HEALTH TIPS

ಕನ್ನಡ ಪತ್ರಿಕೋದ್ಯಮ-ಇಣುಕು ನೋಟ-ಭಾಗ-03

     

       19ನೆಯ ಶತಮಾನದಲ್ಲಿ ಕನ್ನಡದಲ್ಲಿ ಪ್ರಕಟವಾದುದು ಬಹುಪಾಲು ನಿಯತಕಾಲಿಕೆಗಳೇ ಆದರೂ ಶತಮಾನದ ಕೊನೆಯ ಘಟ್ಟಗಳಲ್ಲಿ ದಿನಪತ್ರಿಕೋದ್ಯಮ ಕಾಲಿರಿಸುವುದನ್ನು ಕಾಣುತ್ತೇವೆ. ಪ್ರಪ್ರಥಮ ಕನ್ನಡ ದಿನಪತ್ರಿಕೆಯೆಂದು ಗುರುತಿಸಲಾಗಿರುವ ಸೂರ್ಯೋದಯ ಪ್ರಕಾಶಿಕ ಪ್ರಕಟಗೊಂಡಿದ್ದು 1888ರಲ್ಲಿ. ಈ ಪತ್ರಿಕೆಯ ಸ್ಥಾಪಕರು ಮೈಸೂರಿನ ಬಿ.ನರಸಿಂಗರಾವ್.
   19ನೆಯ ಶತಮಾನದ ಅಂತ್ಯಕ್ಕೆ ಕನ್ನಡ ಪತ್ರಿಕಾ ಲೋಕ ಬಿರುಸಿನಿಂದ ಮುನ್ನಡೆಯು ತ್ತಿದ್ದುದನ್ನು ಕಾಣುತ್ತೇವೆ. ಸುದ್ದಿಯ ವಾಹಕಗಳಾದ ದಿನಪತ್ರಿಕೆಗಳು, ಮನರಂಜನೆ ಮೂಲವಾದ ನಿಯತಕಾಲಿಕೆಗಳು ಪ್ರತ್ಯೇಕ ಕವಲಾಗಿ ಬೆಳೆಯಲಾಂಭಿಸಿದುವು. ಹಾಗೆಯೇ ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಹೊರಡಿಸಲಾಗುವ ಪತ್ರಿಕೆಗಳ ಜೊತೆ, ಘೋಷಿಸಿಕೊಂಡ ವಿಶೇಷ ಆಸಕ್ತಿಗಳನ್ನೇ ಪೋಷಿಸುವ ವಿಶೇಷಾಸಕ್ತಿ ನಿಯತಕಾಲಿಕೆಗಳೂ ಚಲಾವಣೆಯಲ್ಲಿವೆ. 1860ರ ದಶಕದಲ್ಲೇ ಮಂಗಳೂರಿ ನಿಂದ ಉಭಯ ಗೊಪಾಲಕೃಷ್ಣ ಎಂಬವರು ಪ್ರಕಟಿಸಿದ ನ್ಯಾಯಸಂಗ್ರಹ ಎಂಬುದು ವಿಶೇಷಾಸಕ್ತಿ ನಿಯತಕಾಲಿಕ ಪ್ರತ್ಯೇಕ ಕವಲೊಡೆದುದಕ್ಕೆ ಸೂಚನೆ. ಇಂದಿನ ಜನಪ್ರಿಯ ನಿಯತಕಾಲಿಕೆಗಳಲ್ಲಿ ಕಂಡುಬರುವ ಕಥೆ, ಕವನ, ಪ್ರಬಂಧ, ಲೇಖನ, ವಿ ಜ್ಞಾ ನ, ರಾಜಕೀಯ ಮುಂತಾಗಿ ಎಲ್ಲ ವರ್ಗಗಳ ಆಸಕ್ತಿ ಗಮನ ದಲ್ಲಿರಿಸಿಕೊಂಡು ಓದುವ ಸಾಮಗ್ರಿಗಳನ್ನು ನೀಡುವ ಪತ್ರಿಕೆಗಳು ನೀಡುವ ಪತ್ರಿಕೆಗಳು ಆಗಲೂ ಇದ್ದುವು. ಕಾವ್ಯಕ್ಕೆ, ಸಾಹಿತ್ಯಕ್ಕೆ, ಧರ್ಮಕ್ಕೆ ಮುಂತಾಗಿ ಸೀಮಿತ ಆಸಕ್ತಿಯನ್ನು ಮಾತ್ರ ಪೋಷಿಸುವ ಪತ್ರಿಕೆಗಳೂ ಬಂದುವು. ಕನ್ನಡದ ಮೊದಲ ಸಾಹಿತ್ಯ ಪತ್ರಿಕೆಯೆಂದು ಗುರುತಿಸಬಹುದಾದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ವಾಗ್ಭೂಷಣ (ನೋಡಿ) ಮಾಸಪತ್ರಿಕೆ 1896ರಿಂದ ಪ್ರಕಟಣೆ ಆರಂಭಿಸಿತ್ತು. ಕನ್ನಡ ಪತ್ರಿಕೆಗಳ ದೃಷ್ಟಿಯಿಂದ 1843-1900 ರ ವರೆಗಿನದು ಆರಂಭಿಕ ಘಟ್ಟ. ಕನ್ನಡಕ್ಕೆ ಆಗಿನ್ನೂ ಪತ್ರಿಕೆ ಹೊಸ ಸರಕು; ಹೊಸ ಮಾಧ್ಯಮ 1901-1950 ರವರೆಗಿನದು ಎರಡನೆಯ ಹಂತ. ಇದು ಬೆಳೆವಣೆಗೆಯ ಕಾಲ. ಹೋರಾಟದ ಕಾಲವೂ ಹೌದು. ಇಡೀ ದೇಶಕ್ಕೆ ದೇಶದ ಎಲ್ಲ ಕ್ಷೇತ್ರಗಳಿಗೆ ಈ ಅವಧಿ ಹೋರಾಟದ ಕಾಲ. ತನ್ನ ಅಸ್ತಿತ್ವವನ್ನು ಸಾಬೀತುಪಡಿಸಬೇಕಾದ ಕಾಲ. ಪತ್ರಿಕೋದ್ಯಮ ಇದಕ್ಕೆ ಹೊರತಾಗಿರಲಿಲ್ಲ. ದೇಶದ ಸ್ವಾತಂತ್ರ್ಯಕ್ಕೆ ಒತ್ತು ನೀಡುವ, ಕನ್ನಡ ರಾಜ್ಯವನ್ನು ಸ್ಥಾಪಿಸುವ, ಹೋರಾಟದ ಜೊತೆ ತನ್ನ ಕಾಲ ಮೇಲೆ ತಾನು ನಿಲ್ಲಲು ಪತ್ರಿಕೆಗಳು ಹೋರಾಡಿದ ಕಾಲ 20ನೆಯ ಶತಮಾನದ ಮೊದಲ ಅರ್ಧದ್ದು.
    ಕನ್ನಡ ಪತ್ರಿಕೆಗಳ ದೃಷ್ಟಿಯಿಂದ 20ನೆಯ ಶತಮಾನದ ಆರಂಭ ಕಾಲ ಮೈಸೂರು ಸಂಸ್ಥಾನದ ವ್ಯಾಪ್ತಿಯ ಪತ್ರಿಕೆಗಳಿಗೆ ಉತ್ತೇಜಕವಾದ ಕಾಲವಾಗಿರಲಿಲ್ಲ. ದಿವಾನ್ ರಂಗಾಚಾರ್ಲು ಅವರ ತರುವಾಯ ಮೈಸೂರು ಸಂಸ್ಥಾನದ ದಿವಾನರಾದ ಕೆ. ಶೇಷಾದ್ರಿ ಅಯ್ಯರ್ ಪತ್ರಿಕೆಗಳ ಬಗ್ಗೆ ತೀವ್ರ ಅಸಹನೆ ಹೊಂದಿದವರಾಗಿದ್ದರು. ಅದೇ ಹೊತ್ತಿಗೆ ಚಾಮರಾಜ ಒಡೆಯರ್ ನಿಧನರಾಗಿ ಅಪ್ರಾಪ್ತ ವಯಸ್ಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಪಟ್ಟಕ್ಕೆ ಬಂದರು. ಇದು ದಿವಾನರ ಪ್ರಭುತ್ವವನ್ನು ಹೆಚ್ಚಿಸಿತ್ತು. ಶೇಷಾದ್ರಿ ಅಯ್ಯರ್ ಬಳಿಕ ದಿವಾನರಾಗಿ ಬಂದ ವಿ.ಪಿ. ಮಾಧವರಾಯರು ಪತ್ರಿಕೆಗಳ ಮೇಲೆ ಕೆಂಗಣ್ಣು ಬೀರಿದರು. ಇವರ ಅನಂತರ ಬಂದ ದಿವಾನ್ ಪಿ.ಎನ್. ಕೃಷ್ಣಮೂರ್ತಿಯವರಂತೂ ಮೈಸೂರು ಸ್ಟ್ಯಾಂಡರ್ಡ್ ಪತ್ರಿಕೆಯ ಪ್ರತಿನಿಧಿಯನ್ನು ಪ್ರಜಾಪ್ರತಿನಿಧಿ ಸಭೆಯಿಂದ ಹೊರಗಟ್ಟಿ ಪತ್ರಿಕೆಗಳಿಗೆ ಪಾಠ ಕಲಿಸುವುದಾಗಿ ಎಚ್ಚರಿಸಿದ್ದರು. ನಿರಂತರವಾಗಿ ದಿವಾನರುಗಳ ದುರಾಗ್ರಹಕ್ಕೆ ತುತ್ತಾಗಿ ಪತ್ರಿಕೆಗಳು ಅನುಭವಿಸಿದ ಶಿಕ್ಷೆಯೆಂದರೆ 1908ರ ಮೈಸೂರು ಸಂಸ್ಥಾನದ ಪತ್ರಿಕಾ ಪ್ರತಿಬಂಧಕ ಶಾಸನ. ಈ ಶಾಸನಕ್ಕನುಗುಣವಾಗಿ ಮೈಸೂರ ಸಂಸ್ಥಾನದಲ್ಲಿ ಪತ್ರಿಕೆ ಪ್ರಕಟಿಸುವವರು ಸರ್ಕಾರದ ಪುರ್ವಾನುಮತಿಯನ್ನು ಪಡೆಯಬೇಕಿತ್ತು. ಸರ್ಕಾರ ಯಾವ ಸಮಯದಲ್ಲಿ ಬೇಕಾದರೂ ಯಾವುದೇ ಪತ್ರಿಕೆಗೆ ನೀಡಿದ್ದ ಅನುಮತಿಯನ್ನು ವಾಪಸ್ಸು ಪಡೆಯಬಹುದಿತ್ತು. ಅನುಮತಿ ಪಡೆಯದೇ ಅಥವಾ ಅನುಮತಿ ರದ್ದಾದ ಬಳಿಕವೂ ಪತ್ರಿಕೆ ಹೊರಡಿಸುವವರು ಶಿಕ್ಷೆಗೆ ಗುರಿಯಾಗಬೇಕಿತ್ತು. ರಾಜ್ಯದಿಂದ ಅಂಥವರನ್ನು ಗಡಿಪಾರು ಮಾಡಲಿಕ್ಕೂ ಕಾನೂನಿನಲ್ಲಿ ಅವಕಾಶವಿತ್ತು. ಹೀಗೆ ಸರ್ಕಾರದ ದುರಾಗ್ರಹಕ್ಕೆ ತುತ್ತಾದವರಲ್ಲಿ ಕನ್ನಡ ನಡೆಗನ್ನಡಿ ಪತ್ರಿಕೆಯ ಸಂಪಾದಕರಾಗಿದ್ದ ಎಂ. ಗೋಪಾಲ ಅಯ್ಯಂಗಾರ್ ಮತ್ತು ಎಂ. ಶ್ರೀನಿವಾಸ ಅಯ್ಯಂಗಾರ್ ಸಹೋದರರನ್ನು ಹೆಸರಿಸಬೇಕು. 1895ರಲ್ಲೇ ಆರಂಭವಾಗಿದ್ದ ಇವರ ಪತ್ರಿಕೆ 1908ರ ಪತ್ರಿಕಾ ಶಾಸನಕ್ಕೆ ಪ್ರತೀಕಾರವಾಗಿ ಬೆಂಗಳೂರಿನಿಂದ ಅನಿವಾರ್ಯವಾಗಿ ಮದರಾಸಿಗೆ ವರ್ಗಾವಣೆಗೊಳ್ಳಬೇಕಾಯ್ತು. ಈ ಅವಧಿಯಲ್ಲಿ ಆದ ಸಾಮಾಜಿಕ ಸಂಘಟನೆಗಳ ಫಲವಾಗಿ ಕೆಲವು ಸಮುದಾಯಗಳು ತಮ್ಮ ಮುಖವಾಣಿಯಾಗಿ ಪತ್ರಿಕೆಗಳನ್ನು ಹೊರತಂದವು. ಅವುಗಳಲ್ಲಿ ಬೆಂಗಳೂರಿನಿಂದ ಒಕ್ಕಲಿಗರ ಸಂಘದವರು ಹೊರತಂದ ಒಕ್ಕಲಿಗರ ಪತ್ರಿಕೆ (1906) ನಗರದಲ್ಲಿ ಬೇಗ ಜನಪ್ರಿಯತೆ ಗಳಿಸಿತು.
                ಮುಂದುವರಿಯುವುದು................

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries