ಬದಿಯಡ್ಕ: ಗೋಳಿಯಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ವಿಜ್ಞಾಪನಾ ಪತ್ರವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಇತ್ತೀಚೆಗೆ ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಊರಿನ ದೈವಿಕ ಸಾನ್ನಿಧ್ಯಗಳು ಜೀರ್ಣೋದ್ಧಾರಗೊಳ್ಳುವುದರಿಂದ ಊರಿಗೇ ಒಳಿತುಂಟಾಗುತ್ತದೆ. ಎಲ್ಲರ ಒಗ್ಗಟ್ಟಿನ ಪರಿಶ್ರಮದ ಫಲ ಊರಿನ ಜನತೆಗೆ ಲಭಿಸಲಿ. ಜೀರ್ಣೋದ್ಧಾರ ಕಾರ್ಯಗಳು ಅಚ್ಚುಕಟ್ಟಾಗಿ ನಡೆದು ಅತಿಶೀಘ್ರದಲ್ಲಿ ಬ್ರಹ್ಮಕಲಶ ಜರಗಲಿ ಎಂದು ಶುಭಹಾರೈಸಿದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ., ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಾದ ಕೃಷ್ಣ ಪ್ರಸಾದ ರೈ ಪೆರಡಾಲ, ಗಂಗಾಧರ ಗೋಳಿಯಡ್ಕ, ಸೋಮನಾಥ ಗೋಳಿಯಡ್ಕ, ಉಮೇಶ ಗೋಳಿಯಡ್ಕ, ಬಾಲಕೃಷ್ಣ ಗೋಳಿಯಡ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


