ಮೂರು ಟಿಪ್ಪಣಿಗಳು ಇಲ್ಲಿವೆ.
೧. ಎಳೆಯರೂ ಗೆಳೆಯರೂ, ಎಳೆಯಬಾರದ್ದನ್ನು ಎಳೆಯಬಾರದು; ಅಷ್ಟೇ ಮುಖ್ಯವಾಗಿ, ಎಳೆಯಬೇಕಾದ್ದನ್ನು ಎಳೆಯದಿರಬಾರದು.
‘ಮುಂದೆ ಶತ್ರುವಾಗಬಲ್ಲವನೆ ನಿಜವಾದ ಗೆಳೆಯ’ - ಈ ವಾಕ್ಯದಲ್ಲಿ ಎರಡನೆಯ ಪದವನ್ನು ‘ಶತ್ರುವಾಗಬಲ್ಲವನೇ’ ಎಂದು ಬರೆಯಬೇಕು.
‘ಇಲ್ಲಿ ಯಾರು ಮೂತ್ರ ಮಾಡಬಾರದು’ - ಈ ವಾಕ್ಯದಲ್ಲಿ ಎರಡನೆಯ ಪದವನ್ನು ‘ಯಾರೂ’ ಎಂದು ಬರೆಯಬೇಕು.
‘ಒಳಿತಾಗಲಿ ಎಂಬುದಷ್ಟೆ ನಮ್ಮ ಹಾರೈಕೆ’ - ಈ ವಾಕ್ಯದಲ್ಲಿ ಎರಡನೆಯ ಪದವನ್ನು ‘ಎಂಬುದಷ್ಟೇ’ ಎಂದು ಬರೆಯಬೇಕು.
‘ಅನಿಸುತಿದೆ ಯಾಕೊ ಇಂದು ನೀನೇನೇ ನನ್ನವಳೆಂದು...’ - ಈ ವಾಕ್ಯದಲ್ಲಿ ಎರಡನೆಯ ಪದವನ್ನು ‘ಯಾಕೋ’ ಎಂದು ಬರೆಯಬೇಕು.
‘ತನ್ನವರ ಒಳಿತಾಗಲಿ ತನಗಾಗದವರ ಕೆಡುಕಾಗಲಿ ಮೋದಿಯವರ ಧ್ಯೇಯ ಅಲ್ಲವೆ ಅಲ್ಲ; ದೇಶಸೇವೆಯೊಂದೆ ಧ್ಯೇಯ.’ - ಈ ವಾಕ್ಯದಲ್ಲಿ ಎರಡನೆಯ ಪದವನ್ನು ‘ಒಳಿತಾಗಲೀ’ ಎಂದು, ನಾಲ್ಕನೆಯ ಪದವನ್ನು ‘ಕೆಡುಕಾಗಲೀ’ ಎಂದು, ಏಳನೆಯ ಪದವನ್ನು ‘ಅಲ್ಲವೇ’ ಎಂದು, ಮತ್ತು, ಒಂಬತ್ತನೆಯ ಪದವನ್ನು ‘ದೇಶಸೇವೆಯೊಂದೇ’ ಎಂದು ಬರೆಯಬೇಕು.
====
೨. ಅಬ್ದ ಎಂದರೆ ವರ್ಷ; ಅಬ್ಧಿ ಎಂದರೆ ಸಮುದ್ರ
60ನೆಯ ವರ್ಷದಲ್ಲಿ ಆಚರಿಸುವುದು ಷಷ್ಟ್ಯಬ್ದ ಸಮಾರಂಭ. ಇದು ‘ಷಷ್ಟಿ’ (ಅಲ್ಪಪ್ರಾಣ ಟ ಒತ್ತು ಗಮನಿಸಿ) ಮತ್ತು ‘ಅಬ್ದ’ (ಅಲ್ಪಪ್ರಾಣ ದ ಒತ್ತು ಗಮನಿಸಿ) ಇವೆರಡು ಪದಗಳು ಯಣ್ ಸಂಧಿಯಲ್ಲಿ ಸೇರಿ ಆಗಿರುವ ಪದ.
ಷಷ್ಟಿ ಎಂದರೆ 60 [ಷಷ್ಠೀ ಎಂದರೆ ಆರನೆಯದು (ತಿಥಿ, ವಿಭಕ್ತಿ ಇತ್ಯಾದಿ) ಎಂದು ಗಮನಿಸಿ]. ಅಬ್ದ ಎಂದರೆ ವರ್ಷ ಅಥವಾ ಸಂವತ್ಸರ ಎಂದು ಅರ್ಥ. ಅಬ್ದಪ ಎಂದರೆ ವರ್ಷಾಧಿಪತಿ. ಅಬ್ದ ಎಂಬ ಪದಕ್ಕೆ ಮೋಡ ಎಂಬ ಅರ್ಥವೂ ಇದೆ, ಹಾಗಾಗಿ ಅಬ್ದವಾಹನ ಎಂದರೆ ಇಂದ್ರ.
ಆದರೆ ಷಷ್ಟ್ಯಬ್ದ ಸಮಾರಂಭದ ಕರೆಯೋಲೆಗಳಲ್ಲಿ, ವಾರ್ತೆ-ವರದಿಗಳಲ್ಲಿ, ಶುಭಾಶಯ ಸಂದೇಶಗಳಲ್ಲಿ, ಫ್ಲೆಕ್ಸ್-ಬ್ಯಾನರ್‌ಗಳಲ್ಲಿ ನಾವು ‘ಷಷ್ಠ್ಯಬ್ದ’, ‘ಷಷ್ಠ್ಯಬ್ಧ’, ‘ಷಷ್ಠ್ಯಬ್ದಿ’, ‘ಷಷ್ಠ್ಯಬ್ಧಿ’, ‘ಷಷ್ಟ್ಯಬ್ಧ’, ‘ಷಷ್ಟ್ಯಬ್ಧಿ’, ‘ಷಷ್ಠ್ಯಭ್ಧ’ ... ಮುಂತಾದ ಹಲವು ಬಗೆಯ ತಪ್ಪು ರೂಪಗಳಲ್ಲೊಂದನ್ನು ಕಾಣುವ ಸಾಧ್ಯತೆಯೇ ಹೆಚ್ಚು. ಸರಿಯಾದ ಪದ ‘ಷಷ್ಟ್ಯಬ್ದ’ ವನ್ನು ನೆನಪಿಡಲಿಕ್ಕೆ ಬಳಸಬಹುದಾದ ನೆನೆಗುಬ್ಬಿ: “ಎರಡೂ ಪಟ್ಟೆ ‘ಷ’ಗಳು, ಎಲ್ಲವೂ ಅಲ್ಪಪ್ರಾಣ ಅಕಾರಾಂತ ವ್ಯಂಜನಗಳು".
ಇದೇ ರೀತಿಯಲ್ಲಿ ಶತಾಬ್ದಿ, ಶತಾಬ್ಧಿ ಮುಂತಾದುವೂ ತಪ್ಪು ರೂಪಗಳು, ಆದರೆ ಬಳಕೆಯಲ್ಲಿವೆ. ‘ಶತಾಬ್ದ’ ಸರಿಯಾದ ರೂಪ.
ಅಬ್ಧಿ (ಮಹಾಪ್ರಾಣ ಧ ಒತ್ತು ಗಮನಿಸಿ) ಎಂದರೆ ಸಮುದ್ರ ಎಂದು ಅರ್ಥ. ಅಬ್ಧಿಕನ್ಯಾ/ಅಬ್ಧಿತನಯಾ/ಅಬ್ಧಿಸುತಾ ಎಂದರೆ ಲಕ್ಷ್ಮಿ. ಕ್ಷೀರಾಬ್ಧಿಕನ್ಯಾ ಎಂದರೂ ಲಕ್ಷ್ಮಿಯೇ (‘ಕ್ಷೀರಾಬ್ಧಿಕನ್ಯಕಕು ಶ್ರೀಮಹಾಲಕ್ಷ್ಮಿಕಿನಿ...’ಅನ್ನಮಾಚಾರ್ಯರ ಕೃತಿ). ಅಬ್ಧಿಶಯ ಎಂದರೆ ವಿಷ್ಣು. ಅಬ್ಧಿಜ ಎಂದರೆ ಚಂದ್ರ, ಶಂಖ, ಕಲ್ಪವೃಕ್ಷ ಮುಂತಾದುವು ಸಮುದ್ರದಲ್ಲಿ ಹುಟ್ಟಿದವೆನ್ನಲಾದುವು.
====
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು:
ಅ) ಹೊತ್ತಗೆ (ಪುಸ್ತಕ) ಸರಿ. ಹೊತ್ತಿಗೆ ತಪ್ಪು
ಆ) ತಿಳಿವಳಿಕೆ (ಜ್ಞಾನ) ಸರಿ. ತಿಳುವಳಿಕೆ ತಪ್ಪು. ‘ತಿಳಿ’ ಎಂಬ ಧಾತುವಿನಿಂದ ಬಂದದ್ದಾದ್ದರಿಂದ ತಿಳಿವಳಿಕೆ.
ಇ) ಚಳವಳಿ (ಆಂದೋಲನ) ಸರಿ. ಚಳುವಳಿ ತಪ್ಪು. ‘ಚಲನೆ’ಯ (movementನ) ‘ಚಲ’ ಧಾತುವಿನಿಂದ ಬಂದದ್ದಾದ್ದರಿಂದ ಚಳವಳಿ.
ಈ) ಬೆಳಗ್ಗೆ (ಮುಂಜಾನೆ) ಸರಿ. ‘ಬೆಳಿಗ್ಗೆ’ ರೂಢಿಯಲ್ಲಿದೆ ಅಷ್ಟೇ. ಬೆಳಗು, ಬೆಳಕು ಮುಂತಾದುವುಗಳಂತೆಯೇ ಬೆಳಗ್ಗೆ.
ಉ) ಮಡಕೆ (ಕುಂಬಾರನು ಮಣ್ಣಿನಿಂದ ಮಾಡಿದ ಪಾತ್ರೆ) ಸರಿ. ಮಡಿಕೆ ಎಂದರೆ ಮಡಚುವ (folding) ಪ್ರಕ್ರಿಯೆಯಿಂದಾದದ್ದು.



