1. ಬಾನಲ್ಲೂ ನೀನೇ ‘ಬುವಿ’ಯಲ್ಲೂ ನೀನೇ...
ಬಯಲುದಾರಿ ಚಿತ್ರದ ಗೀತೆಯ ಸಾಹಿತ್ಯ ‘ಬಾನಲ್ಲೂ ನೀನೇ... ಭುವಿಯಲ್ಲು ನೀನೇ...’ ಅಂತ ಇದೆ. ಎಸ್.ಜಾನಕಿ ಹಾಡಿದ ಎರಡೂ ಆವೃತ್ತಿಗಳಲ್ಲಿ ‘ಭುವಿ’ ಎಂದೇ ಉಚ್ಚರಿಸಿದ್ದಾರೆ. ದಶಕಗಳೇ ಸಂದ ಮೇಲೂ ಜನಪ್ರಿಯ ಗೀತೆಯಾಗಿ ಉಳಿದಿರುವುದರಿಂದ ಈಗಿನ ಉದಯೋನ್ಮುಖ ಗಾಯಕಿ/ಗಾಯಕರು ಇದನ್ನು ಹಾಡುತ್ತಾರೆ. ಅವರೆಲ್ಲರೂ ‘ಭುವಿ’ ಎಂದೇ ಉಚ್ಚರಿಸುತ್ತಾರೆ. ಆದರೆ ಭುವಿ ಎಂಬ ಶಬ್ದವೇ ಇಲ್ಲ! ಅದು ಬುವಿ ಆಗಬೇಕು. ‘ಬುವಿ’ ಶಬ್ದವು ಸಂಸ್ಕೃತದ ‘ಭೂಮಿ’ ಶಬ್ದದ ತದ್ಭವ(ಕನ್ನಡ) ರೂಪ. ಅಂದಮೇಲೆ ಅದರಲ್ಲಿ ಮಹಾಪ್ರಾಣ ‘ಭು’ ಇರಲಿಕ್ಕೆ ಸಾಧ್ಯವೇ ಇಲ್ಲ. ಅಲ್ಪಪ್ರಾಣ ‘ಬು’ ಇರಬೇಕು. ಹಾಗಾಗಿ, ‘’ಬುವಿ’ ಸರಿ. ಪ್ರಸಿದ್ಧ ಲೇಖಕ-ಲೇಖಕಿಯರೂ, ಪತ್ರಕರ್ತರೂ, "ಬಾನಂಗಳದಲ್ಲಿ ಭುವಿಯ ಬಿಂಬ", "ಭುವಿಯ ಮೇಲೆ ಮನುಜನ ವಾಮನ ಹೆಜ್ಜೆ ", "ಚೆಲುವಾಯಿತು ಭುವಿಯು ಒಲವ ಬೆಳಕು" ಅಂತೆಲ್ಲ ಚಂದದ ಶೀರ್ಷಿಕೆಗಳಲ್ಲಿ ‘ಭುವಿ’ ಎಂದು ಬರೆಯುವುದು ಆಶ್ಚರ್ಯಕರವೇ. ಅಲ್ಲೆಲ್ಲ ‘ಬುವಿ’ ಎಂದು ಬರೆಯಬೇಕು.
====
2. ಒಂದನೇ, ಎರಡನೇ, ಐದನೇ, 10ನೇ, 55ನೇ.... ಇವೆಲ್ಲ ತಪ್ಪು ಬಳಕೆಗಳು. ಇವುಗಳನ್ನು ಅನುಕ್ರಮವಾಗಿ ಒಂದನೆಯ, ಎರಡನೆಯ, ಐದನೆಯ, 10ನೆಯ, 55ನೆಯ... ಎಂದು ಬರೆಯಬೇಕು. ಇಲ್ಲಿ ಇನ್ನೊಂದು ವಿಚಾರ: ಲೇಖನಗಳಲ್ಲಿ, ಪ್ರಬಂಧಗಳಲ್ಲಿ, ಒಟ್ಟಾರೆಯಾಗಿ ಶಿಷ್ಟ ಬರವಣಿಗೆಯಲ್ಲಿ ಒಂದರಿಂದ ಒಂಬತ್ತರವರೆಗಿನ ಅಂಕಿಗಳನ್ನು ಬರೆಯಬೇಕಿದ್ದರೆ ಅಕ್ಷರಗಳಲ್ಲಿ (ಒಂದು, ಎರಡು,... ಒಂಬತ್ತು) ಎಂದು ಬರೆಯುವುದು. 10 ಮತ್ತು ಅದಕ್ಕಿಂತ ಹೆಚ್ಚಿನ ಸಂಖ್ಯೆಗಳನ್ನು ಅಂಕಿಗಳಲ್ಲಿ (10,11,12, 15, 52...1947, 2018...) ಎಂದು ಬರೆಯುವುದು ಒಳ್ಳೆಯ ಕ್ರಮ. ಅಂತಾರಾಷ್ಟ್ರೀಯವಾಗಿ ಇಂಗ್ಲಿಷ್‍ನಲ್ಲಿ ಹೀಗೊಂದು ನೀತಿಸಂಹಿತೆ ಇದೆ. ಪ್ರಸಿದ್ಧ ಬರಹಗಾರರೆಲ್ಲ ಕಟ್ಟುನಿಟ್ಟಾಗಿ ಪರಿಪಾಲಿಸುತ್ತಾರೆ. ಕನ್ನಡದಲ್ಲಿಯೂ ಪಾಲಿಸಿದರೆ ಚೆನ್ನಾಗಿರುತ್ತದೆ.
====
3. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಕೆಲವು ಪದಗಳ ಸರಿ ರೂಪ :
ಅ) ಒಂಭತ್ತು, ಎಂಭತ್ತು, ತೊಂಭತ್ತು... ಇವೆಲ್ಲ ತಪ್ಪು. ಅನುಕ್ರಮವಾಗಿ ಒಂಬತ್ತು, ಎಂಬತ್ತು, ತೊಂಬತ್ತು... ಇವು ಸರಿಯಾದ ರೂಪಗಳು. ಅಂಕಿಸಂಖ್ಯೆಗಳ ಕನ್ನಡ ಹೆಸರುಗಳೆಂದ ಮೇಲೆ ಮಹಾಪ್ರಾಣ ಇರಬಾರದು.
ಆ) ಘರ್ಜನೆ ತಪ್ಪು. ಗರ್ಜನೆ ಸರಿ.
ಇ) ಕ್ರೋಢೀಕರಿಸು ತಪ್ಪು. ಕ್ರೋಡೀಕರಿಸು (ಒಟ್ಟುಗೂಡಿಸು, ಸಂಗ್ರಹಮಾಡು) ಸರಿ.
ಈ) ಮಗ್ಗುಲು ತಪ್ಪು. ಮಗ್ಗಲು (ಪಕ್ಕ, ಬದಿ, ಪಾಶ್ರ್ವ) ಸರಿ.
ಉ) ಮೆರಗು ತಪ್ಪು. ಮೆರುಗು ( = ಹೊಳಪು, ಕಾಂತಿ, ಶೋಭೆ, ಕಳೆ) ಸರಿ.
ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.
ಮುಂದುವರಿಯುವುದು................
FEEDBACK: samarasasudhi@gmail.com



