HEALTH TIPS

ಅಂತರ್ ರಾಜ್ಯ ರಸ್ತೆ ಬಂದ್-ಭೂಕುಸಿತದ ಭೀತಿಯಲ್ಲಿ ಬದಿಯಡ್ಕದ ಕರಿಂಬಿಲ- ಚೆರ್ಕಳ ಕಲ್ಲಡ್ಕ ಅಂತಾರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ:

   
                          ಬದಿಯಡ್ಕ ಉಕ್ಕಿನಡ್ಕ ತನಕ ವಾಹನ ಸಂಚಾರ ಸಂಪೂರ್ಣ ನಿಲುಗಡೆ
        ಬದಿಯಡ್ಕ: ಕಳೆದ ಮೂರು ದಿನಗಳಿಂದ ನಿರಂತರ ಸುರಿಯುತ್ತಿರುವ ವರ್ಷಧಾರೆಗೆ ಜಿಲ್ಲೆಯ ಹಲವೆಡೆಗಳಲ್ಲಿ ಹಾನಿ ಉಂಟಾಗುತ್ತಿದ್ದು ಬದಿಯಡ್ಕದಲ್ಲಿ ಭಾರೀ ಭೂಕುಸಿತದ ಸಾಧ್ಯತೆಯನ್ನು ಈ ವರ್ಷದ ಮಳೆಗಾಲ ತೆರೆದಿಟ್ಟಿದೆ. ಇಲ್ಲಿನ ಚೆರ್ಕಳ-ಕಲ್ಲಡ್ಕ ಅಂತರಾಜ್ಯ ರಸ್ತೆಯ ಬದಿಯಡ್ಕ ಸಮೀಪದ ಕರಿಂಬಿಲದಲ್ಲಿ ಮಂಗಳವಾರ ಉಂಟಾದ ಪ್ರಾಕೃತಿಕ ದುರಂತದಿಂದಾಗಿ ಇಲ್ಲಿನ ಗುಡ್ಡ ಪ್ರದೇಶವು ಭಾರೀ ಬಿರುಕು ಬಿಟ್ಟಿದ್ದು ಕೆಳ ಭಾಗದ ರಸ್ತೆಯ ವಾಹನ ಸಂಚಾರಕ್ಕೆ ತೀವ್ರ ಆತಂಕವನ್ನೊಡ್ಡಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಇಲ್ಲಿನ ಅಂತರಾಜ್ಯ ರಸ್ತೆಯ ದುರಸ್ತಿ ಕಾಮಗಾರಿ ಆರಂಭವಾಗಿತ್ತು. ಈ ವೇಳೆ ರಸ್ತೆ ಅಗಲಗೊಳಿಸುವ ನೆಪದಲ್ಲಿ ಗುತ್ತಿಗೆದಾರರು ರಸ್ತೆ ಮೇಲಿನ ಗುಡ್ಡೆಯನ್ನು ಅವೈಜ್ಞಾನಿಕವಾಗಿ ಅಗೆದಿದ್ದು ಇದೀಗ ಮಳೆಗಾಲದಲ್ಲಿ ಇಲ್ಲಿ ಭಾರೀ ಭೂ ಕುಸಿತ ಸಂಭವಿಸಲು ಕಾರಣವಾಗುತ್ತಿದೆ. ಕೆಳಭಾಗದ ಬೃಹತ್ತಾಕಾರದ ಮರಗಳು ಈಗಾಗಲೇ ಧರೆಗುರುಳಿದ್ದು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಗುಡ್ಡದ ಮೇಲ್ಭಾಗದಲ್ಲಿ ಭೂಮಿಯು ಸುಮಾರು ಮೀಟರುಗಳಷ್ಟು ಬಿರುಕನ್ನು ಬಿಟ್ಟು, 2 ಫೀಟ್‍ಗಳಷ್ಟು ಕುಸಿದಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಮಳೆಯ ಅಬ್ಬರ ತೀವ್ರವಾದರೆ ಇದು ಯಾವುದೇ ಕ್ಷಣದಲ್ಲಿ ಭಾರೀ ಕುಸಿತಕ್ಕೆ ಕಾರಣವಾಗಲಿದ್ದು ಈ ಬಗ್ಗೆ ನಾಗರಿಕರು ಮಂಗಳವಾರ ಬೆಳಿಗ್ಗೆ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಬದಿಯಡ್ಕ ಪೋಲಿಸ್ ಠಾಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಅವಲೋಕಿಸಿದ್ದು ಉನ್ನತಾಧಿಕಾರಿಯಾದ ಕಾಸರಗೋಡು ಎಎಸ್‍ಪಿ ಶಿಲ್ಪಾ ಡಿ.ಅವರಿಗೆ ಮಾಹಿತಿ ನೀಡಿದ್ದರು. ಇದರಂತೆ ತಕ್ಷಣ ಸ್ಥಳಕ್ಕೆ ಭೇಟಿಯಿತ್ತ ಎಎಸ್‍ಪಿ ಅವರು ಅಗತ್ಯವುಳ್ಳ ರಕ್ಷಣಾ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಬದಿಯಡ್ಕ ಪೊಲೀಸ್ ಠಾಣಾಧಿಕಾರಿಯವರಿಗೆ ಸೂಚನೆಯನ್ನು ನೀಡಿದರು.
       ಭಾರೀ ಆತಂಕದಲ್ಲಿ ಸ್ಥಳೀಯರು:
     ನಿತ್ಯ ನಿರಂತರ ವರ್ಷಧಾರೆಗೆ ಮೀಟರುಗಟ್ಟಲೆ ಭೂ ಕುಸಿತ ಉಂಟಾಗುತ್ತಿದ್ದು ಇದರಿಂದಾಗಿ ಕೆಳಗಿನ ರಸ್ತೆಯ ವಾಹನ ಸಂಚಾರ ಹಾಗೂ ಇಲ್ಲಿನ ನಾಲ್ಕು ಮನೆಗಳು ಹಾಗೂ ರಸ್ತೆಯಲ್ಲಿ ಸಂಚರಿಸುವ ಹಲವಾರು ವಾಹನಗಳು ಆತಂಕವನ್ನು ಎದುರಿಸುತ್ತಿದೆ. ಹೀಗೆ ಕುಸಿತ ಉಂಟಾದರೆ ರಸ್ತೆಯ ಪೂರ್ತಿಭಾಗ ಮುಚ್ಚಿ ಹೋಗುವ ಭೀತಿ ಉಂಟಾಗಿದ್ದು ಮುಂಜಾಗ್ರತಾ ಕ್ರಮವಾಗಿ ರಸ್ತೆ ಸಂಚಾರದಲ್ಲಿ ಬದಲಾವಣೆಗೊಳಿಸಲು ಹಾಗೂ ಮನೆಯವರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲು ಎಎಸ್‍ಪಿ ಡಿ.ಶಿಲ್ಪಾ, ಕಾಸರಗೋಡು ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿ ದೇವಿದಾಸ್ ಆದೇಶಿಸಿದ್ದಾರೆ. ರಸ್ತೆಯ ಮೇಲ್ಭಾಗದ ಗುಡ್ಡದಲ್ಲಿ ಬಿರುಕು ಬಿಟ್ಟಿರುವುದನ್ನು ಕಂಡ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಬದಿಯಡ್ಕ ಹಾಗೂ ನೀರ್ಚಾಲು ವಿಲೇಜ್ ಆಫೀಸರ್‍ಗಳು ಸ್ಥಳಕ್ಕೆ ಭೇಟಿಯಿತ್ತಿದ್ದಾರೆ.
  ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಅಪರಾಹ್ನ ಕಾಸರಗೋಡು ಹೆಚ್ಚುವರಿ ದಂಡಾಧಿಕಾರಿ ದೇವಿದಾಸ್ ಹಾಗೂ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಬದಿಯಡ್ಕ ಗ್ರಾಮಪಂಚಾಯಿತಿ ವಾರ್ಡು ಸದಸ್ಯ ವಿಶ್ವನಾಥ ಪ್ರಭು ಕರಿಂಬಿಲ ಮೊದಲಾದವರು ಸ್ಥಳಕ್ಕೆ ಭೇಟಿಯಿತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮಾತುಕತೆ ನಡೆಸಿದರು.
           ಮುಂಜಾಗ್ರತಾ ಕ್ರಮವಾಗಿ ವಾಹನ ಸಂಚಾರ ನಿಲುಗಡೆ :
    ಚೆರ್ಕಳ ಕಲ್ಲಡ್ಕ ರಸ್ತೆಯ ಕರಿಂಬಿಲದಲ್ಲಿ ರಸ್ತೆಯಿಂದ ಸುಮಾರು 100 ಮೀಟರ್ ಎತ್ತರದಲ್ಲಿ ಗುಡ್ಡವು ಅನೇಕ ಕಡೆ ಬಿರುಕು ಬಿಟ್ಟ ಕಾರಣ ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಸಾಧ್ಯತೆಯಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ರಸ್ತೆಯ ವಾಹನ ಸಂಚಾರವನ್ನು ಸಂಪೂರ್ಣ ನಿಲುಗಡೆಗೊಳಿಸಲಾಗಿದೆ. ಕೆಡೆಂಜಿಯಲ್ಲಿ ಹಾಗೂ ಕಾಡಮನೆಯಲ್ಲಿ ರಸ್ತೆಗೆ ತಡೆಗಳನ್ನು ಇರಿಸಲಾಗಿದೆ. ಕಾಸರಗೋಡು ಪುತ್ತೂರು ಅಂತಾರಾಜ್ಯ ಪ್ರಧಾನ ರಸ್ತೆಯನ್ನು ಮುಚ್ಚುಗಡೆಗೊಳಿಸಿರುವುದರಿಂದ ಪ್ರಯಾಣಿಕರು ಸಂಕಷ್ಟವನ್ನನುಭವಿಸುವಂತಾಯಿತು. ಅನೇಕ ವಾಹನಗಳು ಕೆಡೆಂಜಿಯಿಂದ ತಿರುಗಿ ಕಾಡಮನೆ ತನಕ ಒಳರಸ್ತೆಯಲ್ಲಿ ತೆರಳಬೇಕಾಗಿ ಬಂತು. ಪೆರ್ಲಭಾಗದಿಂದ ತೆರಳುವ ವಾಹನಗಳು ಉಕ್ಕಿನಡ್ಕದಿಂದ ತಿರುಗಿ ಮೆಡಿಕಲ್ ಕಾಲೇಜು ರಸ್ತೆಯಲ್ಲಿ ಸಾಗಿ ಪಳ್ಳ, ಕನ್ನೆಪ್ಪಾಡಿಯಾಗಿ ಸಂಚರಿಸುತ್ತಿದೆ.
     ಅಭಿಮತ: 
         ಪ್ರಸ್ತುತ ಸ್ಥಳವು ತುಂಬಾ ಅಪಾಯಕರ ಸ್ಥಿತಿಯಲ್ಲಿದೆ. ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಗೆ ಸ್ಪಷ್ಟ ಸೂಚನೆಯನ್ನು ನೀಡಲಾಗಿದೆ. ಮಳೆ ಸಂಪೂರ್ಣ ಕಡಿಮೆಯಾದ ಮೇಲೆ ಅವರು ಅಪಾಯಕಾರಿ ಮರಗಳನ್ನು, ಜರಿದು ಬಿದ್ದ ಮಣ್ಣನ್ನು ತೆರವುಗೊಳಿಸಿ ವಾಹನ ಸಂಚಾರ ನಡೆಸಬಹುದು ಎಂದು ತಿಳಿಸಿದ ಮೇಲೆಯೇ ರಸ್ತೆಯನ್ನು ವಾಹನಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಅಪಾಯಕಾರಿ ಸ್ಥಳದಲ್ಲಿರುವ 2 ಮನೆಗಳಿಂದ ಜನರನ್ನು ಕೂಡಲೇ ಸ್ಥಳಾಂತರಿಸಲು ನಿರ್ದೇಶನವನ್ನು ನೀಡಲಾಗಿದೆ.
- ದೇವಿದಾಸ್, ಹೆಚ್ಚುವರಿ ದಂಡಾಧಿಕಾರಿ, ಕಾಸರಗೋಡು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries