ಬದಿಯಡ್ಕ: ಪಟ್ಟಾಂಬಿಯ ಕರಂಬತ್ತೂರು ಶ್ರೀಚೆರುಕುಡಂಗಾಡ್ ಇರಟ್ಟಯಪ್ಪನ್ ಮಹಾದೇವ ಕ್ಷೇತ್ರದಲ್ಲಿ ಜು.21 ರಿಂದ ಆರಂಭಿಸಿ ಸೆ.14ರ ವರೆಗೆ ಆಯೋಜಿಸಲಾಗಿದ್ದ ಶ್ರೀಮದ್ ಎಡನೀರು ಮಠಾಧೀಶರ 59ನೇ ಚಾತುರ್ಮಾಸ್ಯ ವ್ರತಾಚರಣೆಯನ್ನು ಭಾರೀ ಮಳೆಯ ಕಾರಣ ಸ್ಥಳಾಂತರಿಸಲಾಗಿದೆ ಎಂದು ಮಠದ ಮೂಲಗಳು ತಿಳಿಸಿರುವರು.
ಪಾಲಕ್ಕಾಡ್ ಜಿಲ್ಲೆಯ ಪಟ್ಟಾಂಬಿಯ ಸಹಿತ ಜಿಲ್ಲೆಯಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಚಾತುರ್ಮಾಸ್ಯ ವ್ರತ ಕೈಗೊಳ್ಳಲಿದ್ದ ಶ್ರೀಚೆರುಕುಡಂಗಾಡ್ ಇರಟ್ಟಯಪ್ಪನ್ ಮಹಾದೇವ ಕ್ಷೇತ್ರ ಭಾಗಶಃ ಜಲಾವೃತಗೊಂಡಿರುವುದರಿಂದ ವ್ರತಾಚರಣೆಯ ನಿಚರ್ವಹಣೆಗೆ ಕಷ್ಟ ಸಾಧ್ಯವಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಪ್ರಸ್ತುತ ಸಾಲಿನ ಚಾತುರ್ಮಾಸ್ಯವು ಶ್ರೀಮದ್ ಎಡನೀರು ಮಠದಲ್ಲೇ ಕೈಗೊಳ್ಳಲು ನಿರ್ಧರಿಸಲಾಗಿದ್ದು, ಜು.25 ರಿಂದ ಸಾಂಪ್ರದಾಯಿಕ ಶ್ರದ್ದಾಭಕ್ತಿಗಳಿಂದ 59ನೇ ಚಾತುರ್ಮಾಸ್ಯ ವ್ರತಾನುಷ್ಠಾನ ಪ್ರಾರಂಭಗೊಳ್ಳಲಿದೆ. ಶ್ರೀಗಳು ತಮ್ಮ 58ನೇ ಚಾತುರ್ಮಾಸ್ಯವನ್ನು ಕಳೆದ ಋತುವಲ್ಲಿ ಶ್ರೀಮಠದಲ್ಲೇ ನಿರ್ವಹಿಸಿದ್ದರು. ಶ್ರೀಶಂಕರಾಚಾರ್ಯ ಪರಂಪರೆಯಲ್ಲಿ ಅತೀ ಹೆಚ್ಚು ಬಾರಿ ಚಾತುರ್ಮಾಸ್ಯ ನಿರ್ವಹಿಸುತ್ತಿರುವವರು ಎಡನೀರು ಶ್ರೀಗಳಾಗಿದ್ದಾರೆ.



