ವಿಶ್ವಸಂಸ್ಥೆ: ಅಲ್ ಕೈದಾ, ಐಎಸ್‌ಐಎಸ್ ಮತ್ತು ಅವುಗಳ ನೆರಳಿನಲ್ಲಿ ಭಯೋತ್ಪಾದಕ ಕೃತ್ಯ ಎಸಗುವ ಸಂಘಟನೆಗಳ ವಿರುದ್ಧ ಸಾಮೂಹಿಕ ಹೋರಾಟಕ್ಕೆ ಭಾರತವು ಅಂತರರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದೆ.
ಅಂತರರಾಷ್ಟ್ರೀಯ ಶಾಂತಿ, ಭದ್ರತೆಗೆ ಭಯೋತ್ಪಾದನೆಯು ಅಸ್ತಿತ್ವದ ಬೆದರಿಕೆಯಾಗಿದೆ ಎಂದು ಭಾರತ ಹೇಳಿದೆ.
'ಭಯೋತ್ಪಾದನೆಯು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಅಸ್ತಿತ್ವದ ಬೆದರಿಕೆಯಾಗಿದೆ. ಅದಕ್ಕೆ ಯಾವುದೇ ಗಡಿಗಳು, ರಾಷ್ಟ್ರೀಯತೆ ಅಥವಾ ಜನಾಂಗ ಇಲ್ಲ. ಅಂತರರಾಷ್ಟ್ರೀಯ ಸಮುದಾಯವು ಸಾಮೂಹಿಕವಾಗಿ ಹೋರಾಡಬೇಕಾದ ಸವಾಲಾಗಿದೆ'ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಮಿಷನ್‌ನ ಮೊದಲ ಕಾರ್ಯದರ್ಶಿ ರಘು ಪುರಿ ಬುಧವಾರ ಹೇಳಿದ್ದಾರೆ.
ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಕಚೇರಿಯ(ಯುಎನ್‌ಒಸಿಟಿ) ಸದಸ್ಯ ರಾಷ್ಟ್ರಗಳಿಗೆ ನೀಡಿದ ವಾರ್ಷಿಕ ರಾಯಭಾರಿ ಮಟ್ಟದ ಹೇಳಿಕೆಯಲ್ಲಿ ಪುರಿ, 2025ರ ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತಯಬಾ ಬೆಂಬಲಿತ ಭಯೋತ್ಪಾದಕ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ ನಡೆಸಿದ ದಾಳಿಯನ್ನು ನೆನಪಿಸಿಕೊಂಡರು. ಈ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಜೀವ ಕಳೆದುಕೊಂಡಿದ್ದರು.
ನಾವು ಐಸ್‌ಐಎಸ್, ಅಲ್‌ಕೈದಾ ಮತ್ತು ಅವುಗಳ ನೆರಳಿನಲ್ಲಿ ಕೆಲಸ ಮಾಡುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದ್ದಾರೆ.
ಕಳೆದ ಮೂರು ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಗೆ ಬಲಿಯಾಗಿರುವ ದೇಶವಾಗಿ, ಭಯೋತ್ಪಾದನೆ ನಿಗ್ರಹಕ್ಕೆ ಸಾಮಾಜಿಕ, ಆರ್ಥಿಕ ಮತ್ತು ಮಾನವ ವೆಚ್ಚದ ಬಗ್ಗೆ ಭಾರತಕ್ಕೆ ಚೆನ್ನಾಗಿ ತಿಳಿದಿದೆ ಎಂದಿದ್ದಾರೆ
ಬಹುಪಕ್ಷೀಯ ಸಹಕಾರದ ಸಾಧನವಾಗಿ ಜಾಗತಿಕ ಭಯೋತ್ಪಾದನಾ ನಿಗ್ರಹ ಕಾರ್ಯತಂತ್ರದ(ಜಿಸಿಟಿಎಸ್) ಪ್ರಾಮುಖ್ಯತೆಯನ್ನು ಒತ್ತಿ ಹೇಳುವಲ್ಲಿ ಭಾರತ ತನ್ನ ಧ್ವನಿಯನ್ನು ಸೇರಿಸಿದೆ.
ಭಾರತವು ದೃಢವಾಗಿ ಉಳಿಯುತ್ತದೆ ಮತ್ತು ಜಿಸಿಟಿಎಸ್‌ನ 9ನೇ ಪರಿಶೀಲನೆಗಾಗಿ ಸಮಾಲೋಚನೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಪುರಿ ಹೇಳಿದ್ದಾರೆ.
2022ರಲ್ಲಿ ಭಯೋತ್ಪಾದನಾ ನಿಗ್ರಹ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ಭಾರತವು, ಈ ತತ್ವಗಳನ್ನು ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ವೇದಿಕೆಗೆ ತರಲು ಮತ್ತು ವಿಶ್ವಸಂಸ್ಥೆಯಲ್ಲಿ ಭಯೋತ್ಪಾದನೆಯ ಕುರಿತ ಚರ್ಚೆ ನಡೆಸಲು ಶ್ರಮಿಸಿದೆ ಎಂದು ಪುರಿ ತಿಳಿಸಿದ್ದಾರೆ.

