ಮಂಜೇಶ್ವರ/ಕುಂಬಳೆ: ಕಡಲ ತೀರದ ಗಡಿಯನ್ನು ಉಲ್ಲಂಘಿಸಿರುವುದಾಗಿ ಆರೋಪಿಸಿ ಉಪ್ಪಳ, ಕುಂಬಳೆ, ಕಾಸರಗೋಡು ನಿವಾಸಿಗಳ ಸಹಿತ 23 ಭಾರತೀಯರನ್ನೊಳಗೊಂಡ ಹಡಗೊಂದನ್ನು ಇಂಡೋನೇಷ್ಯಾ ನೌಕಾ ಸೇನೆ ವಶಕ್ಕೆ ತೆಗೆದು ಅದರಲ್ಲಿದ್ದ ನೌಕರರನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದು ಆತಂಕಕ್ಕೆ ಕಾರಣವಾಗಿದೆ.
ಕಳೆದ ಐದೂವರೆ ತಿಂಗಳಿನಿಂದ ಬಂಧಿಯಾಗಿರುವ ಭಾರತೀಯರ ದುರಂತ ಕತೆ ಇದೀಗ ತಡವಾಗಿ ಬೆಳಕಿಗೆ ಬಂದಿದ್ದು, ಪರಿಹಾರೋಪಾಯಗಳು ಕಾಣದೆ ನೌಕರರು ದಿಕ್ಕೆಟ್ಟಿದ್ದಾರೆ.
ಈ ಕಳೆದ ಫೆಬ್ರವರಿ 8 ಕ್ಕೆ ಸಿಂಗಾಪುರಕ್ಕೆ ಸಮೀಪದಲ್ಲಿ ಇಂಡೋನೇಷ್ಯಾ ನೌಕಾ ಸೇನೆ ಹಡಗನ್ನು ವಶಕ್ಕೆ ತೆಗೆದುಕೊಂಡಿತ್ತೆಂದು ತಿಳಿಯಲಾಗಿದೆ.
ಎರಡು ವರ್ಷಕ್ಕೊಮ್ಮೆ ನಡೆಸುವ ಹಡಗಿನ ದರಸ್ಥಿ ಕಾರ್ಯ ಮುಗಿದ ಬಳಿಕ ಸಿಂಗಾಪುರ ಬಂದರಿನಲ್ಲಿ ಸರಕುಗಳನ್ನು ಹೇರುತ್ತಿರುವ ಮಧ್ಯೆ ಭಾರತೀಯರಿರುವ ಎಂ ಟಿ ಎಸ್ ಜಿ ವೇಗಸ್ ಆಂಗೋ ಈಸ್ಟನ್ ಶಿಪ್ಪಿಂಗ್ ಕಂಪೆನಿಯ ಹಡಗನ್ನು ಇಂಡೋನೇಷ್ಯಾ ನೌಕಾ ಸೇನೆ ವಶಕ್ಕೆ ತೆಗೆದಿರುವುದಾಗಿ ಹೇಳಲಾಗಿದೆ.
ಉಪ್ಪಳ ನಯಾಬಜಾರ್ ಪಾರಕಟ್ಟೆ ನಿವಾಸಿ ಮೂಸ ಕುಂಞÂ, ಮೊಗ್ರಾಲ್ ಕೊಪ್ಪಳದ ಕಲಂದರ್, ಕಾಸರಗೋಡು ನಿವಾಸಿ ಅನೂಪ್, ಪಾಲಕ್ಕಾಡ್ ಜಿಲ್ಲೆಯ ಪೆರಿಂಜುರ ನಿವಾಸಿ ವಿಪಿನ್ ರಾಜ್ ಸೇರಿದಂತೆ ಗೋವಾ, ಉತ್ತರ ಪ್ರದೇಶ, ಮದ್ಯ ಪ್ರದೇಶ, ದೆಹಲಿ ರಾಜ್ಯಗಳಲ್ಲಿರುವ ನಿವಾಸಿಗಳು ಇದೀಗ ಬಂಧಿಯಾಗಿ ಸಂಕಷ್ಟವನ್ನು ಅನುಭವಿಸುತಿದ್ದಾರೆ.
ಎಮಿಗ್ರೇಷನ್ ಹಾಗೂ ಸುರಕ್ಷಾ ಕಾನೂನನ್ನು ಉಲ್ಲಂಘಿಸಿರುವುದಾಗಿ ಆರೋಪಿ ಇಂಡೋನೆಷ್ಯಾ ನೌಕಾ ಸೇನಾ ಅಧಿಕಾರಿಗಳು ಹಡಗನ್ನು ಬಿಟ್ಟು ಕೊಡಲು ತಯಾರಾಗಿರಲಿಲ್ಲ. ಇದರ ಮುಂದುವರಿದ ಭಾಗವಾಗಿ ಇದೀಗ ಕಳೆದ ಐದೂವರೆ ತಿಂಗಳಿನಿಂದ ಹಡಗು ಮಾಲಕರು ವಿಚಾರಣೆಯನ್ನು ಎದುರಿಸುತಿದ್ದಾರೆ.
ಎರಡು ತಿಂಗಳ ಹಿಂದೆ ಭಾರತೀಯ ರಾಯಭಾರಿ ಅಧಿಕಾರಿಗಳು ಹಾಗೂ ಭಾರತೀಯ ನೌಕಾ ಸೇನೆಯ ಅಧಿಕಾರಿಗಳು ಇಂಡೋನೇಷ್ಯಾಕ್ಕೆ ಭೇಟಿ ನೀಡಿ ಅಲ್ಲಿಯ ನೌಕಾ ಸೇನೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಹಡಗನ್ನು ಬಿಟ್ಟು ಕೊಡುವ ಬಗ್ಗೆ ಸಂಧಾನದ ಮಾತುಗಳು ನಡೆದಿದ್ದರೂ ಬಳಿಕ ಅದನ್ನು ಇಂಡೋನೇಷ್ಯಾ ನೌಕಾ ಅಧಿಕಾರಿಗಳು ಕಡೆಗಣಿಸಿರುವುದರಿಂದ ಮತ್ತೆ ನೌಕರರು ಅಲ್ಲಿ ಬಂಧಿಯಾಗಿಯೇ ಕಳೆಯುವಂತಹ ದುರವಸ್ಥೆ ಬಂದೊದಗಿರುವುದಾಗಿ ಸಂತ್ರಸ್ತರು ಹೇಳುತಿದ್ದಾರೆ.
ಪ್ರತಿಫಲದ ನಿರೀಕ್ಷೆಯನ್ನಿಟ್ಟುಕೊಂಡು ಇಂಡೋನೇಷ್ಯಾ ನೌಕಾ ಸೇನಾ ಅಧಿಕಾರಿಗಳು ನಮ್ಮನ್ನು ಬಿಡುಗಡೆಗೊಳಿಸಲು ವಿಳಂಬ ನೀತಿಯನ್ನು ಅನುಸರಿಸುತ್ತಿರುವ ಬಗ್ಗೆ ನೌಕರರು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಭಾರತ ಸರ್ಕಾರ ಹಾಗೂ ಕೇರಳ ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಬಂಧಿಯಾಗಿ ಕಳೆಯುತ್ತಿರುವ ನಮ್ಮನ್ನು ಬಿಡುಗೊಳಿಸಬೇಕೆಂಬುದಾಗಿ ಭಾರತೀಯ ನೌಕರರು ವಿನಂತಿಸಿಕೊಂಡಿದ್ದಾರೆ.


