ಬದಿಯಡ್ಕ :ಪತ್ರಿಕಾ ವರದಿ ರಚನೆಯಲ್ಲಿ ಶೀರ್ಷಿಕೆ, ಪ್ರಸ್ತಾವನೆ ಹಾಗೂ ದೇಹ ಎಂಬ ಮೂರು ಹಂತಗಳು ಪ್ರಧಾನ. ಪ್ರಸ್ತಾವನೆಯಲ್ಲಿ ಇಡೀ ಕಾರ್ಯಕ್ರಮವನ್ನು ಸೂಕ್ಷ್ಮವಾಗಿ ಓದುಗನಿಗೆ ತಿಳಿಸಬೇಕು. ವಿವರಣೆಯು ವರದಿಯ ದೇಹ ವಿಭಾಗದಲ್ಲಿ ಇರಬೇಕು. ಆಕರ್ಷಕ ಶೀರ್ಷಿಕೆಯು ವರದಿಯ ಪೂರ್ಣ ಅಂತರಾಳವನ್ನು ತಿಳಿಸುತ್ತಾ ವರದಿಗೆ ಅಲಂಕಾರವಾಗಬೇಕು ಎಂದು ಪತ್ರಕರ್ತ ವಿರಾಜ್ ಅಡೂರು ಹೇಳಿದರು.
ಅವರು ಬದಿಯಡ್ಕದ ನವಜೀವನ ಶಾಲೆಯಲ್ಲಿ ಸೋಮವಾರ ವಾಚನ ವಾರಾಚರಣೆಯ ಅಂಗವಾಗಿ ನಡೆದ ಪತ್ರಿಕಾ ವರದಿ ರಚನೆಯ ಕುರಿತು ಮಾಹಿತಿ ನೀಡಿ ಮಾತನಾಡಿದರು.
ವರದಿಗಾರನಿಗೆ ಲೋಕಜ್ಞಾನ, ಶಬ್ಧಜ್ಞಾನ ಹಾಗೂ ಸಾಮಾಜಿಕ ಮತ್ತು ವ್ಯಾವಹಾರಿಕ ಸೂಕ್ಷ್ಮತೆ ತಿಳಿದಿರಬೇಕು. ಸೂಕ್ತ ಪದಗಳನ್ನು ಸಕಾಲದಲ್ಲಿ ಬಳಸಲು ಗೊತ್ತಿರಬೇಕು. ಸತ್ಯನಿಷ್ಠವಾದ ವರದಿಗಳನ್ನು ನಿರ್ಭಯದಿಂದ ಮಂಡಿಸುವ ಎದೆಗಾರಿಕೆ ಇರಬೇಕು. ಆತನಿಗೆ ವರದಿಯ ಆಳ ಹಾಗೂ ಮೌಲ್ಯದ ಬಗ್ಗೆ ಅರಿವಿರಬೇಕು. ಜ್ಞಾನ ಪ್ರಸಾರದಲ್ಲಿ ಪತ್ರಿಕಾ ಮಾದ್ಯಮವು ಇತರ ಮಾಧ್ಯಮಗಳಿಗಿಂತ ಶಕ್ತಿಶಾಲಿ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಶಿಕ್ಷಕಿ ಪುಂಡೂರು ಪ್ರಭಾವತಿ ಕೆದಿಲಾಯ ವಹಿಸಿ ಮಾತನಾಡಿ, ಪತ್ರಿಕಾ ವರದಿ ರಚನೆಯು ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲೂ ಚಾಲ್ತಿಯಲ್ಲಿದ್ದು, ಈ ಬಗ್ಗೆ ಮಕ್ಕಳು ಅರಿತುಕೊಳ್ಳಬೇಕು. ಇಂತಹಾ ಮಾಹಿತಿ ಕಾರ್ಯಕ್ರಮದಿಂದ ಮಕ್ಕಳಿಗೆ ವಿವಿಧ ಪ್ರಕಾರಗಳ ಪರಿಚಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಜ್ಯೋತ್ಸ್ನಾ ಎಂ.ಕಡಂದೇಲು ಉಪಸ್ಥಿತರಿದ್ದರು. ಸುಮಿತ್ ವಂದಿಸಿದರು. ಕಾರ್ಯಕ್ರಮದಲ್ಲಿ ಸುಮಾರು 50 ಮಂದಿ ಮಕ್ಕಳು ಭಾಗವಹಿಸಿದ್ದರು.


