ಉಪ್ಪಳ: ನಾಶದ ಅಂಚಿನಲ್ಲಿರುವ ಸಿಪಿಎಂ ತನ್ನ ಅಡಳಿತವಿರುವ ಕೇರಳದಲ್ಲಿ ಅರಾಜಕತೆ ಸೃಷ್ಠಿಸುತ್ತಿದೆ. ಅದರ ನಾಯಕರುಗಳು ಸ್ವಯಂಕೃತ ಅಪರಾಧಗಳಿಂದ ಪ್ರತಿಷ್ಠೆ ಕಳೆದುಕೊಂಡಿದ್ದಾರೆ. ಪೊಲೀಸ್ ಇಲಾಖೆ ಅಪರಾಧಿಗಳನ್ನು ಸಂರಕ್ಷಿಸುತ್ತಿದೆ, ಸರ್ಕಾರಿ ಇಲಾಖೆಗಳೆಲ್ಲ ಭ್ರಷ್ಟಾಚಾರದಲ್ಲಿ ತೊಡಗಿದೆ. ವಿಶ್ವವಿದ್ಯಾಲಯಗಳನ್ನು ಎಡರಂಗದ ಸಂಘಟನೆಗಳು ತನ್ನ ಆಸ್ಥಾನವಾಗಿ ಮಾರ್ಪಾಡಗಿಸಿ ಅಪರಾಧ ಕೃತ್ಯಗಳನ್ನು ಎಸಗುವ ಕೇಂದ್ರಗಳಾಗಿವೆ. ವಿದ್ಯಾವಂತರಿಗೆ ಉದ್ಯೋಗ ನೀಡಬೇಕಾದ ಲೋಕಸೇವಾ ಆಯೋಗ ಕ್ರಿಮಿನಲ್ ಗಳಿಗೆ ಮೊದಲ ರ್ಯಾಂಕ್ ನೀಡುವ ಕೇಂದ್ರಗಳಾಗಿವೆ. ಇಂತಹ ಸ್ವಯಂಕೃತ ಅಪರಾಧಗಳಿಂದ ಎಡರಂಗ ಇಂದು ನಾಶದ ಅಂಚಿನಲ್ಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ವಿ.ಕೆ. ಸಜೀವನ್ ಹೇಳಿದರು.
ಮಂಗಲ್ಪಾಡಿಯಲ್ಲಿ ಮಂಗಳವಾರ ನಡೆದ ಬಿಜೆಪಿ ಮಂಜೇಶ್ವರ ಮಂಡಲ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಲು ಕರೆ ನೀಡಿದ ಅವರು, ವಿದ್ಯುತ್ ದರ ಏರಿಕೆ ಮಾಡಿರುವ ಸರ್ಕಾರದ ಕ್ರಮ ಖಂಡನಿಯ ಎಂದು ಹರಿಹಾಯ್ದರು.
ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ನ್ಯಾಯವಾದಿ.ಕೆ.ಶ್ರೀಕಾಂತ್, ಮುಖಂಡರಾದ ಬಾಲಕೃಷ್ಣ ಶೆಟ್ಟಿ, ರವೀಶ ತಂತ್ರಿ ಕುಂಟಾರು, ಬಾಲಕೃಷ್ಣ ಶೆಟ್ಟಿ, ಎ.ಕೆ. ಕಯ್ಯಾರ್, ಸರೋಜ ಆರ್.ಬಲ್ಲಾಳ್, ದಿನೇಶ್ ಚೆರುಗೋಳಿ ಹಾಗೂ ವಿವಿಧ ಪಂಚಾಯತಿ ಪ್ರಮುಖರು ಉಪಸ್ಥಿತರಿದ್ದರು. ಮಂಡಲ ಪ್ರ.ಕಾರ್ಯದರ್ಶಿ ಆದರ್ಶ್ ಬಿ.ಎಂ. ಸ್ವಾಗತಿಸಿ, ಮಣಿಕಂಠ ರೈ ವಂದಿಸಿದರು.


