ಕಾಸರಗೋಡು: ವಿದ್ಯಾನಗರದ ಚಿನ್ಮಯ ವಿದ್ಯಾಲಯದಲ್ಲಿ ಹರಿತ ಕೇರಳ ಮಿಷನ್‍ನ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಸಂಘಟಕ ಎಂ.ವಿ.ಸುಬ್ರಹ್ಮಣ್ಯನ್ ಅವರು ಜಿಲ್ಲಾಧಿಕಾರಿ ಡಾ|ಸಜಿತ್‍ಬಾಬು ಅವರು ಆಯೋಜಿಸಿದ `ಜಲಕ್ಷಾಮ ಅಭಿಯಾನ' ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕೇರಳದಲ್ಲಿ ಕಾಸರಗೋಡು ಹಾಗು ಪಾಲ್ಘಾಟಿನ ಚಿಟ್ಟಾರಿಕಲ್ ಪ್ರದೇಶಗಳು ಈ ವರ್ಷ ಅತ್ಯಂತ ಜಲಕ್ಷಾಮವನ್ನೆದುರಿಸುತ್ತಿರುವ ಜಿಲ್ಲೆಗಳಾಗಿವೆ. ನಿತ್ಯ ಜೀವನದಲ್ಲಿ ನೀರಿನ ದುರ್ಬಳಕೆಯನ್ನು ತಡೆದು ಹನಿ ನೀರನ್ನೂ ಎಚ್ಚರದಿಂದ ಬಳಸುವ ಕಾಲ ಸನ್ನಿಹಿತವಾಗಿದೆ. ರಾಜಸ್ಥಾನದಲ್ಲಿ ವಾಟರ್ ಮೇನ್ ಆಫ್ ಇಂಡಿಯಾ ಹೆಸರಿನಿಂದ ಕರೆಯಲ್ಪಡುವ ಡಾ|ರಾಜೇಂದ್ರ ಸಿಂಗ್ ಪ್ರಾರಂಭಿಸಿದ ಜಲ ಸಂರಕ್ಷಣಾ ಕ್ರಾಂತಿ ನಮ್ಮ ಊರಲ್ಲೂ ಪ್ರಾರಂಭಿಸಬೇಕು. ಈ ಯೋಜನೆಯ ಬಗೆಗಿನ ತಿಳುವಳಿಕೆ ಮೊದಲು ಆರಂಭವಾಗಬೇಕಾದುದು ಶಾಲೆಗಳಿಂದ. ವಿದ್ಯಾರ್ಥಿಗಳು ಎಚ್ಚೆತ್ತುಕೊಂಡರೆ ದೇಶವೇ ಎಚ್ಚೆತ್ತುಕೊಂಡಂತೆ. ಜಿಲ್ಲೆಯ ಜಲ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಮಳೆ ನೀರು ಸಂಗ್ರಹ, ನೀರಿನ ಮೂಲಗಳ ನವೀಕರಣ ಕಾರ್ಯ, ನೀರಿನ ಪುನರುಪಯೋಗ, ಪ್ಲಾಸ್ಟಿಕ್ ಮುಕ್ತ ಪರಿಸರ, ಉಪಯೋಗ ಶೂನ್ಯ ವಸ್ತುಗಳ ಪುನರುತ್ಪಾದನೆಯೇ ಮೊದಲಾದ ಯೋಜನೆಗಳು ಈ ದೆಸೆಯಲ್ಲಿ ಚಿಂತಿಸಬಹುದಾದ ಕಾರ್ಯಗಳಾಗಿವೆ ಎಂದು ಎಂ.ವಿ.ಸುಬ್ರಹ್ಮಣ್ಯನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬಳಿಕ ಜಲಸಂರಕ್ಷಣೆಯನ್ನು ಕೈಗೊಳ್ಳಬಹುದಾದ ವಿವಿಧ ರೀತಿಗಳನ್ನು ಸೂಚಿಸುವ ಕೈಪಿಡಿ `ಜಲಮಾಣ್ ಜೀವಿತಂ' ಎಂಬ ಕೈಪಿಡಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ವಿದ್ಯಾಲಯದ ಪ್ರಾಂಶುಪಾಲ ಬಿ.ಪುಷ್ಪರಾಜ್ ಸ್ವಾಗತಿಸಿದರು. ಸಂಗೀತ ಪ್ರಭಾಕರನ್ ವಂದಿಸಿದರು.


