ಪೆರ್ಲ: ಎಣ್ಮಕಜೆ ಪಂಚಾಯಿತಿಯ ಹತ್ತನೇ ವಾರ್ಡು ಕಜಂಪಾಡಿಯ ಸೆಟ್ಟಿಬೈಲ್ ನಿವಾಸಿ, ಐತ್ತೆ ಅವರಿಗೆ ಹೊಸ ಮನೆಯ ಕನಸು ಇನ್ನೂ ನನಸಸಾಗಿಲ್ಲ. ಹದಿನೈದು ವರ್ಷಕ್ಕೂ ಹಿಂದೆ ನಿರ್ಮಿಸಿದ ಶಿಥಿಲ ಹೆಂಚುಹಾಸಿನ ಮನೆಯೂ ಕುಸಿದು ಬಿದ್ದಿರುವುದರಿಂದ ಇವರ ಕುಟಂಬ ಅತಂತ್ರ ಸ್ಥಿತಿಯಲ್ಲಿದೆ.
ಪರಿಶಿಷ್ಟ ಜಾತಿ ಸಮುದಾಯದ ಐತ್ತೆ ಅವರ ಕುಟುಂಬ ಇದೇ ಶಿಥಿಲ ಮನೆಯಲ್ಲಿ ವಾಸಿಸುತ್ತಿದ್ದು, ಏಕಾಏಕಿ ಮನೆ ಕುಸಿತಕ್ಕೀಡಾಗಿರುವುದರಿಂದ ಮನೆಯೊಳಗಿದ್ದವರು ಕೂದಲೆಳೆಯ ಅಂತರದಿಂದ ಪಾರಾಗಿದ್ದರು. ಅಲ್ಲಲ್ಲಿ ಹೆಂಚು ಒಡೆದಿದ್ದ ಹಿನ್ನೆಲೆಯಲ್ಲಿ ಟಾರ್ಪಾಲ್ ಹೊದಿಕೆಯೊಂದಿಗೆ ನೀರು ಒಳಗೆ ಬೀಳದಂತೆ ದುರಸ್ತಿಪಡಿಸಿಕೊಂಡಿದ್ದರೂ, ಮಹಡಿ ಶಿಥಿಲಗೊಂಡು ಕುಸಿದುಬಿದ್ದಿದೆ. ಐತ್ತೆ ಅವರ ಪತಿ ಬಾಬು ಕೆಲವು ವರ್ಷಗಳ ಹಿಂದೆ ಇವರನ್ನು ತೊರೆದುಬೇರೊಂದು ವಿವಾಹವಾಗಿದ್ದು,ನಂತರ ಏಕಪುತ್ರಿ, ಇವರ ಜನತೆ ವಾಸಿಸತೊಡಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ಹೊಸ ಮನೆ ನಿರ್ಮಿಸಿಕೊಡುವಂತೆ ಮಾಡಿಕೊಂಡ ಮನವಿಗೆ ಸರ್ಕಾರದ ಕಡೆಯಿಂದ ಯಾವುದೇ ಸ್ಪಂದನೆ ಲಭಿಸಿಲ್ಲ. ಬೇಸಿಗೆಯಲ್ಲಿ ಟಾರ್ಪಾಲ್ ಅಥವಾ ಟಿನ್‍ಶೀಟ್ ಅಳವಡಿಸಿ ತಾತ್ಕಾಲಿಕ ಸೂರು ನಿರ್ಮಿಸಬಹುದಾಗಿದ್ದರೂ, ಬಿರುಸಿನ ಮಳೆಗೆ ವೃದ್ಧ ತಾಯಿ ಹಾಗೂ ಎಳೆಯ ಮಗುವಿನೊಂದಿಗೆ ಹೇಗೆ ಕಾಲಕಳೆಯಬೇಕು ಎಂಬುದಾಗಿ ಐತ್ತೆ ಅವರ ಪುತ್ರಿ ಸುಮಲತಾ ಅಳಲು ವ್ಯಕ್ತಪಡಿಸುತ್ತಾರೆ. ತಾತ್ಕಾಲಿಕ ಶೆಡ್ಡಿನಲ್ಲಿ ಕಾಲ ಕಳೆಯುವ ಕುಟುಂಬ, ರಾತ್ರಿವೇಳೆ ತಂಗಲು ಸಂಬಂಧಿಕರ ಮನೆಯನ್ನು ಆಶ್ರಯಿಸುತ್ತಿದೆ.
ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗ ಅಭಿವೃದ್ಧಿಗಾಗಿ ಸರ್ಕಾರದ ಹತ್ತು ಹಲವು ಯೋಜನೆಗಳು ಜಾರಿಯಲ್ಲಿದ್ದರೂ, ಬಡ ಕುಟುಂಬವೊಂದಕ್ಕೆ ಸೂರು ಲಭ್ಯವಾಗದಿರುವುದು ಸರ್ಕಾರದ ವ್ಯವಸ್ಥೆಯನ್ನು ಅಣಕಿಸುವಂತಿದೆ. ಈಗಾಗಲೇ ಅಸ್ತಿತ್ವಕ್ಕೆ ಬಂದಿರುವ ತ್ರಿಸ್ತರ ಪಂಚಾಯಿತಿ ಜನಪ್ರತಿನಿಧಿಗಳು ಐತ್ತೆ ಅವರ ಕುಟುಂಬಕ್ಕೆ ಸೂಕ್ತ ಸೂರು ಕಲ್ಪಿಸಿಕೊಡುವಲ್ಲಿ ಮುಂದಾಗಬೇಕಾಗಿದೆ.



