HEALTH TIPS

ಸಮರಸ ಶಬ್ದಾಂತರಂಗ ಸೌರಭ-ಭಾಗ-04-ಬರಹ:ಶ್ರೀವತ್ಸ ಜೋಶಿ. ವಾಶಿಂಗ್ಟನ್ ಡಿ.ಸಿ.


       ಇಂದಿನ ಟಿಪ್ಪಣಿ:
 1. ಕೇಳ್ಪಟ್ಟೆಯನ್ನು ಕಂಡಲ್ಲಿ ಗುಂಡಿಕ್ಕಬಹುದು!
     ಇದೊಂದು ಇತ್ತೀಚಿನ ಪಿಡುಗು. ಭಾಷೆಯನ್ನು ಕುಲಗೆಡಿಸುವ ಬೆಂಗಳೂರಿನಲ್ಲೇ ಇದು ಕೂಡ ಹುಟ್ಟಿದ್ದಿರಬೇಕು ಎಂದು ನನ್ನ ಗುಮಾನಿ. ಯಾರೋ ಒಬ್ಬರು ಸ್ಟೈಲ್‍ಗೆಂದು ಹೇಳಿದರು, ಅದೊಂದು ಗತ್ತು ಅಂದ್ಕೊಂಡು ಮಿಕ್ಕವರೂ ಶುರು ಮಾಡಿದರು. "ಅವನೊಬ್ಬ ಚಟಭಯಂಕರ ಅಂತ ಕೇಳ್ಪಟ್ಟೆ", "ಈ ಊರಲ್ಲಿ ಪಿಶಾಚಿ ಕಾಟ ಇದೆಯೆಂದು ಕೇಳ್ಪಟ್ಟೆ" ಎಂಬ ರೀತಿಯ ವಾಕ್ಯಗಳು. ಅದರಲ್ಲಿ ಕೇಳ್ಪಟ್ಟೆ ಪದ ಯಾವ ರೀತಿಯಲ್ಲಿ ಸರಿಯೋ ದೇವರಿಗೇ ಗೊತ್ತು. ಅದು ಹೇಗೆ ತಪ್ಪು ಎಂದು ವಿವರಿಸುತ್ತೇನೆ:
   "ರಾಮನು ಮಾವಿನಹಣ್ಣನ್ನು ತಿಂದನು." ಮತ್ತು "ರಾಮನಿಂದ ಮಾವಿನಹಣ್ಣು ತಿನ್ನಲ್ಪಟ್ಟಿತು" ವಾಕ್ಯಗಳು ನಮಗೆ ಚಿರಪರಿಚಿತ. ಇವೆರಡನ್ನೂ ನಾವು- as a third party -- ನಿರೂಪಣೆಯಲ್ಲಿ ಬಳಸುತ್ತೇವೆ. ಒಂದುವೇಳೆ, ತಿನ್ನುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ರಾಮ (ಕರ್ತೃ) ಮತ್ತು ಮಾವಿನಹಣ್ಣು (ಕರ್ಮ) ಮಾತನಾಡಿದರೆ ಅನುಕ್ರಮವಾಗಿ "ನಾನು ಮಾವಿನಹಣ್ಣನ್ನು ತಿಂದೆನು", ಮತ್ತು, "ರಾಮನಿಂದ ನಾನು ತಿನ್ನಲ್ಪಟ್ಟೆನು" ಎನ್ನಬೇಕು. ಸರಿ ತಾನೆ? ಈಗ, "ಕೇಳ್ಪಟ್ಟೆ" ಎಂಬ nonsenseಗೆ ಬನ್ನಿ. ಸೋಮನೆಂಬುವವ ಯಾವುದೋ ಒಂದು ಸುದ್ದಿಯನ್ನು ಕೇಳಿದ (ಬೇಕಿದ್ರೆ ಕದ್ದಾಲಿಸಿದ) ಅಂತಿಟ್ಕೊಳ್ಳಿ. "ನಾನು ಸುದ್ದಿಯನ್ನು ಕೇಳಿದೆನು" - ಇದು ಸೋಮನ ದೃಷ್ಟಿಕೋನದಿಂದ. "ಸೋಮನಿಂದ ನಾನು ಕೇಳಲ್ಪಟ್ಟೆನು" - ಇದು ಸುದ್ದಿಯ ದೃಷ್ಟಿಕೋನದಿಂದ. ಮತ್ತೆ ಸೋಮನೇ "ಕೇಳ್ಪಟ್ಟೆ" ಆಗುವುದು ಹೇಗೆ? ಶುದ್ಧ ಅಬದ್ಧ.
           ಕೇಳ್ಪಟ್ಟೆ* ಎನ್ನುವವರನ್ನು ಒಮ್ಮೆ "ಯಾವುದಾದರೂ ಪರಿಮಳ/ವಾಸನೆ ನಿಮ್ಮ ಮೂಗಿಗೆ ಅಡರಿದರೆ ನೀವು ಮೂಸ್ಪಟ್ಟೆ ಅಂತ ಯಾಕೆ ಹೇಳೋದಿಲ್ಲ? ಏನನ್ನಾದರೂ ತಿಂದರೆ "ತಿನ್ಪಟ್ಟೆ" ಅಂತ ಯಾಕೆ ಹೇಳೋದಿಲ್ಲ?" ಎಂದು ಕೇಳಿನೋಡಿ. ಬಹುಶಃ ಆಮೇಲೆ ಎಂದೆಂದಿಗೂ ಅವರು ಕೇಳ್ಪಟ್ಟೆ ಎಂಬ ಅಬದ್ಧ ಮಾತಾಡಲಿಕ್ಕಿಲ್ಲ! ಉಳಿದ ನಾಲ್ಕು ಇಂದ್ರಿಯಗಳಿಗೆ ಇಲ್ಲದ ಭಾಗ್ಯ ಅವರ ಕಿವಿಗಳಿಗೆ ಮಾತ್ರ ಯಾಕೆ?"

2. ಊ ಊ ಊ... ಸಂಪಿಗೆ ಮರದ ಹಸಿರೆಲೆ ನಡುವೆ...
       "ನಗುವಾಗ ಎಲ್ಲ ನೆಂಟರು, ಅಳುವಾಗ ಯಾರು ಇಲ್ಲ." - ಹೀಗೆ ಮೊನ್ನೆ ಒಂದು ಫೇಸ್‍ಬುಕ್ ಸ್ಟೇಟಸ್ ನೋಡಿದೆ (ನೋಡ್ಪಟ್ಟೆ? :-) ) ಅರ್ಥವತ್ತಾದ, ಕಟುಸತ್ಯವನ್ನೇ ಬರೆದಿದ್ದಾರೆ. ಆದರೆ ಅದರಲ್ಲಿನ "ಯಾರು" ಎಂಬ ಪದ "ಯಾರೂ" ಆಗಬೇಕಿತ್ತು. ತುಂಬ ಮಂದಿ ಈ ತಪ್ಪನ್ನು ಮಾಡುತ್ತಾರೆ. "ಯಾರು" ಎನ್ನುವುದು ಪ್ರಶ್ನಾರ್ಥಕ  ವಾಕ್ಯಗಳಲ್ಲಿ ಮಾತ್ರ ಬಳಕೆಯಾಗುತ್ತದೆ. "ಕರ್ನಾಟಕದ ಈಗಿನ ಮುಖ್ಯಮಂತ್ರಿ ಯಾರು?", "ಮೊತ್ತಮೊದಲ ಭಾರತೀಯ ಪೈಲಟ್ ಮಹಿಳೆ ಯಾರು?" ಇತ್ಯಾದಿ. "ಯಾರೂ" ಎನ್ನುವುದು ನೇತ್ಯಾತ್ಮಕ ((negative) ವಾಕ್ಯಗಳಲ್ಲಿ ಮಾತ್ರ ಬಳಕೆಯಾಗುತ್ತದೆ. "ಕನ್ನಡ ಚಿತ್ರರಂಗದಲ್ಲೀಗ ಒಳ್ಳೆಯ ನಟರು ಯಾರೂ ಇಲ್ಲ", "ಬೇರೆ ಯಾರೂ ಈ ಮಾತನ್ನು ಹೇಳೋದಿಲ್ಲ" ಇತ್ಯಾದಿ. ಇನ್ನೊಂದು ವಿಚಾರವೆಂದರೆ "ಯಾರೂ" ಎಂದು ಬರೆದ ಅನಂತರ "ಕೂಡ" ಅಥವಾ "ಸಹ" ಪದಗಳು ಬೇಕಂತಿಲ್ಲ (ಇದ್ದರೆ ತಪ್ಪೆನ್ನಲಾಗದು). "ಅವನೂ", "ಅವಳೂ", "ಭಾರತವೂ", "ಪಾಕಿಸ್ತಾನವೂ" ಮುಂತಾದ ಎಲ್ಲ "ಊ"ಕಾರಾಂತಗಳಿಗೂ ಇದು ಅನ್ವಯವಾಗುತ್ತದೆ. 70ರ ದಶಕದ ಕನ್ನಡ ಪಠ್ಯಪುಸ್ತಕದಲ್ಲಿ "ನರಿಯೂ ಕರಡಿಯೂ" ಅಂತೊಂದು ಪಾಠವಿದ್ದದ್ದು ಕೆಲವರಿಗೆ ನೆನಪಿರಬಹುದು.
  *3. ಮರಳು (ನಾಮಪದ) = sand ಹೊಯ್ಗೆ, ಉಸುಕು. ಲಾರಿಗಳಲ್ಲಿ ಮರಳು ತುಂಬಿ ಸಾಗಿಸಿದರು. ಮರಳು (ಕ್ರಿಯಾಪದ) = return, ಹಿಂದಿರುಗು. ಉನ್ನತ ವಿದ್ಯಾಭ್ಯಾಸ ಮುಗಿದ ಬಳಿಕ ಅವನು ಸ್ವದೇಶಕ್ಕೆ ಮರಳಿದ. ಶಿವರಾಮ ಕಾರಂತರ "ಮರಳಿ ಮಣ್ಣಿಗೆ" ಕಾದಂಬರಿ.
ಮರುಳು = ಬುದ್ಧಿಭ್ರಮೆ, ಹುಚ್ಚು, ಪ್ರೀತಿ, ಮೋಹ. "ಎಂಥ ಮರುಳಯ್ಯ ಇದು ಎಂಥ ಮರುಳು... ಬೆಳಗಿನ ಹಿಮದಂತೆ ಹರಿವ ನೆರಳು..."

ಅರಳು-ಮರುಳು ಎನ್ನಬೇಕೇ, ಅರಳು-ಮರಳು ಎನ್ನಬೇಕೇ? ವಾಡಿಕೆಯಂತೆ ಮೊದಲನೆಯದು ಸರಿ, ಏಕೆಂದರೆ 60 ವಯಸ್ಸಾದಾಗ ವ್ಯಕ್ತಿಯು ಸ್ವಲ್ಪ ಬುದ್ಧಿಭ್ರಮೆ, ಮರೆವು ಇತ್ಯಾದಿ ತೋರುವುದರಿಂದ ಆ ಪದಪುಂಜ ಬಂದದ್ದು. ಆದರೆ ಈಗಿನ ಕಾಲದಲ್ಲಿ 60ಕ್ಕೆ ಬದುಕು ಪುನಃಶ್ಚೇತನಗೊಂಡಿತು.rejuvenate  ಆಯ್ತು ಎನ್ನುವವರು ಹೆಚ್ಚು. ಅವರಿಗೆ ಬದುಕಿನ "ಅರಳು"ವಿಕೆ ಮರಳಿತು ಆದ್ದರಿಂದ ಅರಳು-ಮರಳು ಎನ್ನುವುದರಲ್ಲೂ ಅರ್ಥವಿದೆ!
                             ಬರಹ: ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.
        FEEDBACK: samarasasudhi@gmail.com





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries