ಪುಸ್ತಕ: ಅಗ್ನಿದಿವ್ಯದ ಹುಡುಗಿ
ಲೇಖಕರು ಚಂದ್ರಶೇಖರ ಮಂಡೆಕೋಲು
ಚಂದ್ರಶೇಖರ್ ಅವರು ದ.ಕ. ಜಿಲ್ಲೆ, ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದವರು. ಮಂಗಳೂರು ವಿ.ವಿ.ಯಿಂದ ಸ್ನಾತಕೋತ್ತರ ಪದವಿ ಪಡೆದು, ಶಿವಮೊಗ್ಗ ಕುವೆಂಪು ವಿ.ವಿ.ಯಿಂದ ಕೌನ್ಸಲಿಂಗ್ ಮತ್ತು ಮನೋಚಿಕಿತ್ಸೆ ವಿಷಯದಲ್ಲಿ ಎಂ.ಎಸ್. ಪದವಿ ಪಡೆದಿದ್ದಾರೆ. ಸಂಸ್ಕೃತಿ ಅಧ್ಯಯನ, ಸಾಹಿತ್ಯ, ಪತ್ರಿಕೋದ್ಯಮ ಇವರ ಆಸಕ್ತಿಯ ಕ್ಷೇತ್ರ. ಇವರು ನಿರೂಪಿಸಿದ ಹಿರಿಯ ಯಕ್ಷಗಾನ ಕಲಾವಿದ ಪುತ್ತೂರು ಶೀನಪ್ಪ ಭಂಡಾರಿಯವರ ಜೀವನ ಕಥನವನ್ನು ಮಂಗಳೂರು ವಿ.ವಿ. ಪ್ರಕಟಿಸಿದೆ. ವಿಜಯವಾಣಿಯಲ್ಲಿ ಪ್ರಕಟವಾಗುತ್ತಿದ್ದ 'ಮುಗಿಲಿಗೆ ಮೆಟ್ಟಿಲು' ಅಂಕಣಗಳ ಮೂಲಕ ಪರಿಚಿತರು. ಸದ್ಯ ಬೆಂಗಳೂರಲ್ಲಿ ಈಟಿವಿ ನ್ಯೂಸ್ ನಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
"ಕನ್ನಡ ಸಾಹಿತ್ಯ ಜೀವನ ಚರಿತ್ರೆ ಗ್ರಂಥಗಳ ಇತಿಹಾಸದಲ್ಲಿ ಮತ್ತು ಹೆಣ್ಣಿನ ಸಾಹಸಗಾಥೆ ಚರಿತ್ರೆಯಲ್ಲಿ 'ಆನಂದಿಬಾಯಿ ಜೋಶಿ' ಒಂದು ಅಪೂರ್ವ ದಾಖಲೆಯಾಗಿ ಉಳಿಯುತ್ತದೆ". ಎನ್ನುವ ಡಾ. ಬಿ.ಎ. ವಿವೇಕ ರೈ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.
ಚಂದ್ರಶೇಖರ ಮಂಡೆಕೋಲು ಅವರು ಈ ಕೃತಿ ರಚಿಸುವಲ್ಲಿ ಹಲವು ವ್ಯಕ್ತಿಗಳು ಮತ್ತು ಸಂಸ್ಥೆಗಳ ನೆರವನ್ನು ಪಡೆದುಕೊಂಡಿರುವುದನ್ನು ಕಾಣಬಹುದು. ಆನಂದಿಬಾಯಿ ಕುರಿತು ಮರಾಠಿಯಲ್ಲಿ ಸಂಶೋಧನೆ ನಡೆಸಿದ ಸಂಶೋಧಕಿಯರಾದ ಅಂಜಲಿ ಕೀರ್ತನೆ ತಮ್ಮಲ್ಲಿದ್ದ ದಾಖಲೆಗಳನ್ನು ಮತ್ತು ಭಾವಚಿತ್ರಗಳನ್ನೂ, ಮೀರಾ ಕಾಸಂಬಿಯವರು ತಮ್ಮಲ್ಲಿದ್ದ ಲೇಖನ ಹಾಗೂ ಪುಸ್ತಕಗಳನ್ನೂ ನೀಡಿ ಸಹಕರಿಸಿರುವುದನ್ನು ಸ್ಮರಿಸಿದ್ದಾರೆ. ಹಳೆಯ ಪತ್ರಗಳು, ದಾಖಲೆಗಳು, ಸಂದರ್ಶನಗಳು, ಅಪೂರ್ವ ಫೊಟೋಗಳು ಹೀಗೆ ಬಹುಮುಖೀ ವಿಧಾನಗಳಿಂದ ಚಂದ್ರಶೇಖರ ಅವರು ಸಂಗ್ರಹಿಸಿದ ಮಾಹಿತಿ ಶರೀರವೇ ಒಂದು ಅದ್ಭುತ ಕಥಾನಕದಂತೆ ಇದೆ" ಎನ್ನುತ್ತಾರೆ ಡಾ. ಬಿ.ಎ. ವಿವೇಕ ರೈ.
ಲೇಖಕರು ಕೃತಿ ರಚನೆ ಮಾಡುವ ಮೊದಲು ಎಷ್ಟೊಂದು ಪೂರ್ವ ತಯಾರಿಗಳನ್ನು ನಡೆಸಿದ್ದಾರೆ ಎಂಬುದನ್ನು ಅವರು ಉಲ್ಲೇಖಿಸಿದ ಮಾಹಿತಿಗಳಿಂದ ತಿಳಿಯಬಹುದು.
ಪೇಶ್ವೆಮನೆತನದಲ್ಲಿ ಜನಿಸಿದ ಹುಡುಗಿ ಯಮುನೆ ಒಂಭತ್ತು ವರ್ಷದ ಬಾಲಕಿಯಾಗಿದ್ದಾಗ ಗೋಪಾಲ ಜೋಶಿಯನ್ನು ಮದುವೆಯಾಗಿ ಆನಂದಿಬಾಯಿ ಆಗಿ ಮುಂದೆ ಕಲಿಕೆ, ಹಿಂಸೆ ನಿಂದೆ ಎಲ್ಲವನ್ನೂ ಅನುಭವಿಸಿ, ಕಲಕತ್ತಾಕೆ ಬಂದು ಅಲ್ಲಿಂದ ಹಡಗಿನಲ್ಲಿ ಒಬ್ಬಂಟಿಯಾಗಿ ಇಂಗ್ಲೇಂಡಿಗೆ ಬಂದು ಮುಂದಕ್ಕೆ ಅಮೇರಿಕಾಕ್ಕೆ ಹೋಗಿ ಅಲ್ಲಿ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದು, ಭಾರತಕ್ಕೆ ಹಿಂದಿರುಗಿ, ಕ್ಷಯರೋಗಕ್ಕೆ ತುತ್ತಾಗಿ ತನ್ನ ಇಪ್ಪತ್ತೊಂದನೇ ವಯಸ್ಸಿನಲ್ಲೇ ಸಾವನ್ನಪ್ಪಿದ ದುರಂತ ಕಥೆಯನ್ನು ಚಂದ್ರಶೇಖರ ಮಂಡೆಕೋಲು ಅವರು ಬಹಳ ಪರಿಶ್ರಮದಿಂದ ಅಪೂರ್ವ ಮಾಹಿತಿಗಳನ್ನು ಕಲೆಹಾಕಿ ಅನಾವರಣ ಮಾಡಿದ್ದಾರೆ.
"ಚರಿತ್ರಕಾರರು ಮೊದಲ ಮಹಾಯುದ್ಧ, ಎರಡನೇ ಮಹಾಯುದ್ಧ ಎಂದು ಸಾವು ನೋವುಗಳ ಲೆಕ್ಕಗಳನ್ನು ಬರೆದಿಟ್ಟಿದ್ದಾರೆ. ಆದರೆ, ಸಹಸ್ರಮಾನಗಳಿಂದ ನಿತ್ಯ ನಡೆಯುತ್ತಲೇ ಬಂದ ಸಾವಿರಾರು ಮಹಾಯುದ್ಧಗಳ ಕಥೆ ಚರಿತ್ರೆಯ ಯಾವ ಸಂಪುಟದಲ್ಲೂ ಸೇರಲಿಲ್ಲ" ಎನ್ನುತ್ತಾ ಎಲ್ಲ ದೇಶಗಳಲ್ಲೂ ಹೆಣ್ಣುಗಳನ್ನೂ ಶಿಕ್ಷಣದಿಂದ ದೂರವಿಟ್ಟರು. ಅದರಲ್ಲೂ ಶುಶ್ರೂಷೆ ಎನ್ನುವುದು ಹೆಣ್ತನದ ಗುಣ ಎಂಬ ಅರಿವಿದ್ದರೂ ವೈದ್ಯ ವಿ????ನಕ್ಕೆ ಮಹಿಳೆಯರ ಪ್ರವೇಶವನ್ನು ಕಟುವಾಗಿ ವಿರೋಧಿಸಿದರು. ಅಂಥ ಕಾಲದಲ್ಲೂ ವೈದ್ಯಕೀಯ ರಂಗಕ್ಕೆ ಕಾಲಿರಿಸಿದ ಜಗತ್ತಿನ ಮೊದಲ ಮಹಿಳೆಯರ ಬಗೆಗೆ, ಅವರಿಗೆ ವೈದ್ಯರಂಗಕ್ಕೆ ಬರಲು ಪ್ರೇಯಣೆಯಾದ ಅಂಶಗಳನ್ನು , ಅವರೆದುರಿಸಿದ ಸವಾಲುಗಳನ್ನು . ವೈದ್ಯಕೀಯ ಶಿಕ್ಷಣ ಪಡೆಯಲು ಗಂಡು ವೇಷ ಧರಿಸಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ವಿವರಿಸುತ್ತಾರೆ. 1874 ರಲ್ಲಿ ಆರಂಭವಾದ ಮೊದಲ ಮದ್ರಾಸ್ ಮೆಡಿಕಲ್ ಕಾಲೇಜಲ್ಲಿ ಕ್ರೈಸ್ತ ಹೆಣ್ಣುಗಳಿಗೆ ಮಾತ್ರ ಪ್ರವೇಶವಿತ್ತು. ಮಹಿಳೆಯರಿಗೆ ಇಂಡಿಯಾದಲ್ಲಿ ವೈದ್ಯಕೀಯ ಕಾಲೇಜಿನ ಬಾಗಿಲು ತೆರೆಸಿ, ಭಾರತೀಯ ಮಹಿಳೆಯರ ನೆರವಿಗೆಂದೇ ವೈದ್ಯಳಾಗಿ ನಿಂತವಳು ಮೇರಿಶೆರ್ಲಿ. ವೈದ್ಯರಂಗದ ಆಧುನಿಕ ಸವಲತ್ತುಗಳೊಂದೂ ಭಾರತೀಯ ಮಹಿಳೆಯರಿಗೆ ಸಿಗುತ್ತಿರಲಿಲ್ಲ. ಮಹಿಳಾ ವೈದ್ಯರಿಲ್ಲದೆ ಭಾರತೀಯ ಮಹಿಳೆಯರು ಅನುಭವಿಸಿದ ಸಂಕಷ್ಟಗಳನ್ನು ಮನಃಸ್ಪರ್ಶಿಯಾಗಿ ವಿವರಿಸುತ್ತಾರೆ. ಬ್ರಿಟನ್ ನ ರಾಣಿ ವಿಕ್ಟೋರಿಯ ಭಾರತೀಯ ಮಹಿಳೆಯರ ಸ್ಥಿತಿಗತಿಗಳನ್ನು ಅರಿತು ತನ್ನಿಂದಾದ ಸಹಾಯ ಮಾಡಿದರೂ ಹೆಣ್ಣಿನ ನೋವು ಶಮನವಾಗಲೇ ಇಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಕಥಾ ನಾಯಕಿ ಆನಂದಿಬಾಯಿ ಹುಟ್ಟುತ್ತಾಳೆ.
ಯಮನೆ ಎಂಬುದು ಅವಳ ಬಾಲ್ಯದ ಹೆಸರು. ತಂದೆ ಗಣಪತಿ ರಾವ್ ಅಮೃತೇಶ್ವರ್ ಜೋಶಿ ಜಮೀನ್ದಾರರು. ಅವರ ಪೂರ್ವಜರು ಪೇಶ್ವೆಗಳಾಗಿದ್ದರು. ಯಮುನೆ ಚುರುಕು ಬದ್ಧಿಯನ್ನೂ, ತೀಕ್ಷ್ಣ ನಿರೀಕ್ಷಣ ಶಕ್ತಿಯನ್ನೂ ಹೊಂದಿದ್ದು ತುಂಬ ಚೂಟಿಯಾಗಿದ್ದಳು. ಅಪ್ಪನ ಇಷ್ಟದಂತೆ ಓದು ಬರಹ ಕಲಿಯುತ್ತಾಳೆ. ಆಕೆಯ ಪಾಲಿಗೆ ಅಪ್ಪ ಮಮತೆಯ ಕಡಲಾದರೆ, ಅಮ್ಮ ಮಾತ್ರ ಹಿಂಸಿಸುತ್ತಿದ್ದಳು. "ಅಡುಗೆ ಕೋಣೆಯ ಕತ್ತಲೊಳಗೆ ಒಲೆ ಉರಿಸಬೇಕಾದವಳು ಚಾವಡಿಯಲ್ಲಿ ಹಿರಿಯರೆದುರು ಅಕ್ಷರ ಓದುವುದಾ" ಎಂದು ಬಂದ ಅತಿಥಿಗಳು ಹುಬ್ಬೇರಿಸುತ್ತಿದ್ದರು. ತನ್ನ 9ನೇ ವಯಸಿನಲ್ಲೇ ಯಮುನೆ ಈಸ್ಟ್ ಇಂಡೀಯ ಕಂಪೆನಿಯ ಅಂಚೆ ವಿಭಾಗದಲ್ಲಿ ಗುಮಾಸ್ತನಾಗಿದ್ದ 26 ವರ್ಷದ ಗೋಪಾಲ ವಿನಾಯಕ ಜೋಶಿಯ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಾಳೆ. ಸುತ್ತಲಿನವರ ಕಣ್ಣಲ್ಲಿ ಕ್ರಾಂತಿಕಾರಿಯಾಗಿದ್ದು, ಸ್ತ್ರೀ ಜೀವನ, ಸ್ತ್ರೀ ಶಿಕ್ಷಣ, ವಿಧವಾ ವಿವಾಹದ ಬಗ್ಗೆ ಚಿಂತಿಸುವ ಗೋಪಾಲ ಮನೆಯವರ ವಿರೋಧದ ನಡುವೆಯೂ ಪತ್ನಿ ಆನಂದಿಗೆ ಮರಾಠಿ, ಸಂಸ್ಕೃತವನ್ನು ಕಲಿಸುತ್ತಾನೆ. ಶಲ್ಯದಲ್ಲಿ ಪುಸ್ತಕಗಳನ್ನಡಗಿಸಿಟ್ಟು ತಂದು ಪತ್ನಿಗೆ ಓದಲು ನೀಡುತ್ತಾನೆ. ರಾತ್ರಿ ಕೋಣೆಯ ಬಾಗಿಲು ಹಾಕಿ ಕಂದೀಲು ಬೆಳಕಲ್ಲಿ ಆನಂದಿಗೆ ಕಲಿಸುತ್ತಾನೆ. ಆನಂದಿಯ ತಂದೆಯ ಮರಣಾ ನಂತರ ಗೋಪಾಲ ಆನಂದಿಯೊಂದಿಗೆ ತಮ್ಮ ಕನಸುಗಳಿಗೂ ರಹದಾರಿ ಮಾಡಿಕೊಟ್ಟೀತೆಂಬ ದೂರದ ಆಸೆಯಿಂದ ಕಡಲ ತೀರದ ಊರು ಅಲಿಬಾಗ್ ಗೆ ಬರುತ್ತಾರೆ. ಅದು ಆನಂದಿ ಹೊರ ಜಗತ್ತಿಗಿಡುವ ಮೊದಲ ಹೆಜ್ಜೆ... ಅಕ್ಷರ ಲೋಕದತ್ತ ಇಟ್ಟ ಮೊದಲ ಹೆಜ್ಜೆ ಬದುಕು ಬದಲಿಸುವಂಥ, ಚರಿತ್ರೆ ನಿರ್ಮಿಸುವಂಥ ಮೊದಲ ಹೆಜ್ಜೆ...ಆಕೆ ತನ್ನ 10 ನೇ. ವಯಸ್ಸಲ್ಲೇ ಗಂಡು ಮಗುವಿಗೆ ಜನ್ಣ ನೀಡಿದರೂ ಅದನ್ನು ಉಳಿಸಿಕೊಳ್ಳಲಾಗುವುದಿಲ್ಲ. ಈ ಹೊತ್ತಲ್ಲಿ ಆಂಗ್ಲ ಶಿಕ್ಷಣದ ಮೂಲಕ ಕ್ರೈಸ್ತ ????ನವನ್ನು ತುಂಬಿ ಭಾರತೀಯರನ್ನು ತಮ್ಮ ಅಧೀರರನ್ನಾಗಿಸುವುದು ಕ್ರೈಸ್ತ ಮಿಶನರಿಗಳ ಮುಖ್ಯ ಧ್ಯೇಯವಾಗಿತ್ತು. ಹೀಗೆ ಅದೆಷ್ಟೋ ಆಮಿಷಗಳನ್ನು ತೋರಿಸಿ ಭಾರತೀಯರನ್ನು ಮತಾಂತರಗೊಳಿಸಿದ್ದಾರೆ. ಇಡೀ ದೇಶದ ಹೆಣ್ಣು ಮಕ್ಕಳು ಅಕ್ಷರದಿಂದ ವಂಚಿತರಾಗಿರುವಾಗ ಆನಂದಿ ಪತ್ರಿಕೆಗಳನ್ನು, ಪುಸ್ತಕಗಳನ್ನು ಓದುತ್ತಿದ್ದಳು. ಗಂಡ ಗೋಪಾಲನು ಆಕೆಯ ಕಲಿಕೆಗೆ ಅಗತ್ಯವಾದ ಪುಸ್ತಕಗಳನ್ನು ತರಿಸಿಕೊಡುತ್ತಿದ್ದ. ಕೊಲ್ಲಾಪುರದ ಸರಕಾರಿ ಶಾಲೆಗೆ ಸೇರಿಸಿ ಕಲಿಸುವ ಪ್ರಯತ್ನವನ್ನೂ ಮಾಡುತ್ತಾನೆ. ಹೀಗೆ ಒಬ್ಬ ಬ್ರಾಹ್ಮಣ ಹುಡುಗಿ ಶಾಲೆಯ ಮೆಟ್ಟಿಲೇರಿದಾಗ ಊರಿನವರೆಲ್ಲರೂ ವಿರೋಧಿಸುತ್ತಾರೆ. ಚುಚ್ಚು ಮಾತುಗಳಿಂದ ನೋಯಿಸುತ್ತಾರೆ. ಸಂಪ್ರದಾಯಗಳ ಸಂಕೋಲೆಯನ್ನು ಬಿಡಿಸಿಕೊಂಡು ಆಕೆ ಗಂಡನೊಂದಿಗೆ ಹೊರಗಿಳಿಯುತ್ತಾಳೆ. ಕಾಲಿಗೆ ಪಾದರಕ್ಷೆ ತೊಡುತ್ತಾಳೆ. ಕಷ್ಟ ನೋವು ಅವಮಾನಗಳನ್ನು ಅನುಭವಿಸುವ ಆನಂದಿ ಅರ್ಧದಲ್ಲೇ ಶಾಲೆ ಬಿಡಬೇಕಾಗುತ್ತದೆ. ಆದರೂ ಒಂದಲ್ಲ ಒಂದು ರೀತಿಯಲ್ಲಿ ಆಕೆಯ ಕಲಿಕೆ ಮುಂದುವರಿಯುತ್ತದೆ. ಯಾರಾದರೊಬ್ಬರು ಅವರ ನೆರವಿಗೆ ಬರುತ್ತಿದ್ದರು.
ಫಾಧರ್ ಗುಹಿನ್ ಅವರಿಂದ ಮೊದಲ ಬಾರಿಗೆ ಅಮೇರಿಕಾ ದೇಶದ ಬಗ್ಗೆ, ಅಲ್ಲಿ ಹೆಣ್ಣು ಮಕ್ಕಳಿಗೆಂದೇ ತೆರೆದ ನೂತನ ವೈದ್ಯಕೀಯ ಕಾಲೇಜಿನ ಬಗ್ಗೆ ತಿಳಿದುಕೊಂಡಾಗ, ಆಕೆಯ ಪುಟ್ಟ ಮನದಲ್ಲಿ ಅಮೇರಿಕಾಕ್ಕೆ ತೆರಳುವ ದೊಡ್ಡ ಕನಸೊಂದು ಚಿಗುರೊಡೆಯುತ್ತದೆ. ಗುಹಿನ್ ಅವರ ಸಹಾಯದಿಂದ ಗೋಪಾಲ ತಮ್ಮ ಮನದಿಂಗಿತವನ್ನು ಪತ್ರದ ಮೂಲಕ ನ್ಯೂಯಾರ್ಕ್ ನ ವೈಲ್ಡರ್ ಎಂಬ ಪಾದ್ರಿಗೆ ತಿಳಿಸುತ್ತಾನೆ. ಆದರೆ, ಅವರು ಆನಂದಿಯ ಮೆಡಿಕಲ್ ವ್ಯಾಸಂಗಕ್ಕೆ ಉತ್ತೇಜನ ನೀಡುವ ಮೊದಲು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಲು ಕೇಳಿಕೊಳ್ಳುತ್ತಾರೆ. ಗೋಪಾಲನ ಕೆಲಸದ ನಿಮಿತ್ತ ಮುಬೈಗೆ ಬಂದಾಗ ಅಲ್ಲಿನ ಮಿಶನರಿ ಶಾಲೆಗೆ ಆನಂದಿ ಸೇರಿದಾಗಲೂ ಆಕೆಗೆ ಕೆಟ್ಟ ಅನುಭವಗಳಾಗುತ್ತವೆ. ಅದೊಮ್ಮೆ ಆನಂದಿಯ ವಿಷಯಗಳೆಲ್ಲವೂ ಅಮೇರಿಕಾದ ರೊಸೆಲ್ಲೇ ಎಂಬ ಊರಿನ ಥಿಯೋಡಿಸಿಯಾ ಕಾಪೆರ್ಂಟರ್ ಅವರ ಗಮನಕ್ಕೆ ಬರುತ್ತದೆ. ಆಕೆ ಆನಂದಿಗೆ ಪತ್ರ ಬರೆಯುತ್ತಾಳೆ ಅಲ್ಲಿಂದ ಅವರ ಮಧ್ಯೆ ನಿರಂತರ ಪತ್ರ ವ್ಯವಹಾರ ನಡೆಯುತ್ತದೆ. ಅದರಲ್ಲಿ ಆನಂದಿ ತಮ್ಮ ದೇಶದ ಸಂಸ್ಕೃತಿ ಆಚಾರ ವಿಚಾರ ತನ್ನ ಕನಸು ಮೊದಲಾದ ವಿಷಯಗಳನ್ನು ಹಂಚಿಕೊಳ್ಳುತ್ತಾಳೆ. ಅಮೇರಿಕದ ಕುರಿತ ಮಾಹಿತಿಗಳನ್ನು ಕೇಳಿ ತಿಳಿದುಕೊಳ್ಳುತ್ತಾಳೆ. ಕಾಪೆರ್ಂಟರ್ ಆನಂದಿಯನ್ನು ತನ್ನ ಮನೆಯಲ್ಲಿದ್ದು ಕಲಿಯಬಹುದೆಂದು ಆಹ್ವಾನ ನೀಡುತ್ತಾಳೆ. ಈ ಪತ್ರಗಳು ಅವರ ಮಧ್ಯೆ ಒಂದು ಸ್ನೇಹ ಸಂಬಂಧಕ್ಕೆ ಎಡೆಮಾಡಿಕೊಡುತ್ತದೆ.ಬರಾಕ್ ಪುರಕ್ಕೆ ಬಂದು ತಲುಪಿದ ಆನಂದಿ ತನ್ನ ಮಹಾ ಪ್ರಯಾಣದ ಸಿದ್ಧತೆ ನಡೆಸುತ್ತಾಳೆ. ಒಂದು ಭಾಷಣದಲ್ಲಿ ಆನಂದಿ ತನ್ನ ದುಃಖ ನೋವು ಸಂಕಟಗಳನ್ನು , ಎದುರಿಸಿದ ಸವಾಲುಗಳನ್ನು,ಕನಸುಗಳನ್ನು, ಉದ್ದೇಶಗಳನ್ನು, ಸಮಾಜಕ್ಕೆ ವಿವರಿಸುತ್ತಾಳೆ. ಆನಂದಿಯ ಅಮೇರಿಕ ಪ್ರಯಾಣದ ಬಗ್ಗೆ ಪರ ವಿರೋಧ ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತವೆ. ವಿರೋಧಗಳು, ಅಪವಾದಗಳು, ಅವಮಾನಗಳು ಹೆಚ್ಚಿದಂತೆ ಆಕೆಯ ಕನಸು ಬಲಗೊಳ್ಳುತ್ತದೆ. ಎಲ್ಲವನ್ನು ಸಹಿಸಿಕೊಂಡು ಧೈರ್ಯಗುಂದದೆ ಆನಂದಿ ತನ್ನ ಗುರಿಯತ್ತ ಹೆಜ್ಜೆ ಹಾಕುತ್ತಾಳೆ. " ಏನಾಗುವುದೋ ಎಂಬ ಆತಂಕದಿಂದ ಮತ್ತು ಮೂಢನಂಬಿಕೆಗಳಿಂದ ಈ ಮುಗ್ಧ ಜನ ನನ್ನ ವಿದೇಶಯಾನವನ್ನು ವಿರೋಧಿಸುತ್ತಿದ್ದರು. ಆದರೆ ನಾನು ಅವರ ಮೇಲೆ ಏನನ್ನೂ ಆರೋಪಿಸುವುದಿಲ್ಲ" ತನ್ನನ್ನು ತಡೆದ ಜನರ ಮೌಢ್ಯವನ್ನು ಆನಂದಿ ವಿವರಿಸುವಳು. ಹೀಗೆ ಭಾರತೀಯ ಮಹಿಳೆಯೊಬ್ಬಳು ತನ್ನ ಕನಸಿನೊಂದಿಗೆ ಮೊದಲ ಬಾರಿಗೆ ಅಮೇರಿಕಕ್ಕೆ ಹೋಗಲು ಹಡಗು ಹತ್ತುತ್ತಾಳೆ.ಮಿಸ್ಸಸ್ ಜಾನ್ಸಸ್ ಆಕೆಯ ಪ್ರಯಾಣದಲ್ಲಿ ಜೊತೆಯಾಗುತ್ತಾರೆ. ಆನಂದಿ ಅಮೇರಿಕಕ್ಕೆ ತೆರಳಿದ್ಧು ಭಾರತ ಮತ್ತು ಅಮೇರಿಕಾದಲ್ಲಿ ಬಾರೀ ಚರ್ಚೆಗೊಳಗಾಗುತ್ತದೆ. ಹಡಗಿನಲ್ಲಿ ಎದುರಾದ ಆಹಾರ ಸಮಸ್ಯೆ, ಮಿಸ್ಸಸ್ ಜಾನ್ಸಸ್ ನೀಡಿದ ಉಪಟಳ ಎಲ್ಲವನ್ನೂ ವಿವರಿಸುತ್ತಾಳೆ. ಹಡಗಲ್ಲಿ ನೂರಾರು ಜನರಿದ್ದರೂ ತಬ್ಬಲಿಯಾದ ಆನಂದಿಗೆ ಕೊನೆಗೂ ಜೊಯಾದದ್ದು ಪುಸ್ತಕಗಳೇ. 'ಸಿಟಿ ಆಫ್ ಬರ್ಲಿನ್' ಹಡಗಲ್ಲಿ ಆನಂದಿಗೆ ಜಾತಿ, ಮತ, ವರ್ಗ ಮೀರಿದ , ವಿವಿಧ ತರದ ಉದ್ಯೋಗಿಗಳನ್ನು ಕಂಡಾಗ ಆ ಹಡಗು ಬಸವಣ್ಣ ಬಯಸಿದ ಮಹಾಮನೆಯಂತೆ ಕಾಣುತ್ತದೆ. ಬಲ್ಬನ್ನು ಕಂಡು ಹಿಡಿದ ಥಾಮಸ್ ಎಡಿಸನ್ ತನ್ನ ಮೊದಲ ಪ್ರಯೋಗ ನಡೆಸಿದ ರೊಸೆಲ್ಲೋದಲ್ಲೇ ಕಾಪೆರ್ಂಟರ್ ಜೊತೆ ಆನಂದಿ ತನ್ನ ಹೊಸ ಬದುಕನ್ನು ಪ್ರಾರಂಭಿಸುತ್ತಾಳೆ. ಆನಂದಿಗೆ ಫಿಲಡೆಲ್ಫಿಯಾದ ಕಾಲೇಜು ಶಿಷ್ಯವೇತನದೊಂದಿಗೆ ಕಲಿಸುವ ಭರವಸೆ ನೀಡಿದಾಗ ಸಂತೋಷದಿಂದಲೇ ಕಾಲೇಜಿಗೆ ಸೇರಿಕೊಳ್ಳುವಳು. ತನ್ನ ಹೊಸ ಬದುಕು, ಅನಾರೋಗ್ಯ, ಆರ್ಥಿಕ ಸಮಸ್ಯೆ, ಹೊಸ ಪರಿಚಯ, ಸಂಬಂಧಗಳು ವಿದ್ಯಾಭ್ಯಾಸ ಅಲ್ಲಿನ ಸಂಸ್ಕೃತಿ ಹೀಗೆ ಪ್ರತಿಯೊಂದನ್ನೂ ಗಂಡನೊಂದಿಗೆ ನಿರಂತರ ಪತ್ರಗಳ ಮೂಲಕ ವಿವರಿಸುವಳು. ಭಾರತದ ವಿಷಯಗಳನ್ನು ಗಂಡನಿಂದ ಕೇಳಿ ತಿಳಿದುಕೊಳ್ಳುವಳು. ದೈಹಿಕವಾಗಿ ಬಳಲುತ್ತಿದ್ದ ಆನಂದಿಯನ್ನು ಗಂಡನೊಂದಿಗಿನ ಪತ್ರ ವ್ಯವಹಾರ ಮಾನಸಿಕವಾಗಿ ಜರ್ಜರಿತಗೊಳಿಸುತ್ತಿದ್ದವು.
ಮೆಡಿಕಲ್ ವಿದ್ಯಾರ್ಥಿಗಳು ಎಂ.ಡಿ. ಪದವಿ ಪೂರ್ತಿಗೊಳಿಸಲು ಒಂದು ವಿಷಯದ ಕುರಿತು ಪ್ರಬಂಧ ಮಂಡಿಸಬೇಕಿದ್ದರಿಂದ ಆನಂದಿ 'ಔbsಣeಡಿiಛಿs ಂmoಟಿg ಖಿhe ಂಡಿಥಿಚಿಟಿ ಊiಟಿಜus' ಎಂಬ ವಿಷಯದ ಕುರಿತು ಪ್ರಬಂಧ ರಚಿಸುತ್ತಾಳೆ. ಇದು ಆಕೆಯನ್ನು ಬಹುವಾಗಿ ಕಾಡಿದ ಮತ್ತು ಬದುಕಲ್ಲಿ ಇಷ್ಟುದೂರ ಕಠಿಣ ಹಾದಿಯಲ್ಲಿ ಕ್ರಮಿಸುವಂತೆ ಮಾಡಿತ್ತು. ಅದು ಎಲ್ಲರ ಪ್ರಬಂಧಕ್ಕಿಂತ ವಿಶಿಷ್ಟವಾದದ್ದೆಂಬ ಶ್ಲಾಘನೆ ಪಡೆಯುತ್ತದೆ.
ಆನಂದಿಬಾಯಿಗೆ ನೈತಿಕವಾಗಿ ಸ್ಥೈರ್ಯ ನೀಡಿ ಆಸರೆಯಾದ ಪಂಡಿತಾ ರಮಾಬಾಯಿ ಸರಸ್ವತಿ ಅವರೂ ಬ್ರಾಹ್ಮಣ ಸಮುದಾಯದವರು. ಅವರು ಇಂಗ್ಲಂಡಿಗೆ ತೆರಳಿ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದರು. ಇಬ್ಬರ ಲಕ್ಷ್ಯವೂ ಜನರ ಉದ್ಧಾರವಾದ್ದರಿಂದ ಅವರಿಬ್ಬರೂ ಅಮೇರಿಕಾದಲ್ಲಿ ಪರಸ್ಪರ ಭೇಟಿಯಾಗುತ್ತಾರೆ. ಅದು. 1886 ಮಾರ್ಚ್ 12. ಇಂಡಿಯಾದ ಚರಿತ್ರೆಯಲ್ಲೇ ಗಮನಾರ್ಹ ದಿನ. ಅವತ್ತು ಆನಂದಿ ವಿಮೆನ್ಸ್ ಮೆಡಿಕಲ್ ಕಾಲೇಜ್ ಆಫ್ ಪೆನ್ಸಿಲ್ವೇನಿಯಾದ 33 ನೇ ಘಟಿಕೋತ್ಸವದಲ್ಲಿ ರಮಾಬಾಯಿ ಹಾಗೂ ಪತಿ ಗೋಪಾಲನ ಸಮ್ಮುಖದಲ್ಲಿ ಎಂ.ಡಿ. ಪದವಿ ಸ್ವೀಕರಿಸಿದಳು. ಅಲ್ಲೇ ಉದ್ಯೋಗವಕಾಶಗಳು ಸಿಕ್ಕಿದರೂ ತಾಯ್ನಾಡಲ್ಲಿ ಸೇವೆ ಮಾಡಬೇಕೆಂಬ ಉದ್ದೇಶದಿಂದ ಎಲ್ಲವನ್ನೂ ನಿರಾಕರಿಸಿ ಊರಿಗೆ ಮರಳುತ್ತಾಳೆ ಆಕೆಗೆ ಕೊಲ್ಲಾಪುರದಲ್ಲಿ ಕೆಲಸ ಸಿಕ್ಕಿದರೂ ಅಲ್ಲಿ ಸೇರುವ ಮೊದಲೇ ಆಕೆ ಕ್ಷಯರೋಗಕ್ಕೆ ತುತ್ತಾಗುತ್ತಾಳೆ. ಸಂಬಂಧಿಕರ ಮನೆಯಲ್ಲಿದ್ದುಕೊಂಡು ಗೋಪಾಲ ಚಿಕಿತ್ಸೆ ಕೊಡಿಸುತ್ತಾನೆ. ಆದರೆ ಯಾವ ವೈದ್ಯರೂ ಆಕೆಗೆ ಔಷಧಿ ನೀಡಲು, ಚಿಕಿತ್ಸೆ ನೀಡಲು ನಿರಾಕರಿಸುತ್ತಾರೆ. ಚಿಕಿತ್ಸೆ ಕೊಡಿಸಲು ದೇಶವೇ ಆನಂದಿ ಬಗ್ಗೆ ಕಾಳಜಿ ವಹಿಸುವಾಗ ಸ್ಥಳೀಯರೇ ಆಕೆಗೆ ಚಿಕಿತ್ಸೆ ನೀಡಲು ಒಪ್ಪುವುದಿಲ್ಲ. ಕೊನೆಗೆ ಆನಂದಿ ತನ್ನ ಮುತ್ತಜ್ಜನ ಮನೆಗೆ ಬರುತ್ತಾಳೆ. ಆಕೆಗಾಗಿ ಆಯುರ್ವೇದ ಚಿಕಿತ್ಸೆ, ಹೋಮ ಪೂಜೆ ಮಾಡಿಸಿದರೂ ಆರೋಗ್ಯ ಸುಧಾರಿಸುವುದಿಲ್ಲ. ಹಲವರು ಆರ್ಥಿಕ ಸಹಾಯ ಮಾಡುತ್ತಾರೆ. ಈ ನಡುವೆಯೂ ಆನಂದಿ ಮತ್ತು ಕಾಪೆರ್ಂಟರ್ ನಡುವೆ ಪತ್ರ ವ್ಯವಹಾರ ನಡೆಯುತ್ತಿರುತ್ತದೆ. ಆ ಕಾಲದ ಅತ್ಯಾಧುನಿಕ ವೈದ್ಯ ಪದ್ಧತಿ ಕಲಿತು ಬಂದ ಆನಂದಿ ಅಂಧ ಶ್ರದ್ಧೆಯ ಶುಶ್ರೂಷೆಯನ್ನು ವಿರೋಧಿಸಲಾಗದೆ, ತನ್ನವರಿಚ್ಛೆಗೆ ಎದುರಾಡಲಾಗದೆ, ಜೀವಚ್ಛವದಂತೆ ಮಲಗಿದಳು. ಕೊನೆಯ ಪ್ರಯತ್ನದಂತೆ ಹಸುವಿನ ಹಾಲು ಕುಡಿಸಿದರು. ಆ ಪ್ರಯತ್ನವೂ ವಿಫಲವಾಗಿ ಆನಂದಿ ಒಂದು ದಿನ ಇಹಲೋಕ ಯಾತ್ರೆಯನ್ನು ಮುಗಿಸುತ್ತಾಳೆ. ಒಂದು ಕ್ಷಣವೂ ಬಿಟ್ಟಿರಲಾರದ ಗೋಪಾಲ ಸಾವಿನ ಕೊನೆಯ ರಾತ್ರಿ ಮಾತ್ರ ಸಂಗಾತಿಯ ಜೊತೆ ಇರಲಿಲ್ಲ.
ವಯಸ್ಸಿನಲ್ಲಿ ಚಿಕ್ಕವಳಾದರೂ ಆನಂದಿಬಾಯಿ ಅವರ ದೃಢನಿಷ್ಠೆ, ಧೈರ್ಯ ಗಂಡನ ಮೇಲಿನ ಪ್ರೀತಿ ಭಕ್ತಿ, ಅಂದುಕೊಂಡದ್ದನ್ನು ಸಾಧಿಸುವ ಛಲ, ಸಾಮಾಜಿಕ ಕಳಕಳಿ, ಇನ್ನೊಬ್ಬರ ಕಷ್ಟದಲ್ಲಿ ಪಾಲ್ಗೊಳ್ಳುವ ವಿಶಾಲ ಮನಸ್ಸು, ಎಷ್ಟೇ ಅಪವಾದ ಅವಮಾನಗಳಾದರೂ ಮೆಟ್ಟಿ ನಿಲ್ಲುವ ಶಕ್ತಿ, ಎಲ್ಲವನ್ನೂ ಮೆಚ್ಚುವಂಥದ್ದೇ. ಅಮೇರಿಕಾದಲ್ಲಿ ಕಾಪೆರ್ಂಟರ್ ತಮ್ಮ ಕುಟುಂಬದ ಸೆಮೆಟ್ರಿಯಲ್ಲಿ ಆನಂದಿಯ ಚಿತಾಭಸ್ಮವನ್ನು ದಫನ ಮಾಡಿದರು. ಕ್ರೈಸ್ತ ಮತದ ಸ್ಮಶಾನದಲ್ಲಿ ಹಿಂದೂ ಹುಡುಗಿಯ ಚಿತಾಭಸ್ಮ ದಫನಕ್ಕೆ ಅನುಮತಿ ಸಿಕ್ಕಿದ್ದೇ ವಿಶೇಷ. ಗೋಪಾಲನ ಕೊನೆಯ ದಿನಗಳೂ ದುರಂತದಲ್ಲೇ ಕೂಡಿತ್ತು. ಆತ ಕೊನೆಗಾಲದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದನೆಂದು ತಿಳಿಸುತ್ತಾರೆ. ಆನಂದಿಯ ಕನಸು ನನಸಾಗಿಸಲು ಗೋಪಾಲ ಪಟ್ಟ ಶ್ರಮ ನಿಜಕ್ಕೂ ಶ್ಲಾಘನೀಯ ಆತನ ನಿರಂತರ ಪ್ರೋತ್ಸಾಹವೇ ಆಕೆಯ ಗೆಲುವಿಗೆ ಕಾರಣವಾಯಿತು. ಅಂದಿನ ಕಾಲದಲ್ಲಿ ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿ ಎಲ್ಲ ಸಂಪ್ರದಾಯಗಳನ್ನೂ ಕಿತ್ತೊಗೆದು ಸಪ್ತ ಸಾಗರಗಳನ್ನು ದಾಟಿ ಕನಸನ್ನು ನನಸಾಗಿಸಿಕೊಂಡ 21 ರ ಹರೆಯದ ಆನಂದಿಯ ಸಾಧನೆ ನಿಜಕ್ಕೂ ದೊಡ್ಡದೆ. ತನ್ನಿಚ್ಛೆಯಂತೆ ಜನರ ಉದ್ಧಾರ ಮಾಡಲು ಸಾಧ್ಯವಾಗದಿದ್ದರೂ ಭಾರತದ ಮೊದಲ ವೈದ್ಯೆ ಎಂದು ಗುರುತಿಸಿಕೊಂಡಳು. ಆಕೆ ಮಹಿಳೆಯರಿಗೆಲ್ಲ ಒಂದು ಸ್ಫೂರ್ತಿ. ಶಕ್ತಿ. ಸಿ.ಎನ್ ರಾಮಚಂದ್ರನ್ ಹೇಳುವಂತೆ, ಇಂತಹ ವ್ಯಕ್ತಿಯನ್ನು ಕನ್ನಡದವರಿಗೂ ಪರಿಚಯಿಸಿದ ಚಂದ್ರಶೇಖರ ಮಂಡೆಕೋಲು ಅವರು ಅಭಿನಂದನೀಯರು.
ಬರಹ: ಚೇತನಾ ಕುಂಬ್ಳೆ
FEEDBACK: samarasasudhi@gmail.com




