ಬದಿಯಡ್ಕ: ಗ್ರಾಮಪಂಚಾಯಿತಿಯಿಂದ ಲಭಿಸುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಲು ಹಾಗೂ ಸವಿವರಗಳನ್ನು ತಿಳಿಯಲು ಊರಿನ ಜನರು ಗ್ರಾಮಸಭೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ತಿಳಿಸಿದರು.
ಬದಿಯಡ್ಕ ಗ್ರಾಮಪಂಚಾಯಿತಿ 2019-20ನೇ ವರ್ಷದ ವಾರ್ಷಿಕ ಯೋಜನೆಯ ಫಲಾನುಭವಿಗಳ ಅಂಗೀಕಾರ, ಕಟ್ಟಡ ತೆರಿಗೆ ವಸೂಲಿ ಹಾಗೂ ಉದ್ಯೋಗ ಖಾತರಿ ಯೋಜನೆ ವೈಯಕ್ತಿಕ ಫಲಾನುಭವಿಗಳ ಬಗ್ಗೆ ಕಿಳಿಂಗಾರು ಶಾಲೆಯಲ್ಲಿ ಸೋಮವಾರ ನಡೆದ ಗ್ರಾಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅರ್ಹರಿಗೆ ಎಲ್ಲಾ ಸವಲತ್ತುಗಳನ್ನು ನೀಡುವಲ್ಲಿ ಗ್ರಾಮಪಂಚಾಯತ್ ಮುತುವರ್ಜಿ ವಹಿಸುತ್ತಿದೆ. ಕೃಷಿಯ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು. ಜಲಸಂರಕ್ಷಣೆಯ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಆರಂಭಗೊಂಡ ಬಿದಿರು ಕೃಷಿ ಯೋಜನೆಯನ್ನು ಯಶಸ್ವಿಗೊಳಿಸಬೇಕಾಗಿದೆ. ಇಂಗುಗುಂಡಿ, ಕೊಳವೆಬಾವಿಗೆ ನೀರಿಂಗಿಸುವಿಕೆ ಮೊದಲಾದ ವ್ಯವಸ್ಥೆಯ ಮೂಲಕ ಭೂಮಿಗೆ ನೀರಿಂಗಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ನಮ್ಮ ಜಲದಾಹವನ್ನು ನೀಗಿಸಬಹುದಾಗಿದೆ ಎಂದು ಅವರು ಗ್ರಾಮಪಂಚಾಯಿತಿಗೆ ಜನರು ನೀಡಬೇಕಾದಂತಹ ತೆರಿಗೆಗಳನ್ನು ಕ್ಲಪ್ತ ಸಮಯದಲ್ಲಿ ನೀಡಬೇಕು ಎಂದು ಅವರು ತಿಳಿಸಿದರು.
ಬದಿಯಡ್ಕ ಗ್ರಾಮಪಂಚಾಯಿತಿ ಆರೋಗ್ಯ, ವಿದ್ಯಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಜನರಿಗೆ ಲಭಿಸುವಂತಹ ವಿವಿಧ ಸವಲತ್ತುಗಳ ವಿವರಗಳನ್ನು ನೀಡಿದರು. ಬದಿಯಡ್ಕ ಗ್ರಾ.ಪಂ. ಸದಸ್ಯ ಶಂಕರ ಡಿ., ಕಾರ್ಯದರ್ಶಿ ಪ್ರದೀಪ್ ಮಾತನಾಡಿದರು. ವಿವಿಧ ಇಲಾಖೆಗಳ ಅಧಿಕೃತರುಗಳಾದ ಉಣ್ಣಿಕೃಷ್ಣನ್, ಅಶ್ವದಿ, ಅಶ್ರಫ್, ಸುಬೈದ, ನಿವೃತ್ತ ಅಧ್ಯಾಪಕ ಸುಬ್ರಾಯ ಭಟ್ ವಿವರಗಳನ್ನು ನೀಡಿದರು. ಸೋಮವಾರ ಬೆಳಗ್ಗೆ ಪಳ್ಳತ್ತಡ್ಕ ಮುದ್ದುಮಂದಿರದಲ್ಲಿ ಗ್ರಾಮ ಸಭೆ ನಡೆಸಲಾಯಿತು. ಜು.27ರ ತನಕ ವಿವಿಧ ವಾರ್ಡುಗಳ ಗ್ರಾಮಸಭೆಗಳು ನಿಗದಿತ ಸ್ಥಳಗಳಲ್ಲಿ ನಡೆಯಲಿದೆ.
ಅಭಿಮತ:
ವಿವಿಧ ವಾರ್ಡುಗಳ ಗ್ರಾಮಸಭೆಗಳಲ್ಲಿ ಊರಿನ ಎಲ್ಲರೂ ಪಾಲ್ಗೊಳ್ಳುವ ಮೂಲಕ ಸಲಹೆ ಸೂಚನೆಗಳನ್ನು ನೀಡಿ ವಾರ್ಡಿನ ಅಭಿವೃದ್ಧಿಗೆ ಕೈಜೋಡಿಸಬೇಕು. ಗ್ರಾಮಪಂಚಾಯಿತಿಯಿಂದ ವಿವಿಧ ಇಲಾಖೆಗಳ ಮೂಲಕ ಅರ್ಹರಿಗೆ ಲಭಿಸುವ ಎಲ್ಲಾ ಸವಲತ್ತುಗಳ ವಿವರಗಳನ್ನು ಇಲ್ಲಿ ನೀಡಲಾಗುತ್ತದೆ.
ಕೆ.ಎನ್.ಕೃಷ್ಣ ಭಟ್
ಬದಿಯಡ್ಕ ಗ್ರಾ.ಪಂ.ಅಧ್ಯಕ್ಷರು.

