.
1. ಗ್ರಹಣದ ಬಗ್ಗೆ ಬರೆಯುವ ಜ್ಯೋತಿಷಿ(?)ಯ ಭಾಷಾ ಜ್ಞಾ ನಕ್ಕೆ ಗ್ರಹಣ ಬಡಿದಿದೆಯೇ?
ಮೊನ್ನೆಯ (16 ಜುಲೈ 2019) ಚಂದ್ರಗ್ರಹಣದ ಬಗ್ಗೆ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಒಂದು ಸಂದೇಶವನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ? ಅದನ್ನು ಬರೆದ ಜ್ಯೋತಿಷಿ ‘ಭಾಷೆ ಇಲ್ಲದವನು’ ಮತ್ತು ತನ್ನ ಜ್ಯೋತಿಷ್ಯ ಜ್ಞಾ ನ ಮಟ್ಟ ಎಷ್ಟರದು ಎಂಬ ಬಂಡವಾಳ ಬಿಚ್ಚಿದವನು ಎಂದು ಸುಲಭವಾಗಿ ಗೊತ್ತಾಗುತ್ತದೆ. ಬರೆದವರು ‘ಡಾ.ಮೂಗೂರು ಮಧುದೀಕ್ಷಿತ್ ಗುರೂಜಿ’ ಎಂದು ಒಂದು ಕಡೆ ಇದ್ದರೆ, ಇನ್ನೊಂದು ಕಡೆ ಅದೇ ಮೆಸೇಜು (same contents) ‘ಶ್ರೀರಾಮ ತಾಂತ್ರಿಕ’ ಎಂಬ ಜ್ಯೋತಿಷಿ ಕಳಿಸಿದ್ದು ಎಂದಿದೆ. ಮತ್ತೊಂದೆಡೆ ಅದೇ ಮೆಸೇಜು ‘ಜ್ಯೋತಿಷ್ಯರು ಕೊಳ್ಳೇಗಾಲದ ಮಾಂತ್ರಿಕ’ ಪೋಸ್ಟ್ ಮಾಡಿದ್ದೆಂದಿತ್ತು. ‘ರಾಜ್ಯ ಪ್ರಶಸ್ತಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ಚಿನ್ನದ ಪದಕ ಪುರಸ್ಕೃತರಾದ ವಿದ್ವಾನ್ ಡಾ. ವೀರೇಶ್ ಹಿರೇಮಠ’ ಎಂಬುವರಿಂದ ಪೋಸ್ಟ್ ಆದದ್ದು ಅಂತಲೂ ಇನ್ನೊಂದು ಕಡೆಯಲ್ಲಿತ್ತು. ನಿನ್ನೆಯದು ಖಂಡಗ್ರಾಸ ಚಂದ್ರಗ್ರಹಣ (partial lunar eclipse) ಇದ್ದದ್ದು. ಈ ಹಿರೇಮಠ ಆಸಾಮಿಯಂತೂ ಖಗ್ರಾಸ ಚಂದ್ರಗ್ರಹಣ ((total lunar eclipse) ಎಂದು ಘೋಷಿಸಿದ್ದರು! ಉಳಿದಂತೆ ಚಿಕ್ಕಪುಟ್ಟ ದೇವಸ್ಥಾನಗಳ, ಅರ್ಚಕರ, ಕಾಂಜಿಪೀಂಜಿ ಮರಿಜ್ಯೋತಿಷಿಗಳ ಫೇಸ್‍ಬುಕ್ ಗೋಡೆಗಳ ಮೇಲೂ ‘ಕೇತುಗ್ರಸ್ತ ಚಂದ್ರಗ್ರಹಣ...’ ರಾರಾಜಿಸಿತ್ತು. ಆ ಇಡೀ ಮೆಸೇಜನ್ನು ಇಲ್ಲಿ ಪುನರಾವರ್ತಿಸುವುದು ಅಪ್ರಸ್ತುತ. ಆದರೆ ಅದರ ಭಾಷಾ (ಅ)ಶುದ್ಧತೆಯ ಮಾಪಕವಾಗಿ ಕೆಲವು ವಾಕ್ಯಗಳನ್ನಷ್ಟೇ ಎತ್ತಿಕೊಳ್ಳಲಾಗಿದೆ. ಧೂರ್ತ ಜ್ಯೋತಿಷಿಯ ಗ್ರಹಣ ಬಿಡಿಸುವ ಪ್ರಯತ್ನ ಮಾಡಲಾಗಿದೆ.
ಅ) “ಧನಸ್ಸು ರಾಶಿಯವರು ಗ್ರಹಣ ಶಾಂತಿ ಮಾಡಿಸಬೇಕು."
- ರಾಶಿಯ ಹೆಸರು ‘ಧನಸ್ಸು’ ಅಲ್ಲ ‘ಧನುಸ್ಸು’ (ಸಂಸ್ಕೃತದ ‘ಧನು’ ಅಂದರೆ ಬಿಲ್ಲು) ಎಂದು ಕೂಡ ಗೊತ್ತಿಲ್ಲದವನು ಅದೆಂಥ ಜ್ಯೋತಿಷಿಯೋ! ಬಹುಶಃ ‘ಧನ’ವೊಂದೇ ಮನವಾದ್ದರಿಂದ ಧನುಸ್ಸನ್ನೂ ಧನಸ್ಸು ಎಂದೇ ಬರೆದಿರಬಹುದು.
ಆ) “ಪೂರ್ವಾಷಾಡ ನಕ್ಷತ್ರದವರು ಗ್ರಹಣ ಶಾಂತಿ ಮಾಡಿಸಬೇಕು."
- ನಕ್ಷತ್ರದ ಹೆಸರು ‘ಪೂರ್ವಾಷಾಡ’ ಅಲ್ಲ ‘ಪೂರ್ವಾಷಾಢಾ’ ಆಗಬೇಕು ಎಂದು ಅರಿಯದವನು ಅದೆಂಥ ಜ್ಯೋತಿಷಿಯೋ!
ಇ) “ಕೆಲವೆಡೆ ಅನಾವೃಷ್ಟಿ, ಕೆಲವೆಡೆ ಒಳ್ಳೆಯ ಪಸಲು ಬಂದರು, ರೋಗ ಉಂಟಾಗುತ್ತದೆ."
- ಸರ್ವಋತು ಬಂದರು (all season port) ಇದ್ದಹಾಗೆ ‘ಪಸಲು ಬಂದರು’? ಅಥವಾ ರಾಯರು ಬಂದರು ಇದ್ದಹಾಗೆ ಪಸಲು ಬಂದರು? ಅಲ್ಲ, ಅದು ‘ಫಸಲು ಬಂದರೂ...’ ಅಂತಾಗಬೇಕಿತ್ತು. ಫಸಲು = ಬೆಳೆ (crop, yield) ಉರ್ದು ಮೂಲದ ‘ಫಸಲ್’ನಿಂದ ಬಂದ ಪದ.
ಈ) “ಹೊಸ ರಾಜ (ಮುಖ್ಯಮಂತ್ರಿ) ಬಂದರು ತನ್ನವರೆ ತೊಂದರೆ ಕೊಡುತ್ತಾರೆ."
- ಇದರ ಹಿಂದಿನ ವಾಕ್ಯ “ರಾಜಕೀಯದಲ್ಲಿ ದೊಡ್ಡ ದೊಂಬರಾಟ ನಡೆಯುತ್ತದೆ. ರಾಜನು( ಮುಖ್ಯಮಂತ್ರಿ) ಆರು ತಿಂಗಳ ಒಳಗೆ ಪದವಿ ಕಳೆದುಕೊಳುತ್ತಾನೆ." ಎಂದು ಇದೆ. ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ನಾಟಕದ ರೆಫರೆನ್ಸ್ ಇರಬಹುದು. ಹೊಸ ರಾಜನಿಗೆ ತನ್ನವರೇ ತೊಂದರೆ ಕೊಡುವುದು ಅಂದರೆ ಬಹುಶಃ ಯಡ್ಯೂರಪ್ಪ-ಈಶ್ವರಪ್ಪ ಮುಸುಕಿನೊಳಗೆ ಗುದ್ದಾಟದ ಹಿಂಟ್. ಒಟ್ಟಿನಲ್ಲಿ ಎಲ್ಲರೂ ಬಂದರ್(ಹಿಂದೀಯಲ್ಲಿ ‘ಮಂಗ’)ಗಳೇ. ‘ಕಳೆದುಕೊಳುತ್ತಾನೆ’ ಅಂದರೇನು?
ಉ) “ಮೊದಲು ಸೂರ್ಯಗ್ರಣವಾಗಿರುವುದರಿಂದ ರಾಷ್ಟ್ರನಾಯಕರಿಗೆ ಸುಖವುಂಟು, ರಾಜ್ಯದಲ್ಲಿ ಕಲಹ ಪ್ರದವು."
- ಚಂದ್ರಗ್ರಹಣದ ಫಲಜ್ಯೋತಿಷದಲ್ಲಿ ಒಮ್ಮಿಂದೊಮ್ಮೆಲೇ ಸೂರ್ಯಗ್ರಹಣ ಹೇಗೆ ಬಂತೋ! ಚಂದ್ರಗ್ರಹಣವಾಗುವ ದಿನ(ಹುಣ್ಣಿಮೆ) ಸೂರ್ಯಗ್ರಹಣ ಆಗುವುದೇ? ಅದೂ ಸೂರ್ಯಗ್ರಹಣ ಅಲ್ಲ ‘ಸೂರ್ಯಗ್ರಣ’ ಅಂತೆ!
ಊ) “ರಾಷ್ಟ್ರದಲ್ಲಿ ಹೆಣ್ಣುಮಕ್ಕಳು ವಿಶೇಷ ಗೌರವ ಅನಜಭವಿಸುತ್ತಾರೆ. ರಾಜ್ಯ ಸ್ತ್ರೀಯರಿಗೆ ತೊಂದರೆಯುಂಟು."
- ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ ಮುಂತಾದವರು ಮಿಂಚುತ್ತಾರೆ, ಶೋಭಾ ಕರಂದ್ಲಾಜೆ ಮತ್ತು ಸುಮಲತಾ ಅಂಬರೀಷ್ ಹೆಣಗಬೇಕಾಗುತ್ತದೆ ಎಂದು ಪರೋಕ್ಷವಾಗಿ ಹೇಳಿದ್ದಿರಬಹುದು. ಅದೇನೇ ಇರಲಿ, ‘ಅನಜಭವಿಸುತ್ತಾರೆ’ ಎಂದರೇನು?
ಋ) “ರಾಹುವಿನ ಸಂಬಂಧ ಇರುವುದರಿಂದ ಸುನಾಮಿ ತರದ ಘಟನೆಗಳು ಸಂಭವಿಸುತ್ತದೆ."
- ಸುನಾಮಿ ತರುವ ಘಟನೆಗಳು ಯಾವುವು? ಸುನಾಮಿ ತರದ ಘಟನೆಗಳು ಯಾವುವು? ಅವು ಸಂಭವಿಸಿದರೆ (ಅಂದರೆ ಸುನಾಮಿ ತರದಿದ್ದರೆ) ಒಳ್ಳೆಯದೇ ಅಲ್ಲವೇ? ಘಟನೆಗಳು ಎಂದು ಬಹುವಚನದ ನಾಮಪದ ಇರುವಾಗ ಕ್ರಿಯಾಪದವೂ ‘ಸಂಭವಿಸುತ್ತವೆ’ ಎಂದಾಗಬೇಡವೇ?
ಎ) “ತುಲಾ ರಾಶಿಯವರಿಗೆ ಲಕ್ಷ್ಮೀ ಪ್ರಾಪ್ತಿ, ಲೋನ್ ಸಾಕ್ಷನ್ ಆಗುತ್ತದೆ, ಹಳೆಯ ದುಡ್ಡು ಬರುವ ಸಾಧ್ಯತೆ."
- ಜ್ಯೋತಿಷಿಯ ಇಂಗ್ಲಿಷ್ ವ್ಯಾಮೋಹ. ಲೋನ್ ಸಾಂಕ್ಷನ್ ಎಂದು ಬರೆಯಲು ಲೋನ್ ಸಾಕ್ಷನ್ ಎಂದು ಬರೆದಿದ್ದಾನೆ. ಸೊನ್ನೆಯನ್ನು ತಿಂದುಬಿಟ್ಟು ತಾನೇ ರಾಹು/ಕೇತು ಆಗಿದ್ದಾನೆ.
ಏ) “ಆರು ತಿಂಗಳು ಉತ್ತರಾಷಾಡ ನಕ್ಷತ್ರದಲ್ಲಿ ಯಾವುದೇ ಶುಭ ಕಾರ್ಯ ಮಾಡಬೇಡಿ."
- ಪೂರ್ವಾಷಾಢಾ ಮಾತ್ರವಲ್ಲ, ಈ ಜ್ಯೋತಿಷಿಗೆ ಉತ್ತರಾಷಾಢಾ ನಕ್ಷತ್ರದ ಹೆಸರೂ ಸರಿಯಾಗಿ ಗೊತ್ತಿಲ್ಲ. ಉತ್ತರಾಷಾಡ ಎಂದು ಬರೆದಿದ್ದಾನೆ.
ಐ) “ಮಧ್ಯಾಹ್ನ 4:33ರಿಂದ ವೇದ ಆರಂಭವಾಗುವುದು."
- ಯಾವ ವೇದ? ಋಗ್ವೇದ? ಯಜುರ್ವೇದ? ಸಾಮವೇದ? ಅಥರ್ವವೇದ? ಅದು ‘ವೇದ’ ಅಲ್ಲ, ‘ವೇಧ’ ಆಗಬೇಕು. ವೇಧ ಪದದ ಮೂಲ ಅರ್ಥ ತೂತು ಕೊರೆದದ್ದು,piercing, boring, perforation, a hole, excavation. ಗ್ರಹಣದಲ್ಲಿ ಸೂರ್ಯ ಅಥವಾ ಚಂದ್ರನನ್ನು ಯಾವುದೋ ಒಂದು ‘ಮಾಯೆ’ಯು ತಾತ್ಕಾಲಿಕವಾಗಿ ಕೊರೆಯುತ್ತದೆ ಎಂದೇ ಹಿಂದಿನವರು ನಂಬಿದ್ದರಿಂದ ಈ ‘ವೇಧ’ ಕಾಲಗಣನೆ ರೂಢಿಗೆ ಬಂದದ್ದಿರಬಹುದು.
ಒ) “ದೊಡ್ಡಸಾಸಿವೆ, ಅರಿಶಿನ, ಚಂಗಲ ಕೋಷ್ಠಕ, ಲೋಧ್ರ ಚಕ್ಕೆ, ಮುರಾಮಾಂಸಿ ಅಥವಾ ಭತ್ತದ ಹರಳು, ಬಾಳೆ ಬೇರು ಇಷ್ಟನ್ನು ನೀರಿನಲ್ಲಿ ಹಾಕಿ, ಅದರಿಂದ ಸ್ನಾನ ಮಾಡುವುದರಿಂದ ಗ್ರಹಣ ದೋಷ ನಿವಾರಣೆಯಾಗಯತ್ತದೆ."
- ಚಂಗಲ ಕೋಷ್ಠಕ ಎಂದರೇನು? ದೇವರಾಣೆಗೂ ಆ ಜ್ಯೋತಿಷಿಗೇ ಗೊತ್ತಿರಲಿಕ್ಕಿಲ್ಲ. ಅದು ಚಂಗಲ ಕೋಷ್ಠಕ ಅಲ್ಲ, ಚಂದನ ಕಾಷ್ಠಕ. ಗಂಧದ ಕೊರಡು. ಲೋಧ್ರ ಅಂದರೆ ಸಾಂಬ್ರಾಣಿ. ಮುರಾಮಾಂಸಿ ಅಂದರೆ ಸಂಸ್ಕೃತದಲ್ಲಿ ಗಿಡಮೂಲಿಕೆಯೊಂದರ ಹೆಸರು. ನಾಗದಳ ಅಥವಾ ಕಾಡುಕರಿಬೇವು ಎಂದು ಗುರುತಿಸಲ್ಪಡುವ ಗಿಡ. ಇದ್ಯಾವುದಪ್ಪಾ ಭತ್ತದ ಹರಳು ಎಂದು ತಲೆಕೆಡಿಸಿಕೊಂಡಾಗ ಗೊತ್ತಾಗುವುದು ಅದು ಹರಳು ಅಲ್ಲ ಅರಳು! ಭತ್ತದ ಅರಳು ಎಂದು ಗೊತ್ತುಪಡಿಸಿಕೊಂಡ ಮೇಲೆ ಮುರಾಮಾಂಸಿ ಅಂದರೆ ಮಂಡಕ್ಕಿ ಇರಬೇಕು! ‘ಮುರಿ’ (ಚುರುಮುರಿ) ಅಥವಾ ‘ಮುರ್ಮುರಾ’ (ಹಿಂದೀ, ಗುಜರಾತಿ, ಮರಾಠಿ ಪದ) ಜ್ಯೋತಿಷಿಯ ಕೈಯಲ್ಲಿ ನಜ್ಜುಗುಜ್ಜಾಗಿ ಮುರಾಮಾಂಸಿ ಆದದ್ದು. ಏನೇನೋ ದೊಡ್ಡದೊಡ್ಡ ಪದಗಳನ್ನು, ಕಂಡುಕೇಳರಿಯದಂಥವುಗಳನ್ನು ಬಳಸಿದರೆ ಅಮಾಯಕ ಜನರು ಇನ್ನೂ ಭಯಭೀತರಾಗಿ ತನ್ನೆಡೆಗೆ ಬರುತ್ತಾರೆ, ಸಾಕಷ್ಟು ‘ದಕ್ಷಿಣೆ’ ಮಡಗುತ್ತಾರೆ, ಅವರ ದೋಷ ‘ನಿವಾರಣೆಯಾಗಯತ್ತದೆ’ (?) ಎಂಬ ‘ಬಾ ನೊಣವೇ ಬಾ ನೊಣವೇ ಬಾ ನನ್ನ ಬಲೆಗೆ’ ತಂತ್ರ.
ಇಂಥ ಕಪಟ ಧೂರ್ತರನ್ನು ನಂಬುತ್ತಾರಲ್ಲ ಸುಶಿಕ್ಷಿತ ಜನರು. ಅವರಿಗೇನೆನ್ನಬೇಕು!
====
2. ಸರಿಪಡಿಸಬಹುದಾಗಿದ್ದ ತಲೆಬರಹಗಳು
ಅ) “ತಿಥಿ ಊಟ, ಶ್ರಾದ್ಧಾಕ್ಕೆ ಕಾಗೆ ಬಾಡಿಗೆಗೆ ಸಿಗುತ್ತೆ!" [ವಿಶ್ವವಾಣಿ ಮಂಗಳೂರು ಆವೃತ್ತಿ. ಗಮನಿಸಿ ಕಳುಹಿಸಿದವರು ಹುಬ್ಬಳ್ಳಿಯಿಂದ ಡಾ.ಗೋವಿಂದ ಹೆಗಡೆ.] ಸುದ್ದಿಯೇನೋ ರಸವಾರ್ತೆಯಂಥದ್ದೇ ಇದೆ, ಆದರೆ ಶೀರ್ಷಿಕೆಯಲ್ಲಿ ‘ಶ್ರಾದ್ಧ’ವನ್ನು ‘ಶ್ರಾದ್ಧಾ’ ಎಂದು ಬರೆದಿರುವುದು ಮಾಡುವ ಕೆಲಸದಲ್ಲಿ ಶ್ರದ್ಧಾ ಸ್ವಲ್ಪವೂ ಇಲ್ಲವೆಂಬುದರ ಸಂಕೇತ.
ಆ) “ಮೊದಲ ಭಾರಿ ಮಳೆಗೆ ನಗರ ಅಸ್ತವ್ಯಸ್ಥ" [ವಿಜಯವಾಣಿ ಮಂಗಳೂರು ಆವೃತ್ತಿ. 11 ಜುಲೈ 2019. ಗಮನಿಸಿ ಕಳುಹಿಸಿದವರು ಮಂಗಳೂರಿನಿಂದ ರತ್ನಾಕರ ಮೈರ.] ‘ಅಸ್ತವ್ಯಸ್ತ’ ಎಂದು ಇರಬೇಕಿತ್ತು. ಅಸ್ತವ್ಯಸ್ತ ಪದದ ಅರ್ಥ: ಕ್ರಮವಾಗಿಲ್ಲದಿರುವುದು, ಚಲ್ಲಾಪಿಲ್ಲಿ ಆಗಿರುವುದು. ಅಸ್ತವ್ಯಸ್ಥ, ಅಸ್ಥವ್ಯಸ್ತ, ಅಸ್ಥವ್ಯಸ್ಥ ಅಂತೆಲ್ಲ ಬರೆದರೆ ತಪ್ಪು.
ಇ) "ನೀರಿಗೆ ವಿಷಪ್ರಾಶನ: 11 ವಿದ್ಯಾರ್ಥಿಗಳು ಅಸ್ವಸ್ಥ" [ವಿಶ್ವವಾಣಿ. 16 ಜುಲೈ 2019. ಗಮನಿಸಿ ಕಳುಹಿಸಿದವರು ಜರ್ಮನಿಯಿಂದ ಶಂಕರ ಮಂದಗೆರೆ.] ಸಂಸ್ಕೃತದಲ್ಲಿ ‘ಪ್ರಾಶನ’ ಎಂಬ ಪದದ ಅರ್ಥ ಆಹಾರ ಎಂದು. ತಿನ್ನಿಸುವುದು ಎಂಬ ಅರ್ಥದಲ್ಲೂ ಪ್ರಾಶನ ಬಳಕೆಯಾಗುತ್ತದೆ. ಉದಾ: ಅನ್ನಪ್ರಾಶನ. ಹಾಗೆ ನೋಡಿದರೆ ‘ವಿಷಪ್ರಾಶನ’ ಸಹ ಇದೆ, ವಿಷವನ್ನು ತಿನ್ನಿಸುವುದು ಎಂಬ ಅರ್ಥದಲ್ಲಿ. ಕೌರವರಿಂದ ಭೀಮಸೇನನಿಗೆ ವಿಷಪ್ರಾಶನದ ಯತ್ನ. ಆದರೆ ಪ್ರಸ್ತುತ ಶೀರ್ಷಿಕೆಯಲ್ಲಿ, ನೀರಿಗೆ ವಿಷವನ್ನು ತಿನ್ನಿಸುವುದು ಹೇಗೆ? ಅದಕ್ಕಿಂತ, ‘ನೀರಿಗೆ ವಿಷ ಬೆರಕೆ’ ಎಂದಿದ್ದರೆ ಅರ್ಥಪೂರ್ಣವಾಗುತ್ತಿತ್ತು.
ಈ) “ಒಳಚರಂಡಿಯಲ್ಲಿ ಎಡವಿದ ಪಾಲಿಕೆ. ಕಳಪೆ ಮುಚ್ಚಳಿಕೆ ಕಾರಣ." [ವಿಜಯವಾಣಿ ಹುಬ್ಬಳ್ಳಿ ಆವೃತ್ತಿ. 14 ಜುಲೈ 2019. ಗಮನಿಸಿ ಕಳುಹಿಸಿದವರು ಹುಬ್ಬಳ್ಳಿಯಿಂದ ಸಾಹಿತ್ಯಪ್ರಕಾಶನ ಸುಬ್ರಹ್ಮಣ್ಯ.] ‘ಕಳಪೆ ಮುಚ್ಚಳಿಕೆ ಕಾರಣ’ ಎಂಬ ಶೀರ್ಷಿಕೆಯುಳ್ಳ ಬಾಕ್ಸ್ ಐಟಮ್‍ನಲ್ಲಿ ಒಟ್ಟು ಎಂಟು ಸಲ ‘ಮುಚ್ಚಳಿಕೆ’ ಎಂದು ಬರೆದಿದ್ದಾರೆ. ವಿಷಯ ಇರುವುದು ಕಳಪೆ ಗುಣಮಟ್ಟದ ಮ್ಯಾ???ಹೋಲ್ ಮುಚ್ಚಳಗಳ ಬಗ್ಗೆ. ಸುದ್ದಿಯೊಂದಿಗಿನ ಚಿತ್ರದಲ್ಲಿ ತೋರಿಸಿರುವುದೂ ಒಡೆದ ಮ್ಯಾನ್?ಹೋಲ್ ಮುಚ್ಚಳವನ್ನೇ. ಮುಚ್ಚಳಿಕೆ ಅಂದರೆ ಕಾನೂನು ವ್ಯವಹಾರಗಳಲ್ಲಿ ಬಳಕೆಯಾಗುವ ಕರಾರುಪತ್ರ, the bond of agreement furnished by the parties, a final agreement in writing. ರಸ್ತೆ ದುರುಸ್ತಿ ಕಾಮಗಾರಿಯ ಗುತ್ತಿಗೆದಾರರು ಬರೆದುಕೊಟ್ಟ ಮುಚ್ಚಳಿಕೆ ಕಳಪೆ ಮಟ್ಟದ್ದು (ಸಾಕಷ್ಟು ದುಡ್ಡು ತಿಂದುಹಾಕುವ ಸಾಧ್ಯತೆಯುಳ್ಳದ್ದು) ಆದ್ದರಿಂದ ತಪ್ಪಾಗಿಯೂ ಸತ್ಯವನ್ನೇ ಹೇಳುತ್ತಿರುವ ತಲೆಬರಹವಿದು!
ಉ) “ವೀಕೆಂಡ್ ಆಪರೇಷನ್ ಸರ್ಕಸ್" [ವಿಶ್ವವಾಣಿ. 14 ಜುಲೈ 2019] , "ಸಕ್ಸಸ್ ಆಗದ ಸಂಧಾನ; ಟೆನ್ಷನ್ ಶುರು" [ವಿಶ್ವವಾಣಿ. 15 ಜುಲೈ 2019.] ಇವು ಮುಖಪುಟದಲ್ಲಿ ಪ್ರಮುಖ ಸುದ್ದಿಯ banner headlines. ಕಣ್ಣಿಗೆ ರಾಚುವಂತೆ ದೊಡ್ಡ ಅಕ್ಷರಗಳಲ್ಲಿ ಪುಟದಗಲಕ್ಕೂ ಹರಡಿಕೊಂಡಿರುವಂಥವು. ಕನ್ನಡ ದಿನಪತ್ರಿಕೆಗಳ ಶೀರ್ಷಿಕೆಗಳಲ್ಲಿ ಹೀಗೆ ಅನಾವಶ್ಯಕವಾಗಿ ಇಂಗ್ಲಿಷ್, ಹಿಂದೀ, ಸಂಸ್ಕೃತ, ಉರ್ದು ಪದಗಳ ಆರ್ಭಟವೇಕೆ? ಕನಿಷ್ಠ ಪಕ್ಷ ಮುಖಪುಟದ ಮುಖ್ಯ ಸುದ್ದಿಗಳ ತಲೆಬರಹಗಳಾದರೂ ಸರಳ ಶುದ್ಧ ಕನ್ನಡದಲ್ಲಿರಬಾರದೇ? ಮಡಿವಂತಿಕೆ ಅಲ್ಲ ಇದು ಅಭಿಮಾನದ ಪ್ರಶ್ನೆ ಎಂದು ಬರೆದು ತಿಳಿಸಿದ್ದಾರೆ ಮಂಗಳೂರಿನಿಂದ ಗಜಾನನ ಅಭ್ಯಂಕರ್.
====
3. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು:
ಅ) ಗ್ರಸ್ತ ಸರಿ. ತಿನ್ನಲ್ಪಟ್ಟ, ಆವರಿಸಲ್ಪಟ್ಟ ಎಂಬ ಅರ್ಥ. ಸೂರ್ಯ/ಚಂದ್ರ ಗ್ರಹಣಗಳಿಗೆ ಸಂಬಂಧಿಸಿದಂತೆ ರಾಹುಗ್ರಸ್ತ, ಕೇತುಗ್ರಸ್ತ ಎಂದು ಬರೆಯುವಾಗ ರಾಹುಗ್ರಸ್ಥ, ಕೇತುಗ್ರಸ್ಥ ಎಂದು ಬರೆದರೆ ತಪ್ಪು. ‘ರೋಗಗ್ರಸ್ತ ಮನಸ್ಸು’ ಎಂದು ಬರೆಯಬೇಕಾದಲ್ಲಿ ‘ರೋಗಗ್ರಸ್ಥ ಮನಸ್ಸು’ ಎಂದು ಬರೆದರೆ ತಪ್ಪು.
ಆ) ಯಥೇಚ್ಛ ಸರಿ. ಯಥಾ + ಇಚ್ಛ = ಯಥೇಚ್ಛ (ಗುಣಸಂಧಿ). ಬೇಕಾದಷ್ಟು, ಮನಸ್ಸಿಗೆ ತೋಚಿದಂತೆ, ಇಷ್ಟಬಂದಂತೆ ಎಂಬ ಅರ್ಥ. ಯತೇಚ್ಛ, ಯಥೇಚ್ಚ ಅಂತೆಲ್ಲ ಬರೆದರೆ ತಪ್ಪು.
ಇ) ಯೌವನ ಸರಿ. ತಾರುಣ್ಯ, ಪ್ರಾಯ ಎಂಬರ್ಥ. ಅದನ್ನು ಯೌವ್ವನ, ಯವ್ವನ ಅಂತೆಲ್ಲ ಬರೆದರೆ ತಪ್ಪು.
ಈ) ಹೇಷಾರವ ಸರಿ. ಕುದುರೆಯ ಕೆನೆತದ ಶಬ್ದ. ಹೇಷಾ ಎಂದರೇನೇ ಕುದುರೆಯ ಕೆನೆತ. ಅದರ ರವ ಅಂದರೆ ಶಬ್ದ. ಹೇಶಾರವ ಎಂದು ಬರೆಯುವುದು ಸರಿಯಲ್ಲ.
ಉ) ದುಂದುಭಿ ಸರಿ. ಭೇರಿ, ನಗಾರಿ ಎಂದು ಅರ್ಥ. 56ನೆಯ ಸಂವತ್ಸರದ ಹೆಸರು. ದುಂಧುಭಿ, ದುಂಧುಬಿ ಮುಂತಾದ ರೂಪಗಳು ತಪ್ಪು.
- ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.