ಬದಿಯಡ್ಕ: ಗ್ರಾಮೀಣ ಪ್ರದೇಶದಲ್ಲಿ ಬೆಳೆಯುತ್ತಿರುವ ಹಲಸಿನ ಮೌಲ್ಯವರ್ಧನೆಯ ಸಲುವಾಗಿ ಬದಿಯಡ್ಕ ಗ್ರಾಮಪಂಚಾಯತಿ ವತಿಯಿಂದ ಜುಲೈ.4ರಂದು ಬದಿಯಡ್ಕ ಶ್ರೀ ಗುರುಸದನದಲ್ಲಿ ಹಲಸು ಮೇಳ ನಡೆಯಲಿರುವುದು.
ಕುಟುಂಬಶ್ರೀ ಘಟಕಗಳು, ವಿವಿಧ ಮಹಿಳಾ ಸಂಘಟನೆಗಳು, ವೈಯಕ್ತಿಕವಾಗಿ ಹಾಗೂ ಗುಂಪುಗಳಾಗಿ ಅನೇಕರು ಈ ಹಲಸು ಮೇಳದಲ್ಲಿ ತಮ್ಮ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಸಲಿದ್ದಾರೆ. ಹಲಸುಮೇಳದಲ್ಲಿ ಹಲಸಿನ ಐಸ್‍ಕ್ರೀಂ, ಹಪ್ಪಳಗಳು, ಬೋಂಡ, ವಡೆ, ಅಪ್ಪ, ಕೊಟ್ಟಿಗೆ, ದೋಸೆ ಹಾಗೂ ಇತರ ಹಲಸಿನ ಅನೇಕ ಉತ್ಪನ್ನಗಳು ಮೇಳದಲ್ಲಿ ಲಭಿಸಲಿದೆ. ಬೆಳಿಗ್ಗೆ 10 ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಜನಪ್ರತಿನಿಧಿಗಳು ಹಾಗೂ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಭಿಮತ:
ಬದಿಯಡ್ಕ ಗ್ರಾಮಪಂಚಾಯತ್ ವತಿಯಿಂದ ನಡೆಯುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಹಲಸಿನ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಬರುವಂತೆ ಎಲ್ಲರೂ ಸಹಕರಿಸಬೇಕು. ಪ್ರಾಕೃತಿಕ ಸಹಜವಾದ ಫಲವು ಅನೇಕರ ಜೀವನಕ್ಕೆ ಬೆಳಕಾಗಬಲ್ಲುದು. ಪುತ್ತೂರು, ಮಂಗಳೂರು, ಉಪ್ಪಿನಂಗಡಿ, ಮುಳ್ಳೇರಿಯ ಹಾಗೂ ಇನ್ನಿತರೆಡೆಗಳಿಂದ ಅನೇಕರು ಸ್ಟಾಲ್‍ಗಳಿಗಾಗಿ ಕರೆಮಾಡಿರುತ್ತಾರೆ. ಹೆಚ್ಚಿನ ವ್ಯಾಪಾರಿಗಳು ತಮ್ಮ ಹಲಸಿನ ಉತ್ಪನ್ನದೊಂದಿಗೆ ಆಗಮಿಸುವ ನಿರೀಕ್ಷೆಯಿದ್ದು, ಜನರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿದೆ.
- ಕೆ.ಎನ್.ಕೃಷ್ಣ ಭಟ್., ಬದಿಯಡ್ಕ ಗ್ರಾ.ಪಂ. ಅಧ್ಯಕ್ಷರು.

