ಕಾಸರಗೋಡು: ಪುತ್ತಿಗೆ ಗ್ರಾಮಪಂಚಾಯತಿ ಕನ್ಯಪ್ಪಾಡಿಯಲ್ಲಿ ಇಬ್ಬರು ಮಕ್ಕಳು ಜ್ವರದಿಂದ ಮೃತಪಟ್ಟಿರುವ ವಿಚಾರದಲ್ಲಿ ಸಾರ್ವಜನಿಕರು ಭಯಭೀತರಾಗಬೇಕಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ಪಷ್ಟಪಡಿಸಿರುವರು.
ಜು.22ರಂದು ಈ ಮಕ್ಕಳನ್ನು ಜ್ವರಬಾಧೆಯಿಂದ ಮಂಗಳೂರಿನ ಖಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಕ್ಕಳ ತಾಯಿಗೂ ಜ್ವರಬಾಧೆಯಿದೆ. ಅಗತ್ಯವಿದ್ದಲ್ಲಿ ಇವರನ್ನು ಪರಿಣತ ಚಿಕಿತ್ಸೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಅಥವಾ ಕೋಝಿಕೋಡ್ ಮೆಡಿಕಲ್ ಕಾಲೇಜಿಗೆ ಕರೆದೊಯ್ಯಲಾಗುವುದು ಎಂದು ಜಿಲ್ಲಾ ವೈದ್ಯಾಧಿüಕಾರಿ ತಿಳಿಸಿರುವರು. ಮಕ್ಕಳ ಹೆತ್ತವರ ರಕ್ತದ ಸ್ಯಾಂಪಲ್ ಪರಿಣತ ತಪಾಸಣೆಗಾಗಿ ಕಳುಹಿಸಲಾಗಿದೆ. ಜನರು ಭಯಗೊಳ್ಳ ಬೇಕಾದ ಪರಿಸ್ಥಿತಿ ಇಲ್ಲ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿರುವರು.
ಪರಿಣತ ತಂಡ ಭೇಟಿ:
ಜ್ವರ ಬಾಧೆಯಿಂದ ಇಬ್ಬರುಮಕ್ಕಳು ಮೃತಪಟ್ಟಿರುವ ವರದಿಯ ಹಿನ್ನೆಲೆಯಲ್ಲಿ ಆರೋಗ್ಯ ವಲಯದ ಪರಿಣತರ ತಂಡ ಈ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿ ಸ್ಥಿತಿಗತಿ ಅವಲೋಕನ ನಡೆಸಿದೆ. ಸಾರ್ವಜನಿಕರು ಭೀತರಾಗಬೇಕಾದ ಅಗತ್ಯವಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿ ಬಳಿಕ ಪ್ರಕಟಣೆ ಹೊರಡಿಸಿರುವರು.
ಈ ಸಂಬಂಧ ಕೆಲವು ಅಪಪ್ರಚಾರ ಹರಿಡಿಕೊಂಡಿದ್ದು, ಅದನ್ನುಜನ ನಂಬಬಾರದು ಎಂದವರು ವಿನಂತಿಸಿದ್ದಾರೆ. ಆರೋಗ್ಯ ಇಲಾಖೆ ಈ ಪ್ರದೇಶದ ಬಗ್ಗೆ ನಿಗಾ ಇರಿಸಿದೆ. ಅಗತ್ಯ ಮುಂಜಾಗರೂಕ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಜನಜಾಗೃತಿ ಚಟುವಟಿಕೆಗಳನ್ನೂ ಇಲ್ಲಿ ನಡೆಸಲಾಗುವುದು ಎಂದು ಇಲಾಖೆ ತಿಳಿಸಿದೆ.


