ಕುಂಬಳೆ: ಸುಮಾರು ಐವತ್ತು ವರ್ಷಗಳ ಹಿಂದೆ ಸರ್ಕಾರದ ಲಕ್ಷ ಮನೆ ಯೋಜನೆಯಡಿ ಲಭಿಸಿದ ಮುರುಕು ಮನೆಯಲ್ಲಿ ವಿಧವೆಯಾಗಿರುವ 87ರ ಹರೆಯದ ಪರಿಶಿಷ್ಟ ವರ್ಗದ ಚಮ್ಮಾರ ಸಮುದಾಯದ ದೇವಕಿ ಅಮ್ಮ ತಮ್ಮ ಓರ್ವ ಮಗಳೊಂದಿಗೆ ಸಂಕಷ್ಟದಲ್ಲಿ ವಾಸಿಸುತ್ತಿರುವ ಕರುಣಾಜನಕ ಸ್ಥಿತಿ ಕುಂಬಳೆ ಗ್ರಾ.ಪಂ. ಕುಂಟಂಗೇರಡ್ಕ ದಲ್ಲಿ ಬೆಳಕಿಗೆ ಬಂದಿದೆ.
ಅತ್ಯಂತ ದುರ್ಬಲವಾಗಿರುವ ಎರಡು ಕೋಣೆಗಳ ಹಂಚು ಹಾಸಿದ ಕಲ್ಲು-ಮಣ್ಣಿನ ಗೋಡೆಯಿಂದ ನಿರ್ಮಿಸಿದ ಈ ಮನೆ ಗಾಳಿ ಮಳೆಗಳಿಂದ ಯಾವ ಕ್ಷಣದಲ್ಲೂ ಇದೀಗ ಕುಸಿಯುವ ಭೀತಿಯಲ್ಲಿದೆ. ಶೌಚಾಲಯ, ಶುದ್ದ ಕುಡಿಯುವ ನೀರು, ವಿದ್ಯುತ್ ಸಹಿತ ಯಾವ ಆಧುನಿಕ ವ್ಯವಸ್ಥೆಗಳೂ ಇಲ್ಲದಿರುವ ಈ ಮನೆಯಲ್ಲಿ ಮಾನಸಿಕ ಅಸ್ವಸ್ಥಳೂ, ಅರ್ಬುದ ರೋಗ ಪೀಡಿತಳೂ ಆಗಿರುವ 45ರ ಹರೆಯದ ತನ್ನ ಓರ್ವೆ ಪುತ್ರಿಯೊಂದಿಗೆ ದೇವಕಿ ಜೀವನ ಸಾಗಿಸುತ್ತಿದ್ದಾರೆ. ವಯೋ ಸಹಜ ಕಾಯಿಲೆಗಳಿಂದ ಹೈರಾಣರಾಗಿರುವ ದೇವಕಿ ಅಮ್ಮ ಮತ್ತು ಪುತ್ರಿಗೆ ಲಭಿಸುವ ಸರ್ಕಾರ ಕ್ಷೇಮ ಪಿಂಚಣಿಯೊಂದೇ ಜೀವನಾಧಾರ. ಮೂರು-ನಾಲ್ಕು ತಿಂಗಳಿಗೊಮ್ಮೆ ಕೈಸೇರುವ ಈ ಪಿಮಚಣಿಯಲ್ಲಿ ಔಷಧಿ ಸಹಿತ ತಮ್ಮ ಅಗತ್ಯಗಳನ್ನು ಪೂರೈಸಬೇಕಾಗಿದೆ.
ನಾಲ್ವರು ಹೆಣ್ಮಕ್ಕಳು, ನಾಲ್ವರು ಗಂಡು ಮಕ್ಕಳನ್ನು ಹೆತ್ತ ತಾಯಿಯಾಗಿದ್ದರೂ ತನ್ನ ಬುದ್ದಿಮಾಂದ್ಯ ಓರ್ವೆ ಪುತ್ರಿಯನ್ನು ಬಿಟ್ಟಿರಲಾರದೆ, ಅವಳಿಗೆ ಆಸರೆಯಾಗಿ ಈ ಮಹಾತಾಯಿ ಮೂಲ ಮನೆಯಲ್ಲೇ ವಾಸಿಸುತ್ತಿದ್ದಾರೆ. ಇತರ ಮಕ್ಕಳೆಲ್ಲರಿಗೂ ಮದುವೆಯಾಗಿ ಬೇರೆ ಬೇರೆ ಊರುಗಳಲ್ಲಿ ಬಾಡಿಗೆ ಮನೆಗಳಲ್ಲಿ ನೆಲೆಸಿದ್ದಾರೆ. ಆದರೆ ತಾಯಿಯ ಜೊತೆ ವಾಸಿಸಲು ಯಾವ ಪುತ್ರರೂ ಈವರೆಗೆ ಮುಮದೆ ಬಂದಿಲ್ಲ. ಪ್ರತಿನಿತ್ಯ ಅಗತ್ಯ ಬಳಕೆಯ ನೀರಿಗಾಗಿ ಅಕ್ಕಪಕ್ಕದ ಮನೆಯವರ ಕೊಳವೆ ಬಾವಿ ಅಥವಾ ದೂರದ ಸಾರ್ವಜನಿಕ ಬಾವಿಯನ್ನು ಆಶ್ರಯಿಸುತ್ತಿದ್ದಾರೆ. ಮೇಲ್ಚಾವಣಿ ಮತ್ತು ಭದ್ರ ಬಾಗಿಲುಗಳಿಲ್ಲದ ಬಚ್ಚಲು ಮನೆಯನ್ನು ಇವರು ಬಳಸುತ್ತಿದ್ದು, ಕತ್ತಲಾಗುತ್ತಿರುವಂತೆ ಸೀಮೆ ಎಣ್ಣೆ ದೀಪ ಬಳಸುತ್ತಿದ್ದಾರೆ.
2016ರಲ್ಲಿ ಕೇಂದ್ರ ಸರ್ಕಾರದ ಸ್ವಚ್ಚ ಭಾರತ ಯೋಜನೆಯಲ್ಲಿ ಎಲ್ಲಾ ಮನೆಗೂ ಶೌಚಾಲಯ ನಿರ್ಮಿಸಲು ಅನುದಾನಕ್ಕೆ ಅರ್ಹ ಫಲಾನುಭವಿಗಳ ಪಟ್ಟಿಯಲ್ಲಿ ದೇವಕಿಯವರ ಹೆಸರು ಸೇರ್ಪಡೆಗೊಂಡಿದ್ದರೂ ಈ ಸಂದರ್ಭ ತನ್ನ ಅಸೌಖ್ಯ ಪೀಡಿತ ಪುತ್ರಿಯ ಚಿಕಿತ್ಸೆಯ ಕಾರಣ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಇದ್ದ ಕಾರಣಕ್ಕೆ ಯೋಜನೆಯಿಂದ ವಂಚಿತರಾಗಬೇಕಾಯಿತು. ಕಳೆದ ವರ್ಷ ಗ್ರಾ.ಪಂ. ಸದಸ್ಯೆ ಪುಷ್ಪಲತ ಶಾಂತಿಪಳ್ಳ ಅವರ ಮುತುವರ್ಜಿಯಿಂದ ಕೇಂದ್ರ ಸರಕಾರದ ಉಜ್ವಲ ಯೋಜನೆಯಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕ ಮತ್ತು ಗ್ರಾ.ಪಂ. ವತಿಯಿಂದ ಮಂಚ ಲಭಿಸಿರುವುದಾಗಿ ದೇವಕಿಯಮ್ಮ ಕೃತಜ್ಞತೆಯಿಂದ ನೆನೆಯುತ್ತಾರೆ.
ಆದರೆ ವಾಸಯೋಗ್ಯ ಸುಸಜ್ಜಿತ ಮನೆಯೊಂದು ದೇವಕಿ ಅಮ್ಮ ಮತ್ತು ಅವರ ಅನಾರೋಗ್ಯ ಪೀಡಿತ ಪುತ್ರಿಯ ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ದೇವಕಿ ಅಮ್ಮ ಅವರ ಕುಟುಂಬದ ಹಿತ ಚಿಂತಕ ಸ್ಥಳೀಯ ಯುವಕರು ಸ್ಥಳೀಯ ಗ್ರಾ.ಪಂ. ಸದಸ್ಯೆಯ ನೇತೃತ್ವದಲ್ಲಿ ಸಾರ್ವಜನಿಕರ, ದಾನಿಗಳ ನೆರವಿನೊಂದಿಗೆ ಮೂಲಭೂತ ಸೌಕರ್ಯಗಳೊಂದಿಗೆ ಪುಟ್ಟ ಸೂರೊಂದನ್ನು ನಿರ್ಮಿಸಲು ಮತ್ತು ತಾಯಿ ಹಾಗೂ ಪುತ್ರಿಯ ಅನಾರೋಗ್ಯ ವೆಚ್ಚ ನಿಭಾಯಿಸಲು ಶಾಶ್ವತ ನಿಧಿ ಸ್ಥಾಪಿಸಲು ಇದೀಗ ಮುಂದಾಗಿದೆ. ಸಹೃದಯ ದಾನಿಗಳು ದೇವಕಿ, ದಿ.ತನಿಯ ನಾಯ್ಕರ ಪತ್ನಿ. ಕೇರಳ ಗ್ರಾಮೀಣ ಬ್ಯಾಂಕ್ ಕುಂಬಳೆ ಶಾಖೆ. ಖಾತೆ.ಸಂ. 40517101045019. ಐಎಫ್ ಎಸ್ ಸಂಖ್ಯೆ: ಕೆಎಲ್‍ಜಿಬಿ 00040517 ಸಂಖ್ಯೆಗೆ ನೆರವನ್ನು ನೀಡಬಹುದಾಗಿದೆ.



