ಮುಳ್ಳೇರಿಯ: ಜಗತ್ತಿನಲ್ಲೇ ಅತ್ಯಧಿಕ ಶ್ರೀಮಂತ ಕಲೆ, ಸಾಂಸ್ಕøತಿಕ ವೈಶಿಷ್ಟ್ಯಗಳು ಭಾರತದಲ್ಲೆ ಮಾತ್ರ ಇರುವುದೆಂಬುದು ಹೆಮ್ಮೆಯ ವಿಚಾರ. ಅಂತಹ ಕಲಾ ಸಾಂಸ್ಕøತಿಕತೆಗಳನ್ನು ಉಳಿಸಿ ಬೆಳೆಸುವ ಹೊಣೆ ಪ್ರತಿಯೊಬ್ಬ ಸತ್ಪ್ರಜೆಯದ್ದು. ಈ ನಿಟ್ಟಿನಲ್ಲಿ ಸಂಗೀತ, ನೃತ್ಯ, ರಂಗಭೂಮಿ, ಸಾಹಿತ್ಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ ರಂಗಚಿನ್ನಾರಿಯ ಪ್ರಯತ್ನಗಳು ಶ್ಲಾಘನೀಯ ಎಂದು ಖ್ಯಾತ ವೈದ್ಯ ಡಾ.ಶಿವಕುಮಾರ ಅಡ್ಕ ತಿಳಿಸಿದರು.
ರಂಗಚಿನ್ನಾರಿ ಕಾಸರಗೋಡು ಏರ್ಪಡಿಸುತ್ತಿರುವ ಶಿಕ್ಷಣಕ್ಕಾಗಿ ನೃತ್ಯ-ತಕಜಣುತ ಅಭಿಯಾನದ ಭಾಗವಾಗಿ ಇತ್ತೀಚೆಗೆ ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ರಂಗಚಿನ್ನಾರಿಯ ನಿರ್ದೇಶಕ, ತಕಜಣುತ ಯೋಜನೆಯ ಸಂಚಾಲಕ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗಡಿ ಪ್ರದೇಶವಾದ ಕಾಸರಗೋಡಿನಲ್ಲಿ ಸಂಸ್ಕøತಿ ಕಟ್ಟಬೇಕಾದ ಅನಿವಾರ್ಯತೆಯನ್ನು ಎಳೆಎಳೆಯಾಗಿ ವಿಶದೀಕರಿಸಿ ಈ ಮಣ್ಣಿನ ಸೊಗಡನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಸಾಂಸ್ಕøತಿಕ ಅಭಿಯಾನವನ್ನು ಕಳೆದ ಹದಿಮೂರು ವರ್ಷಗಳಿಂದ ರಂಗಚಿನ್ನಾರಿ ಮುನ್ನಡೆಸಿದ ಬಗೆಯನ್ನು ತಿಳಿಸಿದರು.
ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಅಧ್ಯಕ್ಷ ಗಣೇಶ ಶ್ರೀವತ್ಸ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಬಾಲಸುಬ್ರಹ್ಮಣ್ಯ ಭಟ್ ಕೋಳಿಕ್ಕಜೆ ಅವರು ಕಾರ್ಯಕ್ರಮ ನಿರೂಪಿಸಿದರು. ಖ್ಯಾತ ವಿದುಷಿಃ ಮಂಜುಳಾ ಸುಬ್ರಹ್ಮಣ್ಯ ಹಾಗೂ ರಚನಾ ಅವರಿಂದ ನೃತ್ಯ ಪ್ರಾತ್ಯಕ್ಷಿಕೆ ನಡೆಯಿತು.



