ಕುಂಬಳೆ: ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಮಂಗಳವಾರ ಗುರು ಪೂರ್ಣಿಮಾ ಕಾರ್ಯಕ್ರಮ ನಡೆಯಿತು. ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಚಿಸಿ ಗುರು ಪೌರ್ಣಮಿಯನ್ನು ಆಚರಿಸಿದರು.
ಈ ಸಂದರ್ಭ ವಿದ್ಯಾರ್ಥಿಗಳಿಂದ ಗುರುಭಜನೆ, ರಾಮಭಜನೆ,ಶ್ರೀಲಕ್ಷ್ಮೀನರಸಿಂಹ ಕರಾವಲಂಬ ಸ್ತೋತ್ರಗಳ ಪಾರಾಯಣ ನಡೆಯಿತು. ಶ್ರೀಗುರು ಪ್ರತಿನಿಧಿಗಳಾದ ಸೇಡಿಗುಳಿ ರಾಮಕೃಷ್ಣ ಭಟ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶ್ರೀಗುರುವಿನಲ್ಲಿ ಬ್ರಹ್ಮನನ್ನೂ ವಿಷ್ಣುವನ್ನೂ ಮಹೇಶ್ವರನನ್ನೂ ಕಾಣುವುದರೊಂದಿಗೆ ಗುರುವಿಗೆ ಶಾಶ್ವತವಾದ ಪರಬ್ರಹ್ಮಸ್ಥಾನವನ್ನು ಸ್ಥಾಪಿಸಿದ ಸುಸಂಸ್ಕøತಿ ನಮ್ಮದು. ಯಾವುದೇ ಕಾರ್ಯಕ್ಕೆ ಮೊದಲು ನಾವು ಗುರುಸ್ಮರಣೆ ಮಾಡುವುದು ಮುಖ್ಯ ಎಂದು ಕಿವಿಮಾತು ಹೇಳಿದರು.
ಶಾಲಾ ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ ಮಾತನಾಡಿ ಗುರುವೆಂಬ ಪದದ ವ್ಯಾಪ್ತಿ ವಿಶಾಲವಾಗಿದ್ದು ನಮ್ಮ ಬದುಕಿನಲ್ಲಿ ಹಾದುಹೋಗುವ ಸಂಬಂಧವನ್ನು ಗುರುತ್ವವನ್ನು ನೀಡಿ ನಿರೂಪಿಸಿರುವರು. ಮೊದಲು ಶಿಕ್ಷಣನೀಡುವ ಗುರುಗಳು, ತಂದೆ-ತಾಯಿ, ಜೇಷ್ಠ ಸಹೋದರ, ಪುರೋಹಿತರು,ಸೋದರಮಾವ ಮೊದಲಾದವರು ಗುರುತ್ವದಿಂದ ವ್ಯಕ್ತಿಯನ್ನು ಮುನ್ನಡೆಸುತ್ತಾರೆ. ಈ ಸಂಸ್ಕಾರವನ್ನು ಕಿರಿಯರಿಗೆ ತಿಳಿಸಿಕೊಡುವುದು ಗುರುಪೂರ್ಣಿಮೆಯ ವಿಶೇಷವಾಗಿದೆ ಎಂದು ತಿಳಿಸಿದರು.
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಶ್ಯಾಮರಾಜ ದೊಡ್ಡಮಾಣಿ, ಮುಖ್ಯ ಶಿಕ್ಷಕಿ ಚಿತ್ರಾಸರಸ್ವತಿ ಪೆರಡಾನ ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕ ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.


