ಮಂಜೇಶ್ವರ: ಕೇರಳ ಕೃಷಿ ಅಭಿವೃದ್ದಿ ಕೃಷಿಕ ಕ್ಷೇಮ ಇಲಾಖೆಯ ವರ್ಕಾಡಿ ಗ್ರಾ. ಪಂ. ನ ಜನಪರ ಯೋಜನೆ 2019-20 ರ ಕಾಲಾವಧಿಯಲ್ಲಿ ವಿವಿಧ ಯೋಜನೆಗಳ ಬಗ್ಗೆ ಕೃಷಿಕರಲ್ಲಿ ಜಾಗೃತಿಯನ್ನು ಮೂಡಿಸಿ ತನ್ಮೂಲಕ ಕೃಷಿ ವಲಯವನ್ನು ಉನ್ನತಿಗೇರಿಸುವ ಉದ್ದೇಶದಿಂದ ಕೇರಳ ಕೃಷಿ ಅಭಿವೃದ್ದಿ ಕೃಷಿಕ ಕ್ಷೇಮ ಇಲಾಖೆ ಹಾಗೂ ವರ್ಕಾಡಿ ಗ್ರಾ. ಪಂ. ಜಂಟಿ ಆಶ್ರಯದಲ್ಲಿ ವಾರ್ಡು ಮಟ್ಟದಲ್ಲಿ ಆಯೋಜಿಸಲಾಗಿದ್ದ ಕೃಷಿಕರ ಸಭೆಗಳು ಸಮಾಪ್ತಿಗೊಂಡಿತು.
ಸಭೆಗಳು ನಡೆದ ಸ್ಥಳಗಳಲ್ಲಿ ಕೃಷಿಕರಿಗೆ ಅವರು ಬೆಳೆದ ಕೃಷಿ ಉತ್ಪನ್ನಗಳನ್ನು ಅವರದೇ ಜವಾಬ್ದಾರಿಯಲ್ಲಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಸೌಕರ್ಯವನ್ನು ಏರ್ಪಡಿಸಲಾಗಿತ್ತು. ಈ ಮೂಲಕ ಕೃಷಿ ಅಭಿವೃದ್ದಿ ಯೋಜನೆಯಲ್ಲಿ ಕೃಷಿಕರ ಪಾಲುದಾರಿಕೆಯನ್ನು ದೃಢಗೊಳಿಸುವ ಹಾಗೂ ಸ್ಥಳೀಯ ಕೃಷಿಕರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಕೊಳ್ಳುವಲ್ಲಿ ಅವರ ಅಭಿಪ್ರಾಯಗಳನ್ನು ಹಾಗೂ ನಿರ್ಧೇಶನಗಳನ್ನು ಪಡೆದು ಸಭೆಯಲ್ಲಿ ಸೂಕ್ತವಾದ ಸಲಹೆಗಳನ್ನು ಕೂಡಾ ನೀಡಲಾಯಿತು.
ಗುರುವಾರ ಬಾಕ್ರಬೈಲ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕೃಷಿಕರ ಸಭೆಯನ್ನು ವರ್ಕಾಡಿ ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ಮಜೀದ್ ಬಿ ಎ ಉದ್ಘಾಟಿಸಿದರು.
ಗ್ರಾ.ಪಂ. ಸದಸ್ಯೆ ಮೈಮೂನ ಆಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಅಧಿಕಾರಿ ಶಫೀಕ್ ಎಂ ಹಾಗೂ ವರ್ಕಾಡಿ ಕೃಷಿ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಅನೂಪ್ ಅವರು ಕೃಷಿ ವಲಯವನ್ನು ಅಭಿವೃದ್ದಿ ಪಡಿಸುವ ನಿಟ್ಟಿನ ಸಮಗ್ರ ಮಾಹಿತಿ ನೀಡಿದರು.
ವರ್ಕಾಡಿ ಗ್ರಾ. ಪಂ. ನಿಕಟಪೂರ್ವ ಅಧ್ಯಕ್ಷ ಅಬೂಬಕ್ಕರ್ ಪಾತೂರು, ಬಾಕ್ರಬೈಲ್ ಶಾಲೆಯ ಮುಖ್ಯೋಪಾಧ್ಯಾಯ ಪಿ.ಬಿ. ಶ್ರೀನಿವಾಸ್ ರಾವ್, ಸುರೇಶ್, ಅಭಿಯಂತರ ಅನ್ಸಾರ್ ಆನೆಕಲ್ಲು , ಮುರಳೀ ಕೃಷ್ಣ, ಕೃಷಿಕರಾದ ವಸಂತ ಭಂಡಾರಿ, ಕೆ ವಿಠಲ್ ನಾಯ್ಕ್, ನೇಮಿರಾಜ ಶೆಟ್ಟಿ, ರಮೇಶ್ ಬಾಕ್ರಬೈಲ್ ಸಹಿತ ಹಲವರು ಉಪಸ್ಥಿತರಿದ್ದ ಶುಭಾಂಶಸನೆಗೈದರು. ಈ ಸಂದರ್ಭ ಕೃಷಿ ವಲಯದಲ್ಲಿ ಉತ್ತಮ ಸಾಧನೆಗೈದ ಕೃಷಿಕರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.


