ಮಂಜೇಶ್ವರ: ಉದಯೋನ್ಮುಖ ಕವಯಿತ್ರಿ ಕುಶಲಾಕ್ಷಿ ವಿ.ಕುಲಾಲ್ ಕಣ್ವತೀರ್ಥ ಇವರ ನಾಲ್ಕನೇ ಕೃತಿ "ಪನಿ ಮುತ್ತು ಮಾಲೆ" ತುಳು ಕವನ ಸಂಕಲನವು ಶನಿವಾರ ಬೆಳಿಗ್ಗೆ ಮಡಂತ್ಯಾರು,ನಡುಬೊಟ್ಟು ಶ್ರೀರೌದ್ರನಾಥೇಶ್ವರ ಕ್ಷೇತ್ರದ ಚಾವಡಿಯಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ರವಿ.ಎನ್. ನಡುಬೊಟ್ಟುರವರ ದಿವ್ಯಹಸ್ತದಿಂದ ಲೋಕಾರ್ಪಣೆ ಗೊಂಡಿತು.
ಲೇಖಕಿಯ ಪತಿ ವಾಸು ಕುಲಾಲ್ ಕಣ್ವತೀರ್ಥ, ಹಿತೈಷಿ ಬಳಗದ ಅಶೋಕ್ ಕುಲಾಲ್ ಮಂಗಳೂರು ಮತ್ತಿತರರು ಉಪಸ್ಥಿತರಿದ್ದರು.
ತುಳು ಹಾಗೂ ಕನ್ನಡ ಲಿಪಿಯಲ್ಲಿ ಮುದ್ರಿತಗೊಂಡಿರುವುದು ಈ ಕೃತಿಯ ವಿಶೇಷತೆಯಾಗಿದೆ. ಕೃತಿಗೆ ಖ್ಯಾತ ತುಳು- ಕನ್ನಡ ಲೇಖಕ,ಸಾಹಿತಿ ಕೆ. ಮಹೇಂದ್ರನಾಥ ಸಾಲೆತ್ತೂರು ಮುನ್ನುಡಿ ಬರೆದಿದ್ದು ಖ್ಯಾತ ಲೇಖಕ ಹಾಗೂ ವಿಮರ್ಶಕ ಟಿ.ಎ.ಎನ್. ಖಂಡಿಗೆ ಶುಭನುಡಿಗಳನ್ನೂ, ತುಳು ಲಿಪಿ ಶಿಕ್ಷಕಿ ತುಳು-ಕನ್ನಡ ಸಾಹಿತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯ ಸದಸ್ಯರೂ ಆಗಿರುವ ವಿದ್ಯಾಶ್ರೀ ಉಳ್ಳಾಲ ಬೆನ್ನುಡಿಯನ್ನೂ ಬರೆದಿರುವರು. ಈ ಕೃತಿಯು ಇತ್ತೀಚೆಗೆ ಆಕಾಶವಾಣಿ ಮಂಗಳೂರು ಕೇಂದ್ರದ ತುಳು ಕೃತಿ/ಸಿಡಿ ಬಿಡುಗಡೆಯ ವಿನೂತನ ಕಾರ್ಯಕ್ರಮ "ಸ್ವರಮಂಟಮೆ"ಯಲ್ಲಿ ಸಾಂಕೇತಿಕವಾಗಿ ಅನಾವರಣಗೊಂಡಿತ್ತು.


