ಕುಂಬಳೆ: ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ಮಕ್ಕಳ ಚಟುವಟಿಕೆಗಳ ವೇದಿಕೆಯಾದ ಪ್ರತಿಭಾ ಭಾರತೀ ಕಾರ್ಯಕ್ರಮದ ಅಂಗವಾಗಿ ಬುಧವಾರ ಸೀತಾಕಲ್ಯಾಣೋತ್ಸವ ಆಚರಿಸಲಾಯಿತು. ವಲಯದ ಮಾತೃಪ್ರಧಾನೆ ಶಿವಕುಮಾರಿ ಕುಂಚಿನಡ್ಕ ಇವರ ನೇತೃತ್ವದಲ್ಲಿ ವಿದ್ಯಾಪೀಠದ ಮಕ್ಕಳು ಪ್ರದರ್ಶಿಸಿದ ಸೀತಾಕಲ್ಯಾಣೋತ್ಸವವು ಸಭಾಸದರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಸೀತಾಕಲ್ಯಾಣೋತ್ಸವದ ವೇಳೆ ಕುಂಬಳೆ ವಲಯದ ಮಾತೆಯರು ಕಲಶ ಕನ್ನಡಿಯೊಂದಿಗೆ ವೇದಿಕೆಗೆ ಆಗಮಿಸಿದರು. ಮುಖ್ಯ ಪಾತ್ರವರ್ಗದಲ್ಲಿ ರಾಮನಾಗಿ 6ನೇ ತರಗತಿಯ ದೀಕ್ಷಾ ಎಲ್.ಎ, ಸೀತೆಯಾಗಿ ಶ್ರೀದೇವಿ 4ನೇ ತರಗತಿ, ದಶರಥನಾಗಿ ಶ್ರವಣ 8ನೇ ತರಗತಿ, ವಸಿಷ್ಠನಾಗಿ ಅನಿರುದ್ಧ 6ನೇ ತರಗತಿ, ವಿಶ್ವಾಮಿತ್ರನಾಗಿ ಮನೀಷ್ 7ನೇ ತರಗತಿ ಹಾಗೂ ಇತರ ಪಾತ್ರವರ್ಗದಲ್ಲಿ ಇತರ ವಿದ್ಯಾರ್ಥಿಗಳು ಭಾಗವಹಿಸಿದರು.
ವೇದಿಕೆಯಲ್ಲಿ 10ನೇ ತರಗತಿಯ ವಿಷ್ಣುಕಿರಣ ಅಧ್ಯಕ್ಷತೆ ವಹಿಸಿದ್ದನು. ಮುಖ್ಯ ಅತಿಥಿಗಳಾಗಿ ಆಹ್ವಾನಿತರಾದ ವಲಯಾಧಕ್ಷ ಬಾಲಕೃಷ್ಣ ಶರ್ಮ ಮಾತನಾಡಿ, ಶ್ರೀ ಸಂಸ್ಥಾನದವರ ಉದ್ದೇಶ ಹಾಗೂ ಸೀತಾಕಲ್ಯಾಣೋತ್ಸವದ ವಿಶೇಷತೆಗಳನ್ನು ಹೇಳಿದರು. ಹಿರಿಯ ವೈದ್ಯ ಡಾ.ಡಿ.ಪಿ ಭಟ್ , ಮುಖ್ಯಶಿಕ್ಷಕಿ ಚಿತ್ರಾ ಸರಸ್ವತಿ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಶ್ಯಾಮಭಟ್ ದರ್ಭೆಮಾರ್ಗ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿ ರಶ್ಮಿ ಸ್ವಾಗತಿಸಿ, ವೈಶಾಲಿ ವಂದಿಸಿದಳು.


