೆ ಹೋರಾಡಿದ ಇತರರನ್ನು  ಗೂಗಲ್ ನಲ್ಲಿ ಹುಡುಕುತ್ತಾರೆ, ಅವರೊಡನೆ ಮಾತಾಡುತ್ತಾರೆ,ಅವರ ಅನುಭವಗಳಿಂದ ಇನ್ನಷ್ಟು ಸ್ಫೂರ್ತಿ ಪಡೆದುಕೊಳ್ಳುತ್ತಾರೆ.
ಕ್ಯನ್ಸರಿನೊಂದಿಗೆ ಹೋರಾಡಿದ ಒಂದಿಬ್ಬರು ವ್ಯಕ್ತಿಗಳ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಒಂದಷ್ಟು ಕಾಡುವ ನೆನಪುಗಳನ್ನು ಮೆಲುಕು ಹಾಕುತ್ತಾರೆ. ಕೊನೆಗೆ ನಿಂತು ಹೋದ ತನ್ನ ವಿದ್ಯಾಭ್ಯಾಸವನ್ನು ಪುನಃ ಮುಂದುವರಿಸುತ್ತಾರೆ. ನಿಜವಾಗಿಯೂ ಇವರ ಬದುಕು ಓದುಗರಿಗೆ ಸ್ಫೂರ್ತಿದಾಯಕವಾಗುವುದರಲ್ಲಿ ಯಾವುದೇ ಸಂಶಯವಿಲ್ಲ..
                                                     ಚೇತನಾ ಕುಂಬ್ಳೆ

     Feed Back- samarasasudhi@gmail.com

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries