ಪೆರ್ಲ : ಭೂಗರ್ಭ ಜಲ ಸಂರಕ್ಷಣೆಗಾಗಿ ಬಿದಿರು ಸಸಿ ನೆಡುವ ಕಾರ್ಯಕ್ರಮ ಎಣ್ಮಕಜೆ ಗ್ರಾಮ ಪಂಚಾಯತಿ 5ನೇ ವಾರ್ಡಿನ ಸೂರ್ಡೇಲಿನಲ್ಲಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯ ಆಶ್ರಯದಲ್ಲಿ ಭಾನುವಾರ ನಡೆಯಿತು.
ಗ್ರಾಮ ಪಂಚಾಯತಿ ಪ್ರತಿನಿಧಿ ಪುಟ್ಟಪ್ಪ ಕೆ ಖಂಡಿಗೆ ಬಿದಿರು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಂಚಾಯತಿಯ ಮೂರು ಎಕರೆ ಜಾಗದಲ್ಲಿ ಸುಮಾರು ಆರುನೂರು ಸಸಿಗಳನ್ನೂ , 5ನೇ ವಾರ್ಡಿನಲ್ಲಿ ಸಾವಿರದ ಏಳುನೂರು ಗಿಡಗಳನ್ನು ನೆಡಲಾಗುತ್ತದೆ. ಜಿಲ್ಲೆಯಲ್ಲಿ ತೀವ್ರ ಕುಡಿಯುವ ನೀರಿನ ಬರ ಎದುರುಸುತ್ತಿರುವ ಹಿನ್ನಲೆಯಲ್ಲಿ ಈ ಯೋಜನೆ ಬರ ಪರಿಹಾರಕ್ಕೆ ಪರಿಣಾಮಕಾರಿಯಾಗಿ ಸ್ಪಂದಿಸಬಲ್ಲುದು. ನೀರಿನ ಅಭಾವ ಮಾತ್ರವಲ್ಲ ಪರಿಸರಕ್ಕೆ ಪರಿಶುದ್ದವಾದ ಗಾಳಿಯನ್ನು ಸಮರ್ಪಕವಾಗಿ ಒದಗಿಸುವ ಸಾಮಥ್ಯ ಬಿದಿರಿಗೆ ಇದೆ ಎಂದು ಅವರು ಈ ಸಂದರ್ಭ ತಿಳಿಸಿದರು.ಸಾಮಾಜಿಕ ಮುಂದಾಳು ಟಿ.ಪ್ರಸಾದ್ ಪೆರ್ಲ ಉಪಸ್ಥಿತರಿದ್ದರು. ಶಾರದಾ ಕೆಜೆಕ್ಕಾರ್ ಸ್ವಾಗತಿಸಿ, ಲಲಿತಾ ಬೋಳುಬೈಲು ವಂದಿಸಿದರು.


