ವಾರಣಾಸಿ: ಇನ್ನು 5 ವರ್ಷಗಳಲ್ಲಿ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ತಲುಪುವ ಗುರಿ ಸಾಧಿಸಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಶುಕ್ರವಾರ ಮಂಡಿಸಲಾದ ಬಜೆಟ್ ನಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಲು ಪ್ರಯತ್ನಿಸುವುದಾಗಿ ಹೇಳಿ ಅದಕ್ಕೆ ಸಂಬಂಧಿಸಿದ ನಿರ್ಧಾರವನ್ನು ಘೋಷಿಸಿದ್ದೇವೆ. ಮುಂದಿನ 10 ವರ್ಷಗಳಲ್ಲಿ ದೇಶ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಕುರಿತು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ, ಮುಂದಿನ 5 ವರ್ಷಗಳಲ್ಲಿ ದೇಶದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ನಷ್ಟು ಏರಿಕೆಯಾಗಲಿದೆ ಎಂಬ ವಿಶ್ವಾಸ ಕೂಡ ನಮಗಿದೆ ಎಂದರು.
ಅವರು ನಿನ್ನೆ ತಮ್ಮ ಸ್ವಕ್ಷೇತ್ರ ವಾರಣಾಸಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದರು.
ಇದರ ಅಗತ್ಯವಾದರೂ ಏನೆಂದು ಕೆಲವರು ಕೇಳುತ್ತಾರೆ, ಇಂತವರನ್ನು ವೃತ್ತಿಪರ ನಿರಾಶಾವಾದಿಗಳು ಎಂದು ಕರೆಯುತ್ತೇವೆ ಎಂದರು. 5 ಟ್ರಿಲಿಯನ್ ಆರ್ಥಿಕತೆ ಎಂದರೇನು, ಅದು ಹೇಗೆ ಭಾರತದ ಪ್ರತಿಯೊಬ್ಬ ನಾಗರಿಕರಿಗೆ ಸಂಬಂಧಿಸುತ್ತದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು.
ಇಂಗ್ಲಿಷ್ ನಲ್ಲಿ ಒಂದು ಮಾತಿದೆ, ಕೇಕ್ ನ ಗಾತ್ರ ಮುಖ್ಯವಾಗುತ್ತದೆ, ಅಂದರೆ ಅದರ ಅರ್ಥ, ಕೇಕ್ ದೊಡ್ಡದಾಗಿದ್ದರೆ ಜನರಿಗೆ ದೊಡ್ಡ ತುಂಡು ಸಿಗುತ್ತದೆ, ಹೀಗಾಗಿ ನಾವು 5 ಟ್ರಿಲಿಯನ್ ಡಾಲರ್ ಆರ್ಥಿಕತೆ ನಿಗದಿಪಡಿಸಿದ್ದೇವೆ ಎಂದರು.
ಬಳಿಕ ದೇಶದ ಇಂದಿನ ಬಹುದೊಡ್ಡ ಸಮಸ್ಯೆಯಾದ ನೀರಿನ ಬಗ್ಗೆ ಮಾತನಾಡಿದ ಪ್ರಧಾನಿ, ನೀರಿನ ಲಭ್ಯತೆಗಿಂತ ಹೆಚ್ಚಾಗಿ ನೀರನ್ನು ವ್ಯರ್ಥ ಮಾಡುವುದು ಮತ್ತು ಅಸಡ್ಡೆ ಬಳಕೆ ದೊಡ್ಡ ಸಮಸ್ಯೆಗಳಾಗಿವೆ. ಹೀಗಾಗಿ ನೀರನ್ನು ಮನೆಯಲ್ಲಿಯೇ ಬಳಸಿ ಅಥವಾ ನೀರಾವರಿಗೆ ಬಳಸಿ, ನೀರನ್ನು ವ್ಯರ್ಥ ಮಾಡಬಾರದು ಎಂದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಿಜೆಪಿ ಸದಸ್ಯತ್ವ ಅಭಿಯಾನ ಜೊತೆಗೆ ವಾರಣಾಸಿಯಲ್ಲಿ ಗಿಡ ನೆಡುವ ಅಭಿಯಾನಕ್ಕೆ ಕೂಡ ಚಾಲನೆ ನೀಡಿದರು.
#WATCH Prime Minister Narendra Modi launches tree plantation drive in Varanasi.


