ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರಾಗಿರುವ ವಿಶೇಷಚೇತನರಿಗಾಗಿ ಜುಲೈ ತಿಂಗಳಕೊನೆಯಲ್ಲಿ ನೂತನ ಸ್ಪೆಷ್ಯಾಲಿಟಿ ಶಿಬಿರವೊಂದು ನಡೆಸುವ ಹಿನ್ನೆಲೆಯಲ್ಲಿ ನೋಂದಣಿ ಕ್ರಮ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಎಚ್.ಎಂ.ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಡಾ.ರಾಮನ್ ಸ್ವಾತಿ ವಾಮನ್ ತಿಳಿಸಿದರು. ಸಂತ್ರಸ್ತರ ಮೆಗಾ ವೈದ್ಯಕೀಯ ಶಿಬಿರ ಆಗಸ್ಟ್ ನಲ್ಲಿ ನಡೆಯಲಿದೆ ಎಂದವರು ತಿಳಿಸಿದರು.
ಜು.20ರ ನಂತರ ನೋಂದಣಿ ಕ್ರಮಗಳಿಗೆ ಚಾಲನೆ ಲಭಿಸಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿಯಿಂದ ಕಂದಾಯ ಸಚಿವ ಇ.ಚಂದ್ರಶೇಖರನ್ ಅರಿಗೆ ಲಭಿಸಿರುವ ಮಾಹಿತಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ಅವರು ಶಿಬಿರ ನಡೆಸುವ ಸಿದ್ಧತೆಗಳನ್ನು ನಡೆಸಲು ಆದೇಶ ನಿಡಿದ್ದಾರೆ ಎಂದು ಡಾ.ರಾಮನ್ ಸ್ವಾತಿ ವಾಮನ್ ಹೇಳಿದರು.
ಜು.20ರ ನಂತರ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೋಂದಣಿ ನಡೆಸಬೇಕು. ಶಿಬಿರದಲ್ಲಿ ಭಾಗವಹಿಸಿಯೂ ಸೌಲಭ್ಯಗಳಿಗೆ ಅರ್ಹರಾದ ಸಂತ್ರಸ್ತರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದೇ ಇರುವ ಮಂದಿಗಾಗಿ ಈ ಶಿಬಿರ ನಡೆಯಲಿದೆ. ಲಭಿಸುವ ಅರ್ಜಿಗಳಿಂದ ಆಯಾ ಪಂಚಾಯತ್ ಗಳ ವೈದ್ಯಾಧಿಕಾರಿಗಳು ನಿಡುವ ಪಟ್ಟಿಯನ್ನು 11 ವೈದ್ಯರ ಪರಿಣತ ತಂಡ ಪರಿಶೀಲನೆ ನಡೆಸಲಿದೆ. ಇವರುನೀಡುವ ಪಟ್ಟಿಯಲ್ಲಿ ಸೇರುವ ಮಂದಿಯನ್ನು ವೈದ್ಯಕೀಯ ಶಿಬಿರದ 11 ವಿಭಾಗಗಳಲ್ಲಿ ವಿಶೇಷ ವೈದ್ಯಕೀಯ ತಂಡ ತಪಾಸಣೆ ನಡೆಸಲಿದೆ.
2017ರಲ್ಲಿ ನಡೆಸಲಾಗಿದ್ದ ಮೆಗಾ ವೈದ್ಯಕೀಯ ಶಿಬಿರ ರೀತಿಯ ಶಿಬಿರ ಈ ಬಾರಿ ನಡೆಯಲಿದೆ. ಅಂದು ಹರತಾಳ ನಡೆದ ಹಿನ್ನೆಲೆಯಲ್ಲಿ ಶಿಬಿರದಲ್ಲಿ ಹಾಜರಾಗಲು ಸಾಧ್ಯವಾಗದೇ ಹೋದ 275 ಮಂದಿಗಾಗಿ ಬುಧವಾರ ಮುಳಿಯಾರಿನಲ್ಲಿ ವಿಶೇಷ ವೈದ್ಯಕೀಯ ನಡೆದಿತ್ತು. ನೂತನವಾಗಿ ಬಂದ ರೋಗಿಗಳನ್ನೂ ತಪಾಸನೆಗೊಳಪಡಿಸಲಾಗಿತ್ತು. ಕಳೆದ ಬಾರಿ 5 ಕೇಂದ್ರಗಳಲ್ಲಿ ಶಿಬಿರಗಳನ್ನು ನಡೆಸಲಾಗಿತ್ತು.
ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಿದವರಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ವಿಭಾಗದಲ್ಲಿ (ಬಯಾಲಾಜಿಕಲ್ ಪಾಸಿಬಿಲಿಟಿ) ಸೇರ್ಪಡೆಗೊಳಿಸಲು ಅರ್ಹರಾದವರನ್ನು ಪರಿಣತ ವೈದ್ಯರು ದೃಡೀಕರಿಸಿ ಕ್ಷೇತ್ರ ಮಟ್ಟದ ತಪಾಸಣೆಗೆ ಒಳಪಡಿಸಲಾಗುವುದು. ಈ ಎರಡೂ ವರದಿಗಳನ್ನು ಮೂರು ಹಂತದಲ್ಲಿ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿ ಅವರ ಮೂಲಕ ಎಂಡೋಸಲ್ಫಾನ್ ಘಟಕಕ್ಕೆ ಸಲ್ಲಿಸಲಾಗುವುದು.
ಎಂಡೋಸಲ್ಫಾನ್ ಸಂತ್ರಸ್ತರ ವೈದ್ಯಕೀಯ ಶಿಬಿರದಲ್ಲಿ 144 ಮಂದಿ ಭಾಗಿ:
ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಬೋವಿಕ್ಕಾನದಲ್ಲಿ ಬುಧವಾರ ನಡೆದ ವೈದ್ಯಕೀಯ ಶಿಬಿರದಲ್ಲಿ 144 ಮಂದಿ ಭಾಗವಹಿಸಿದರು. 276 ಮಂದಿಗೆ ಸ್ಲಿಪ್ ನೀಡಲಾಗಿತ್ತು. ನೂತನವಾಗಿ ಭಾಗವಹಿಸಿದ್ದ 84 ಮಂದಿಯ ಹೆಸರು ನೋಂದಣಿಯೂ ಶಿಬಿರದಲ್ಲಿ ನಡೆಯಿತು.
ಶಸ್ತ್ರಚಿಕಿತ್ಸೆ, ಎಲುಬು ರೋಗ, ನ್ಯೂರೋಲಜಿ, ಇ.ಎನ್.ಟಿ., ಮನೋರೋಗ, ನೇತ್ರರೋಗ, ಶಿಶು ರೋಗ, ಜನರಲ್ ಮೆಡಿಸಿನ್, ಚರ್ಮ ರೋಗ ಸಹಿತ 10 ವಿಭಾಗಗಳಲ್ಲಿ ವೈದ್ಯರು ತಪಾಸಣೆ ನಡೆಸಿದರು. ಶಸ್ತ್ರಚಿಕಿತ್ಸೆ ವಿಭಾಗದಲ್ಲಿ 4 ಮಂದಿ, ಎಲುಬು ರೋಗ ವಿಭಾಗದಲ್ಲಿ 16 ಮಂದಿ, ನ್ಯೂರೋಲಜಿಯಲ್ಲಿ 23 ಮಂದಿ, ಇ.ಎನ್.ಟಿ.ಯಲ್ಲಿ 17 ಮಂದಿ, ಮನೋರೋಗ ವಿಭಾಗದಲ್ಲಿ 37 ಮಂದಿ, ನೇತ್ರರೋಗ ವಿಭಾಗದಲ್ಲಿ 5 ಮಂದಿ, ಶಿಶು ರೋಗ ವಿಭಾಗದಲ್ಲಿ ಒಬ್ಬರು, ಜನರಲ್ ಮೆಡಿಸಿನ್ ನಲ್ಲಿ 29 ಮಂದಿ, ಚರ್ಮ ರೋಗ ವಿಭಾಗದಲ್ಲಿ 5 ಮಂದಿ ತಪಾಸಣೆಗೊಳಗಾಗಿದ್ದಾರೆ.
ಮುಳಿಯಾರು, ಚೆಂಗಳ, ಬೇಡಡ್ಕ, ದೇಲಂಪಾಡಿ, ಕಾರಡ್ಕ, ಮೊಗ್ರಾಲ್ ಪುತ್ತೂರು, ಕುತ್ತಿಕೋಲು, ಮಧೂರು ಗ್ರಾಮಪಂಚಾಯತ್ ಗಳ ಮತ್ತು ಕಾಸರಗೋಡು ನಗರಸಭೆಯ ಆರೋಗ್ಯ ಸಂಸ್ಥೆಗಳ ಮೂಲಕ ಶಿಬಿರದಲ್ಲಿ ಭಾಗವಹಿಸಬೇಕಾದವರಿಗೆ ಸ್ಲಿಪ್ ವಿತರಿಸಲಾಗಿತ್ತು. ಇದು ಶಿಬಿರದಲ್ಲಿ ಭಾಗವಹಿದವರಿಗೆ ತುಂಬ ಸಹಕಾರಿಯಾಗಿತ್ತು.
ಎಂಡೋಸಲ್ಫಾನ್ ವಿಶೇಷ ಘಟಕದ ಹೊಣೆಗಾರಿಕೆಯಿರುವ ಸಹಾಯಕ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ ಅವರ ನೇತೃತ್ವದಲ್ಲಿ ಶಿಬಿರ ನಡೆದಿತ್ತು. ಆಯಾ ವಿಭಾಗದಲ್ಲಿ ಒಬ್ಬ ವೈದ್ಯರು, ಇಬ್ಬರು ದಾದಿಯರು, ಒಬ್ಬ ಸಾ ವರ್ಕರ್ ಇದ್ದರು. ಮೊಗ್ರಾಲ್ ಪುತ್ತೂರು ಎಫ್.ಎಚ್.ಸಿ., ಕಾಸರಗೋಡು ಅರ್ಬನ್ ಪಿ.ಎಚ್.ಸಿ., ಚೆಂಗಳ ಪಿ.ಎಚ್.ಸಿ., ಮುಳಿಯಾರು ಪಿ.ಎಚ್.ಸಿ., ಮುಳ್ಳೇರಿಯ ಪಿ.ಎಚ್.ಸಿ., ಅಡೂರು ಪಿ.ಎಚ್.ಸಿ.ಗಳ ಹೆಲ್ತ್ ಇನ್ಸ್ ಪೆಕ್ಟರ್ ಗಳು, ಜ್ಯೂನಿಯರ್ ಪಬ್ಲಿಕ್ ಹೆಲ್ತ್ ನರ್ಸ್ ಗಳು, ಇನ್ಸ್ ಪೆಕ್ಟರ್ ಗಳು, ಶಾಲಾ ಆರೋಗ್ಯ ದಾದಿಯರು, ವಿವಿಧ ಸಿ.ಎಚ್.ಸಿ.ಗಳ ಪಿ.ಆರ್.ಒ.ಗಳು, ಆಶಾ ವರ್ಕರ್ ಗಳು, ಎನ್.ಎಸ್.ಎಸ್. ಸ್ವಯಂಸೇವಕರು ಶಿಬಿರದಲ್ಲಿ ಸೇವೆ ಸಲ್ಲಿಸಿದರು. ಪೊಲೀಸ್ ಇಲಾಖೆಯ ಸೇವೆಯೂ ನಡೆದಿತ್ತು.


