1. ಆಯಾಯ ಎನ್ನಬೇಕಿಲ್ಲ, ಆಯಾ ಸಾಕು!
ಈ ತಪ್ಪನ್ನು ನಾನೂ ಮಾಡುತ್ತಿದ್ದೆ.ಆಯಾಯ ವ್ಯಕ್ತಿಗಳನ್ನು ಸಂಪರ್ಕಿಸಿದ್ದೆ", ಆಯಾಯ ದೇಶಗಳ ಕರೆನ್ಸಿ ನೋಟುಗಳನ್ನು ಸಂಗ್ರಹಿಸಿಟ್ಟಿದ್ದೆ" ಮುಂತಾದ ವಾಕ್ಯಗಳಲ್ಲಿ ಆಯಾಯ ಎಂದಿರುವಲ್ಲಿ ಆಯಾ ಎಂದು ಬರೆಯುವುದೇ ಹೆಚ್ಚು ಸಮಂಜಸ ಎಂದು ಇದೀಗ ಅರಿತುಕೊಂಡಿದ್ದೇನೆ. ಈ ಜ್ಞಾ ನೋದಯ ನನಗಾದದ್ದು, 1930ರಲ್ಲಿ ಪ್ರಕಟವಾದ ಒಂದು ಹಳೆಯ ಕನ್ನಡ ಪುಸ್ತಕದ ಡಿಜಿಟಲ್ ಪ್ರತಿಯನ್ನು ಇವತ್ತು ಓದಿದಾಗ! ಅದರಲ್ಲಿ ಒಂದು ವಾಕ್ಯ ಹೀಗಿದೆ: "ಆದೇಶ ಸಂಧಿಯಲ್ಲಿ ಉತ್ತರಪದದ ಮೊದಲಲ್ಲಿಯ ಕ ಚ ಟ ತ ಪ ಕಾರಗಳಿಗೆ ಆ ಆ ವರ್ಗಗಳ ತೃತೀಯ ಅಕ್ಷರವು ಆದೇಶವಾಗುವುದು." ಏನಿದು "ಆ ಆ ವರ್ಗಗಳ" ಬೇರೇನಲ್ಲ, ಅನುಕ್ರಮವಾಗಿ ಆ ವರ್ಗಗಳ (respectively of those groups)) ಎಂದು ಅರ್ಥ. ಅಲ್ಲಿ ಬರೀ "ಆ ವರ್ಗಗಳ" ಎಂದರೆ ತಪ್ಪಾಗುತ್ತದೆ; "ಆ ವರ್ಗದ" ಎಂದರೂ ತಪ್ಪಾಗುತ್ತದೆ" ಹಾಗಾಗಿ "ಆ ಆ" ಎಂದು ಬಿಡಿಸಿ ಬರೆದಿದ್ದಾರೆ. ಅದನ್ನು ಜೋಡಿಸಿದರೆ ಆ + ಆ = ಆಯಾ ಎಂಬ ಸಂಧಿಪದ ಆಗುತ್ತದೆ (ಯಕಾರಾಗಮ ಸಂಧಿ). ತರ್ಕಬದ್ಧವೂ ಆಗಿರುತ್ತದೆ. ಹೇಗೋ ಆಯಾಯ ಎಂಬ ಪದ ರೂಢಿಯಲ್ಲಿ ಬಂದಿದೆ. ಪ್ರಸಿದ್ಧ ಲೇಖಕರೂ ಬಳಸುತ್ತಾರೆ, ರಾಜ್ಯ ಮಟ್ಟದ ಪತ್ರಿಕೆಗಳೂ ಆಯಾಯ ಎಂದು ಬರೆಯುತ್ತವೆ ( "ಆಯಾಯ ಜಾತಿಯ ಅಡಿಪಾಯದ ಮೇಲೆ ಕಟ್ಟಿರುವ ಪ್ರತಿಯೊಂದು ಮಠವೂ...", "ಮಳೆಕೊಯ್ಲಿನ ಕ್ರಮಗಳನ್ನು ಆಯಾಯ ಜಾಗದ ಮಳೆಯ ಪ್ರಮಾಣವನ್ನವಲಂಬಿಸಿ..." ಇತ್ಯಾದಿ) ಆದರೆ ಅದು ತರ್ಕಬದ್ಧವಲ್ಲ. ನಾನು ಆಯಾ ಬದಲಿಗೆ ಆಯಾಯ ಎಂದು ಬರೆಯುತ್ತಿದ್ದದ್ದು ಆಯಾ ಎಂಬ ಕನ್ನಡೇತರ ಪದವನ್ನು ನಾವು ಕೆಲಸದವಳು ಎಂಬರ್ಥದಲ್ಲಿಯೂ ಬಳಸುತ್ತೇವಾದ್ದರಿಂದ, ಗೊಂದಲ ತಪ್ಪಿಸುವ ಉದ್ದೇಶದಿಂದ. ಆದರೆ ಈಗ ಕನ್ನಡದಲ್ಲಿ ಆಯಾ ಪದದ ಮೂಲ ನನಗೆ ಸ್ಪಷ್ಟ ಗೊತ್ತಾಗಿರುವುದರಿಂದ ಇನ್ನು ವಾಕ್ಯದಲ್ಲಿ ಆಯಾಯಕ್ಕೆ ಬದಲು ಆಯಾ ಮಾಡುವ ಕೆಲಸವೇ ಒಳ್ಳೆಯದೆನ್ನುತ್ತೇನೆ.
ಕೊಸರು:ಆಯಾಯ ಮತ್ತು ಆಯಾ ಪದಬಳಕೆಗಳನ್ನು ಗೂಗಲ್‍ನಲ್ಲಿ ಹುಡುಕಿದಾಗ ಒಂದು ಆಣಿಮುತ್ತು ಸಿಕ್ಕಿತು. ಪ್ರತ್ಯೇಕ ಹೇಳಬೇಕಿಲ್ಲ ಇದು ಕನ್ನಡದ ಕೊಳಕು ಸುದ್ದಿ ವಾಹಿನಿಯ ತಲೆ(ಇಲ್ಲದ)ಬರಹ: "ಆಯಾ ತಪ್ಪಿ ಬಾವಿಗೆ ಬಿದ್ದು ಯುವಕನ ಸಾವು" )
2. ಸಂಖ್ಯೆಯನ್ನು ಮನಗಂಡು ಬಹುವಚನ ಬಳಸಬೇಕು
ಆಯಾ ಎಂದಾಗಲೀ ಆಯಾಯ ಎಂದಾಗಲೀ ಬರೆಯುವಾಗ ನಾವು ಇನ್ನೂ ಒಂದು ತಪ್ಪನ್ನು ಮಾಡುತ್ತೇವೆ. ಅದೇನೆಂದರೆ ಆಯಾ(ಅಥವಾ ಆಯಾಯ) ಎಂಬ ಪದ ಆದಮೇಲೆ ಬರುವ ನಾಮಪದವನ್ನು ಏಕವಚನದಲ್ಲಿ ಬರೆಯುವುದು. ಅಲ್ಲಿ ಬಹುವಚನ ಬೇಕು. ಏಕೆ ಗೊತ್ತೇ? ಆಯಾದ ಮೂಲ ಆ ಆ ಎಂದು ಈಗಷ್ಟೇ ತಿಳಿದುಕೊಂಡೆವು. ಆ ಆ.. ಎಂದರೆ ನಾವು ಅಲ್ಲಿ ಒಂದಕ್ಕಿಂತ ಹೆಚ್ಚು ಸಂಖ್ಯೆಯ ವಿಷಯ/ವಸ್ತು/ವ್ಯಕ್ತಿ subject ಗಳ ವಿಚಾರ ಮಾತಾಡುತ್ತಿದ್ದೇವೆ ಅಂತಾಯ್ತು. ಅಂದಮೇಲೆ ಬಹುವಚನ ಬರಬೇಕು. ಆಯಾ ದೇಶದ ಬಾವುಟ... ತಪ್ಪು, ಆಯಾ ದೇಶಗಳ ಬಾವುಟ.. ಸರಿ. ಆಯಾ ತಿಂಗಳಿನ ಹುಣ್ಣಿಮೆಯಂದು ತಪ್ಪು; ಆಯಾ ತಿಂಗಳುಗಳ ಹುಣ್ಣಿಮೆಯಂದು ಸರಿ. ಆಯಾ ಧರ್ಮಕ್ಕೆ ಸಂಬಂಧಿಸಿದ ತಪ್ಪು, ಆಯಾ ಧರ್ಮಗಳಿಗೆ ಸಂಬಂಧಿಸಿದ ಸರಿ. ನಾನು ಗಮನಿಸಿರುವಂತೆ, ಆಯಾ/ಆಯಾಯ ಬಳಕೆಯ ವೇಳೆ ಮಾತ್ರವಲ್ಲ, ಬೇರೆ ಸಂದರ್ಭಗಳಲ್ಲೂ ನಾವು ವಾಕ್ಯಗಳಲ್ಲಿ ಬಹುವಚನ ಪದಗಳಿರಬೇಕಾದಲ್ಲಿ ಏಕವಚನ ಪದಗಳನ್ನು ಬಳಸಿ ತಪ್ಪು ಮಾಡುತ್ತೇವೆ. ಈಗಷ್ಟೇ ಓದಿದ ಒಂದು ವಾಟ್ಸಾಪ್ ಸಂದೇಶದಲ್ಲಿ "ಸಂಗೀತದಲ್ಲಿ ಮುಖ್ಯವಾದ ಶಾಸ್ತ್ರ ವಿಷಯಗಳನೇಕವು ತಪ್ಪಿದೆ, ಅದರಲ್ಲಿ ಒಂದು..." ಎಂಬ ವಾಕ್ಯವಿತ್ತು. ಅದು, "ಸಂಗೀತದಲ್ಲಿ ಮುಖ್ಯವಾದ ಶಾಸ್ತ್ರ ವಿಷಯಗಳನೇಕವು ತಪ್ಪಿವೆ, ಅವುಗಳಲ್ಲಿ ಒಂದು..." ಅಂತಾಗಬೇಕು. ವಿಷಯಗಳನೇಕವು ಅಂತಂದಮೇಲೆ ಕ್ರಿಯಾಪದ ತಪ್ಪಿದೆ ಎಂದು ಏಕವಚನದಲ್ಲಿ ಏಕೆ? ತಪ್ಪಿವೆ ಎಂದು ಬಹುವಚನ ಬೇಕು. ವಿಷಯಗಳನೇಕವು ಅಂತಂದಮೇಲೆ ಮುಂದಿನ ವಾಕ್ಯದಲ್ಲಿ ಸರ್ವನಾಮಪದ ಅದರಲ್ಲಿ ಏಕೆ? ಅವುಗಳಲ್ಲಿ ಎಂದು ಬಹುವಚನ ಬೇಕು. ಈಗ, ನಿಮ್ಮ ಜೊತೆ ಜಗಳಕಾಯಲು ತುಂಬ ವಿಚಾರವಿದೆ ಎನ್ನಬೇಡಿ. ತುಂಬ ವಿಚಾರಗಳಿವೆ ಎನ್ನಿ, ಸಂತೋಷ. )
3. ಈ ಪದಗಳಲ್ಲಿ ವ್ಯಂಜನಕ್ಕೆ ಋ ಸ್ವರ ಸೇರಿದ ರೂಪ ಸರಿಯೇ?
ಅಥವಾ, ವ್ಯಂಜನಕ್ಕೆ ರ ಒತ್ತು (ಅರ್ಧಚಂದ್ರ ಒತ್ತು ಅಂತೀವಲ್ವಾ ಅದು) ಇರುವ ರೂಪ ಸರಿಯೇ?
ಹೃಸ್ವ (ತಪ್ಪು) ; ಹ್ರಸ್ವ (ಸರಿ)
ಧೃವ/ಧೃವೀಕರಣ (ತಪ್ಪು) ; ಧ್ರುವ/ಧ್ರುವೀಕರಣ (ಸರಿ)
ಶೃತಿ/ಫಲಶೃತಿ (ತಪ್ಪು) ; ಶ್ರುತಿ/ಫಲಶ್ರುತಿ (ಸರಿ)
ಗೃಹ (ಮನೆ ಎಂಬರ್ಥದಲ್ಲಿ ಸರಿ); ಗ್ರಹ (ಸೂರ್ಯನ ಸುತ್ತ ತಿರುಗುವ ಆಕಾಶಕಾಯ ಎಂಬ ಅರ್ಥದಲ್ಲಿ ಸರಿ)
ವೃತ (ವರಿಸಲ್ಪಟ್ಟ, ಸುತ್ತುವರಿಯಲ್ಪಟ್ಟ ಎಂಬರ್ಥದಲ್ಲಿ ಸರಿ); ವ್ರತ (ನಿಯಮ, ಕರ್ಮಾನುಷ್ಠಾನ, ಭಕ್ತಿ, ಶ್ರದ್ಧೆ ಎಂಬರ್ಥದಲ್ಲಿ ಸರಿ)
ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.
ಮುಂದುವರಿಯುವುದು...........
FEEDBACK: samarasasudhi@gmail.com



