ಕಾಸರಗೋಡು: ಗ್ರಾಮಕಚೇರಿಗಳಲ್ಲಿ ಶುಲ್ಕ ಪಾವತಿಸಬೇಕಿದ್ದರೆ ಇನ್ನು ಮುಂದೆ ಸಾಲಾಗಿ ಕಾದುನಿಲ್ಲಬೇಕಿಲ್ಲ. ಇದಕ್ಕಾಗಿಯೇ ಸಿದ್ಧಗೊಂಡು ಜಾರಿಗೆ ಬಂದಿದೆ ಇ.ಪಿ.ಒ.ಎಸ್.ಮೆಷಿನ್.
ಎ.ಟಿ.ಎಂ. ಕಾರ್ಡ್ ಬಳಸಿಯೋ, ಕ್ರೆಡಿಟ್ ಕಾರ್ಡ್ ಬಳಸಿಯೋ ಶುಲ್ಕ ಪಾವತಿ ನಡೆಸಬಹುದು. ಇದರಿಂದ ಸಾರ್ವಜನಿಕರಿಗೂ, ಇಲಾಖೆ ಸಿಬ್ಬಂದಿಗೂ ಸಮಯದ ಲಾಭ ದೊರೆಯಲಿದೆ. ಜೊತೆಗೆ ಕಳ್ಳನೋಟು ವ್ಯವಹಾರ ತಡೆಗೂ ಇ.ಪಿ.ಒ.ಮಿಷನ್ ಸಿದ್ಧಗೊಂಡಿದೆ.
ಡಿಜಿಟಲ್ ಪೇಮೆಂಟ್ ಎಂಬ ನೂತನ ಸಂಕಲ್ಪಕ್ಕೆ ಈ ಯಂತ್ರಗಳು ತುಂಬ ಸಹಕಾರಿಯಾಗಿವೆ. ಜೊತೆಗೆ ಡಿಜಿಟಲೈಸೇಷನ್ ಕುರಿತು ಜನತೆಗೆ ಹೆಚ್ಚುವರಿ ತಿಳಿದುಕೊಳ್ಳಲೂ ಈ ಯಂತ್ರಗಳು ವೇದಿಕೆಯಾಗಲಿವೆ.
ಇ.ಪಿ.ಒ.ಎಸ್.ಮೆಷಿನ್ ನಲ್ಲಿ ಕೆಂಪು ಬಣ್ಣದ ಕ್ಯಾನ್ಸಲ್ ಬಟನ್,ಸ್ಕ್ರಾಲ್ ಬಟನ್, ಹಳದಿ ಬಣ್ಣದ ಬಾಕ್ ಬಟನ್, ಹಸುರು ಬಣ್ಣದ ಕನ್ ಫಾಂ ಬಟನ್ ಎಂಬ ನಾಲ್ಕು ಗುಂಡಿಗಳಿವೆ. ಮೆಷಿನ್ ಆನ್ ಮಾಡಲುಹಸುರು ಬಟನ್ ಕೊಂಚ ಹೊತ್ತು ಒತ್ತಿ ಹಿಡಿಯಬೇಕು. ಪ್ರತಿ ಗ್ರಾಮಕ್ಕೂ ಒಂದೊಂದು ಟ್ರಷರಿ ಕೋಡ್ ಸಿದ್ಧಪಡಿಸಲಾಗುವುದು.
ಗ್ರಾಮಕಚೇರಿಗಳ ತೆರಿಗೆ ಹಣವ್ಯವಹಾರಗಳನ್ನು ಡಿಜಿಟಲೈಸೇಷನ್ ನಡೆಸುವ ಅಂಗವಾಗಿ ರಾಜ್ಯ ಸರಕಾರ ಆರಂಭಿಸಿರುವ ಇ.ಪಿ.ಒ.ಎಸ್.ಮೆಷಿನ್ ಬಳಕೆ ಸಂಬಂಧ ತರಬೇತಿ ಕಾರ್ಯಕ್ರಮ ಜಿಲ್ಲಾಧಿಕಾರಿ ಕಚೇರಿಯ ಕಿರು ಸಭಾಂಗಣದಲ್ಲಿ ಜರುಗಿತು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಉದ್ಘಾಟಿಸಿದರು. ಎನ್.ಎ.ಸಿ. ಜಿಲ್ಲಾ ಅಧಿಕಾರಿ ಕೆ.ರಾಜನ್ ತರಗತಿ ನಡೆಸಿದರು. ಕಿರಿಯ ವರಿಷ್ಠಾಧಿಕಾರಿ ಆಂಟೋ ಷಿಜೋ ಉಪಸ್ಥಿತರಿದ್ದರು. ಇ.ಪಿ.ಒ.ಎಸ್.ಮೆಷಿನ್ ಗ್ರಾಮಕಚೇರಿಗಳಿಗೆ ವಿತರಣೆ ನಡೆಸಲಾಯಿತು.
ಈ ಯಂತ್ರಗಳ ರಾಜ್ಯ ಮಟ್ಟದ ಉದ್ಘಾಟನೆ ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನಡೆಸಿದ್ದರು. ಅತ್ಯಧಿಕಜನನಿಭಿಡತೆ ಇರುವ ಕಚೇರಿಗಳಲ್ಲಿ ಇಂಥಾ ಯಂತ್ರಗಳು ಡಿಜಿಟಲ್ ಪೇಮೆಂಟ್ ಮೂಲಕ ಪರಿಣಾಮಕಾರಿಯಾಗಲಿವೆ ಎಂದು ಅಧಿಕಾರಿಗಳೂ ನಿರೀಕ್ಷಿಸಿದ್ದಾರೆ.
ಚಿತ್ರ ಮಾಹಿತಿ: ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಹೆಚ್ಚುವರಿ ದಂಡನಧಿಕಾರಿ ಎನ್.ದೇವಿದಾಸ್ ಅವರು ಇ.ಪಿ.ಒ.ಎಸ್. ಮೆಷಿನ್ ಗ್ರಾಮಕಚೇರಿಗಳಿಗೆ ವಿತರಿಸಿದರು.


