ಕಾಸರಗೋಡು: ಶಾಲಾ ಮಕ್ಕಳನ್ನು ಕರೆದೊಯ್ಯಲು ಸಿದ್ಧರಾಗದ ಕೆಲವು ಖಾಸಗಿ ಬಸ್ ಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ. ಇಂಥಾ ಕೆಲವು ಬಸ್ ಗಳ ಸಿಬ್ಬಂದಿ ಶಾಲಾ ಮಕ್ಕಳೊಂದಿಗೆ ಅಪಮಾನಕರ ರೀತಿ ವರ್ತಿಸುತ್ತಿರುವ ಬಗ್ಗೆ ವರದಿಗಳುಲಭಿಸಿದ್ದು,ಈ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆ ತಿಳಿಸಿದೆ.
ಶಿಶು ಸಂರಕ್ಷಣೆ ಸಮಿತಿಯ ಜಿಲ್ಲಾ ಘಟಕದ ಸಭೆಯಲ್ಲಿ ಈ ತೀರ್ಮಾನ ನಡೆಸಲಾಗಿದ್ದು, ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ಜರುಗಿತು.
ಮಕ್ಕಳ ಸಂರಕ್ಷಣೆ ಚಟುವಟಿಕೆಗಳನ್ನು ಸಬಲಗೊಳಿಸಲು ಮತ್ತು ಮಕ್ಕಳಿಗೆ ವಿವಿಧ ಇಲಾಖೆಗಳಿಂದ ಲಭಿಸಬೇಕಾದ ಸೇವೆಗಳನ್ನು ಏಕೀಕೃತಗೊಳಿಸಲು ಮಹಿಳಾ ಶಿಶು ಅಭಿವೃದ್ಧಿ ಇಲಾಖೆ ಜರಿಗೊಳಿಸುತ್ತಿರುವ ಸಂಯೋಜಿತ ಶಿಶು ಸಂರಕ್ಷಣೆ ಯೋಜನೆಯ ಅಂಗವಾಗಿ ರಚಿತಗೊಂಡು ಶಿಶು ಸಂರಕ್ಷಣೆಯ ಸಮಿತಿಯ ಜಿಲ್ಲಾ ಘಟಕ ಚಟುವಟಿಕೆ ನಡೆಸುತ್ತಿದೆ.
ಮಕ್ಕಳಿಗೆ ಸಂಬಂಧಿಸಿದ ಹೆಲ್ಪ್ ಲೈನ್ ನಂಬ್ರಕ್ಕೆ ಸೂಕ್ತ ಪ್ರಚಾರ ನೀಡುವ ಉದ್ದೇಶದಿಂದ ಸ್ಟಿಕ್ಕರ್ ಶಿಬಿರ ನಡೆಸಲು ತೀರ್ಮಾನಿಸಲಾಗಿದೆ. ಬೆಳಗ್ಗಿನ ಉಪಹಾರ ವಂಚಿತರಾದ ಜಿಲ್ಲೆಯ 1562 ಮಂದಿ ಕಲಿಕೆ ನಡೆಸುವ ಮಕ್ಕಳಿಗೆ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ, ಹೋಟೆಲ್ ಆಂಡ್ ರೆಸ್ಟಾರೆಂಟ್ ಅಸೋಸಿಯೇಶನ್,ಕುಟುಂಬಶ್ರೀ, ಸ್ಥಳೀಯಾಡಳಿತ ಸಂಸ್ಥೆಗಳು, ಸಮಾನ ಮನಸ್ಕರು ಮೊದಲಾದವರ ಸಹಕಾರದೊಂದಿಗೆ ಜಾರಿಗೊಳಿಸುವ "ಮಧುರಂ ಪ್ರಭಾತಂ" ಯೋಜನೆ ಆಗಸ್ಟ್ ತಿಂಗಳಲ್ಲಿ ಆರಂಭಗೊಳ್ಳಲಿದ್ದು, ಈ ಬಗ್ಗೆ ಮಾತುಕತೆ ನಡೆಸಲಾಯಿತು. ಮಾದಕಪದಾರ್ಥಗಳ ಚಟಕ್ಕೆ ಬಲಿಯಾದ ಮಕ್ಕಳ ಪುನಶ್ಚೇತನಕ್ಕೆ ವೆಲ್ನೆಸ್ ಸೆಂಟರ್ ಆರಂಭಿಸಲು ಕ್ರಮಕೈಗೊಳ್ಳಲಾಗುವುದು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಿಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳ ಬಗ್ಗೆ ಸಭೆ ಚರ್ಚೆ ನಡೆಸಿತು.
ಬಾಲಕಾರ್ಮಿಕತನ ನಿಯಂತ್ರಣಕ್ಕೆ ಜಾರಿಗೊಳಿಸಲಾದ ಕಾನೂನು ಪ್ರಕಾರ ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಚಟುವಟಿಕೆಗಳ ಬಗ್ಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ಕೆ.ಎ.ಷಾಜು, ಮಕ್ಕಳ ಮೇಲೆ ನಡೆಸಲಾಗುವ ದೌರ್ಜನ್ಯ ವಿರುದ್ಧ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಡಿ.ವೈ.ಎಸ್.ಪಿ. ಪಿ.ಎಂ.ಪ್ರದೀಪ್ ಕುಮಾರ್, ಮಕ್ಕಳು ಮಾದಕಪದಾರ್ಥ ಸೇವಿಸುವುದರ ವಿರುದ್ಧ ನಡೆಸಲಾಗುತ್ತಿರುವ ತಡೆ ಕಾರ್ಯಗಳ ಬಗ್ಗೆ ಅಬಕಾರಿ ಡೆಪ್ಯೂಟಿ ಕಮೀಷನರ್ ಮ್ಯೂಥ್ಯೂ ಕುರಿಯನ್, ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸಿ ತೆರಳುತ್ತಿರುವ ಮಕ್ಕಳ ವಿಚಾರದಲ್ಲಿ ಪರಿಹಾರ ಒದಗಿಸುವ ಯೋಜನೆಗಳ ಬಗ್ಗೆ ಶಿಕ್ಷಣ ಉಪನಿರ್ದೇಶಕ ಇ.ನಂದಿಕೇಶನ್ ವರದಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಚೆಲ್ಡ್ ವೆಲ್ ಫೇರ್ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಶ್ಯಾಮಲಾದೇವಿ, ಕಾ?ಂಗಾಡ್ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಎಂ.ಗೌರಿ, ಜಿಲ್ಲಾ ಶಿಶು ಸಂರಕ್ಷಣೆ ಸಮಿತಿ ಅಧಿಕಾರಿ ಪಿ.ಬಿಜು, ಸಂರಕ್ಷಣೆ ಅಧಿಕಾರಿ ಎ.ಜಿ.ಫೈಝಲ್ ಮೊದಲಾದವರು ಉಪಸ್ಥಿತರಿದ್ದರು.

